Covid Variant: ಉಲ್ಬಣವಾಗುತ್ತಿದೆ ಹೊಸ ಕೋವಿಡ್‌ ರೂಪಾಂತರಿ ಬಿಎ 2.86; ರೋಗಲಕ್ಷಣಗಳು ಹೀಗಿವೆ, ಮುನ್ನೆಚ್ಚರಿಕೆ ಮರೆಯದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Covid Variant: ಉಲ್ಬಣವಾಗುತ್ತಿದೆ ಹೊಸ ಕೋವಿಡ್‌ ರೂಪಾಂತರಿ ಬಿಎ 2.86; ರೋಗಲಕ್ಷಣಗಳು ಹೀಗಿವೆ, ಮುನ್ನೆಚ್ಚರಿಕೆ ಮರೆಯದಿರಿ

Covid Variant: ಉಲ್ಬಣವಾಗುತ್ತಿದೆ ಹೊಸ ಕೋವಿಡ್‌ ರೂಪಾಂತರಿ ಬಿಎ 2.86; ರೋಗಲಕ್ಷಣಗಳು ಹೀಗಿವೆ, ಮುನ್ನೆಚ್ಚರಿಕೆ ಮರೆಯದಿರಿ

ಕೋವಿಡ್‌ ಕಾಲಘಟ್ಟ ಇನ್ನೂ ಮುಗಿದಿಲ್ಲ. ಹೊಸ ಕೋವಿಡ್‌ ರೂಪಾಂತರಿ ಇದೀಗ ಸದ್ದು ಮಾಡುತ್ತಿದೆ. ಡೆನ್ಮಾರ್ಕ್‌, ಇಸ್ರೇಲ್‌ ಮತ್ತು ಅಮೆರಿಕದಲ್ಲಿ ಬಿಎ 2.86 ಹೆಸರಿನ ಈ ರೂಪಾಂತರಿ ವೈರಸ್ ಉಲ್ಬಣಗೊಳ್ಳುತ್ತಿದೆ. ಓಮಿಕ್ರಾನ್‌ ಉಪತಳಿ ಎಕ್ಸ್‌ಬಿಬಿ 1.5ಗೆ ಈ ಹೊಸ ವೈರಸ್‌ 36 ರೂಪಾಂತರಿಗಳನ್ನು ಹೊಂದಿದೆ.

ಉಲ್ಬಣವಾಗುತ್ತಿದೆ ಹೊಸ ಕೋವಿಡ್‌ ರೂಪಾಂತರಿ ಬಿಎ 2.86
ಉಲ್ಬಣವಾಗುತ್ತಿದೆ ಹೊಸ ಕೋವಿಡ್‌ ರೂಪಾಂತರಿ ಬಿಎ 2.86

2019 ರಿಂದ 2022ರವರೆಗೆ ಪ್ರಪಂಚದಾದ್ಯಂತ ಕೋವಿಡ್‌ದೇ ಸುದ್ದಿಯಾಗಿತ್ತು. ಈ ವರ್ಷ ಕೋವಿಡ್‌ ಸಾಮಾಚಾರ ಕೊಂಚ ತಣ್ಣಗಾಗಿತ್ತು ಎನ್ನುವಷ್ಟರಲ್ಲಿ ಪುನಃ ಹೊಸ ರೂಪಾಂತರಿ ವೈರಸ್‌ ಸದ್ದು ಮಾಡುತ್ತಿದೆ. ಯುಕೆ, ಚೀನಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹೊಸ ರೂಪಾಂತರಿ ವೈರಸ್‌ ಉಲ್ಬಣವಾಗುತ್ತಿದೆ.

ಇಜಿ.5 ಅಥವಾ ಇರಿಸ್‌ ಎಂಬ ಹೊಸ ಕೋವಿಡ್‌ ತಳಿ ಯನೈಟೆಡ್‌ ಕಿಂಗ್‌ಡಮ್‌ನಲ್ಲಿ ಇತ್ತೀಚೆಗೆ ಕಾಣಿಸಿತ್ತು. ಜುಲೈ 24 ರಂದು ಮೊದಲ ಬಾರಿ ಪತ್ತೆಯಾದ ಬಿಎ 2.86 ಹೊಸ ಕೋವಿಡ್‌ ತಳಿಯನ್ನು ʼಮೇಲ್ವಿಚಾರಣೆಯಲ್ಲಿರುವ ರೂಪಾಂತರಿʼ ಎಂದು ವರ್ಗೀಕರಿಸಲಾಗಿತ್ತು. ಆದರೆ ಆಗಸ್ಟ್‌ 17 ರಿಂದ ಡೆನ್ಮಾರ್ಕ್‌, ಇಸ್ರೇಲ್‌ ಮತ್ತು ಅಮೆರಿಕದಲ್ಲಿ ಈ ಸೋಂಕಿನ ಪ್ರಭಾವ ಜೋರಾಗಿದೆ. ಇದರ ಲಕ್ಷಣಗಳು ಹಿಂದಿನ ಕೋವಿಡ್‌ ತಳಿಗಳಿಗೆ ಹೆಚ್ಚು ಕಡಿಮೆ ಹೋಲುತ್ತಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕದ ಸೆಂಟರ್ಸ್‌ ಫಾರ್‌ ಡಿಸೀರ್‌ ಕಂಟ್ರೋಲ್‌ ಈ ರೂಪಾಂತರಿ ತಳಿ ಕುರಿತು ಮೇಲ್ವಿಚಾರಣೆ ಮಾಡುತ್ತಿದೆ. ಇದು 36 ರೂಪಾಂತರಗಳನ್ನು ಹೊಂದಿದ್ದು, ಇದರ ಉಲ್ಬಣವು ಕಳವಳ ಮೂಡಿಸಿದೆ.

ಪ್ರಸ್ತುತ ಈ ರೂಪಾಂತರಿ ತಳಿಯ ರೋಗಲಕ್ಷಣಗಳು ಜ್ವರ, ಕೆಮ್ಮು, ತಲೆನೋವು, ಮೈಕೈನೋವು, ಆಯಾಸ ಮತ್ತು ಕಿಬ್ಬೊಟ್ಟೆ ನೋವಿನಂತಹ ಸಾಮಾನ್ಯ ಲಕ್ಷಣಗಳನ್ನು ಒಳಗೊಂಡಿದ್ದು, ಓಮಿಕ್ರಾನ್‌ ಎಕ್ಸ್‌ಬಿಬಿ 15ರ ಮುಖ್ಯ ತಳಿಯ ರೋಗಲಕ್ಷಣಗಳಂತೆಯೇ ಇವೆ ಎಂದು ಏಷ್ಯನ್‌ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ ಡಾ. ಚಾರು ದತ್‌ ಅರೋರ ಹಿಂದೂಸ್ತಾನ್‌ ಟೈಮ್ಸ್‌ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಟೆಕ್ಸಾಸ್‌ ಮೆಥೋಡಿಸ್ಟ್‌ ವರದಿಗಳ ಪ್ರಕಾರ ಬಿಎ 2.86 ತಳಿಯ ಹರಡುವಿಕೆ ಮತ್ತು ಪ್ರಕರಣಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ಅಧ್ಯಯನ ಮುಂದುವರಿದೆ. ಇನ್ನಷ್ಟೇ ಹೆಚ್ಚಿನ ರೋಗಲಕ್ಷಣಗಳ ಬಗ್ಗೆ ತಿಳಿಯಬೇಕಿದೆ.

ಬಿಎ 2.86 ಭಾರತದಲ್ಲೂ ಹರಡುವ ಸಾಧ್ಯತೆ ಇದೆಯೇ?

ಕಳೆದ 3 ವರ್ಷಗಳಲ್ಲಿ ಭಾರತದಲ್ಲೂ ಕೋವಿಡ್‌ 19ನ ಹಲವು ಉಪತಳಿಗಳು ದಾಳಿ ಮಾಡಿವೆ. ವ್ಯಾಕ್ಸಿನೇಷನ್‌ ಮೂಲಕ ದೇಶದಾದ್ಯಂತ ಇದರ ಹರಡುವಿಕೆಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು.

ʼವೃದ್ಧರು, ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರು ತಕ್ಷಣವೇ ಬೂಸ್ಟರ್‌ ಡೋಸ್‌ಗಳನ್ನು ಪಡೆಯಬೇಕು. ಇದು ಅವರನ್ನು ಕೋವಿಡ್‌ ತಳಿಗಳಿಂದ ರಕ್ಷಿಸಲು ನೆರವಾಗುತ್ತದೆʼ ಎನ್ನುತ್ತಾರೆ ಡಾ. ಅರೋರಾ.

ರೋಗಲಕ್ಷಣಗಳು

  • ಅತಿಯಾದ ಜ್ವರ
  • ಕಫ
  • ಅತಿಯಾದ ತಲೆನೋವು
  • ಕಿಬ್ಬೊಟ್ಟೆಯಲ್ಲಿ ಅಸ್ವಸ್ಥತೆ
  • ಮೈಕೈನೋವು
  • ಆಯಾಸ, ನಿಶಕ್ತಿ
  • ಹಸಿವಾಗದೇ ಇರುವುದು

ಮುನ್ನೆಚ್ಚರಿಕಾ ಕ್ರಮಗಳು

  • ಜನನಿಬಿಡ ಪ್ರದೇಶಗಳನ್ನು ತಪ್ಪಿಸಿ
  • ಹೊರಗಡೆ ಹೋಗುವಾಗ ತಪ್ಪದೇ ಮಾಸ್ಕ್‌ ಧರಿಸಿ
  • ಆಗಾಗ ಕೈಗಳನ್ನು ತೊಳೆಯಿರಿ
  • ಪ್ರತಿರೋಧಕ ಶಕ್ತಿ ಹೆಚ್ಚಿಸುವ ಸಮತೋಲಿತ ಆಹಾರ ಸೇವಿಸಿ
  • ನಿಮ್ಮ ಸುತ್ತಲಿನ ಜಾಗವನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ.

ಕೋವಿಡ್‌ಗೆ ಭಯಭೀತರಾಗಿ, ಆತಂಕಕ್ಕೆ ಒಳಗಾಗುವ ಬದಲು ಕೋವಿಡ್‌ ನಿಯಮಗಳನ್ನು ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಿ.

 

Whats_app_banner