ಬಜೆಟ್‌ನಲ್ಲಿ ಕರ್ನಾಟಕದ 20 ರೈಲ್ವೆ ಮಾರ್ಗ ಪೂರ್ಣಕ್ಕೆ 3817 ಕೋಟಿ ರೂ. ಮೀಸಲು, ಯಾವ್ಯಾವ ಮಾರ್ಗ ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬಜೆಟ್‌ನಲ್ಲಿ ಕರ್ನಾಟಕದ 20 ರೈಲ್ವೆ ಮಾರ್ಗ ಪೂರ್ಣಕ್ಕೆ 3817 ಕೋಟಿ ರೂ. ಮೀಸಲು, ಯಾವ್ಯಾವ ಮಾರ್ಗ ಇಲ್ಲಿದೆ ವಿವರ

ಬಜೆಟ್‌ನಲ್ಲಿ ಕರ್ನಾಟಕದ 20 ರೈಲ್ವೆ ಮಾರ್ಗ ಪೂರ್ಣಕ್ಕೆ 3817 ಕೋಟಿ ರೂ. ಮೀಸಲು, ಯಾವ್ಯಾವ ಮಾರ್ಗ ಇಲ್ಲಿದೆ ವಿವರ

ಭಾರತೀಯ ರೈಲ್ವೆಗೆ ಈ ಬಾರಿ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸಿದ್ದರೆ,ಕರ್ನಾಟಕದ ಮಾರ್ಗಗಳು, ಪ್ರಗತಿಗೂ ಹಂಚಿಕೆ ಮಾಡಲಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೂ ಹೆಚ್ಚಿನ ಅನುದಾನ ದೊರೆತಿದೆ.
ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೂ ಹೆಚ್ಚಿನ ಅನುದಾನ ದೊರೆತಿದೆ.

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲೂ ಕರ್ನಾಟಕಕ್ಕೂ ಅನುದಾನ ಒದಗಿಸಲಾಗಿದೆ. ಕರ್ನಾಟಕಕ್ಕೆ ರೈಲ್ವೆಗೆ 7524 ಕೋಟಿ ರೂ. ಹಂಚಿಕೆಯಾಗಿದೆ. ಇದರಲ್ಲಿ ಹೊಸ ಮಾರ್ಗಗಳು ಹಾಗೂ ಈಗಾಗಲೇ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳಿಗೆ 3817 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಕರ್ನಾಟಕದಲ್ಲಿ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಲು 987 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.

ದೆಹಲಿಯಲ್ಲಿ ಬಜೆಟ್‌ ಮಂಡನೆ ಬಳಿಕ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಸಿಕ್ಕಿರುವ, ಅದರಲ್ಲೂ ಕರ್ನಾಟಕಕ್ಕೆ ದೊರೆತ ವಿವರಗಳನ್ನು ಒದಗಿಸಿದರು.

ಕೇಂದ್ರ ಬಜೆಟ್‌2024ರಲ್ಲಿ ರೈಲ್ವೆ ವಲಯಕ್ಕೆ ಈವರೆಗಿನ ಅತ್ಯಧಿಕ 2.52 ಲಕ್ಷ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅದರಲ್ಲೂ ರೈಲ್ವೆ ಅಭಿವೃದ್ದಿ, ಮೂಲಸೌಕರ್ಯವೃದ್ದಿ, ಆಧುನೀಕರಣ, ರೈಲ್ವೆ ನಿಲ್ದಾಣಗಳ ಪ್ರಗತಿ, ಸಂಪರ್ಕ ಜಾಲ ಬಲಪಡಿಸುವುದು, ಪ್ರಯಾಣಿಕರ ಸುರಕ್ಷತೆ ಹಾಗೂ ಅರಾಮದಾಯಕ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಗುಣಮಟ್ಟದ ಸೇವೆ ನೀಡಲು ಸಹಕಾರಿಯಾಗಲಿದೆ ಎನ್ನುವುದು ಅವರ ವಿವರಣೆ.

ವಾರ್ಷಿಕ ಆಯವ್ಯಯದಲ್ಲಿ ಕರ್ನಾಟಕದ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಕರ್ನಾಟಕದ ನೈರುತ್ಯ ರೈಲ್ವೆಗೆ 7239 ಕೋಟಿ ರೂ. ಹಾಗೂ ಕರ್ನಾಟಕಕ್ಕೆ 7524 ಕೋಟಿ ರೂ. ಒದಗಿಸಲಾಗಿದೆ. ಕರ್ನಾಟಕದಲ್ಲಿಯೇ ಹೊಸ ರೈಲು ಮಾರ್ಗಗಳಿಗೆ 2286 ಕೋಟಿ ರೂ. ನೀಡಿದ್ದರೆ, ಪ್ರಗತಿಯಲ್ಲಿರುವ ಜೋಡಿ ಮಾರ್ಗಗಳಿಗೆ 1531 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಬರೀ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವುದಕ್ಕಾಗಿಯೇ 987 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ರೈಲ್ವೆ ಕೆಳ ಹಾಗೂ ಮೇಲ್ಸುತುವೆ ಕಾಮಗಾರಿಗಳಿಗಾಗಿ 341 ಕೋಟಿ ರೂ. ಒದಗಿಸಲಾಗಿದೆ. ರೈಲ್ವೆ ಸಂಚಾರ ವ್ಯವಸ್ಥೆ ಸುಧಾರಣೆಗೆಂದೇ 126.11 ಕೋಟಿ ರೂ. ನೀಡಲಾಗಿದೆ ಎಂದರು.

ರೈಲ್ವೆ ಇಲಾಖೆಯಡಿ ಮೂರು ಪ್ರಮುಖ ಆರ್ಥಿಕ ಕಾರಿಡಾರ್‌ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ. ಖನಿಜ ಶಕ್ತಿ ಮತ್ತು ಸಿಮೆಂಟ್‌ ಕಾರಿಡಾರ್ ಅಧಿಕ ಸಂಚಾರ ಸಾಂದ್ರತೆಯ ಕಾರಿಡಾರ್ ಬಹು ಮಾದರಿ ಸಂಪರ್ಕ ಸಾಧ್ಯವಾಗಿಸುವ ಪಿಎಂ ಗತಿ ಶಕ್ತಿ ಕಾರಿಡಾರ್ ಇದರಲ್ಲಿ ಸೇರಿವೆ ಎಂದು ಅಶ್ವಿನಿ ವೈಷ್ಣವ್‌ ಹೇಳಿದರು.

ಹೊಸ ಮಾರ್ಗಗಳಿಗೆ ಅನುದಾನ

  • ಗದಗ- ವಾಡಿ 380 ಕೋಟಿ ರೂ.
  • ಗಿಣಿಗೇರ - ರಾಯಚೂರು 300 ಕೋಟಿ ರೂ.
  • ತುಮಕೂರು -ದಾವಣಗೆರೆ( ಚಿತ್ರದುರ್ಗ ಮಾರ್ಗ) 300 ಕೋಟಿ ರೂ.
  • ತುಮಕೂರು- ರಾಯದುರ್ಗ( ಕಲ್ಯಾಣ ದುರ್ಗ ಮಾರ್ಗ) 350 ಕೋಟಿ ರೂ.
  • ಬಾಗಲಕೋಟೆ- ಕುಡುಚಿ 410 ಕೋಟಿ ರೂ.
  • ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು 200 ಕೋಟಿ ರೂ.
  • ಬೆಳಗಾವಿ- ಧಾರವಾಡ( ಕಿತ್ತೂರು ಮಾರ್ಗ) 50 ಕೋಟಿ ರೂ.
  • ಮಾರಿಕುಪ್ಪಂ- ಕುಪ್ಪಂ 170 ಕೋಟಿ ರೂ.
  • ಕಡೂರು- ಚಿಕ್ಕಮಗಳೂರು ಹಾಸನ 160 ಕೋಟಿ ರೂ.
  • ಮಲಗೂರು- ಪಾಲಸಮುದ್ರಂ 20 ಕೋಟಿ ರೂ.
  • ಹಾಸನ- ಬೇಲೂರು 05 ಕೋಟಿ ರೂ.

ಇದನ್ನೂ ಓದಿರಿ: ಈ ದಿನಾಂಕದಲ್ಲಿ ಜನಿಸಿದ ವ್ಯಕ್ತಿಗಳಿಗೆ ಫೆಬ್ರವರಿ ತಂದ ಶುಭ ಫಲ; ಸಂಖ್ಯಾಶಾಸ್ತ್ರದಲ್ಲೂ ಭವಿಷ್ಯ ತಿಳಿಯಿರಿ

ಜೋಡಿ ಮಾರ್ಗಗಳಿಗೆ ಅನುದಾನ

  • ಗದಗ- ಹೋಟ್ಗಿ 197 ಕೋಟಿ ರೂ.
  • ಪೆನುಕೊಂಡ- ಧರ್ಮಾವರಂ 180.4 ಕೋಟಿ ರೂ.
  • ಬೈಯ್ಯಪ್ಪನಹಳ್ಳಿ- ಹೊಸೂರು 150 ಕೋಟಿ ರೂ.
  • ಯಶವಂತಪುರ -ಚನ್ನಸಂದ್ರ 150 ಕೋಟಿ ರೂ.
  • ಲೋಂಡಾ- ಮೀರಜ್‌ 200 ಕೋಟಿ ರೂ.
  • ಹುಬ್ಬಳ್ಳಿ- ಚಿಕ್ಕಜಾಜೂರು 94 ಕೋಟಿ ರೂ.
  • ಬೆಂಗಳೂರು-ಕಟ್ಮೋನೆಂಟ್‌ ವೈಟ್‌ಫೀಲ್ಡ್‌ 260 ಕೋಟಿ ರೂ.
  • ಹೊಸಪೇಟೆ- ತಿನಾಯೈಘಾಟ್‌ ವಾಸ್ಕೋ 400 ಕೋಟಿ ರೂ.
  • ಹೊಸೂರು- ಒಮಲೂರು 100.1 ಕೋಟಿ ರೂ.

Whats_app_banner