Age after 50 and lifestyle: ವಯಸ್ಸು 50 ಆಯ್ತೆ? ಜೀವನಶೈಲಿಯ ಸುಧಾರಣೆ ಬಹಳ ಮುಖ್ಯ
Age after 50 and lifestyle: 50 ವರ್ಷ ದಾಟಿದವರನ್ನು ಬೇಡವೆಂದರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡುತ್ತದೆ. ಆ ಕಾರಣಕ್ಕೆ ಸಮರ್ಪಕ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ.
ವಯಸ್ಸಾಗುತ್ತಿದ್ದಂತೆ ಬೇಡವೆಂದರೂ ಇರುವೆಗಳು ಸಕ್ಕರೆಯನ್ನು ಮುತ್ತಿಕೊಂಡಂತೆ ಕಾಯಿಲೆಗಳು ದೇಹವನ್ನು ಮುತ್ತಿಕೊಳ್ಳುತ್ತವೆ. ದೈಹಿಕ ಸಮಸ್ಯೆಗಳ ಜೊತೆ ಮಾನಸಿಕ ಸಮಸ್ಯೆಗಳೂ ಆರಂಭವಾಗಬಹುದು. ಅಲ್ಲದೆ ನಿಶಕ್ತಿ, ಸುಸ್ತು, ನಿತ್ರಾಣದಂತಹ ಸಮಸ್ಯೆಯೂ ದೇಹವನ್ನು ಬಾಧಿಸಬಹುದು, ಹಾಗಂತ ವಯಸ್ಸಾಗದಂತೆ ತಡೆಯುವುದೂ ಸಾಧ್ಯವಿಲ್ಲ. ಆ ಕಾರಣಕ್ಕೆ 50 ವರ್ಷಗಳಾಗುತ್ತಿದ್ದಂತೆ ಜೀವನಶೈಲಿಯಲ್ಲಿ ಈ ಕೆಲವು ಅಂಶಗಳನ್ನು ರೂಢಿಸಿಕೊಳ್ಳುವುದು ಅಗತ್ಯ.
ಗುಣಮಟ್ಟದ ನಿದ್ದೆ
ನಿದ್ದೆ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯ. 50 ವರ್ಷ ದಾಟಿದವರು ಗುಣಮಟ್ಟದ ನಿದ್ದೆಯ ಕ್ರಮವನ್ನು ಅನುಸರಿಸಬೇಕು. ಅಧ್ಯಯನವೊಂದರ ಪ್ರಕಾರ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅಸರ್ಮಪಕ ನಿದ್ದೆಯ ಕಾರಣದಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಈ ವಯಸ್ಸಿನವರು ಕನಿಷ್ಠ 7 ಗಂಟೆ ಹಾಗೂ ಗರಿಷ್ಠ 9 ಗಂಟೆಗಳ ಹೊತ್ತು ನಿದ್ದೆ ಮಾಡುವುದು ಅವಶ್ಯ. ಅಲ್ಲದೆ ಗುಣಮಟ್ಟದ ನಿದ್ದೆಗೆ ಪ್ರಾಮುಖ್ಯ ನೀಡುವುದು ಅವಶ್ಯ.
ಸಸ್ಯಜನ್ಯ ಆಹಾರಕ್ಕೆ ಒತ್ತು ನೀಡಿ
50 ವರ್ಷ ದಾಟಿದವರು ಮಾಂಸಾಹಾರವನ್ನು ಕಡಿಮೆ ಮಾಡಿ ಸಸ್ಯಜನ್ಯ ಆಹಾರಗಳ ಸೇವನೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು ಉತ್ತಮ. ಸಂಪೂರ್ಣ ಮಾಂಸಾಹಾರವನ್ನು ತ್ಯಜಿಸಬೇಕು ಅಂತಿಲ್ಲ. ಅದರ ಬದಲು ತರಕಾರಿ, ಹಣ್ಣು, ಧಾನ್ಯಗಳ ಸೇವನೆಯನ್ನು ಹೆಚ್ಚು ಮಾಡಬೇಕು. ಇದು ದೀರ್ಘಕಾಲದ ಕಾಯಿಲೆಗಳನ್ನು ತಡೆಹಿಡಿಯುವ ಜೊತೆಗೆ ವಯಸ್ಸಿನ ಲಕ್ಷಣಗಳನ್ನು ಬಾಧಿಸದಂತೆ ನಿಯಂತ್ರಿಸುತ್ತದೆ. ನೆನಪಿನ ಶಕ್ತಿ ಹೆಚ್ಚಳ, ಚರ್ಮದ ಆರೋಗ್ಯ ಹಾಗೂ ಕೆಲವೊಂದು ಕ್ಯಾನ್ಸರ್‌ನ ಲಕ್ಷಣಗಳಿಂದ ದೂರವಿರಲು ಇವು ಸಹಾಯ ಮಾಡುತ್ತವೆ.
ದೈಹಿಕ ಚಟುವಟಿಕೆ
ವಯಸ್ಸಾದ ಮೇಲೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳೂ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ 50 ವರ್ಷ ದಾಟಿದ ಮೇಲೆ ಒಂದಿಷ್ಟು ದೈಹಿಕ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕು. ವಾಕಿಂಗ್ ಮಾಡುವುದು, ಜಾಗಿಂಗ್ ಮಾಡುವುದು, ನೃತ್ಯ ಮಾಡುವುದು ಇದನ್ನು ಆರಂಭಿಸಬಹುದು. ದೈಹಿಕ ಚಟುವಟಿಕೆಗಳು ಮೂಳೆಯ ಸಾಂಧ್ರತೆಯನ್ನು ಹೆಚ್ಚಿಸುತ್ತವೆ. ಸ್ನಾಯುವಿನ ದ್ರವ್ಯರಾಶಿಯನ್ನು ಗಟ್ಟಿಗೊಳಿಸುತ್ತವೆ. ಸಮತೋಲಿತ ಹಾಗೂ ಸ್ಥಿರ ದೇಹಸ್ಥಿತಿಗೆ ಇದು ಸಹಾಯ ಮಾಡುತ್ತದೆ. ಇದರಿಂದ ಬೀಳುವುದು, ಗಾಯಗಳಾಗುವುದು, ಮೂಳೆ ನೋವು ಇಂತಹ ಸಮಸ್ಯೆಗಳಿಂದ ದೂರವಿರಬಹುದು.
ಮನಸ್ಸಿಗೆ ಉಲ್ಲಾಸ ನೀಡಿ
ದೈಹಿಕ ಆರೋಗ್ಯ ಸುಧಾರಣೆಗೆ ಮಾನಸಿಕ ಆರೋಗ್ಯದ ಕೊಡುಗೆಯೂ ಬಹಳಷ್ಟಿದೆ. ಆ ಕಾರಣಕ್ಕೆ ಮನಸ್ಸನ್ನು ಸದಾ ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳಬೇಕು. ದೈನಂದಿನ ಚಟುವಟಿಕೆಯ ಜೊತೆ ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಈ ಅಭ್ಯಾಸಗಳಿಂದ ಒತ್ತಡ ನಿರ್ವಹಣೆ ಸಾಧ್ಯ. ಇದು ದೀರ್ಘಕಾಲದ ಅಪಾಯವನ್ನು ಕಡಿಮೆ ಮಾಡುವ ಜೊತೆಗೆ ಸಂಪೂರ್ಣ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.
ಧೂಮಪಾನ, ಮಧ್ಯಪಾನ ತ್ಯಜಿಸಿ
ಧೂಮಪಾನ ಹಾಗೂ ಮಧ್ಯಪಾನದ ಚಟ ಇರುವವರಿಗೆ ವಯಸ್ಸಾದ ನಂತರ ಅದನ್ನು ತ್ಯಜಿಸುವುದು ಕಷ್ಟ ಆಗಬಹುದು. ಆ ಕಾರಣಕ್ಕೆ ಸಂಪೂರ್ಣ ತ್ಯಜಿಸುವ ಬದಲು ಪ್ರಮಾಣವನ್ನು ಕಡಿಮೆ ಮಾಡಿ. ಇದರಿಂದ ರಕ್ತದೊತ್ತಡ ನಿಯಂತ್ರಣ ಹಾಗೂ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಕೆಲವೊಂದು ಕ್ಯಾನ್ಸರ್ ಅಪಾಯಗಳಿಂದಲೂ ದೂರವಿರಲು ಸಾಧ್ಯವಾಗುತ್ತದೆ. ತೂಕ ನಿಯಂತ್ರಣಕ್ಕೂ ಇದು ಸಹಕಾರಿ.
ಊಟದಲ್ಲಿ ರಾಜಿ ಬೇಡ
ವಯಸ್ಸಾದ ಮೇಲೆ ಬಾಯಿ ರುಚಿಸುವುದಿಲ್ಲ ಎಂಬ ಕಾರಣಕ್ಕೆ ಹಲವರು ಊಟ ತ್ಯಜಿಸುತ್ತಾರೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟ ಮಾಡದೇ ಆರೋಗ್ಯ ಕೆಡಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚು. 50 ವರ್ಷ ದಾಟಿದ ಮೇಲೆ ದೇಹದಲ್ಲಿ ಶಕ್ತಿಯ ಕೊರತೆ ಕಾಣಿಸಿಕೊಳ್ಳುತ್ತದೆ. ದೇಹಕ್ಕೆ ಬೇಗ ನಿತ್ರಾಣವಾಗುತ್ತದೆ, ಆ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಬಹಳ ಅವಶ್ಯ.
ವಿಭಾಗ