ಧನುರ್ಮಾಸದಲ್ಲಿ ಹುಗ್ಗಿ ವಿಶೇಷ; ಇಲ್ಲಿದೆ ಸಿಹಿ ಹುಗ್ಗಿ ಮಾಡುವ ವಿಧಾನ, ನೀವೂ ಮನೆಯಲ್ಲಿ ಮಾಡಿ ತಿನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  ಧನುರ್ಮಾಸದಲ್ಲಿ ಹುಗ್ಗಿ ವಿಶೇಷ; ಇಲ್ಲಿದೆ ಸಿಹಿ ಹುಗ್ಗಿ ಮಾಡುವ ವಿಧಾನ, ನೀವೂ ಮನೆಯಲ್ಲಿ ಮಾಡಿ ತಿನ್ನಿ

ಧನುರ್ಮಾಸದಲ್ಲಿ ಹುಗ್ಗಿ ವಿಶೇಷ; ಇಲ್ಲಿದೆ ಸಿಹಿ ಹುಗ್ಗಿ ಮಾಡುವ ವಿಧಾನ, ನೀವೂ ಮನೆಯಲ್ಲಿ ಮಾಡಿ ತಿನ್ನಿ

ಧನುರ್ಮಾಸವನ್ನು ಶೂನ್ಯ ಮಾಸ ಎಂದು ಕೂಡ ಕರೆಯಲಾಗುತ್ತದೆ. ಈ ಮಾಸದಲ್ಲಿ ವಿಷ್ಣುವಿನ ಪೂಜೆ ವಿಶೇಷ. ಧನುರ್ಮಾಸದಲ್ಲಿ ವಿಷ್ಣುಪೂಜೆಗೆ ಹುಗ್ಗಿ ಅಥವಾ ಪೊಂಗಲ್ ಮಾಡಿ ನೈವೇದ್ಯ ಮಾಡಲಾಗುತ್ತದೆ. ಇದೀಗ ಧನುರ್ಮಾಸ ಆರಂಭವಾಗಿದ್ದು, ನೀವು ಮನೆಯಲ್ಲಿ ಸಿಹಿ ಹುಗ್ಗಿ ಮಾಡಿ ಸವಿಯಿರಿ. ಇಲ್ಲಿದೆ ಸಿಹಿ ಪೊಂಗಲ್ ಅಥವಾ ಹುಗ್ಗಿ ರೆಸಿಪಿ.

ಸಿಹಿ ಹುಗ್ಗಿ
ಸಿಹಿ ಹುಗ್ಗಿ

ಧನುರ್ಮಾಸ ಆರಂಭವಾಗಿದೆ. ಡಿಸೆಂಬರ್ 16 ರಿಂದ 2025ರ ಜನವರಿ 14ರವರೆಗೆ ಧನುರ್ಮಾಸವಿರುತ್ತದೆ. ಚಳಿಗಾಲದಲ್ಲಿ ಬರುವ ಧನುರ್ಮಾಸದಲ್ಲಿ ಹುಗ್ಗಿ ಮಾಡುವುದು ವಿಶೇಷ. ಈ ಸಮಯದಲ್ಲಿ ಸಿಹಿ ಹುಗ್ಗಿ, ಖಾರದ ಹುಗ್ಗಿಯನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಇದು ಆರೋಗ್ಯ ಹಾಗೂ ಆಧ್ಯಾತ್ಮ ದೃಷ್ಟಿಯಿಂದ ಬಹಳ ಮಹತ್ವವನ್ನು ಪಡೆದಿದೆ. 

ಧನುರ್ಮಾಸವು ವಿಷ್ಣುವಿನ ಪೂಜೆಗೆ ವಿಶೇಷ. ಈ ತಿಂಗಳಲ್ಲಿ ವಿಷ್ಣುವಿನ ಪೂಜೆಗೆ ಹುಗ್ಗಿಯ ನೈವೇದ್ಯ ಮಾಡಲಾಗುತ್ತದೆ. ಈ ಸಮಯದಲ್ಲಿ ಸಾಕಷ್ಟು ಚಳಿ ಇರುವುದು ಕೂಡ ಹುಗ್ಗಿ ಅಥವಾ ಪೊಂಗಲ್ ಮಾಡಲು ಇನ್ನೊಂದು ಕಾರಣವಿರಬಹುದು. ಬೇಳೆ, ಕಾಳುಮೆಣಸು, ಬೆಲ್ಲ ಮುಂತಾದ ಪದಾರ್ಥಗಳಿಂದ ತಯಾರಿಸುವ ಹುಗ್ಗಿ ಆರೋಗ್ಯಕ್ಕೂ ಉತ್ತಮ.

ಚಳಿಗಾಲದಲ್ಲಿ ದೇಹ ಬೆಚ್ಚಗಿರುವ ಆಹಾರ ಸೇವಿಸಬೇಕು ಎನ್ನುವ ಕಾರಣಕ್ಕೆ ಅಕ್ಕಿ, ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಚಿನ್ನಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನೂ ಸೇರಿಸಿ ಮಾಡಿ ಪೊಂಗಲ್ ತಿನ್ನಲಾಗುತ್ತದೆ. ಸಿಹಿ ಪೊಂಗಲ್‌ ಹಾಗೂ ಖಾರದ ಪೊಂಗಲ್ ಎರಡಕ್ಕೂ ಬೇಕಾಗುವ ಸಾಮಗ್ರಿಗಳು ಮಾಡುವ ವಿಧಾನ ಬೇರೆ ಬೇರೆ ರೀತಿ ಇದೆ. ಇಂದಿನ ಲೇಖನದಲ್ಲಿ ಸಿಹಿ ಪೊಂಗಲ್ ಮಾಡುವುದು ಹೇಗೆ, ಅದನ್ನು ತಯಾರಿಸಲು ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ.

ಸಿಹಿ ಪೊಂಗಲ್ ರೆಸಿಪಿ

ಬೇಕಾಗುವ ಸಾಮಗ್ರಿಗಳು

ಅಕ್ಕಿ – 1‌/2 ಕಪ್‌, ಹೆಸರುಬೇಳೆ – 2 ಚಮಚ, ಬೆಲ್ಲ – ಅರ್ಧ ಕಪ್‌, ನೀರು – ಅಗತ್ಯಕ್ಕೆ ತಕ್ಕಷ್ಟು, ತುಪ್ಪ – 3 ಟೇಬಲ್ ಚಮಚ, ಉಪ್ಪು – ಚಿಟಿಕೆ, ಗೊಡಂಬಿ – 6, ದ್ರಾಕ್ಷಿ – 2 ಚಮಚ, ಏಲಕ್ಕಿ – 4, ಲವಂಗ – 1, ಜಾಯಿಕಾಯಿ ಪುಡಿ – ಚಿಟಿಕೆ, 

ಸಿಹಿ ಪೊಂಗಲ್ ತಯಾರಿಸುವ ವಿಧಾನ

ಕುಕ್ಕರ್‌ ಅಥವಾ ಪ್ಯಾನ್‌ಗೆ ಕಾಲು ಚಮಚ ತುಪ್ಪ ಹಾಕಿ ಹೆಸರುಬೇಳೆ ಸೇರಿಸಿ ಹುರಿದುಕೊಳ್ಳಿ. ನಂತರ ಅದಕ್ಕೆ ನೀರು, ತೊಳೆದಿಟ್ಟುಕೊಂಡ ಅಕ್ಕಿ ಹಾಗೂ ಉಪ್ಪು ಸೇರಿಸಿ. ಇದನ್ನು 4 ವಿಶಲ್ ಕೂಗಿಸಿಕೊಳ್ಳಿ. ಅದನ್ನು ಸ್ವಲ್ಪ ಸ್ಮ್ಯಾಶ್ ಮಾಡಿಕೊಳ್ಳಿ. ನಂತರ ಬೆಲ್ಲ ಪುಡಿಕೊಂಡು, ಅದನ್ನು ಅರ್ಧ ಕಪ್ ನೀರಿಗೆ ಸೇರಿಸಿ, ಕರಗಲು ಬಿಡಿ. ಬೆಲ್ಲ ಚೆನ್ನಾಗಿ ಕರಗಿದ ಮೇಲೆ ಆ ನೀರನ್ನು ಸೋಸಿ ಸ್ಮ್ಯಾಶ್ ಮಾಡಿಟ್ಟುಕೊಂಡ ಅನ್ನ ಹಾಗೂ ಬೇಳೆ ಇರುವ ಪಾತ್ರೆಗೆ ಸೇರಿಸಿ.

ಇನ್ನೊಂದು ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ಗೋಡಂಬಿ ಹಾಗೂ ದ್ರಾಕ್ಷಿ ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಏಲಕ್ಕಿ, ಲವಂಗ ಸೇರಿಸಿ ಸ್ಟೌ ಆಫ್ ಮಾಡಿ. ಅದಕ್ಕೆ ಜಾಕಾಯಿ ಪುಡಿ ಸೇರಿಸಿ ತಿರುಗಿಸಿ. ಏಲಕ್ಕಿಯನ್ನು ತುಪ್ಪದಿಂದ ಹೊರ ತೆಗೆದು ಪುಡಿ ಮಾಡಿಕೊಳ್ಳಿ. ನಂತರ ಈ ಎಲ್ಲವನ್ನೂ ಪೊಂಗಲ್‌ಗೆ ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ, ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಸಿಕೊಳ್ಳಿ. ಅದಕ್ಕೆ ಅರ್ಧ ಲೋಟ ನೀರು ಅಥವಾ ಹಾಲು ಸೇರಿಸಿ ಮತ್ತೆ ಕುದಿಸಿ. ಕುದಿಯುವಾಗ ಮಧ್ಯೆ ಮಧ್ಯೆ ಚೂರು ಚೂರು ತುಪ್ಪ ಹಾಕಿ. ಕೊನೆಯಲ್ಲಿ ಹುರಿದಿಟ್ಟುಕೊಂಡ ಗೋಡಂಬಿ ಹಾಗೂ ದ್ರಾಕ್ಷಿ ಸೇರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ ತಿನ್ನಲು ಸಿದ್ಧ.

Whats_app_banner