ಕನ್ನಡ ಸುದ್ದಿ  /  Lifestyle  /  Health Tips World Hearing Day 2024 Essential Tips For Optimal Ear Health Causes Of Hearing Loss Mgb

World Hearing Day 2024: ವಿಶ್ವ ಶ್ರವಣ ದಿನದಂದು ಕಿವಿಯ ಆರೋಗ್ಯದ ಅಗತ್ಯ ತಿಳಿಯಿರಿ; ಶ್ರವಣದೋಷ ಬರದಿರಲು ಈ ಟಿಪ್ಸ್ ಪಾಲಿಸಿ

Ear Health: ನಮ್ಮ ಕಿವಿಯ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ತೆಗೆದುಕೊಳ್ಳಬೇಕು? ಜೊತೆಗೆ ಸಮಸ್ಯೆಗಳು ಕಂಡುಬಂದಾಗ ಯಾವ ರೀತಿ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ತಜ್ಞರು ಹಂಚಿಕೊಂಡಿದ್ದಾರೆ.

ಕಿವಿಯ ಆರೋಗ್ಯ (ಪ್ರಾತಿನಿಧಿಕ ಚಿತ್ರ)
ಕಿವಿಯ ಆರೋಗ್ಯ (ಪ್ರಾತಿನಿಧಿಕ ಚಿತ್ರ)

ಕಿವಿಯ ಆರೋಗ್ಯ ಎಷ್ಟು ಮುಖ್ಯ? ಇದಕ್ಕಾಗಿ ಯಾವೆಲ್ಲಾ ಕ್ರಮಗಳು ಅಗತ್ಯ ಎಂಬುದರ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್‌ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ʼಕಿವಿ ಮತ್ತು ಶ್ರವಣದ ಆರೈಕೆ ಎಲ್ಲರಿಗೂ ಮುಖ್ಯʼ ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ನಾವೆಲ್ಲರೂ ಮುಖದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುತ್ತೇವೆ ಆದ್ರೆ ಪಂಚೇಂದ್ರಿಯಗಳಲ್ಲೊಂದಾದ ಕಿವಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಷ್ಟು ಕಾಳಜಿ ವಹಿಸುತ್ತೇವೆ ? ಈ ದಿನದಂದು ಕಿವಿ ಆರೋಗ್ಯ ಜೊತೆಗೆ ಶ್ರವಣ ದೋಷ ಕುರಿತಾಗಿ ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಇಎನ್‌ಟಿ ತಜ್ಞರಾದ ಡಾ.ಸುನಿತಾ ಮಾಧವನ್‌ ವಿವರಿಸಿದ್ದಾರೆ.

ಅನೇಕರಲ್ಲಿ ಶ್ರವಣ ದೋಷ ಸಮಸ್ಯೆಯನ್ನು ಕಾಣುತ್ತಿದ್ದೇವೆ. ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಅಗತ್ಯ, ಏಕೆಂದರೆ ಇದು ಮಾತು ಮತ್ತು ಭಾಷೆ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕಿವಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ತೆಗೆದುಕೊಳ್ಳಬೇಕು? ಜೊತೆಗೆ ಸಮಸ್ಯೆಗಳು ಕಂಡುಬಂದಾಗ ಯಾವ ರೀತಿ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ತಜ್ಞರು ಹಂಚಿಕೊಂಡಿದ್ದಾರೆ.

ವಿವಿಧ ಕಾರಣಗಳಿಂದ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಕೆಲವು ಘಟನೆಗಳು ಜೆನೆಟಿಕ್ಸ್‌ನಿಂದ, ಕೆಲವು ಸಂದರ್ಭಗಳಲ್ಲಿ ಸೋಂಕು, ಗಾಯ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು, ಒಟೊಟಾಕ್ಸಿಕ್‌ ಔಷಧಿಗಳ ನಿರಂತರ ಬಳಕೆ ಮತ್ತು ಭಾರೀ ಪ್ರಮಾಣದ ಶಬ್ದವನ್ನು ಆಲಿಸುವುದರಿಂದಲೂ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ.

ಕಿವಿಯ ಆರೈಕೆಗೆ ಸಲಹೆಗಳು

1) ಮಹಿಳೆಯರು ಗರ್ಭಿಣಿಯಾಗಿರುವಾಗಲೇ TORCH ಸ್ಕ್ರೀನಿಂಗ್​​ಗೆ (ಒಂದು ರೀತಿಯ ರಕ್ತ ಪರೀಕ್ಷೆ)ಒಳಗಾಗುವುದು ಇಲ್ಲಿ ಒಳ್ಳೆಯದು. ಈ ಮೂಲಕ ಮಗುವಿಗೆ ಆರಂಭಿಕ ಹಂತದಲ್ಲೇ ಸಮಸ್ಯೆ ಕಂಡುಬಂದಲ್ಲಿ ಸಾಧ್ಯವಾದರೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂಬುದು ವೈದ್ಯರ ಸಲಹೆ.

2) ಶೀತ, ಕೆಮ್ಮಿನಿಂದ ಕಿವಿ ನೋವು ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು.

3) ಜೀವನಶೈಲಿ ನಿರ್ವಹಣೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯ್ಡ್‌ ಸಮಸ್ಯೆಗಳನ್ನು ನಿಯಂತ್ರಿಸುವ ಮೂಲಕವು ಶ್ರವಣ ದೋಷ ಉಂಟಾಗುವುದನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

4) ಕಿವಿ ಸ್ವಚ್ಛತೆಗಾಗಿ ಕಿವಿಯಲ್ಲಿ ಪಿನ್‌, ಬಡ್ಸ್‌ಮತ್ತು ಇತರೆ ವಸ್ತುಗಳನ್ನು ಹಾಕುವುದು ಸರಿಯಲ್ಲ. ಇದರಿಂದಾಗಿಯೂ ಕಿವಿಯಲ್ಲಿ ಸೋಂಕು ಅಥವಾ ಕಿವಿಯೊಳಗಿನ ಪದರಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.

5) ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಲ್ಲಿ ಮನೆಮದ್ದುಗಳ ಮೊರೆ ಹೋಗುವುದಲ್ಲ ಸರಿಯಲ್ಲ. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

6) ಭಾರೀ ಪ್ರಮಾಣದ ಶಬ್ಧ ಆಲಿಸುವುದು, ಹೆಡ್‌ಫೋನ್‌ ಬಳಸುವುದನ್ನು ತಪ್ಪಿಸುವ ಮೂಲಕವೂ ಶ್ರವಣ ದೋಷ ಉಂಟಾಗುವುದನ್ನು ತಡೆಗಟ್ಟಬಹುದು.

7) ದಡಾರ, ಮಂಪ್ಸ್, ರುಬೆಲ್ಲಾ ಮತ್ತು ನ್ಯುಮೋಕೊಕಲ್ ರೋಗಗಳ ವಿರುದ್ಧ ಲಸಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಏಕೆಂದರೆ ಈ ಸೋಂಕಿನ ಸಮಸ್ಯೆಗಳು ಕೂಡ ಶ್ರವಣ ದೋಷಕ್ಕೆ ಕಾರಣವಾಗಬಹುದು. ಅವಗಳನ್ನು ತಡೆಗಟ್ಟಲು ಲಸಿಕೆ ಮುಖ್ಯ ಪಾತ್ರವಹಿಸುತ್ತದೆ.

8) ನವಜಾತ ಶಿಶುಗಳ ಕಿವಿ ಪರಿಶೀಲನೆ ಅತ್ಯಗತ್ಯ. ಏಕೆಂದರೆ ಕುಟುಂಬದಲ್ಲಿ ಯಾರಿಗಾದರೂ ಶ್ರವಣದೋಷ ಸಮಸ್ಯೆ ಇದ್ದಲ್ಲಿ ಅದು ವಂಶಿಕವಾಗಿ ಕಂಡುಬರುವ ಸಾಧ್ಯತೆ ಇರುತ್ತದೆ.

ಪರಿಹಾರ: ಶ್ರವಣ ದೋಷ ಹೊಂದಿರುವವರಿಗೆ ವೈದ್ಯರ ಮೂಲಕ ಪರಿಶೀಲನೆ ನಡೆಸಿ ಶ್ರವಣ ಸಾಧನಗಳನ್ನು ನೀಡುವ ಮೂಲಕ ಅವರ ಸಮಸ್ಯೆಗೆ ಪರಿಹಾರವನ್ನು ಒದಗಿಸಬಹುದು ಎಂಬ ಸಲಹೆ ನೀಡುತ್ತಾರೆ ಡಾಕ್ಟರ್​ ಸುನಿತಾ.