Tirupati Laddu:ಇನ್ನು ಮುಂದೆ ತಿರುಪತಿ ಲಡ್ಡು ತಯಾರಿಗೆ ಕರ್ನಾಟಕ ನಂದಿನಿ ಬಳಸೋಲ್ಲ: ಕಾರಣ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  Tirupati Laddu:ಇನ್ನು ಮುಂದೆ ತಿರುಪತಿ ಲಡ್ಡು ತಯಾರಿಗೆ ಕರ್ನಾಟಕ ನಂದಿನಿ ಬಳಸೋಲ್ಲ: ಕಾರಣ ಇಲ್ಲಿದೆ ನೋಡಿ

Tirupati Laddu:ಇನ್ನು ಮುಂದೆ ತಿರುಪತಿ ಲಡ್ಡು ತಯಾರಿಗೆ ಕರ್ನಾಟಕ ನಂದಿನಿ ಬಳಸೋಲ್ಲ: ಕಾರಣ ಇಲ್ಲಿದೆ ನೋಡಿ

Nandini Ghee ಕರ್ನಾಟಕದ ಹಾಲು ಮಹಾಮಂಡಳದಿಂದ ತಿರುಪತಿ ಲಡ್ಡು ತಯಾರಿಗೆ ಐದು ದಶಕದಿಂದ ಸರಬರಾಜು ಆಗುತ್ತಿದ್ದ ತುಪ್ಪ ಇನ್ನು ಮುಂದೆ ಸರಬರಾಜು ಆಗುವುದಿಲ್ಲ. ದರ ಏರಿಕೆ ಕಾರಣದಿಂದ ಟೆಂಡರ್‌ ರದ್ದುಪಡಿಸಲಾಗಿದೆ. ಹೊಸ ಕಂಪೆನಿ ತುಪ್ಪವನ್ನು ತಿರುಪತಿ ಲಡ್ಡು ತಯಾರಿಗೆ ಬಳಕೆ ಮಾಡಲಾಗುತ್ತದೆ.

ತಿರುಪತಿ ಲಡ್ಡು ತಯಾರಿಗೆ ಇನ್ನು ಮುಂದೆ ನಂದಿನಿ ತುಪ್ಪ ಬಳಕೆಯಾಗೋಲ್ಲ
ತಿರುಪತಿ ಲಡ್ಡು ತಯಾರಿಗೆ ಇನ್ನು ಮುಂದೆ ನಂದಿನಿ ತುಪ್ಪ ಬಳಕೆಯಾಗೋಲ್ಲ

ಬೆಂಗಳೂರು: ತಿರುಪತಿ ತಿಮ್ಮನ ದರ್ಶನ ಪಡೆದ ನಂತರ ಪಡೆಯುತ್ತಿದ್ದ ಲಡ್ಡುವಿನಲ್ಲಿ ಇನ್ನು ಕರ್ನಾಟಕದ ನಂದಿನಿ ತುಪ್ಪದ ರುಚಿ ಇರುವುದಿಲ್ಲ. ಏಕೆಂದರೆ ತಿರುಪತಿ ತಿರುಮಲ ದೇವಸ್ಥಾನಂ( TTD) ಆಡಳಿತ ಮಂಡಳಿ ಆಗಸ್ಟ್‌ 1ರಿಂದ ನಂದಿನಿ ತುಪ್ಪ ಖರೀದಿ ಟೆಂಡರ್‌ ಅನ್ನು ರದ್ದುಪಡಿಸಿದೆ. ಇನ್ನು ಮುಂದೆ ಬೇರೆ ಕಂಪೆನಿಯ ತುಪ್ಪವನ್ನು ತಿರುಪತಿ ಆಡಳಿತ ಮಂಡಳಿ ಬಳಸಲಿದೆ.

ಈಗಾಗಲೇ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರವನ್ನು ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ಕರ್ನಾಟಕ ಹಾಲು ಮಹಾಮಂಡಳ( Karnataka Milk Federation) ಹೆಚ್ಚಳ ಮಾಡಿದೆ. ದರ ಹೆಚ್ಚಳದ ಕಾರಣದಿಂದಲೇ ನಂದಿನಿ ತುಪ್ಪವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕರ್ನಾಟಕ ನಂದಿನಿಯ ತುಪ್ಪವನ್ನು ತಿರುಪತಿಯಲ್ಲಿ ಲಡ್ಡು ತಯಾರಿಸಲು ಬಹುತೇಕ ಐವತ್ತು ವರ್ಷಗಳಿಂದ ಬಳಸಲಾಗುತ್ತಿದೆ. ಇದರಿಂದ ಹಳೆಯ ಒಡಬಂಡಿಕೆ ರದ್ದಾಗಲಿದೆ.

ಈ ವಿಷಯವನ್ನು ಖಚಿತಪಡಿಸಿರುವ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಭೀಮಾನಾಯಕ್‌, ನಂದಿನಿ ಉತ್ಪನ್ನಗಳ ದರ ಏರಿಕೆ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ. ದರ ಏರಿಕೆ ಕಾರಣ ನೀಡಿ ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಲಿ ನಂದಿನಿ ತುಪ್ಪದ ಖರೀದಿ ಟೆಂಡರ್‌ ಅನ್ನು ರದ್ದುಪಡಿಸಿದೆ ಎಂದು ಹೇಳಿದರು.

ನಂದಿನಿಗಿಂತ ಕಡಿಮೆ ದರದಲ್ಲಿ ತುಪ್ಪ ನೀಡುವ ಹಲವು ಸಂಸ್ಥೆಗಳು ಮುಂದೆ ಬಂದಿವೆ. ಅದರಲ್ಲಿ ಹೊಸ ಸಂಸ್ಥೆಯನ್ನು ಹುಡುಕಿಕೊಂಡಿರುವುದರಿಂದ ನಾವು ಸಹಜವಾಗಿ ತುಪ್ಪದ ಸರಬರಾಜು ನಿಲ್ಲಿಸಬೇಕಾಗುತ್ತದೆ. ನಂದಿನಿ ತುಪ್ಪವನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಗುಣಮಟ್ಟವನ್ನು ಬೇರೆ ಕಂಪೆನಿಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಮುಂದೆ ತಿರುಪತಿ ಲಡ್ಡುಗಳು ಈಗಿನಂತೆಯೇ ಇರುತ್ತವೆ ಎಂದು ಹೇಳಲಾಗದು ಎಂದು ಭೀಮಾನಾಯಕ್‌ ತಿಳಿಸಿದರು.

ಕೆಎಂಎಫ್‌ ಅತ್ಯುತ್ತಮ ದರ್ಜೆಯ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಬೇಡ. ನಮ್ಮ ಬೆಲೆಗಿಂತ ಕಡಿಮೆ ದರಕ್ಕೆ ಬೇರೆ ಸಂಸ್ಥೆ ತುಪ್ಪ ಸರಬರಾಜು ಮಾಡುತ್ತದೆ ಎಂದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಂತೆ ಎನ್ನುವುದು ನನ್ನ ಖಚಿತ ನಿಲುವು ಎಂದು ತಿಳಿಸಿದರು.

ತಿರುಪತಿ ತಿರುಮಲ ದೇವರ ದರ್ಶನದ ನಂತರ ಪ್ರತಿಯೊಬ್ಬ ಭಕ್ತರು ಅಲ್ಲಿ ಲಡ್ಡು ಖರೀದಿಸುತ್ತಾರೆ. ಆ ಲಡ್ಡುರುಚಿ ಹಾಗೂ ತಯಾರಿಕೆ ಕ್ರಮವೂ ಹೆಸರುವಾಸಿಯಾಗಿದೆ. ಲಕ್ಷಾಂತರ ಭಕ್ತರಿಗೆ ನಿರಂತರವಾಗಿ ಲಡ್ಡುಗಳನ್ನು ಆಡಳಿತ ಮಂಡಳಿ ನೀಡುತ್ತಾ ಬಂದಿದೆ.

Whats_app_banner