ASTraM App: ಬೆಂಗಳೂರು ಜನತೆಗೆ ಗುಡ್​ನ್ಯೂಸ್​​​​​; ವಾಹನ ದಟ್ಟಣೆ ನಿವಾರಣೆಗೆ 'ಅಸ್ತ್ರಂ' ಪ್ರಯೋಗ
ಕನ್ನಡ ಸುದ್ದಿ  /  ಕರ್ನಾಟಕ  /  Astram App: ಬೆಂಗಳೂರು ಜನತೆಗೆ ಗುಡ್​ನ್ಯೂಸ್​​​​​; ವಾಹನ ದಟ್ಟಣೆ ನಿವಾರಣೆಗೆ 'ಅಸ್ತ್ರಂ' ಪ್ರಯೋಗ

ASTraM App: ಬೆಂಗಳೂರು ಜನತೆಗೆ ಗುಡ್​ನ್ಯೂಸ್​​​​​; ವಾಹನ ದಟ್ಟಣೆ ನಿವಾರಣೆಗೆ 'ಅಸ್ತ್ರಂ' ಪ್ರಯೋಗ

Bengaluru traffic police launch ASTraM : ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿವಾರಣೆಗೆ ಹೊಸ ಅಸ್ತ್ರ 'ಅಸ್ತ್ರಂ' ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ ನಗರದ ಟ್ರಾಫಿಕ್ ಜಾಮ್ ಹೇಗೆ ನಿಯಂತ್ರಿಸಲಿದೆ? ಹೇಗೆಲ್ಲಾ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಮುಂದೆ ತಿಳಿಯೋಣ. (ವರದಿ: ಎಚ್​ ಮಾರುತಿ)

ಬೆಂಗಳೂರು ವಾಹನ ದಟ್ಟಣೆ ನಿವಾರಣೆಗೆ ಅಸ್ತ್ರಂ ಪ್ರಯೋಗ.
ಬೆಂಗಳೂರು ವಾಹನ ದಟ್ಟಣೆ ನಿವಾರಣೆಗೆ ಅಸ್ತ್ರಂ ಪ್ರಯೋಗ.

ಬೆಂಗಳೂರು: ನಗರದಲ್ಲಿ ಯಾವ ಸಮಸ್ಯೆಗೆ ಬೇಕಾದರೂ ಪರಿಹಾರ ಸಿಗಬಹುದು. ಆದರೆ, ವಾಹನ ದಟ್ಟಣೆ ಸಮಸ್ಯೆಗೆ (Traffic jam in Bengaluru) ಮಾತ್ರ ಪರಿಹಾರ ಕಂಡುಕೊಳ್ಳುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಮೇಲ್ಸೇತುವೆ, ರಿಂಗ್​ ರೋಡ್, ಅಂಡರ್​ಪಾಸ್, ಸಿಗ್ನಲ್ ಎಲ್ಲವೂ ಪರಿಹಾರವಾಗಲೂ ಸೋತು ಹೋಗಿವೆ.

ಈಗ ವಾಹನ ದಟ್ಟಣೆ ನಿವಾರಣೆ ಹಾಗೂ ಭವಿಷ್ಯದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಲು ನಗರ ಸಂಚಾರ ಪೊಲೀಸರು, ಅಸ್ತ್ರಂ (ಆಕ್ಷನ್ ಇಂಟೆಲಿಜೆನ್ಸ್ ಫಾರ್ ಸಸ್ಟೈನಬಲ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್) ಎಂಬ ವಿನೂತನ ಯೋಜನೆಯೊಂದನ್ನು (Bengaluru traffic police launch ASTraM) ರೂಪಿಸಿದ್ದಾರೆ. ಇದು ಸ್ಮಾರ್ಟ್ ಎಂಜಿನ್ ವ್ಯವಸ್ಥೆ ಎಂದು ಹೇಳಲಾಗುತ್ತಿದೆ.

15 ನಿಮಿಷಕ್ಕೊಮ್ಮೆ ಸಂದೇಶ

ಕೃತಕ ಬುದ್ಧಿಮತ್ತೆ ಅಡಿಯಲ್ಲಿ ನಗರದ ಯಾವ ಭಾಗದಲ್ಲಿ ವಾಹನ ದಟ್ಟಣೆ ಇದೆ ಎನ್ನುವುದನ್ನು ಗುರುತಿಸಿ, ಡೇಟಾ ಆಧರಿಸಿ ಸ್ಮಾರ್ಟ್ ಎಂಜಿನ್ ಆಪ್ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ರವಾನಿಸಲಿದೆ. ಇದನ್ನು ಆಧರಿಸಿ ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಯಾವ ಯಾವ ಸಮಯದಲ್ಲಿ ವಾಹನ ದಟ್ಟಣೆ ಇರುತ್ತದೆ ಎಂಬುದನ್ನು ಸಂಚಾರ ಠಾಣೆಯ ಸಿಬ್ಬಂದಿಗೆ 15 ನಿಮಿಷಕ್ಕೊಮ್ಮೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಈ ಮಾಹಿತಿ ಟ್ರಾಫಿಕ್ ದಟ್ಟಣೆ ಇರುವ ಸಂಚಾರ ಪೊಲೀಸರಿಗೆ ಲಭ್ಯವಾಗಲಿದೆ. ಇದನ್ನು ಆಧರಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಾಗಲಿದೆ ಎಂದು ಸಂಚಾರಿ ಪೊಲೀಸರು ಹೇಳುತ್ತಾರೆ.

ಪ್ರಮುಖ ಜಂಕ್ಷನ್‌ಗಳಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳ ಮಾಹಿತಿ, ವಾಹನಗಳ ಸಂಖ್ಯೆ, ವಾಹನಗಳ ಮಾದರಿ, ಭವಿಷ್ಯದಲ್ಲಿ ಉಂಟಾಗಬಹುದಾದ ದಟ್ಟಣೆ ಮಾಹಿತಿಯೂ ಲಭ್ಯವಾಗಲಿದೆ. ರಸ್ತೆಗಳಲ್ಲಿ ನಡೆಯುವ ಅಪಘಾತಗಳ ಬಗ್ಗೆಯೂ ವಾಹನ ಸವಾರರಿಗೆ ಬಿಒಟಿ ಮೂಲಕ ಸಂದೇಶ ತಲುಪಲಿದೆ ಎಂದು ತಿಳಿಸುತ್ತಾರೆ.

ಪ್ರಮುಖ ಕಾರ್ಯಕ್ರಮಗಳ ಮಾಹಿತಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರ್ಷವಿಡೀ ಬೃಹತ್ ಕಾರ್ಯಕ್ರಮಗಳು, ಪ್ರತಿಭಟನೆ, ಸಮಾವೇಶಗಳು ನಡೆಯುತ್ತಲೇ ಇರುತ್ತವೆ. ಇದರಿಂದಲೂ ವಾಹನ ದಟ್ಟಣೆ ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ವಾಹನ ದಟ್ಟಣೆ ಪರಿಸ್ಥಿತಿಯನ್ನು ಅವಲೋಕಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಹಾಯವಾಗುತ್ತದೆ. ಇಂತಹ ವೇಳೆ ಕೇಂದ್ರ ಕಚೇರಿಯಿಂದ ವಾಹನ ಸಂಚಾರ ನಿರ್ವಹಿಸಲು ಸಂದೇಶ ರವಾನೆಯಾಗುತ್ತದೆ.

ಆಂಬುಲೆನ್ಸ್ ಸಂಚಾರಕ್ಕೆ ವ್ಯವಸ್ಥೆ

ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನೋಂದಣಿಯಾದ ಅಂಬುಲೆನ್ಸ್​​ಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ಅಸ್ತ್ರಂ ಯೋಜನೆಯ ಮತ್ತೊಂದು ಉದ್ದೇಶ. ಆಂಬುಲೆನ್ಸ್ ಪ್ರಯಾಣ ಆರಂಭ, ತಲುಪಬೇಕಾದ ಸ್ಥಳದ ವಿವರವನ್ನು ಮುಂಚಿತವಾಗಿ ತಿಳಿಸಿದರೆ ಆಂಬುಲೆನ್ಸ್​ನ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಒಂದು ವೇಳೆ ಆಂಬುಲೆನ್ಸ್ 120 ಸೆಕೆಂಡ್‌ಗಳಿಗೆ ಮೀರಿ ಆಂಬುಲೆನ್ಸ್ ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರೆ ಆಗ ಎಸ್‌ಒಎಸ್ ಬಟನ್ ಸಕ್ರಿಯವಾಗಿ ಸಂಚಾರ ದಟ್ಟಣೆ ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ಕಳುಹಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರೋಣ್ ಕ್ಯಾಮೆರಾ ಬಳಕೆ

ನಗರದ ಸಂಚಾರ ಪೊಲೀಸರು ಈಗಾಗಲೇ 10 ಕಡೆ ಡ್ರೋಣ್ ಕ್ಯಾಮೆರಾ ಬಳಸುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆಯ ದಟ್ಟಣೆ ಅವಧಿಯಲ್ಲಿ ಸಂಚಾರ ನಿರ್ವಹಣೆ ಮಾಡಲಾಗುತ್ತಿದೆ. ಡ್ರೋಣ್ ಸೆರೆಹಿಡಿಯುವ ದೃಶ್ಯಗಳು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನೇರ ಪ್ರಸಾರವಾಗುತ್ತಿವೆ. ರಸ್ತೆಗಳಲ್ಲಿ ಅಪಘಾತ ಅಥವಾ ಇತರೆ ಘಟನೆಗಳು ಸಂಭವಿಸಿದರೆ ಘಟನಾ ಸ್ಥಳಕ್ಕೆ ತಕ್ಷಣ ಹೋಗಲು ಇದರಿಂದ ನೆರವಾಗುತ್ತಿದೆ ಎಂದು ಪೊಲೀಸರು ಅಭಿಪ್ರಾಯಪಡುತ್ತಾರೆ.

Whats_app_banner