ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಸಾಮಾನ್ಯ ಚಳಿಯ ವಾತಾವರಣ; ಡಿಸೆಂಬರ್ 25ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಸಾಮಾನ್ಯ ಚಳಿಯ ವಾತಾವರಣ; ಡಿಸೆಂಬರ್ 25ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಸಾಮಾನ್ಯ ಚಳಿಯ ವಾತಾವರಣ; ಡಿಸೆಂಬರ್ 25ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಮಾನ್ಯ ಚಳಿ ಮತ್ತು ಅಲ್ಲಲ್ಲಿ ಮಂಜಿನ ವಾತಾವರಣ ಮುಂದುವರಿದಿದೆ. ಡಿಸೆಂಬರ್ 25ಕ್ಕೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 23ರ ಇಂದಿನ ಹವಾಮಾನ ವರದಿ ಇಲ್ಲಿದೆ.

ಡಿಸೆಂಬರ್ 23ರ ಸೋಮವಾರ ಕರ್ನಾಟಕದ ಹವಾಮಾನ ವರದಿ
ಡಿಸೆಂಬರ್ 23ರ ಸೋಮವಾರ ಕರ್ನಾಟಕದ ಹವಾಮಾನ ವರದಿ

ಕರ್ನಾಟಕದಲ್ಲಿ ಸಾಮಾನ್ಯ ಚಳಿ ಮತ್ತು ಮಂಜಿನ ಪರಿಸ್ಥಿತಿ ಮುಂದುವರಿದ್ದು, ವಾತಾವರಣದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಚಳಿಯ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲಲ್ಲಿ ಮಂಜಿನ ವಾತಾವರಣ ಇದ್ದರೂ ಯಾವುದೇ ರೀತಿಯ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿಲ್ಲ. ಇಂದು (ಡಿಸೆಂಬರ್ 23, ಸೋಮವಾರ) ಹೇಳಿಕೊಳ್ಳುವಂತಹ ಚಳಿ ಇಲ್ಲ. ಹೀಗಾಗಿ ವಾರಾಂತ್ಯವನ್ನು ಮುಗಿಸಿರುವ ಜನರು ಎಂದಿನಂತೆ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಬೆಳಗಿನ ವ್ಯಾಪಾರಕ್ಕೆ ಅಡ್ಡಿಯಾಗಿಲ್ಲ. ವಾಹನ ಸಂಚಾರ ಸಾಮಾನ್ಯವಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಬೆಳಗ್ಗೆ ಹಾಗೂ ಮಧ್ಯಾಹ್ನದವರಿಗೆ ಮೋಡ ಕವಿದ ವಾತಾವರಣ ಇರುತ್ತದೆ. ಸಂಜೆಯ ನಂತರ ಶುಭ್ರವಾದ ಆಕಾಶ ಇರುತ್ತದೆ. ಡಿಸೆಂಬರ್ 23ರ ಸೋಮವಾರ ಕರ್ನಾಟಕದ ಯಾವುದೇ ಜಿಲ್ಲೆಗೆ ಮಳೆಯಾಗುವ ಮುನ್ಸೂಚನೆ ಇಲ್ಲ. ನಿನ್ನೆ (ಡಿಸೆಂಬರ್ 22, ಭಾನುವಾರ) ಯಾದಗಿರಿಯ ಶೋರಾಪುರದಲ್ಲಿ 1 ಸೆಂಟಿ ಮೀಟರ್ ಮಳೆಯಾಗಿದೆ.

ಡಿಸೆಂಬರ್ 25ರ ಮಳೆಯ ವಿವರ

ಡಿಸೆಂಬರ್ 25ರ ಬುಧವಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

ಡಿಸೆಂಬರ್ 26ರ ಗುರುವಾರ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಬೆಂಗಳೂರು ಹವಾಮಾನ

ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ನೋಡುವುದಾದರೆ, ಮುಂಜಾನೆ ಭಾಗಶಃ ಮೋಡ ಕವಿದ ಆಕಾಶ ಇರುತ್ತದೆ. ಕೆಲವು ಕಡೆಗಳಲ್ಲಿ ಮಂಜು ಅಥವಾ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ. ಡಿಸೆಂಬರ್ 25ರ ಬಳಿಕ ನಗರದ ವಾತಾವರಣದಲ್ಲಿ ಸ್ವಲ್ಪ ಏರಿಳಿತವಾಗಬಹುದು.

Whats_app_banner