ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಬೀಚ್‌ಗಳಲ್ಲಿ ಕಡಲಾಮೆಗಳ ಸಂತಾನ ಸಂಭ್ರಮ, ಇವುಗಳಿಗೆ ಅಷ್ಟು ಮಹತ್ವ ಏಕೆ

ಕರ್ನಾಟಕದ ಬೀಚ್‌ಗಳಲ್ಲಿ ಕಡಲಾಮೆಗಳ ಸಂತಾನ ಸಂಭ್ರಮ, ಇವುಗಳಿಗೆ ಅಷ್ಟು ಮಹತ್ವ ಏಕೆ

ಕರ್ನಾಟಕದಲ್ಲಿರುವ ಕರಾವಳಿಯುದ್ದಕ್ಕೂ ಈಗ ಕಡಲಾಮೆಗಳ ಸಂತಾನ ಸಂಭ್ರಮ. ಬೀಚ್‌ಗಳಿಗೆ ಹೋದಾಗ ಅವುಗಳ ಖುಷಿಯ ಕ್ಷಣಗಳನ್ನು ದೂರದಿಂದಲೇ ನೋಡಿ ಕಣ್ತುಂಬಿಕೊಳ್ಳಿ. ಈ ವಿಶಿಷ್ಟ ಕ್ಷಣಗಳ ಕುರಿತ ಸಂತೋಷ ಕೋಡಿ ಅವರ ಲೇಖನ ಇಲ್ಲಿದೆ.

ಕರ್ನಾಟಕದ ಬೀಚ್‌ಗಳಲ್ಲಿ ಕಡಲಾಮೆಗಳ ಸಂತಾನ ಸಂಭ್ರಮದ ಕ್ಷಣ.
ಕರ್ನಾಟಕದ ಬೀಚ್‌ಗಳಲ್ಲಿ ಕಡಲಾಮೆಗಳ ಸಂತಾನ ಸಂಭ್ರಮದ ಕ್ಷಣ.

ಕಡಲಾಮೆಗಳು ಮೊಟ್ಟೆಯಿಡಲು ಕೋಡಿ ಕಿನಾರೆಯತ್ತ ಈ ವರುಷವೂ ಮರಳಿ ಬರುತ್ತಿದೆ. ಆದರೆ ವರುಷದಿಂದ ವರುಷಕ್ಕೆ ಇವುಗಳ ಅಸ್ತಿತ್ವದ ಉಳಿವಿನ ಹೋರಾಟ ಮಾತ್ರ ಹೆಚ್ಚುತ್ತಲೇ ಇದೆ! ಇದರ ಪರಿ ನೋಡಿದರೆ ಕೆಲವೇ ವರ್ಷಗಳಲ್ಲಿ ಇವುಗಳು ಭೂಮಿಯಿಂದ ಶಾಶ್ವತವಾಗಿ ಕಣ್ಮರೆಯಾದ ಜೀವಿಗಳ ಪಟ್ಟಿಗೆ ಸೇರಿದರೂ ಯಾವುದೇ ಆಶ್ಚರ್ಯವಿಲ್ಲ.

ಟ್ರೆಂಡಿಂಗ್​ ಸುದ್ದಿ

ತಿಂಗಳ ಹಿಂದೆ ಬೆಳಿಗ್ಗೆ ವಾರದ ಸಮುದ್ರ ತೀರ ಸ್ವಚ್ಛತೆ ಮಾಡಿ ಮರಳುವಾಗ ನಾಯಿಗಳೇನೋ ಮರಳು ಅಗೆಯುತ್ತಿರುವುದು ದೂರದಲ್ಲೇ ಗಮನಿಸಿ ತರಾತುರಿಯಾಗಿ ಓಡಿ ನೋಡಿದರೆ, ನಾನು ಊಹಿಸಿದ ಅಪಾಯ ನಿಜವಾಗಿತ್ತು. ನನ್ನ ನೋಡಿ ದೂರ ಹೋದ ನಾಯಿ ತಿಂದು ಬಿಟ್ಟ ಅರ್ಧ ಮೊಟ್ಟೆಯಿಂದ ಇಣುಕುತ್ತಿದ್ದ ಪುಟ್ಟ ಕಾಲು ವರ್ಷದ ಹಿಂದೆ ಇದೇ ತೀರದಲಿ ಪುಟು ಪುಟು ಸಾಗಿದ ಆಮೆ ಮರಿಯ ನೆನೆಸಿ ಕಣ್ಣು-ಹೃದಯ ಎರಡು ಒದ್ದೆಯಾಗಿತ್ತು. ಇದಾದ ಒಂದು ವಾರದ ಮೊದಲು ಬಲೆಗೆ ಸಿಕ್ಕು ಸತ್ತು ದಡದಲ್ಲಿ ಬಿದ್ದ ಕಡಲಾಮೆಯ ಪೋಸ್ಟ್ ಮಾರ್ಟಮ್ ಮಾಡಿದರೆ ಅದರೊಳಗೆ ಇದ್ದ ಮೊಟ್ಟೆಗಳು ತಾಯ್ತನದ ಶೋಕ ಗೀತೆ ಹಾಡಿದ್ದರೆ ಇದು ಎರಡನೇ ದುರಂತ!

ಆಮೆಯ ಆಸಕ್ತಿದಾಯಕ ಬದುಕು

ಅಷ್ಟಕ್ಕೂ ಈ ಆಮೆಗಳ ಕುರಿತು ಅಷ್ಟು ತಲೆಕೆಡಿಸಿಕೊಳ್ಳಲು ಏನಿದೆ? ಇಷ್ಟು ಸಣ್ಣ ವಿಚಾರದಿಂದ ನಾವು ಕಳೆದುಕೊಳ್ಳುವುದೇನಿದೆ?

ಕಡಲಾಮೆಗಳು ಆರೋಗ್ಯಪೂರ್ಣ ಸಮುದ್ರದ ಜೀವಕೊಂಡಿ. ಜೆಲ್ಲಿ ಫಿಶ್ ಗಳ ಸಂಖ್ಯೆ ವೃದ್ಧಿಯಾಗದಂತೆ ಕಾಯುವುದರೊಂದಿಗೆ ಸಮುದ್ರದ ಜೈವಿಕ ವ್ಯವಸ್ಥೆಯನ್ನು ಸಮತೋಲನದಲ್ಲಿಡುವ ಮೂಲ ಬೇರು. ಒಟ್ಟು 7 ಬಗೆಯ ಸಮುದ್ರ ಆಮೆಗಳಿದ್ದು ನಮ್ಮ ರಾಜ್ಯದ ಮಟ್ಟಿಗೆ ಆಲಿವ್ ರೀಡ್ಲೆ ಹೆಚ್ಚಾಗಿ ಕಂಡುಬರುವ ಕಡಲಾಮೆ.

ಈ ಈಡಲಾಮೆಯ ಸಂತಾನೋತ್ಪತ್ತಿ ಕ್ರಿಯೆ ಅದೊಂದು ಅದ್ಭುತ! ನವೆಂಬರ್ ನಿಂದ ಜನವರಿಯವರೆಗೆ ಮೊಟ್ಟೆಯಿಡಲು ಸಮುದ್ರ ತೀರದತ್ತ ವಯಸ್ಕ ಹೆಣ್ಣಾಮೆ ಸಾಗಿ ಬರುತ್ತದೆ. ಚಂದ್ರನ ಸುತ್ತ ವೃತ್ತಾಕಾರದ ಕೊಡೆಯಂತ ಚಿತ್ತಾರ ಮೂಡಿದ ರಾತ್ರಿ ಆಮೆ ಮೊಟ್ಟೆಯಿಡಲು ಬರುತ್ತೆನ್ನುವುದು ನಮ್ಮ ಹಿರಿಯರ ನಂಬಿಕೆ, ನಾ ಕಂಡ ಹಾಗೆ ಅದು ನಿಜವೂ ಕೂಡ. ಸಮುದ್ರದ ಅಲೆ ಬೀಳುವ ಜಾಗದಿಂದ 50-100 ಅಡಿ ದೂರದ ಪ್ಲ್ಯಾಸ್ಟಿಕ್ ಕಸ ಇರದ ತೀರ ಆಯ್ದುಕೊಳ್ಳುವ ಆಮೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುತ್ತದೆ. ನಂತರ ತನ್ನ ಕಾಲುಗಳ ಸಹಾಯದಿಂದ ಪಟ ಪಟನೇ ಮರಳು ಅಗೆದು 3 - 4 ಅಡಿ ಹೊಂಡದೊಳಗೆ 100-120 ಮೊಟ್ಟೆಗಳನ್ನು ಇಟ್ಟು ಮರಳನ್ನು ಪುನಹ ಮುಚ್ಚುತ್ತದೆ. ಅಲ್ಲೇನೂ ಕುರುಹು ಶತ್ರುಗಳಿಗೆ ಸಿಗದಂತೆ ತನ್ನ ಹೆಜ್ಜೆ ಗುರುತು ಆಚೀಚೆ ಗೊಂದಲಕಾರಿಯಾಗಿ ಮೂಡಿಸಿ ಕಡಲೊಡಲ ಸೇರುತ್ತದೆ. ಸ್ಥಳೀಯ ಹಿರಿಯ ಅನುಭವಿಗಳಿಗೆ ಹೊರತು ಪಡಿಸಿದರೆ ಮತ್ಯಾರಿಗೂ ಇದನ್ನು ಗುರುತಿಸುವುದು ಸುಲಭವಿಲ್ಲ. ಹೀಗೆ ಮೊಟ್ಟೆಯಿಟ್ಟು ಆಳಸಮುದ್ರದತ್ತ ತೆರಳುವ ತಾಯಿಯ ಕರ್ತವ್ಯ ಇಲ್ಲಿಗೆ ಮುಗಿಯಿತು. ಇನ್ನು ಪ್ರಕೃತಿ ಮತ್ತು ಅದೃಷ್ಟದೊಂದಿಗೆ ಅಳಿವು-ಉಳಿವಿನ ಹೋರಾಟ ಮೊಟ್ಟೆಯೊಳಗಿನ ಈ ಪುಟ್ಟ ಕಂದಮ್ಮಗಳದ್ದು!! ಹೀಗೆ ಮೊಟ್ಟೆಯೊಡೆದು ಹೊರಬಂದು ಉಳಿದ ಮರಿಗಳು ಅಷ್ಟು ವಿಸ್ತಾರದ ಸಮುದ್ರ ಸೇರಿದ ಮೇಲೆ ತನ್ನ ತಾಯಿಯನ್ನು ಹೇಗೆ ಸಂಧಿಸುತ್ತಾವೆ ಮತ್ತು ಗುರುತಿಸುತ್ತಾವೆ ಅನ್ನುವುದು ಆಶ್ಚರ್ಯವೇ ಸರಿ!

ವಿಶಿಷ್ಠತೆಗಳ ಆಗರ

ಇಲ್ಲಿ ತುಂಬಾ ಇಂಟರೆಸ್ಟಿಂಗ್ ಅಂದರೆ ಹುಟ್ಟುವ ಮರಿ ಗಂಡೋ ಅಥವಾ ಹೆಣ್ಣೋ ಅನ್ನುವುದು ನಿರ್ಧರಿತವಾಗುವುದು ಸೂರ್ಯನಿಂದ! ಅಂದರೆ ಮೊಟ್ಟೆಯ ಮೇಲೆ ಬೀಳುವ ಉಷ್ಣತೆ ಮೇಲೆ ಲಿಂಗ ನಿರ್ಧಾರವಾಗುತ್ತದೆ ಅನ್ನುವುದು ನಿಜಕ್ಕೂ ಸೋಜಿಗ! ಮೊಟ್ಟೆಗಳಿಗೆ ಕಾವು ಕೊಡುವ ಸೂರ್ಯನ ಉಷ್ಣತೆ ಇದರ ಮೇಲೆ 27.7 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇದ್ದರೆ ಹುಟ್ಟುವ ಮರಿಗಳೆಲ್ಲಾ ಗಂಡಾಗುತ್ತವೆ. 31 ಡಿಗ್ರಿ ಸೆಲ್ಸಿಯಸ್ ಗಿಂತ ಜಾಸ್ತಿ ಇದ್ದರೆ ಹುಟ್ಟುವ ಮರಿಗಳೆಲ್ಲಾ ಹೆಣ್ಣಾಗುತ್ತವೆ!

50 ರಿಂದ 60 ದಿನ ದಾಟಿದ ಮೇಲೆ ಪೂರ್ಣ ಬಲಿತ ಮರಿಗಳು ಮೊಟ್ಟೆಯೊಡೆದು ಹೆಚ್ಚಾಗಿ ರಾತ್ರಿ ಚಂದ್ರನ ಬೆಳದಿಂಗಳು ಮೂಡಿದ ಮೇಲೆ ಹೊರಬರುತ್ತದೆ ( ತಾಯಿ ಆಮೆ ಮೊಟ್ಟೆ ಇಡುವಾಗಲೇ ಅಮಾವಾಸ್ಯೆ ದಿನ ತಪ್ಪಿಸುವ ಲೆಖ್ಖಾಚಾರ ಮಾಡಿರುತ್ತೆ ಅನ್ನಿಸುತ್ತೆ).

ಮರಳು ರಾಶಿಯ ನಡುವೆ

ನನಗೆ ಆಶ್ಚರ್ಯ ಅನ್ನಿಸುವುದು ಶತ್ರುಗಳಿಂದ ತಪ್ಪಿಸಿಕೊಳ್ಳಲು ರಾತ್ರಿ ಸಮುದ್ರ ಸೇರುವಂತೆ ಸಮಯ ಆಯ್ದುಕೊಳ್ಳಲು ಆ ಮರಳ ಅಡಿ ಹೂತಿರುವ ಪ್ರಪಂಚ ಕಣ್ಣಿಟ್ಟು ನೋಡದ ಈ ಆಮೆ ಮರಿಗಳೊಳಗೆ ಅದೆಂತ ಜೈವಿಕ ಗಡಿಯಾರ ಎಷ್ಟು ಕರಾರುವಕ್ಕಾಗಿ ಕೆಲಸ ಮಾಡುತ್ತಿದೆ! ಅದಕ್ಕೂ ವಿಸ್ಮಯವೆಂದರೆ ಅದಾಗಲೇ ಹೊರಬಂದ ಆ ಪುಟ್ಟ ಕಾಲುಗಳು 4-5 ಅಡಿ ಮರಳ ರಾಶಿ ಸರಿಸಿ ಹೇಗೆ ಒದ್ದು ಬರುತ್ತದೆ? ಹೀಗೆ ಹೊರ ಪ್ರಪಂಚಕ್ಕೆ ಕಣ್ಣು ಹಾಯಿಸುವ ಆ ಪುಟ್ಟ ಕಣ್ಣುಗಳಿಗೆ ಸಮುದ್ರದತ್ತನೇ ಸಾಗಲು ಅದಾವ ಧೀಃಶಕ್ತಿ ಪ್ರೇರಣೆ ಕೊಡುತ್ತದೆ? ಬೆಳದಿಂಗಳ ಬೆಳಕಿಗೆ ಕರೆಯುವ ಅಲೆಗಳ ಸೆಳೆತ ಅತ್ತ ಸಾಗಬೇಕೆನ್ನುವ ಸೂಚನೆ ಅದು ಹೇಗೆ ಪ್ರಪಂಚ ಮೊದಲ ಬಾರಿ ಕಂಡ ಕಣ್ಣಿಗೆ ಹೊಳೆಯುತ್ತೆ ಅನ್ನುವುದು ನನಗಿನ್ನೂ ಅರ್ಥ ಆಗಿಲ್ಲ.

ದಾರಿ ತೋರಲು ತಂದೆಯೂ ಜತೆ ಇಲ್ಲ, ತಾಯಿಯೂ ಇಲ್ಲ. ಕಣ್ತೆರೆದ ಕ್ಷಣದಿಂದ ಜೀವ ಉಳಿಸಿಕೊಳ್ಳಲು ಏಕಾಂಗಿ ಹೋರಾಟ. ಆ ಪುಟ್ಟ ಕಾಲುಗಳು 50-100 ಅಡಿ ಸಾಗಿ ಸಮುದ್ರ ಸೇರುವುದಿದೆಯಲ್ಲಾ , ಅದೊಂದು ದೊಡ್ಡ ಹೋರಾಟ! ಆ ಪುಟ್ಟ ಕಾಲು ಎಷ್ಟು ನಡೆದರೂ ಸಾಗದ ದಾರಿ. ಬೀಚ್ ಮೇಲೆ ಬಿದ್ದ ಮನುಷ್ಯನ ಒಂದು ಹೆಜ್ಜೆ ಗುರುತು ಸಿಕ್ಕರೂ ದೊಡ್ಡ ಬೆಟ್ಟ ಏರಿದಷ್ಟೇ ಕಷ್ಟದಲ್ಲಿ ಉರುಳುರುಳಿ ಬೀಳುತ್ತಾ ಸಾಗುತ್ತದೆ. ಎಂತಹವರ ಬದುಕಿಗೂ ದೊಡ್ಡ ಪ್ರೇರಣೆ ಕೊಡಬಹುದಾದ ಹೆಜ್ಜೆಗುರುತುಗಳು!

ಈ ದಾರಿ ಮುಗಿದ ಮೇಲೆ ಆ ಪುಟ್ಟ ಜೀವದ ಕಣ್ಣೆದುರು ರಾಕ್ಷಸಾಕಾರದ ಅಲೆಗಳು. ಬದುಕಬೇಕಿದ್ದರೆ ಇದನ್ನು ದಾಟಲೇಬೇಕು. ಆಗದು ಎಂದು ಕೂತರೆ ಬದುಕು ಅಲ್ಲಿಗೆ ಅಂತ್ಯ! ಮುನ್ನುಗ್ಗುವ ತೆರೆಗಳನ್ನು ತನ್ನೊಳಗಿನ ಅಂತಃಶಕ್ತಿಯಿಂದನೇ ದಾಟಬೇಕು. ಸೋಲೊಪ್ಪಿಕೊಂಡು ಹಿಂದಡಿಯಿಟ್ಟ ಒಂದು ಆಮೆ ಮರಿಯನ್ನೂ ನಾ ನೋಡಿಲ್ಲ!

ಆದರೆ ಹೋರಾಟ ಇಲ್ಲಿಗೆ ಮುಗಿದಿಲ್ಲ! ಆಳ ಸಮುದ್ರ ಸಾಗುವವರೆಗೆ ಏಡಿಯಿಂದ ಹಿಡಿದು, ಬಲೆ, ಪ್ಲಾಸ್ಟಿಕ್ ಹೀಗೆ ಸಾವಿರ ಅಡ್ಡಿಗಳು. 1000 ಕ್ಕೆ 1 ಮಾತ್ರ ಕೊನೆ ಮುಟ್ಟಿ ಜೀವ ಉಳಿಸಿಕೊಂಡು ಬದುಕಬಲ್ಲದು ಅಂದರೆ ಅದರ ಹೋರಾಟದ ಬದುಕನ್ನೊಮ್ಮೆ ಕಣ್ಣೆದುರು ತಂದುಕೊಳ್ಳಿ. ಸಮುದ್ರದೊಡನೆಯೇ ಬದುಕಿದ ನನ್ನ ಹಿರಿಯರಿಂದ ತಿಳಿದ ಕುತೂಹಲಕರ ಮಾಹಿತಿಯೆಂದರೆ, ಹೀಗೆ ದಾಟಿ ಬದುಕುಳಿದರೆ ಆ ಆಮೆ ತಾನು ವಯಸ್ಕ ಆದ ಮೇಲೆ ಮೊಟ್ಟೆಯಿಡಲು ತಾನು ಹುಟ್ಟಿದ ಜಾಗವನ್ನೇ ಆಯ್ದುಕೊಳ್ಳುವುದಂತೆ. ಸಾವಿರಾರು ಕಿ.ಮೀ ಸಾಗುವ ಇವುಗಳು ಯಾವ ಮ್ಯಾಪ್ ನ ಸಹಾಯವೂ ಇಲ್ಲದೆ ಮೊಟ್ಟೆಯಿಂದ ಹೊರಬಂದಾಗ ಮೊದಲು ನೋಡಿದ ಈ ಸ್ಥಳ ಹೇಗೆ ನೆನಪಿಟ್ಟುಕೊಳ್ಳುತ್ತವೆ?!? ನಿಜಕ್ಕೂ ಅದ್ಭುತ!

ಪ್ರಕೃತಿಯೊಡನೆ

ಆದರೆ ಪ್ರಕೃತಿಯೊಡನೆ ಇಷ್ಟೆಲ್ಲಾ ಹೋರಾಟ ಮಾಡಿ ಬದುಕು ಕಟ್ಟಿಕೊಂಡ ಇವುಗಳ ಬದುಕು ಮನುಷ್ಯನ ಅವಿವೇಕತನದೆದುರು ಮಾತ್ರ ಸೋಲೊಪ್ಪಿಕೊಂಡಿದೆ!! ಇತ್ತೀಚಿನ ವರ್ಷಗಳಲ್ಲಿ ನೈತಿಕತೆ ತಪ್ಪಿರುವ ಮೀನುಗಾರಿಕೆ, ಪ್ಲ್ಯಾಸ್ಟಿಕ್ ಕಸ, ಹವಾಮಾನ ಬದಲಾವಣೆ(climate change), ಮನುಷ್ಯ ಪ್ರೇರಿತ ಚಟುವಟಿಕೆಗಳಿಂದ ಈ ಆಲಿವ್ ರೀಡ್ಲೆ ಕಡಲಾಮೆ ಅಳಿವಿನಂಚಿಗೆ ತಲುಪಿದೆ. ಅಷ್ಟೇ ಅಲ್ಲದೆ ಕಡಲ ತೀರದಲ್ಲಿ ಪ್ರವಾಸಿಗರು ಹಾಕುವ ತಿಂಡಿಗಳಿಂದ ಹೆಚ್ಚುತ್ತಿರುವ ಬೀದಿನಾಯಿಗಳು ಇವುಗಳ ಬದುಕಿಗೆ ಅಂತಿಮ ಮೊಳೆ ಹೊಡೆಯುತ್ತಿದೆ.

ನಮ್ಮದೇ ಬೀಚ್ ನಲ್ಲಿ ಕಳೆದ ಬಾರಿಗಿಂತ ಈ ಬಾರಿ ಮೊಟ್ಟೆಯಿಡಲು ಬಂದ ಆಮೆಗಳ ಸಂಖ್ಯೆಯಲ್ಲಿ ಶೇ. 50 ಕುಸಿದಿದೆ. ಅದ್ಯಾವುದೋ ದೇಶದಲ್ಲಿ ಕೆಂಪು ಏಡಿಯ ಸಂತಾನೋತ್ಪತ್ತಿಗಾಗಿನ ವಲಸೆಗೆ ಇಡೀ ವ್ಯವಸ್ಥೆಯೇ ದಾರಿ ಮಾಡಿಕೊಟ್ಟು ಝೀರೋ ಟ್ರಾಫಿಕ್ ಮಾಡಿ ಕೂಡುತ್ತದೆ ಅಂದರೆ, ಸುಶಿಕ್ಷಿತ ಸಮಾಜದ ವ್ಯಾಖ್ಯಾನ ಇದಲ್ಲವೇ? ನನಗೆ ತಿಳಿದ ಹಾಗೆ ನಮ್ಮ ಕರ್ನಾಟಕದಲ್ಲಿ ಕಡಲಾಮೆ ಮೊಟ್ಟೆಯಿಡಲು ಹೆಚ್ಚಾಗಿ ಆಯ್ಕೆ ಮಾಡಿರುವುದು ನಮ್ಮ ಕುಂದಾಪುರದ ಕೋಡಿ ಬಿಟ್ಟರೆ ಇನ್ನೊಂದು ಹೊನ್ನಾವರದ ಟೊಂಕ ಕಡಲ ತೀರ. ಕನಿಷ್ಠ ಇವುಗಳ ಸಂತಾನೋತ್ಪತ್ತಿ ಸಮಯಕ್ಕಾದ್ರೂ ಈ ಎರಡು ಬೀಚ್ ಗಳಲ್ಲಿ ನಿರ್ಭೀತಿಯ ಪೂರಕ ವಾತಾವರಣ ನಿರ್ಮಾಣ ಮಾಡಿಕೊಟ್ಟರೆ ಸಾಕಿತ್ತು.

ಪ್ರಕೃತಿಯೆಡೆಗಿನ ವಿವೇಕದ ಪ್ರಜ್ಞೆ ಮಾತ್ರವೇ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಉಳಿಸಬಹುದು ಹೊರತು ನಾವು ಗಳಿಸಿಟ್ಟ ಹಣ, ಆಸ್ತಿ ಗಳಲ್ಲ... ಯಾಕೆಂದರೆ ನಮಗೆ ಇರುವುದೊಂದೇ ಭೂಮಿ.

-ಸಂತೋಷ ಕೋಡಿ( ಪರಿಸರ ಬಳಗ)

IPL_Entry_Point