Tumkur News: ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ಧೇನೆ, ನಮಗೆ ನೀರು ಕೊಡಿಸಿ, ಡಿಸಿಗೆ ತುಮಕೂರು ಗ್ರಾಮೀಣ ಜನರ ಅಹವಾಲು
ತುಮಕೂರು ಜಿಲ್ಲೆಯಲ್ಲಿ ಬೇಸಿಗೆ ಈಗಷ್ಟೇ ಆರಂಭವಾಗಿದ್ದರೂ ನೀರಿನ ಬವಣೆ ಮಿತಿ ಮೀರಿದೆ. ಹಲವು ಕಡೆ ಸಮಸ್ಯೆಯಾಗುತ್ತಿದ್ದು, ಖುದ್ದು ಡಿಸಿ ಶುಭಾ ಕಲ್ಯಾಣ್ ಅವರೇ ಭೇಟಿ ನೀಡಿ ಜನರ ಅಹವಾಲು ಆಲಿಸುತ್ತಿದ್ದಾರೆ.(ವರದಿ: ಈಶ್ವರ್ ತುಮಕೂರು)
ತುಮಕೂರು: ಕಳೆದ ಒಂದೂವರೆ ತಿಂಗಳಿಂದ ನೀರಿಲ್ಲದೆ ಬವಣೆಯ ಬದುಕು ಸಾಗಿಸುತ್ತಿದ್ದೇವೆ, ನೀರಿಲ್ಲದೆ ಅಡುಗೆ, ಸ್ವಚ್ಛತಾ ಕಾರ್ಯಗಳಿಗೆ ಪರದಾಡುವಂತಾಗಿದೆ. ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿ ಎದುರಾಗಿದೆ, ಮನೆಯಲ್ಲಿ ನೀರಿಲ್ಲದೆ ಯಾವ ಕೆಲಸವೂ ಮಾಡಲಾಗುತ್ತಿಲ್ಲ, ಬೆಳಗಿನಿಂದ ನೀರು ಹೊಂಚಲು ಶುರುವಾದರೆ ಹೊತ್ತೇರಿದರೂ ಒಂದೆರಡು ಕೊಡ ನೀರು ಸಿಗುತ್ತದೆ. ನೀರಿನ ಸಮಸ್ಯೆಯಿಂದ ಮಕ್ಕಳಿಗೆ ಹೊತ್ತಿಗೆ ಸರಿಯಾಗಿ ಊಟವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಮಾಳಿಗೆಹಟ್ಟಿ ಗ್ರಾಮದ ಮಹಿಳೆಯರು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಹೇಳಿಕೊಂಡ ಅಹವಾಲು.
ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ಕುರುಬರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮಾಳಿಗೆಹಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬರಪರಿಸ್ಥಿತಿ ಪರಿವೀಕ್ಷಿಸಲು ಭೇಟಿ ನೀಡಿದ ಸಂದರ್ಭದಲ್ಲಿ ಮಾಳಿಗೆಹಳ್ಳಿಯ ಗ್ರಾಮಸ್ಥರು ತಮ್ಮ ಸಮಸ್ಯೆಗಳ ಅಹವಾಲು ಸಲ್ಲಿಸಿದರು.
ನಾವು ಪಂಚಾಯಿತಿಯವರಿಗೆ ಮನವಿ ಕೊಟ್ಟಿದ್ದೇನೆ. ಅಧಿಕಾರಿಗಳಿಗೂ ಹೇಳಿದ್ದೇವೆ. ಜನಪ್ರತಿನಿಧಿಗಳಿಗೆ ತಿಳಿಸಿದ್ದೇವೆ. ನೀರಿನ ಸಮಸ್ಯೆ ಸರಿಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಏನೂ ಆಗಿಲ್ಲ. ನೀವಾದರೂ ನಮಗೆ ಸರಿಯಾದ ಸಮಯಕ್ಕೆ ನೀರು ಕೊಡಿಸಿ . ಬೇಸಿಗೆ ಬವಣೆಯಿಂದ ದೂರ ಮಾಡಿ ಎಂದು ಜನ ಭಿನ್ನವಿಸಿಕೊಂಡರು.
ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಕಳೆದ ಒಂದೂವರೆ ತಿಂಗಳಿಂದ ನೀರಿಗಾಗಿ ಜನರು ಪಡುತ್ತಿರುವ ಕಷ್ಟ ಅಧಿಕಾರಿಗಳಿಗೆ ಕಾಣಲಿಲ್ಲವೇ? ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಕೂಡಲೇ ಎಸ್‌ಡಿಆರ್‌ಎಫ್ ಹಣದಿಂದ ತುರ್ತು ಕಾಮಗಾರಿ ಕೈಗೊಳ್ಳಬೇಕೆಂದು ನಿರ್ದೇಶನವಿದ್ದರೂ ಏಕೆ ಕ್ರಮ ಕೈಗೊಂಡಿಲ್ಲವೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು, ಕೂಡಲೇ ಟ್ಯಾಂಕರ್‌ನಿಂದ ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ನೀರಿನ ಲಭ್ಯತೆ ಇರುವ ಜಾಗವನ್ನು ಗುರುತಿಸಿ ಜನರಿಗೆ ಕುಡಿಯಲು ಮೊದಲು ನೀರು ಕೊಡಬೇಕು. ಬೋರ್‌ವೆಲ್‌ಗಳ ಪುನಶ್ಚೇತನ, ಕೆರೆಗಳನ್ನು ಸಜ್ಜಗೊಳಿಸಿ ನೀರು ಒದಗಿಸಿ ಎಂದು ಡಿಸಿ ತಿಳಿಸಿದರು.
ಇದಕ್ಕೂ ಮುನ್ನ ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ತಾವರೆಕೆರೆ, ಬುಕ್ಕಾಪಟ್ಟಣ ಹೋಬಳಿ ನೇರಳೆಗುಡ್ಡ ಗ್ರಾಮ ಪಂಚಾಯತಿ ಉಡಪಕಲ್ ತಾಂಡ ಹಾಗೂ ಕುರುಬರಹಳ್ಳಿ ಗ್ರಾಮ ಪಂಚಾಯತಿ ಬಂಗಾರಿಗೊಲ್ಲರಹಟ್ಟಿ, ಪುರ ಗ್ರಾಮಗಳಿಗೆ ಭೇಟಿ ನೀಡಿ ಬರಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ಪರಿವೀಕ್ಷಿಸಿದರು.
ಉಡಪಕಲ್ ತಾಂಡಾದಲ್ಲಿ ನೀರಿನ ಅಭಾವ ನೀಗಿಸಲು ಖಾಸಗಿ ಕೊಳವೆ ಬಾವಿ ಮಾಲೀಕರೊಂದಿಗೆ ನೀರು ಸರಬರಾಜು ಮಾಡಲು ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ, ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಪೈಪ್‌ಲೈನ್ ಅಳವಡಿಸಲಾಗಿದೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬರಕತ್ ಅಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಹೊಸದಾಗಿ ಕೊರೆದ ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಮೋಟಾರ್ ಪಂಪ್ ಅಳವಡಿಸಬೇಕು, ಸಾರ್ವಜನಿಕರ ಹಿತದೃಷ್ಟಿಯಿಂದ ಬಾಡಿಗೆ ಆಧಾರದ ಮೇಲೆ ನೀರು ನೀಡುವ ಖಾಸಗಿ ಕೊಳವೆ ಬಾವಿಗಳಿಗೆ ನಿರಂತರ ಜ್ಯೋತಿಯಡಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ಗೆ ಡಿಸಿ ಸೂಚನೆ ನೀಡಿದರು.
ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಪಂಚಾಯಿತಿ ಅಧ್ಯಕ್ಷ ತಿಮ್ಮಕ್ಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಾವರಿ ನಾಯಕ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹನುಮಂತಪ್ಪ, ಬೆಸ್ಕಾಂ ಇಂಜಿನಿಯರ್, ವಿವಿಧ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು ಹಾಜರಿದ್ದರು.
(ವರದಿ: ಈಶ್ವರ್ ತುಮಕೂರು)
ವಿಭಾಗ