ಫ್ಲಾಪ್ ಆಗಿದ್ದ ಕಾರಿಗೆ ಮರುಜೀವ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ ಮಾರುತಿಯ ಹೊಸ ಇಗ್ನಿಸ್ ಕಾರು
Maruti Ignis Radiance Edition: ಭಾರತದಲ್ಲಿ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಸಾಧಿಸದ ಮಾರುತಿ ಸುಜುಕಿ ಕಂಪನಿಯ ಇಗ್ನಿಸ್ ಕಾರು ಇದೀಗ ಹೊಸ ಅವಾತರದಲ್ಲಿ ಬಂದಿದೆ. ಇದೀಗ ಕಂಪನಿ ಮಾರಾಟವನ್ನು ಸುಧಾರಿಸಲು, ಮಾರುತಿ ಇಗ್ನಿಸ್‌ನ ರೇಡಿಯನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಎಷ್ಟು, ಫೀಚರ್ಸ್ ಏನಿದೆ? ಎಂಬ ಕುರಿತ ಮಾಹಿತಿ ಇಲ್ಲಿದೆ. (ಬರಹ: ವಿನಯ್ ಭಟ್)
ಭಾರತದಲ್ಲಿ ಮಾರುತಿ ಸುಜುಕಿ (Maruti Suzuki) ಕಂಪನಿಯ ಕಾರುಗಳಿಗೆ ಭರ್ಜರಿ ಬೇಡಿಕೆ ಇದೆ. ಬಜೆಟ್ ಫ್ರೆಂಡ್ಲಿ ಕಾರುಗಳನ್ನು ಉತ್ತಮ ಮೈಲೇಜ್ನೊಂದಿಗೆ ನೀಡುವ ಈ ಕಂಪನಿ 2017 ರಲ್ಲಿ ಇಗ್ನಿಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ನಂತರ ಈ ಕಾರು 2020 ಮತ್ತು 2023ನೇ ವರ್ಷಗಳಲ್ಲಿ ಮಿಡ್-ಲೈಫ್ ನವೀಕರಣಗಳನ್ನು ಪಡೆದುಕೊಂಡವು. ಆದರೆ, ಕಳೆದ ಕೆಲವು ವರ್ಷಗಳಿಂದ ಇದರ ಮಾರಾಟದಲ್ಲಿ ಕುಸಿತ ಕಂಡುಬಂತು. ಅಂದುಕೊಂಡ ಮಟ್ಟಕ್ಕೆ ಈ ಕಾರು ಯಶಸ್ಸು ಸಾಧಿಸಲಿಲ್ಲ. ಇದೀಗ ಮಾರಾಟವನ್ನು ಸುಧಾರಿಸಲು, ಮಾರುತಿ ಇಗ್ನಿಸ್‌ನ ರೇಡಿಯನ್ಸ್ ಆವೃತ್ತಿಯನ್ನು (Maruti Ignis Radiance Edition) ಬಿಡುಗಡೆ ಮಾಡಿದೆ.
ಈ ಹೊಸ ಆವೃತ್ತಿಯಲ್ಲಿ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ನೋಡಲು ಹೊಸ ಲುಕ್ನಲ್ಲಿ ಸ್ಟೈಲಿಶ್ ಆಗಿ ಕಾಣುತ್ತದೆ. ಇದಲ್ಲದೆ, ಕಂಪನಿಯು ರೂ. 3,650 ಮೌಲ್ಯದ ಬಿಡಿಭಾಗಗಳನ್ನು ಸಹ ನೀಡುತ್ತಿದೆ. ಈ ಪ್ಯಾಕೇಜ್ 15-ಇಂಚಿನ ಚಕ್ರಗಳು, ಡೋರ್ ವಿಸರ್‌ಗಳು ಮತ್ತು ಕ್ರೋಮ್ ಹೆಡ್ಲೈನ್ಗಳನ್ನು ಒಳಗೊಂಡಿದೆ.
ರೇಡಿಯನ್ಸ್ ಆವೃತ್ತಿಯಲ್ಲಿ ಝೀಟಾ ಮತ್ತು ಆಲ್ಫಾ ಆಧಾರಿತ ರೂಪಾಂತರಗಳು ಸಹ ಲಭ್ಯವಿವೆ. ಇದರೊಂದಿಗೆ ರೂ. 9500 ಮೌಲ್ಯದ ಆಕ್ಸೆಸರಿ ಪ್ಯಾಕೇಜ್ ಲಭ್ಯವಿದೆ. ಇದರಲ್ಲಿ ಡೋರ್ ವೈಸರ್, ಡೋರ್ ಕ್ಲಾಡಿಂಗ್, ಹೊಸ ಸೀಟ್ ಕವರ್‌ಗಳು ಮತ್ತು ಕಪ್ಪು ಕುಶನ್‌ಗಳು ಸೇರಿವೆ.
ಮಾರುತಿ ಇಗ್ನಿಸ್ ವೈಶಿಷ್ಟ್ಯಗಳು
ಇಗ್ನಿಸ್‌ನ ನಿಯಮಿತ ಆಲ್ಫಾ ರೂಪಾಂತರದಲ್ಲಿ ಹಲವು ವಿಶೇಷ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇವುಗಳಲ್ಲಿ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಿಮೋಟ್ ಅಪ್ಲಿಕೇಶನ್, ಆಟೋ ಕ್ಲೈಮೇಟ್ ಕಂಟ್ರೋಲ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟರ್, ಪಡ್ಲ್ ಲ್ಯಾಂಪ್‌ಗಳು, ಡೇ ರನ್ನಿಂಗ್ ಲೈಟ್‌ಗಳೊಂದಿಗೆ ಎಲ್‌ಇಡಿ ಪ್ರೊಜೆಕ್ಟರ್, ರಿವರ್ಸ್ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳಿವೆ. ಝೀಟಾ ರೂಪಾಂತರವು ಹಿಂಭಾಗದ ಡಿಫಾಗರ್ ಮತ್ತು ವೈಪರ್, ಹಿಂಭಾಗದ ಪಾರ್ಕಿಂಗ್ ಸಂವೇದಕ, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕ್ ಫೋಲ್ಡಿಂಗ್ ವಿಂಗ್ ಮಿರರ್, 15-ಇಂಚಿನ ಮಿಶ್ರಲೋಹದ ಚಕ್ರಗಳು, ಫಾಗ್ ಲ್ಯಾಂಪ್‌ಗಳು, 4-ಸ್ಪೀಕರ್‌ಗಳು, ಎರಡು ಟ್ವೀಟರ್‌ಗಳು ಮತ್ತು ಸ್ಟೀರಿಂಗ್ ಮೌಂಟ್ ನಿಯಂತ್ರಣಗಳನ್ನು ಹೊಂದಿದೆ.
ಜೊತೆಗೆ 12V ಪವರ್ ಔಟ್‌ಲೆಟ್ ನೀಡಲಾಗಿದ್ದು ಏರ್ ಕಂಡಿಷನರ್- ಹೀಟರ್, ಟಿಲ್ಟ್ ಅಡ್ಜೆಸ್ಟ್ ಸ್ಟೀರಿಂಗ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ಗಳು, ಇಬಿಡಿ ಜೊತೆಗಿನ ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಐಸೊಫಿಕ್ಸ್ ಚೈಲ್ಡ್ ಸೀಟ್ ಆ್ಯಂಕರ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.
ಮಾರುತಿ ಇಗ್ನಿಸ್ ರೇಡಿಯನ್ಸ್ ಆವೃತ್ತಿಯು 1.2 ಲೀಟರ್, 4-ಸಿಲಿಂಡರ್ K12 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಸೆಟಪ್ 83bhp ಪವರ್ ಮತ್ತು 113Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಗ್ನಿಸ್ ಪ್ರತಿ ಲೀಟರ್‌ಗೆ ಸರಿಸುಮಾರು 20.89 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ಬೆಲೆ ಎಷ್ಟು?
ಮಾರುತಿ ಇಗ್ನಿಸ್ ರೇಡಿಯನ್ಸ್ ಆವೃತ್ತಿಯನ್ನು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ನೀಡಲಾಗುತ್ತದೆ. ಇದರ ರೇಡಿಯನ್ಸ್ ಆವೃತ್ತಿಯನ್ನು ಕೇವಲ 5.49 ಲಕ್ಷ ರೂಪಾಯಿಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಸಬಹುದು. ಇತರೆ ರೂಪಾಂತರದ ಎಕ್ಸ್ ಶೋ ರೂಂ ಬೆಲೆಯು ರೂ. 5.84 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ. 8.06 ಲಕ್ಷಕ್ಕೆ ನೀಡಲಾಗುತ್ತದೆ.