Chanakya Niti: ಬದುಕಿನಲ್ಲಿ ಕೆಟ್ಟ ಕ್ಷಣಗಳು ಎದುರಾದಾಗ ಈ 4 ವಿಚಾರಗಳತ್ತ ಗಮನ ಹರಿಸಿ, ನೀವೆಂದೂ ಸೋಲುವುದಿಲ್ಲ; ಚಾಣಕ್ಯರ ಜೀವನಪಾಠ
ಆಚಾರ್ಯ ಚಾಣಕ್ಯರು ಬದುಕಿನ ಕುರಿತು ಹಲವು ವಿಚಾರಗಳನ್ನು ಹೇಳಿದ್ದಾರೆ. ಅವರ ಪ್ರಕಾರ ಜೀವನದಲ್ಲಿ ಕೆಟ್ಟ ಕ್ಷಣ ಅಥವಾ ಸಮಯ ಎದುರಾದಾಗ ಈ 4 ವಿಚಾರಗಳತ್ತ ಗಮನ ಹರಿಸಬೇಕು, ಇದರಿಂದ ಸೋಲು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ, ಮಾತ್ರವಲ್ಲ ನಾವು ದುಡುಕಿ ಯಾವುದೇ ನಿರ್ಧಾರಗಳನ್ನ ತೆಗೆದುಕೊಳ್ಳುವುದಿಲ್ಲ. ಅಂತಹ 4 ವಿಚಾರಗಳು ಯಾವುವು ನೋಡಿ.
ಭಾರತದ ಸುವರ್ಣ ಇತಿಹಾಸದಲ್ಲಿ ಹಲವು ಮಹಾನ್ ವಿದ್ವಾಂಸರಿದ್ದರು. ಅವರ ಮಾತುಗಳು ಇಂದಿಗೂ ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಇಂತಹ ಮಹಾನ್ ದಾರ್ಶನಿಕರು ಮತ್ತು ರಾಜತಾಂತ್ರಿಕರಲ್ಲಿ ಒಬ್ಬರು ಆಚಾರ್ಯ ಚಾಣಕ್ಯರು. ಚಾಣಕ್ಯರಿಗೆ ತಿಳಿದಿಲ್ಲದ ಜೀವನದ ಕ್ಷೇತ್ರವಿಲ್ಲ. ಆ ಕಾಲದಲ್ಲಿ ಅವರು ಹೇಳಿರುವ ಪಾಠಗಳು, ನೀತಿಗಳು ಇಂದಿಗೂ ಎಂದೆಂದಿಗೂ ಪುಸ್ತುತವಾಗಿವೆ. ಅವರ ನೀತಿಗಳನ್ನು ಅನುಸರಿಸುವ ಮೂಲಕ ನಾವು ಬದುಕಿನಲ್ಲಿ ಎಂದಿಗೂ ಸೋಲು ಕಾಣದೇ, ಧೃತಿಗೆಡದೇ ಇರಬಹುದು.
ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳು ಸಹಜ. ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ಕೆಟ್ಟ ಗಳಿಗೆಯನ್ನು ಎದುರಿಸಿಯೇ ಎದುರಿಸಿರುತ್ತಾರೆ. ಕೆಟ್ಟ ಕ್ಷಣಗಳು ಅಥವಾ ಘಟನೆಗಳು ನಡೆದಾಗ ಜೀವನ ಇಷ್ಟಕ್ಕೇ ಮುಗಿಯಿತು, ಜೀವನದಲ್ಲಿ ಎಲ್ಲವೂ ಮುಗಿಯಿತು ಎಂದೆನಿಸುವುದು ಸಹಜ. ಆದರೆ ಅಂತಹ ಸಮಯದಲ್ಲಿ ಹೇಗೆ ವರ್ತಿಸಬೇಕು, ಕೆಟ್ಟ ಕ್ಷಣಗಳು ಕಳೆದು ಪುನಃ ಸಂತೋಷದಿಂದ ಬದುಕಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ಚಾಣಕ್ಯ ವಿವರಿಸಿದ್ದಾರೆ. ಹೀಗೆ ಮಾಡುವುದರಿಂದ ಕೆಟ್ಟ ಸಮಯವು ಬಹಳ ಬೇಗ ದೂರಾಗುತ್ತದೆ. ಅಲ್ಲದೇ ಇದು ಒಳ್ಳೆಯ ಕ್ಷಣಗಳಾಗಿ ಬದಲಾಗುತ್ತದೆ ಎನ್ನುತ್ತಾರೆ ಚಾಣಕ್ಯ.
ಕಠಿಣ ಪರಿಶ್ರಮ ಬಿಡದಿರಿ
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅತ್ಯಂತ ಕೆಟ್ಟ ಸಮಯವನ್ನು ಎದುರಿಸುತ್ತಿದ್ದರೆ, ಅವನು ಹತಾಶೆ ಅಥವಾ ದುಃಖದಿಂದ ಕುಳಿತುಕೊಳ್ಳುವ ಬದಲು ಕಠಿಣ ಪರಿಶ್ರಮವನ್ನು ಆಶ್ರಯಿಸಬೇಕು. ಮನುಷ್ಯನು ದೃಢವಾದ ಇಚ್ಛಾಶಕ್ತಿಯಿಂದ ಕಠಿಣ ಪರಿಶ್ರಮದಿಂದ ಮುನ್ನುಗ್ಗಿದರೆ ಕೆಟ್ಟ ಕಾಲ ಕೂಡ ಹೆಚ್ಚು ಕಾಲ ಉಳಿಯುವುದಿಲ್ಲ. ಮತ್ತೊಂದೆಡೆ, ವ್ಯಕ್ತಿಯು ನಿರುತ್ಸಾಹಗೊಂಡರೆ ಮತ್ತು ಕಠಿಣ ಪರಿಶ್ರಮದಿಂದ ದೂರವಿದ್ದರೆ, ಈ ಕೆಟ್ಟ ಸಮಯವು ಅವನನ್ನು ಬಿಡುವುದಿಲ್ಲ. ಆದ್ದರಿಂದ ಕುಳಿತುಕೊಳ್ಳುವ ಬದಲು ಕಷ್ಟಪಟ್ಟು ಕೆಲಸ ಮಾಡಬೇಕು. ಎಂದಿಗೂ ಎಲ್ಲವೂ ಮುಗಿಯಿತು ಎಂದು ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಚಾಣಕ್ಯ ಹೇಳುತ್ತಾರೆ.
ಗುರಿಯೆಡೆಗೆ ಗಮನವಿರಲಿ
ಆಚಾರ್ಯ ಚಾಣಕ್ಯರ ಪ್ರಕಾರ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದುವುದು ಬಹಳ ಮುಖ್ಯ. ಜೀವನದ ಗುರಿಯನ್ನು ನಿಗದಿಪಡಿಸಿದರೆ, ಕಷ್ಟದ ಸಂದರ್ಭಗಳು ಸಹ ಸುಲಭವಾಗಿ ಹಾದುಹೋಗುತ್ತವೆ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ತನ್ನ ಗುರಿಯನ್ನು ತಿಳಿದಿಲ್ಲದಿದ್ದರೆ, ಕಠಿಣ ಪರಿಸ್ಥಿತಿಯು ಉದ್ಭವಿಸಿದ ತಕ್ಷಣ, ಅವನು ವಿಚಲಿತನ ಸ್ಥಿತಿಗೆ ಹೋಗುತ್ತಾನೆ, ಇದರಿಂದ ಅವನು ಹೊರಬರಲು ತುಂಬಾ ಕಷ್ಟವಾಗುತ್ತದೆ. ಆಚಾರ್ಯರ ಪ್ರಕಾರ, ಕಷ್ಟಕರ ಸಂದರ್ಭಗಳು ನಿಮ್ಮ ಗುರಿಯನ್ನು ಸಾಧಿಸುವುದು ಅಸಾಧ್ಯವೆಂದು ತೋರಿದರೆ, ಬಿಟ್ಟುಕೊಡುವ ಬದಲು ಅದನ್ನು ಸಾಧಿಸುವ ಮಾರ್ಗವನ್ನು ಬದಲಾಯಿಸಿ ಮತ್ತು ಪ್ರಯತ್ನವನ್ನು ಮುಂದುವರಿಸಿ.
ಹೊಸ, ಉತ್ತಮ ಅವಕಾಶಕ್ಕಾಗಿ ಹುಡುಕುತ್ತಿರಿ
ಪ್ರತಿಭಾವಂತರಾಗಿದ್ದರೆ ಮಾತ್ರ ಸಾಕಾಗುವುದಿಲ್ಲ ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ಬಳಸಿಕೊಳ್ಳುವುದು ಸಹ ಬಹಳ ಮುಖ್ಯ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಟ್ಟ ಸಮಯದ ಹೊರತಾಗಿಯೂ, ಹೊಸ ಮತ್ತು ಉತ್ತಮ ಅವಕಾಶಗಳನ್ನು ಹುಡುಕುತ್ತಲೇ ಇರಬೇಕು. ಸೋಮಾರಿಗಳು ಯಾವಾಗಲೂ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂದು ದೂರುತ್ತಾರೆ. ಆದರೆ ಕಷ್ಟಪಟ್ಟು ದುಡಿಯುವ ಮನುಷ್ಯನು ಸರಿಯಾದ ಅವಕಾಶವನ್ನು ಕಂಡುಕೊಳ್ಳುತ್ತಾನೆ ಮತ್ತು ತನ್ನದೇ ಆದ ಒಳ್ಳೆಯ ಸಮಯವನ್ನು ಗಳಿಸಿಯೇ ಗಳಿಸುತ್ತಾನೆ. ಆಚಾರ್ಯರ ಪ್ರಕಾರ, ಸಮಸ್ಯೆಯೊಂದಿಗೆ ಕುಳಿತುಕೊಳ್ಳುವ ಬದಲು, ಅದರ ಪರಿಹಾರದ ಬಗ್ಗೆ ಚಿಂತಿಸುವುದು ಉತ್ತಮ.
ಯಾವುದನ್ನೂ ಅಸಾಧ್ಯವೆಂದು ಭಾವಿಸಬೇಡಿ
ಆಚಾರ್ಯ ಚಾಣಕ್ಯರ ಪ್ರಕಾರ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ನೀವು ಹೊರಬರಲು ಅಸಾಧ್ಯವೆಂದು ತೋರುವ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೆ, ಯಾವುದೂ ಅಸಾಧ್ಯವಲ್ಲ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಆಚಾರ್ಯರ ಪ್ರಕಾರ, ನೀವು ನಿರಂತರವಾಗಿ ಸರಿಯಾದ ದಿಕ್ಕಿನಲ್ಲಿ ಶ್ರಮಿಸುವ ಮೂಲಕ ಪ್ರತಿಯೊಂದು ಪರಿಸ್ಥಿತಿಯನ್ನು ನಿಮ್ಮ ಪರವಾಗಿ ತಿರುಗಿಸಿಕೊಳ್ಳಲು ಸಾಧ್ಯವಿದೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ