ಕನ್ನಡ ಸುದ್ದಿ  /  Karnataka  /  Satish Jarkiholi Profile Belagavi Valmiki Nayaka Leader Gokak Congress Siddaramaiah Cabinet Jarkiholi Family Uks

Satish Jarkiholi Profile: ಸಿದ್ದರಾಮಯ್ಯ ಆಪ್ತನಿಗೆ ಮತ್ತೊಮ್ಮೆ ಅದೃಷ್ಟ; ವಿಚಾರವಾದಿ ರಾಜಕಾರಣಿ ಸತೀಶ್‌ ಜಾರಕಿಹೊಳಿ

Satish Jarkiholi Profile: ಉತ್ತರ ಕರ್ನಾಟಕದ ವಿಶೇಷವಾಗಿ ಬೆಳಗಾವಿ ಸುತ್ತಮುತ್ತಲಿನ ಭಾಗದ ಪ್ರಮುಖ, ಪ್ರಭಾವಿ ರಾಜಕೀಯ ನಾಯಕರಲ್ಲಿ ಸತೀಶ್‌ ಜಾರಕಿ ಹೊಳಿ ಒಬ್ಬರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತಲಯದಲ್ಲಿ ಗುರುತಿಸಿಕೊಂಡವರು. ಮೊದಲ ಹಂತದಲ್ಲಿಯೇ ಈ ಸಲ ಅವರು ಸಚಿವ ಸಂಪುಟ ಸೇರುತ್ತಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ.

ಸತೀಶ್‌ ಜಾರಕಿಹೊಳಿ (ಕಡತ ಚಿತ್ರ)
ಸತೀಶ್‌ ಜಾರಕಿಹೊಳಿ (ಕಡತ ಚಿತ್ರ) (HT_PRINT)

ಸತೀಶ್‌ ಜಾರಕಿಹೊಳಿ ಎಂದ ಕೂಡಲೇ ಬೆಳಗಾವಿ ಸುತ್ತಮುತ್ತ ಸಾಹುಕಾರ ಎಂಬ ಇಮೇಜ್‌ ಕಣ್ಣ ಮುಂದೆ ಬಂದರೆ, ಉಳಿದೆಡೆ ವಿಚಾರವಾದಿ ರಾಜಕಾರಣಿಯ ರೂಪ ಕಣ್ಣೆದುರು ಕಾಣಬಹುದು. ಹೌದು, ಉತ್ತರ ಕರ್ನಾಟಕ ಭಾಗದ ವಿಶೇಷವಾಗಿ ಬೆಳಗಾವಿ ಸುತ್ತಮುತ್ತ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು ಸತೀಶ್‌ ಜಾರಕಿಹೊಳಿ.

ಅಹಿಂದ ಸಂಘಟನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಜತೆಗೆ ಗುರುತಿಸಿಕೊಂಡಿದ್ದ ಅವರು, ಸಿದ್ದರಾಮಯ್ಯ ಆಪ್ತಬಳಗದಲ್ಲಿದ್ದಾರೆ. ಹೀಗಾಗಿಯೇ ಅವರ ಸಚಿವ ಸಂಪುಟದಲ್ಲಿ ಅವರಿಗೊಂದು ಸ್ಥಾನ ಖಚಿತ. ಪ್ರಸ್ತುತ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿ ಕೆಲಸ ಮಾಡುತ್ತಿದ್ದಾರೆ.

ಜಾರಕಿಹೊಳಿ ಕುಟುಂಬ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದು, ಬೆಳಗಾವಿಯ ಗೋಕಾಕ ಸುತ್ತಮುತ್ತ ಸಾಹುಕಾರರೆನಿಸಿಕೊಂಡಿದ್ದಾರೆ. ಆ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚು ಇದ್ದು, ಅದರ ಬಹುತೇಕ ಮಾಲೀಕರು ರಾಜಕಾರಣದಲ್ಲಿ ಸಕ್ರಿಯರು. ಅವರಂತೆಯೇ ಜಾರಕಿಹೊಳಿ ಕುಟುಂಬ ಕೂಡ ಸಕ್ರಿಯ ರಾಜಕಾರಣದಲ್ಲಿದೆ.

ಸತೀಶ್‌ ಜಾರಕಿಹೊಳಿ ಅವರ ತಂದೆ ಲಕ್ಷ್ಮಣ ರಾವ್‌ ಜಾರಕಿಹೊಳಿ ಕಬ್ಬು ಬೆಳೆಗಾರರಷ್ಟೇ ಅಲ್ಲ, ಉದ್ಯಮಿಯೂ ಆಗಿದ್ದರು. ವಾಲ್ಮೀಕಿ (ನಾಯಕ) ಸಮುದಾಯದ ಕುಟುಂಬ ಇದು. ಸತೀಶ್‌ ಅವರು ಸೇರಿ ನಾಲ್ವರು ಸಹೋದರರು. ಹಿರಿಯ ಸಹೋದರ ರಮೇಶ್‌ ಜಾರಕಿಹೊಳಿ ( ಬಿಜೆಪಿ ಶಾಸಕ ), ಕಿರಿಯ ಸಹೋದರ ಬಾಲಚಂದ್ರ ಜಾರಕಿಹೊಳಿ ( ಬಿಜೆಪಿ ಶಾಸಕ ) ಹಾಗೂ ಕೊನೆಯ ಸಹೋದರ ಲಖನ್‌ ಜಾರಕಿಹೊಳಿ ( ಎಂಎಲ್‌ಸಿ ). ಸತೀಶ್‌ ಜಾರಕಿಹೊಳಿ ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ. ಅವರೂ ರಾಜಕಾರಣ ಹಾಗೂ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸತೀಶ್‌ ಅವರು 1998ರಲ್ಲಿ ಸಕ್ರೀಯ ರಾಜಕಾರಣಕ್ಕೆ ಬಂದವರು. ಸಕ್ಕರೆ ಉದ್ಯಮದಲ್ಲಿ ಯಶಸ್ಸು ಕಂಡ ಸತೀಶ್ ಜಾರಕಿಹೊಳಿ 1998 ರಿಂದ 2008ರ ತನಕ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಧರಂಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸದ್ದರು.

ಸತೀಶ್‌ ಅವರು ಚುನಾವಣಾ ರಾಜಕೀಯಕ್ಕೆ 2008ರಲ್ಲಿ ಪ್ರವೇಶಿಸಿದ್ದು, ಮೊದಲ ಬಾರಿಗೆ ಅದೇ ವರ್ಷ ಯಮನಕನಮರಡಿ ಶಾಸಕರಾಗಿ ಆಯ್ಕೆಯಾದರು. ಜನತಾದಳದಲ್ಲಿದ್ದ ಅವರು 2008ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿದ್ದಾರೆ. ಅಹಿಂದ ವರ್ಗಗಳನ್ನು ಸಂಘಟಿಸುವುದಲ್ಲಿ ಅವರ ಪಾತ್ರವೂ ದೊಡ್ಡದಿದೆ. 2013ರಿಂದೀಚೆಗೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ, ಸತೀಶ್‌ ಜಾರಕಿಹೊಳೆ ಅವರು ಅಬಕಾರಿ, ಸಣ್ಣ ಕೈಗಾರಿಕಾ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಮುಂದೆ 2018ರಲ್ಲಿ ಡಿಸೆಂಬರ್‌ 22ರಿಂದ 2019ರ ಜುಲೈ 23ರ ತನಕ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು.

ಲೋಕಸಭೆಯ ಉಪಚುನಾವಣೆಗೂ ಸತೀಶ್‌ ಜಾರಕಿಹೊಳಿ ಸ್ಪರ್ಧಿಸಿದ್ದರು. 2021 ರ ಉಪಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಸುರೇಶ ಅಂಗಡಿ ಅವರ ನಿಧನದ ನಂತರ ತೆರವಾದ ಸ್ಥಾನ ಇದಾಗಿತ್ತು. ಮಂಗಳಾ ಸುರೇಶ ಅಂಗಡಿ (ಸುರೇಶ ಅಂಗಡಿಯವರ ಪತ್ನಿ) 5,240 ಮತಗಳ ಅಂತರದಿಂದ ಸತೀಶ್‌ ಅವರನ್ನು ಸೋಲಿಸಿದರು. ಸುಮಾರು 30 ವರ್ಷಗಳ ರಾಜಕೀಯ ಜೀವನದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿದ ಮೊದಲ ರಾಜಕಾರಣಿ ಮಂಗಳಾ ಸುರೇಶ ಅಂಗಡಿ ಎಂಬುದು ಗಮನಾರ್ಹ.

ವಿಚಾರವಾದಿ ರಾಜಕಾರಣಿ

ಸತೀಶ್‌ ಜಾರಕಿಹೊಳಿ ಅವರು ಮೌಢ್ಯ ವಿರೋಧಿ ಚಟುವಟಿಕೆಗಳ ಮೂಲಕ ಗಮನಸೆಳೆಯುತ್ತಿರುತ್ತಾರೆ. ಮಾನವ ಬಂಧುತ್ವ ವೇದಿಕೆಯನ್ನು ಸ್ಥಾಪಿಸಿ ಮೌಢ್ಯ ತೊಲಗಿಸುವ ಮತ್ತು ವಿಚಾರವಾದದ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸ್ವಾತಂತ್ರ್ಯ, ಮಾನವೀಯ ಮೌಲ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ತ್ವಗಳ ಆಧಾರದಲ್ಲಿ ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುತ್ತದೆ. ಜಾತಿ, ವರ್ಣ, ಲಿಂಗ ಮತ್ತು ವರ್ಗಗಳ ಭೇದವಿಲ್ಲದ ಸಮುದಾಯದ ಸಂಘಟನೆಯನ್ನು ಕಟ್ಟುವುದು, ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಈ ಸಂಸ್ಥೆಯ ಮೂಲಕ ಅವರು ಮಾಡುತ್ತಿದ್ದಾರೆ.

ಉದ್ಯಮಿಯಾಗಿ ಸತೀಶ್‌ ಜಾರಕಿಹೊಳಿ

ಸಕ್ಕರೆ ಉದ್ಯಮದಲ್ಲಿ ಸತೀಶ್‌ ಜಾರಕಿಹೊಳಿ ಅವರು 2000ನೇ ಇಸವಿಯಲ್ಲಿ ಖಂಡಸಾರಿ ಸಕ್ಕರೆ ಉತ್ಪಾದನಾ ಘಟಕವನ್ನು ಆರಂಭಿಸಿದರು. ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡರು. 2016ರಲ್ಲಿ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್‌ ಹೆಸರಿನಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಿದರು. ಮೂರನೇ ಸಕ್ಕರೆ ಕಾರ್ಖಾನೆಯನ್ನು ಯರಗಟ್ಟಿ ಶುಗರ್ಸ್ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ಅಡಿಯಲ್ಲಿ ನಿರ್ಮಿಸುವ ಕಾರ್ಯವು ಚಾಲ್ತಿಯಲ್ಲಿದೆ. ಸತೀಶ್‌ ಶುಗರ್ಸ್‌ ಕಂಪನಿಯ ಅಧೀನದಲ್ಲೇ ಸಮಯ ಸುದ್ದಿ ವಾಹಿನಿ ಕಟ್ಟುವ ಕೆಲಸ ಮಾಡಿದ್ದರಾದರೂ, ಅದು ಯಶಕಾಣಲಿಲ್ಲ.

IPL_Entry_Point