40ರ ನಂತರವೂ ಫಿಟ್‌ ಅಂಡ್‌ ಫೈನ್‌ ಆಗಿರಬೇಕು ಅಂದ್ರೆ ಹೀಗಿರಲಿ ನಿಮ್ಮ ಜೀವನಶೈಲಿ; ದೀರ್ಘಾಯುಷ್ಯದ ಗುಟ್ಟು ಇದರಲ್ಲಡಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  40ರ ನಂತರವೂ ಫಿಟ್‌ ಅಂಡ್‌ ಫೈನ್‌ ಆಗಿರಬೇಕು ಅಂದ್ರೆ ಹೀಗಿರಲಿ ನಿಮ್ಮ ಜೀವನಶೈಲಿ; ದೀರ್ಘಾಯುಷ್ಯದ ಗುಟ್ಟು ಇದರಲ್ಲಡಗಿದೆ

40ರ ನಂತರವೂ ಫಿಟ್‌ ಅಂಡ್‌ ಫೈನ್‌ ಆಗಿರಬೇಕು ಅಂದ್ರೆ ಹೀಗಿರಲಿ ನಿಮ್ಮ ಜೀವನಶೈಲಿ; ದೀರ್ಘಾಯುಷ್ಯದ ಗುಟ್ಟು ಇದರಲ್ಲಡಗಿದೆ

ವಯಸ್ಸು 40 ಆಗುತ್ತಿದ್ದಂತೆ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಆಗುವುದು ಸಹಜ, ಅಲ್ಲದೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳೂ ಕಾಡಲು ಆರಂಭಿಸುತ್ತವೆ. ಆದರೆ ಇದಕ್ಕೆಲ್ಲಾ ಪರಿಹಾರ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಇದರಿಂದ 40ರ ನಂತರವೂ ಫಿಟ್‌ ಅಂಡ್‌ ಫೈನ್‌ ಆಗಿರಬಹುದು ಮಾತ್ರವಲ್ಲ, ದೀರ್ಘಾಯಸ್ಸು ನಿಮ್ಮದಾಗುವುದರಲ್ಲಿ ಅನುಮಾನವಿಲ್ಲ.

40ರ ನಂತರವೂ ಫಿಟ್‌ ಅಂಡ್‌ ಫೈನ್‌ ಆಗಿರಬೇಕು ಅಂದ್ರೆ ಹೀಗಿರಲಿ ನಿಮ್ಮ ಜೀವನಶೈಲಿ
40ರ ನಂತರವೂ ಫಿಟ್‌ ಅಂಡ್‌ ಫೈನ್‌ ಆಗಿರಬೇಕು ಅಂದ್ರೆ ಹೀಗಿರಲಿ ನಿಮ್ಮ ಜೀವನಶೈಲಿ

40 ವರ್ಷ ಆದ ತಕ್ಷಣ ನನ್ನ ವಯಸ್ಸು ಮುಗಿಯಿತು, ಇನ್ನು ಮುಂದೆ ಕಾಯಿಲೆ ಎಲ್ಲ ಬರೋದು ಸಹಜ. ನನಗೆ ಇನ್ನೇನು ಆಗಬೇಕಿದೆ ಹೀಗೆ ವೈರಾಗ್ಯದಿಂದ ವೇದಾಂತಿಯಿಂತೆ ಮಾತನಾಡುವವರೇ ಹೆಚ್ಚು. ಆದರೆ 40 ವರ್ಷ ಅಂದರೆ ಖಂಡಿತ 80 ವರ್ಷವಲ್ಲ. ನಲವತ್ತಕ್ಕೆ ಬದುಕು ಮುಗಿಯಿತು ಎಂದೂ ಅಲ್ಲ. 40ರ ನಂತರವೂ ದೇಹಾರೋಗ್ಯ ಕಾಪಾಡಿಕೊಂಡು ದೀರ್ಘಾಯಸ್ಸು ನಿಮ್ಮದಾಗಲು ಜೀವನಶೈಲಿಯಲ್ಲಿ ಒಂದಿಷ್ಟು ಮಾರ್ಪಾಡು ಮಾಡಿಕೊಳ್ಳುವುದು ಅವಶ್ಯ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ 40 ವರ್ಷದ ನಂತರ ಜೀವನಶೈಲಿಯನ್ನು ಬದಲಿಸಿಕೊಳ್ಳುವುದು ಬಹಳ ಅವಶ್ಯ ಎಂಬುದು ಸಾಬೀತಾಗಿದೆ. ಹೀಗೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ 40ರ ನಂತರವೂ 20ರ ಹರೆಯದವರಂತೆ ಕಾಣಬಹುದು.

ʼನಮ್ಮ ವಯಸ್ಸು ಎನ್ನುವುದು ಕಾಲಾನುಕ್ರಮಕ್ಕಿಂತ ನಮ್ಮ ದೇಹದಲ್ಲಿನ ಅಂಗಾಂಶಗಳು, ಜೀವಕೋಶಗಳು ಹಾಗೂ ಅಂಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸೂಚಿಸುತ್ತವೆ. ನಮಗೆ ವಯಸ್ಸಾಗುತ್ತಿದ್ದಂತೆ ಜೀವನಶೈಲಿಯ ಆಯ್ಕೆಗಳ ಆಧಾರದ ಮೇಲೆ ವೇಗವನ್ನು ಹೆಚ್ಚಿಸುವುದು ಹಾಗೂ ನಿಧಾನ ಮಾಡುವುದು ಮಾಡಬಹುದುʼ ಎಂದು ಪುಣೆಯ ರುಬಿ ಹಾಲ್‌ ಕ್ಲಿನಿಕ್‌ನಲ್ಲಿ ಐಸಿಯು ವಿಭಾಗದ ಉಪ ನಿರ್ದೇಶಕರು ಹಾಗೂ ಅರಿವಳಿಕೆ ತಜ್ಞರಾಗಿರುವ ಡಾ. ತನಿಮಾ ಬರೋನಿಯಾ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ʼನಿಯಮಿತ ವ್ಯಾಯಾಮ ಮತ್ತು ಪೌಷ್ಠಿಕ ಆಹಾರ ಸೇವನೆಯು ದೈಹಿಕವಾಗಿ ವಯಸ್ಸಾಗುವುದನ್ನು ತಡೆಯುವುದು ಮಾತ್ರವಲ್ಲ, ಇದು ನಮ್ಮ ಮೆದುಳು ಹಾಗೂ ಮಾನಸಿಕ ಆರೋಗ್ಯ ಸುಧಾರಣೆಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ 40 ವರ್ಷ ಮೇಲ್ಪಟ್ಟವರಲ್ಲಿ ಅದರಲ್ಲೂ ಮಹಿಳೆಯರು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಿದೇ ಆರೋಗ್ಯವಾಗಿರಬಹುದುʼ ಎನ್ನುತ್ತಾರೆ ತಜ್ಞರು.

40ರ ನಂತರ ದೇಹಲ್ಲಾಗುವ ಬದಲಾವಣೆಗಳು ಹಾಗೂ ಇದು ವಯಸ್ಸಿನ ಮೇಲೆ ಬೀರುವ ಪರಿಣಾಮ

ಡಾ. ಬರೋನಿಯಾ ಅವರ ಪ್ರಕಾರ 40ರ ನಂತರ ಈ ಪ್ರಮುಖ ನಾಲ್ಕು ಬದಲಾವಣೆಗಳ ಮೇಲೆ ನೀವು ಹೆಚ್ಚು ಗಮನ ಹರಿಸಬೇಕು.

  • ಹಾರ್ಮೋನ್‌ ಚಕ್ರದಲ್ಲಿನ ಬದಲಾವಣೆ. ಜೊತೆಗೆ ಹಾರ್ಮೋನ್‌ ಮಟ್ಟವೂ ಕಡಿಮೆಯಾಗುತ್ತದೆ. ಇದರಿಂದ ಹಾರ್ಮೋನ್‌ಗಳ ಸಮಸ್ಯೆ ಉಂಟಾಗುವುದು ಸಹಜ.
  • ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಚೇತರಿಕೆ ಕಾಣುವುದು ತಡವಾಗಬಹುದು. ಆದ್ದರಿಂದ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳುವುದು ಕಡ್ಡಾಯವಾಗಿದೆ.
  • ವಯಸ್ಸಾದಂತೆ ಅಂದರೆ 40ರ ನಂತರ ಒಮ್ಮೆ ಸಂಪೂರ್ಣ ದೇಹವನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಪರೀಕ್ಷೆ ಮಾಡಿಸಿದೇ ಬಿಟ್ಟರೆ ಚಯಾಪಚಯ ದರ ಕಡಿಮೆಯಾಗುತ್ತದೆ. ಇದರಿಂದ ಹಸಿವು ಕಡಿಮೆಯಾಗಿ, ಹಲವು ಸಮಸ್ಯೆಗಳಿಗೆ ಮೂಲವಾಗುತ್ತದೆ.
  • ಸ್ನಾಯುಗಳ ಸಂಕೋಚನ, ಅಸ್ಟಿಯೋಪೆನಿಯಾದಂತಜ ಸಮಸ್ಯೆಗಳು ಕ್ರಮೇಣ ಕಾಣಿಸಿಕೊಳ್ಳುತ್ತದೆ.

40ರ ನಂತರ ಆರೋಗ್ಯ ಸುಧಾರಿಸಿ, ದೀರ್ಘಾಯಸ್ಸು ಪಡೆಯಲು ಇಲ್ಲಿದೆ ಟಿಪ್ಸ್‌

ವಯಸ್ಸಾದ ಮೇಲೆ ದೇಹದಲ್ಲಿ ಕಾಣಿಸಿಕೊಳ್ಳುವ ವಯಸ್ಸಾದ ವಿದ್ಯಮಾನವನ್ನು ಒಪ್ಪಿಕೊಳ್ಳಬೇಕು. ಅದನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಆದರೆ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಬದಲಾವಣೆಗಳಿಗೆ ಉತ್ತಮವಾಗಿ ಸಿದ್ಧರಾಗಲು ಸಾಧ್ಯವಾಗುತ್ತದೆ ಎನ್ನುವುದು ತಜ್ಞರು ಅಭಿಪ್ರಾಯ.

ಪೋಷಣೆ ಅತೀ ಅವಶ್ಯ

40ರ ನಂತರ ಹಸಿವು ಕಡಿಮೆಯಾಗುವುದು ಸಹಜ. ಆದರೆ ಇದನ್ನು ಎದುರಿಸಲು ಸೂಕ್ತ ಆಹಾರ ಸೇವನೆ ಅವಶ್ಯ, ಹಸಿವಾಗುವುದಿಲ್ಲ ಎಂಬ ಕಾರಣಕ್ಕೆ ತಿನ್ನದೇ ಇರಲು ಸಾಧ್ಯವಿಲ್ಲ. ಎಲ್ಲಾ ಸೂಕ್ಷ್ಮ ಪೋಷಕಾಂಶಗಳು, ಮ್ಯಾಕ್ರೋನ್ಯುಟ್ರಿಯೆಂಟ್‌ಗಳುಮತ್ತು ವಿಟಮಿನ್‌ ಅಂಶ ಒಳಗೊಂಡಿರುವ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಲೀನ್‌ ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಇರುವ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವಿಸಲು ಗಮನ ನೀಡಬೇಕು.

ಹಾರ್ಮೋನುಗಳ ಸಮತೋಲನಕ್ಕೆ ಪೂರಕಗಳನ್ನು ಸೇವಿಸಬೇಕು

ಹಾರ್ಮೋನುಗಳ ಬದಲಾವಣೆಯು ನಿಮ್ಮ ಯೋಗಕ್ಷೇಮ ಮತ್ತು ದೈಹಿಕ ನೋಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಋತುಬಂಧಕೊಳ್ಳಗಾದ ನಂತರದ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ಮಹಿಳೆಯರು ಮಾನಸಿಕ ಸ್ಥಿತಿಯ ಅಥವಾ ಮೂಡ್‌ ಬದಲಾಗುವುದನ್ನು ನಿಯಂತ್ರಿಸಲು ಈಸ್ಟ್ರೋಜೆಸ್‌ ಅನ್ನು ಸೂಕ್ಷ್ಮ ಪ್ರಮಾಣದಲ್ಲಿ ನೀಡುವ ಪೂರಕಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಸುಧಾರಿಸಬಹುದು.

ನಿಯಮಿತ ಫಿಟ್ನೆಸ್‌ ದಿನಚರಿ

ನಿಯಮಿತ ವ್ಯಾಯಾಮ, ಹೃದಯರಕ್ತನಾಳ ಸುಧಾರಣೆಗೆ ನೆರವಾಗುವ ವ್ಯಾಯಾಮಗಳು ಮತ್ತು ದೈಹಿಕ ಶಕ್ತಿ ಸುಧಾರಿಸುವ ವ್ಯಾಯಾಮಗಳ ಮೂಲಕ ಫಿಟ್ನೆಸ್‌ ಕಾಪಾಡಿಕೊಳ್ಳಲು ಗಮನ ನೀಡಬೇಕು. ಇವು ಸ್ನಾಯುವಿನ ದ್ರವ್ಯರಾಶಿ, ಮೂಳೆಗಳ ಬಲ, ಚಯಾಪಚಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ನಿರಂತರ ವ್ಯಾಯಾಮವು ಮನಸ್ಥಿತಿ ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಉತ್ತಮ ನಿದ್ದೆ ಹಾಗೂ ತ್ವಚೆಯ ದಿನಚರಿ ಅನುಸರಿಸಿ

40ರ ನಂತರ ನಿದ್ದೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಸರಾಸರಿ 7 ರಿಂದ 9 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡುವುದು ಮುಖ್ಯವಾಗುತ್ತದೆ. ಇದರಿಂದ ಚರ್ಮವು ಸುಕ್ಕುಗಟ್ಟುವುದು ಮುಂತಾದ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಚರ್ಮದ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ.

ಒತ್ತಡ ನಿರ್ವಹಣೆಯೂ ಅವಶ್ಯ

ದೀರ್ಘಕಾಲದ ಒತ್ತಡವು ವಯಸ್ಸಾದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ನಿಮ್ಮ ದಿನಚರಿಯಲ್ಲಿ ಯೋಗ, ಧಾನ್ಯದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆ ಮೂಲಕ ಒತ್ತಡ ನಿರ್ವಹಣೆ ಮಾಡಬಹುದು. ಭಾವನಾತ್ಮಕ ಮತ್ತು ಅರಿವಿನ ಆರೋಗ್ಯಕ್ಕಾಗಿ ಬಲವಾದ ಸಾಮಾಜಿಕ ಬಂಧಗಳನ್ನು ಕಾಪಾಡಿಕೊಳ್ಳಿ. ಧೂಮಪಾನದಂತಹ ಅಭ್ಯಾಸಗಳನ್ನು ತ್ಯಜಿಸಿ. ಆಲ್ಕೋಹಾಲ್‌ ಸೇವನೆಯನ್ನು ಮಿತಿಗೊಳಿಸಿ. ಸಕ್ಕರೆ ಹಾಗೂ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿತಗೊಳಿಸಿ.

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

40ರ ನಂತರ ದೇಹದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಒಮ್ಮೊಮ್ಮೆ ಇವು ಮೇಲ್ನೋಟಕ್ಕೆ ಕಾಣದೇ ಇರಬಹುದು. ಈ ಸಮಸ್ಯೆಗಳನ್ನು ಪತ್ತೆಹಚ್ಚಲು ನಿರಂತರ ವೈದ್ಯಕೀಯ ತಪಾಸಣೆ ಅವಶ್ಯ. ಅದರಲ್ಲೂ ಮಹಿಳೆಯರು ಕ್ಯಾನ್ಸರ್‌ ಸಂಬಂಧಿಸಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲೇಬೇಕು.

Whats_app_banner