ಕನ್ನಡ ಸುದ್ದಿ  /  ಜೀವನಶೈಲಿ  /  ಬಿಸಿಲಿಗೆ ಮುಖದ ಕಾಂತಿ ಕಳೆಗುಂದುವ ಭಯವೇ; ಮನೆಯಲ್ಲೇ ಮಸೂರ್‌ ದಾಲ್‌ ಫೇಸ್‌ಮಾಸ್ಕ್ ತಯಾರಿಸಿ, ಅಂದ ಹೆಚ್ಚಿಸಿಕೊಳ್ಳಿ

ಬಿಸಿಲಿಗೆ ಮುಖದ ಕಾಂತಿ ಕಳೆಗುಂದುವ ಭಯವೇ; ಮನೆಯಲ್ಲೇ ಮಸೂರ್‌ ದಾಲ್‌ ಫೇಸ್‌ಮಾಸ್ಕ್ ತಯಾರಿಸಿ, ಅಂದ ಹೆಚ್ಚಿಸಿಕೊಳ್ಳಿ

ಬೇಸಿಗೆಯಲ್ಲಿ ಕಾಡುವ ಚರ್ಮದ ಸಮಸ್ಯೆಗಳಿಗೆ ಮಸೂರ್‌ ದಾಲ್‌ನಲ್ಲಿದೆ ಪರಿಹಾರ. ಅದರ ಫೇಸ್‌ಮಾಸ್ಕ್‌ನಿಂದ ತ್ವಚೆಯ ಅಂದ ಹೆಚ್ಚುವುದು ಮಾತ್ರವಲ್ಲ, ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ತಯಾರಿಸುವುದು ಹೇಗೆ, ಬಳಸುವುದು ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.

ಮಸೂರ್‌ ದಾಲ್‌ ಫೇಸ್‌ಮಾಸ್ಕ್
ಮಸೂರ್‌ ದಾಲ್‌ ಫೇಸ್‌ಮಾಸ್ಕ್

ಬೇಸಿಗೆ ಶುರುವಾಗಿದ್ದು, ಬಿಸಿಲಿನ ತಾಪ ಹೆಚ್ಚಿದೆ. ಹೆಂಗಳೆಯರು ತಾವು ಮನೆಯಿಂದ ಆಚೆ ಹೋಗುವಾಗ ಕೊಡೆ ಹಿಡಿದೇ ಹೋಗುತ್ತಾರೆ. ಮುಖ, ಕೈಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಬಹುತೇಕ ಎಲ್ಲಾ ಹೆಣ್ಣುಮಕ್ಕಳಿಗೂ ತಮ್ಮ ತ್ವಚೆಯ ಕಾಳಜಿ ಕೊಂಚ ಹೆಚ್ಚೇ ಇರುತ್ತದೆ. ಹೀಗಾಗಿ ತಮ್ಮ ಮುಖವನ್ನು ಕಾಂತಿಯುತವಾಗಿಸಲು ಕೆಲವರು ಬ್ಯೂಟಿಪಾರ್ಲರ್ ಮೊರೆ ಹೋದರೆ, ಇನ್ನೂ ಕೆಲವರು ಮನೆಯಲ್ಲೇ ಇರುವಂಥ ವಸ್ತುಗಳಿಂದ ಚರ್ಮದ ಆರೈಕೆ ಮಾಡಿಕೊಳ್ಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಮನೆಯಲ್ಲೇ ನಾವು ಅಡುಗೆಗೆ ಬಳಸುವ ಪದಾರ್ಥಗಳಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇವುಗಳು ಬಹಳ ಸರಳ ಹಾಗೂ ಸುರಕ್ಷಿತ ವಿಧಾನ. ಯೋಗ ತಜ್ಞೆ ಮತ್ತು ಲೇಖಕಿ ವಸುಧಾ ರೈ ಮುಖದ ಕಾಂತಿಗಾಗಿ ಮಸೂರ್ ದಾಲ್ ಫೇಸ್‌ಮಾಸ್ಕ್ ಪ್ರಯೋಜನದ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ತಜ್ಞರು ಕೂಡ ಚನ್ನಂಗಿ ಬೇಳೆಯ ಪ್ರಯೋಜನದ ಬಗ್ಗೆ ವಿವರಿಸಿದ್ದಾರೆ. ಆರೋಗ್ಯಕ್ಕೆ ಮಾತ್ರವಲ್ಲ ಮುಖದಲ್ಲಿ ಹೊಳಪು ಹೆಚ್ಚಲು ಕೂಡ ಈ ಮಸೂರ್‌ ದಾಲ್‌ ಉತ್ತಮ.

ಮಸೂರ್ ದಾಲ್ ಫೇಸ್‌ಮಾಸ್ಕ್‌

ವಸುಧಾ ರೈ ಅವರು ಹೇಳುವಂತೆ ಮನೆಯಲ್ಲೇ ಸುಲಭವಾಗಿ ಸಿಗುವ ಚನ್ನಂಗಿ ಬೇಳೆ ಅಥವಾ ಕೆಂಪು ಬಣ್ಣದ ಮಸೂರ್ ದಾಲ್ ಕೇವಲ ಸಾಂಬಾರಿಗಷ್ಟೇ ಅಲ್ಲ, ಮುಖವನ್ನು ಕಾಂತಿಯುಕ್ತವಾಗಿಸಲು ಕೂಡ ಸಹಕಾರಿ. ಇದರಿಂದ ನೀವು ಫೇಸ್‌ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ಫಲಿತಾಂಶ ಸಿಗುತ್ತದೆ.

ಫೇಸ್‌ ಮಾಸ್ಕ್ ಅನ್ನು ತಯಾರಿಸುವುದು ಹೇಗೆ

ಬೇಕಾಗುವ ಸಾಮಗ್ರಿಗಳು: ಕೆಂಪು ಮಸೂರ ಅಥವಾ ಮಸೂರ್ ದಾಲ್, ನೀರು ಅಥವಾ ಹಸಿ ಹಾಲು, ಕೇಸರಿ ದಳ

ಫೇಸ್‌ಮಾಸ್ಕ್ ತಯಾರಿಸುವ ವಿಧಾನ: ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಈ ಕೆಂಪು ಮಸೂರವನ್ನು ರಾತ್ರಿ ಪೂರ ನೀರಿನಲ್ಲಿ ನೆನೆಸಿಡಿ. ಒಂದು ವೇಳೆ ನೀವು ಒಣ ಚರ್ಮವನ್ನು ಹೊಂದಿದ್ದರೆ, ಸ್ವಲ್ಪ ಕೇಸರಿ ದಳಗಳೊಂದಿಗೆ ಕೆಂಪು ಮಸೂರವನ್ನು ಹಾಲಿನಲ್ಲಿ ನೆನೆಸಿ. ಮರುದಿನ, ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ನೀವು ನೀರಿನಲ್ಲಿ ನೆನೆಸಿದರೆ ಅದಕ್ಕೆ ಸ್ವಲ್ಪ ಹೆಚ್ಚುವರಿ ಹಸಿ ಹಾಲನ್ನು ಸೇರಿಸಿ. ಒಂದು ವೇಳೆ ಹಾಲಿನಲ್ಲಿ ಮಾತ್ರ ನೆನೆಸಿದ್ದರೆ, ಈ ಕ್ರಮ ಪಾಲಿಸಬೇಕು ಅಂತಿಲ್ಲ. ಬಳಿಕ ಈ ರುಬ್ಬಿರುವ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ಮಿಶ್ರಣವು ಅರೆ ಒಣಗಿದಾಗ, ಮೇಲ್ಮುಖವಾಗಿ ಉಜ್ಜಿ. ಕೇವಲ ಒಂದು ಬಾರಿ ಮಾಡುವುದರಿಂದ ಇದರ ಪ್ರಯೋಜನ ಸಿಗುವುದಿಲ್ಲ. ವಾರಕ್ಕೆ ಎರಡು ಬಾರಿಯಾದರೂ ಇದರ ಫೇಸ್ ಮಾಸ್ಕ್ ಮಾಡುವುದರಿಂದ ಫಲಿತಾಂಶವನ್ನು ಪಡೆಯಬಹುದು.

ಈ ಫೇಸ್‌ಮಾಸ್ಕ್ ಮಾಡುವುದರ ಪ್ರಯೋಜನವೇನು?

ಅಂದಹಾಗೆ, ಈ ಕೆಂಪು ಮಸೂರ (ಚನ್ನಂಗಿ ಬೇಳೆ) ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಕಬ್ಬಿಣದಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದು ಆರೋಗ್ಯಕರ ಚರ್ಮಕ್ಕೆ ಅವಶ್ಯಕವಾಗಿದೆ. ಹಸಿ ಹಾಲನ್ನು ಸೇರಿಸುವುದರಿಂದ ಚರ್ಮಕ್ಕೆ ತೇವಾಂಶ ಮತ್ತು ಪೋಷಣೆಯನ್ನು ಒದಗಿಸುತ್ತದೆ. ಚನ್ನಂಗಿ ಬೇಳೆಗೆ ಹಸಿಹಾಲನ್ನು ಮಿಶ್ರಣ ಮಾಡುವುದರಿಂದ ಮುಖದಲ್ಲಿನ ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಅನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿದೆ. ಕೇಸರಿಯು ತ್ವಚೆಯನ್ನು ಕಾಂತಿಯುತಗೊಳಿಸುತ್ತದೆ.

ಕೇಸರಿ ಮತ್ತು ಹಸಿ ಹಾಲು ಎರಡೂ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಆರೋಗ್ಯಕರ ಚರ್ಮಕ್ಕಾಗಿ ಇವು ಬಹಳ ಉಪಯುಕ್ತವಾಗಿದೆ. ಕೇಸರಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಅದು ಉರಿಯೂತ, ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೊಡವೆ ಪೀಡಿತ ಚರ್ಮಕ್ಕೂ ಕೂಡ ಪ್ರಯೋಜನಕಾರಿಯಾಗಿದೆ.

ಚನ್ನಂಗಿ ಬೇಳೆಯು ಆಹಾರಕ್ಕೆ ಮಾತ್ರವಲ್ಲದೆ ಮುಖದ ಕಾಂತಿಗೂ ಉಪಯುಕ್ತವಾಗಿದೆ. ಮೇಲೆ ತಿಳಿಸಿದಂತೆ ಇದಕ್ಕೆ ಕೇಸರಿ ಹಾಗೂ ಹಸಿ ಹಾಲಿನ ಮಿಶ್ರಣದೊಂದಿಗೆ ಇದರ ಮುಖವಾಡ (ಫೇಸ್ ಮಾಸ್ಕ್) ಅನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಸುಕ್ಕುಗಟ್ಟುವಿಕೆ, ಮೊಡವೆ ಹೋಗಲಾಡಿಸುವುದು ಸೇರಿದಂತೆ ಚರ್ಮವನ್ನು ಕಾಂತಿಯುಕ್ತವಾಗಿ ಹೊಳೆಯುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

ವಿಭಾಗ