ಕನ್ನಡ ಸುದ್ದಿ  /  ಜೀವನಶೈಲಿ  /  Masala Chicken Fry: ಡಿಫ್ರೆಂಟ್‌ ಟೇಸ್ಟ್‌ನ ಚಿಕನ್‌ ಐಟಂ ತಿನ್ನಬೇಕು ಅನ್ನಿಸಿದ್ರೆ ಮಸಾಲ ಚಿಕನ್‌ ಫ್ರೈ ಟ್ರೈ ಮಾಡಿ; ರೆಸಿಪಿ ಇಲ್ಲಿದೆ

Masala Chicken Fry: ಡಿಫ್ರೆಂಟ್‌ ಟೇಸ್ಟ್‌ನ ಚಿಕನ್‌ ಐಟಂ ತಿನ್ನಬೇಕು ಅನ್ನಿಸಿದ್ರೆ ಮಸಾಲ ಚಿಕನ್‌ ಫ್ರೈ ಟ್ರೈ ಮಾಡಿ; ರೆಸಿಪಿ ಇಲ್ಲಿದೆ

ನಾನ್‌ವೆಜ್‌ ಪ್ರಿಯರಿಗೆ ಚಿಕನ್‌ ಖಾದ್ಯಗಳೆಂದರೆ ಬಹಳ ಅಚ್ಚುಮೆಚ್ಚು. ಆದ್ರೆ ಒಂದೇ ರೀತಿಯ ರುಚಿ ಇದ್ರೆ ನಾಲಿಗೆಗೆ ಬೇಸರ ಬರೋದು ಸಹಜ. ಅದಕ್ಕಾಗಿ ಡಿಫ್ರೆಂಟ್‌ ರುಚಿಯನ್ನು ಟ್ರೈ ಮಾಡ್ಬೇಕು. ಚಿಕನ್‌ ಐಟಂನಲ್ಲಿ ಸ್ಪೆಷಲ್‌ ಆಗಿ ಏನಾದ್ರೂ ಮಾಡ್ಬೇಕು ಅಂತಿದ್ರೆ ಮಸಾಲ ಚಿಕನ್‌ ಫ್ರೈ ಟ್ರೈ ಮಾಡಿ. ಇದರ ರುಚಿಗೆ ನೀವು ಫಿದಾ ಆಗೋದು ಪಕ್ಕಾ.

ಚಿಕನ್‌ ಮಸಲಾ ಫ್ರೈ
ಚಿಕನ್‌ ಮಸಲಾ ಫ್ರೈ

ಭಾರತೀಯರು ಆಹಾರ ಪ್ರಿಯರು. ಯಾವುದೇ ಋತುಮಾನವಿರಲಿ ಬಗೆ ಬಗೆಯ ಆಹಾರ ಖಾದ್ಯಗಳನ್ನು ಸವಿಯುವ ಮೂಲಕ ನಾಲಿಗೆಯ ಚಪಲ ತಣಿಸಿಕೊಳ್ಳುತ್ತಾರೆ. ಅದರಲ್ಲೂ ನಾನ್‌ವೆಜ್‌ ಪ್ರಿಯರು ಡಿಫ್ರೆಂಟ್‌ ಆಗಿರುವ ಖಾದ್ಯಗಳ ರುಚಿ ನೋಡುವುದರಲ್ಲಿ ಎತ್ತಿದ ಕೈ. ಚಿಕನ್‌, ಮಟನ್‌, ಫಿಶ್‌ ಯಾವುದೇ ಇರಲಿ ಎಲ್ಲಾ ರೀತಿ ಖಾದ್ಯಗಳಿಗೂ ಭಿನ್ನ ಮಸಾಲೆ ಸೇರಿಸಿ ವಿಭಿನ್ನ ರುಚಿ ನೀಡಲು ಟ್ರೈ ಮಾಡ್ತಾರೆ. ಚಿಕನ್‌ ಇರಲಿ, ಮಟನ್‌ ಇರಲಿ ಸಾರಿಗಿಂತ ಕಬಾಬ್‌, ಚಿಕನ್‌ 65, ಚಿಕನ್‌ ಚಿಲ್ಲಿಯಂತಹ ಡ್ರೈ ಐಟಂಗಳು ಹೆಚ್ಚು ಇಷ್ಟವಾಗುತ್ತದೆ. ಆದರೆ ಈ ಐಟಂಗಳಲ್ಲೂ ಕೂಡ ಒಂದೇ ರುಚಿಯನ್ನ ಬಹಳ ದಿನ ತಿಂದ್ರೆ ಅದು ಬೇಸರ ಆಗುತ್ತೆ, ಹಾಗಾಗಿ ನೀವು ಭಿನ್ನ ರುಚಿ ಇರುವ ಚಿಕನ್‌ ಮಸಾಲ ಫ್ರೈ ಟ್ರೈ ಮಾಡಬಹುದು.

ಈ ಚಿಕನ್‌ ಮಸಲಾ ಫ್ರೈ ಮಾಡಲು ಮಸಾಲೆ ಹದವಾಗಿರಬೇಕು. ಇದಕ್ಕೆ ಚಿಕನ್‌ ಅನ್ನು ಹೇಗೆ ಫ್ರೈ ಮಾಡ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಈ ಕೆಳಗೆ ತಿಳಿಸಿದ ವಿಧಾನ ಅನುಸರಿಸಿ ಚಿಕನ್‌ ಮಸಾಲ ಫ್ರೈ ಮಾಡಿದ್ರೆ ನೀವು ಖಂಡಿತ ಮತ್ತೆ ಮತ್ತೆ ಬೇಕು ಅಂತ ತಿಂತೀರಾ. ಇದನ್ನು ತಯಾರು ಮಾಡೋಕೆ ಸಮಯವೂ ಕಡಿಮೆ ಸಾಕು. ಹಾಗಾದ್ರೆ ಇದಕ್ಕೆ ಏನೆಲ್ಲಾ ಬೇಕು, ಮಾಡೋದು ಹೇಗೆ ನೋಡಿ.

ಚಿಕನ್ ಮಸಾಲ ಫ್ರೈ

ಬೇಕಾಗುವ ಸಾಮಗ್ರಿಗಳು: ಚಿಕನ್ - ಅರ್ಧ ಕೆಜಿ, ಈರುಳ್ಳಿ - 2, ಹಸಿ ಮೆಣಸಿನಕಾಯಿ - 2, ಅರಿಸಿನ - 1/4 ಟೀ ಚಮಚ, ಜೀರಿಗೆ - 1/4 ಟೀ ಚಮಚ, ದಾಲ್ಚಿನ್ನಿ - 1, ಏಲಕ್ಕಿ - 2, ಲವಂಗ - 2, ಪಲಾವ್ ಎಲೆ - 1, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಕರಿಬೇವು - ಕೆಲವು, ಟೊಮೆಟೊ - 2, ಖಾರದ ಪುಡಿ - 1/2 ಟೀ ಚಮಚ, ಗರಂ ಮಸಾಲಾ ಪುಡಿ - 1/2 ಟೀ ಚಮಚ, ಕೊತ್ತಂಬರಿ - 2 ಟೀ ಚಮಚ, ಕರಿಮೆಣಸಿನ ಪುಡಿ - 1 ಟೀ ಚಮಚ, ನೀರು - 1/2 ಕಪ್ ಅಡುಗೆ ಎಣ್ಣೆ ಅಗತ್ಯಕ್ಕೆ ತಕ್ಕಷ್ಟು, ರುಚಿಗೆ ಉಪ್ಪು

ತಯಾರಿಸುವ ವಿಧಾನ: ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಜೀರಿಗೆ, ಚಕ್ಕೆ, ಲವಂಗ, ಮೆಂತ್ಯೆ, ಪಲಾವ್ ಎಲೆ, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ ಬಣ್ಣ ಬದಲಾದಾಗ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿಟ್ಟುಕೊಂಡ 2 ಟೊಮೆಟೊ ಹಾಕಿ ಫ್ರೈ ಮಾಡಿ. ನಂತರ ಕರಿಬೇವು, ಅರಿಸಿನ, ಖಾರದ ಪುಡಿ, ಗರಂ ಮಸಾಲ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 1 ನಿಮಿಷ ಫ್ರೈ ಮಾಡಿ. ಈ ಮಿಶ್ರಣಕ್ಕೆ ಚೆನ್ನಾಗಿ ತೊಳೆದಿಟ್ಟುಕೊಂಡ ಚಿಕನ್‌ ತುಂಡುಗಳನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ, ಪುನಃ 2 ನಿಮಿಷ ಹುರಿದುಕೊಳ್ಳಿ. ನಂತರ ಒಂದು ಲೋಟದಲ್ಲಿ ನೀರು ಹಾಕಿ, ಕಡಿಮೆ ಉರಿಯಲ್ಲಿ 20 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಅಷ್ಟೇ ನಿಮ್ಮ ಮುಂದೆ ಚಿಕನ್ ಫ್ರೈ ತಿನ್ನಲು ಸಿದ್ಧ.

ಕೊತ್ತಂಬರಿ ಪುಡಿ ಹಾಕದೇ, ಮಸಾಲೆ ರುಬ್ಬದೇ ತಯಾರಿಸಬಹುದಾದ ವಿಶೇಷ ರೆಸಿಪಿ ಇದು. ನಿಮಗೆ ಖಾರ ಖಾರವಾಗಿ ಏನಾದ್ರೂ ತಿನ್‌ಬೇಕು ಅನ್ನಿಸಿದ್ರೆ ನೀವು ಇದನ್ನು ಮಾಡಿ ತಿನ್ನಬಹುದು. ಇದರ ರುಚಿಗೆ ನೀವು ಮತ್ತೆ ಮತ್ತೆ ಮಾಡಿ ತಿನ್ನೋದ್ರಲ್ಲಿ ಅನುಮಾನವಿಲ್ಲ.