ಉತ್ತಮ ತ್ವಚೆ ಹಾಗೂ ದೇಹದ ಆರೋಗ್ಯಕ್ಕಾಗಿ ಸೇವಿಸಿ ಸೆಲರಿ ಕಾಂಡದ ಪಾನೀಯ; ಜ್ಯೂಸ್ ಮಾಡೋ ತರಹೇವಾರಿ ವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಉತ್ತಮ ತ್ವಚೆ ಹಾಗೂ ದೇಹದ ಆರೋಗ್ಯಕ್ಕಾಗಿ ಸೇವಿಸಿ ಸೆಲರಿ ಕಾಂಡದ ಪಾನೀಯ; ಜ್ಯೂಸ್ ಮಾಡೋ ತರಹೇವಾರಿ ವಿಧಾನ ಇಲ್ಲಿದೆ

ಉತ್ತಮ ತ್ವಚೆ ಹಾಗೂ ದೇಹದ ಆರೋಗ್ಯಕ್ಕಾಗಿ ಸೇವಿಸಿ ಸೆಲರಿ ಕಾಂಡದ ಪಾನೀಯ; ಜ್ಯೂಸ್ ಮಾಡೋ ತರಹೇವಾರಿ ವಿಧಾನ ಇಲ್ಲಿದೆ

ಸೆಲರಿ ಕಾಂಡಗಳು ಅಷ್ಟಾಗಿ ಪ್ರಚಲಿತದಲ್ಲಿರುವ ತರಕಾರಿ ಅಲ್ಲದೇ ಇದ್ದರೂ, ಇವುಗಳಿಂದ ಇರುವ ಆರೋಗ್ಯ ಪ್ರಯೋಜನ ಹಲವು. ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ತಾಜಾ ತ್ವಚೆಯನ್ನು ಪಡೆದುಕೊಳ್ಳುವುದಕ್ಕಾಗಿ ಸೆಲರಿ ಜ್ಯೂಸ್ ಸೇವಿಸುವುದು ತುಂಬಾ ಮುಖ್ಯವಾಗಿದೆ.

 ದೇಹದ ಆರೋಗ್ಯಕ್ಕಾಗಿ ಸೇವಿಸಿ ಸೆಲರಿ ಕಾಂಡದ ಪಾನೀಯ
ದೇಹದ ಆರೋಗ್ಯಕ್ಕಾಗಿ ಸೇವಿಸಿ ಸೆಲರಿ ಕಾಂಡದ ಪಾನೀಯ (Pixabay)

ಆರೋಗ್ಯವೇ ಭಾಗ್ಯ ಎಂದು ಗಾದೆ ಮಾತು ಹೇಳುತ್ತದೆ. ಆ ಮಾತು ನಿಜ ಕೂಡ. ಆರೋಗ್ಯವೊಂದು ಸಾಥ್ ನೀಡಿದರೆ ಜೀವನದ ಯಾವುದೇ ಸವಾಲುಗಳನ್ನು ಎದುರಿಸಬಹುದು. ನೀವು ಕೂಡ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿದ್ದರೆ ನೀವು ತಾಜಾ ಸೆಲರಿ ಜ್ಯೂಸ್‌ (celery juice) ಸೇವನೆ ಮಾಡಬಹುದಾಗಿದೆ. ಸೆಲರಿ ಸೊಪ್ಪುಗಳು ವಿವಿಧ ಜೀವಸತ್ವ, ಖನಿಜಾಂಶಗಳನ್ನು ಹೊಂದಿದ್ದು ಉತ್ತಮ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ.

ಸೆಲರಿ ಜ್ಯೂಸ್ ಎಂದರೇನು?

ಮಾರುಕಟ್ಟೆಯಲ್ಲಿ ಸಿಗುವ ಸೆಲರಿ ಕಾಂಡವನ್ನು ಬಳಕೆ ಮಾಡಿ ಸೆಲರಿ ಜ್ಯೂಸ್ ತಯಾರಿಸಲಾಗುತ್ತದೆ. ಇವುಗಳು ಅತ್ಯಂತ ಪೌಷ್ಠಿಕಾಂಶ ಭರಿತ ಪಾನೀಯವಾಗಿದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೊಡೆದು ಹಾಕುವ ಜೊತೆಯಲ್ಲಿ ನೈಸರ್ಗಿಕ ಮೂತ್ರವರ್ಧಕವಾಗಿ ಕೂಡ ಸೆಲರಿ ಜ್ಯೂಸ್ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಮೂತ್ರಪಿಂಡದ ಆರೋಗ್ಯ ಸುಧಾರಿಸುತ್ತದೆ. ಇದರ ಜೊತೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡುವುದರ ಜೊತೆಯಲ್ಲಿ ಅಜೀರ್ಣದಂಥ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ. ಹೊಳೆಯುವ ತ್ವಚೆಯನ್ನು ಕೂಡ ಈ ಜ್ಯೂಸ್ ಸೇವಿಸುವ ಮೂಲಕ ಪಡೆಯಬಹುದಾಗಿದೆ.

ಪಾನೀಯ ತಯಾರಿಸಲು ಸೆಲರಿಯನ್ನು ಸಿದ್ಧಗೊಳಿಸುವುದು ಹೇಗೆ?

1. ತಾಜಾ ಸೆಲರಿ ಆಯ್ಕೆ ಮಾಡಿ : ಹಸಿರು ಬಣ್ಣದ ತಾಜಾ ಸೆಲರಿಯನ್ನೇ ನೀವು ಆಯ್ಕೆ ಮಾಡಿಕೊಳ್ಳಬೇಕು. ಆದಷ್ಟು ಕೀಟನಾಶಕಗಳನ್ನು ಕಡಿಮೆ ಬಳಸಿ ಸಾವಯವವಾಗಿ ತಯಾರಿಸಿದ ಸೆಲರಿಯನ್ನೇ ಖರೀದಿ ಮಾಡಿ.

2. ಸರಿಯಾಗಿ ತೊಳೆಯಬೇಕು : ಸೆಲರಿಯಲ್ಲಿ ಯಾವುದೇ ರೀತಿಯ ಕೀಟನಾಶಕಗಳಾಗಲಿ, ಕೊಳೆಯಾಗಲಿ ಉಳಿಯದಂತೆ ಅದನ್ನು ಸರಿಯಾಗಿ ತೊಳೆಯಬೇಕು. ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿಗಳನ್ನು ಬ್ರಷ್ ಬಳಸಿ ತೊಳೆಯುವುದು ಉತ್ತಮ

3. ತುದಿ ಕತ್ತರಿಸಿ : ಸೆಲರಿ ಕಾಂಡದ ಸೊಪ್ಪಿನ ಮೇಲ್ಭಾಗ ಹಾಗೂ ಕಾಂಡದ ಕೆಳಭಾಗವನ್ನು ಕತ್ತರಿಸಿಕೊಳ್ಳಿ. ಕಂದು ಬಣ್ಣಕ್ಕೆ ತಿರುಗಿದ ಅಥವಾ ಹಾಳಾದ ಭಾಗವಿದ್ದರೆ ಅದನ್ನೂ ಕತ್ತರಿಸಿಕೊಳ್ಳಿ.

4. ಸಣ್ಣದಾಗಿ ಕತ್ತರಿಸಿ : ನೀವು ಬಳಕೆ ಮಾಡುತ್ತಿರುವ ಜ್ಯೂಸರ್ಗೆ ಅನುಗುಣವಾಗಿ ಸೆಲರಿ ಗಿಡದ ಕಾಂಡವನ್ನು ತುಂಡು ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇದರಿಂದ ಜ್ಯೂಸ್ ತಯಾರಿಸುವುದು ಸುಲಭವಾಗುತ್ತದೆ.

5. ಜ್ಯೂಸಿಂಗ್ : ಜ್ಯೂಸ್ ತಯಾರಿಸಲು ಉತ್ತಮ ಗುಣಮಟ್ಟದ ಜ್ಯೂಸರ್ ಬಳಸಿ. ಇವುಗಳು ಸೆಲರಿ ಕಾಂಡದಿಂದ ಪರಿಣಾಮಕಾರಿಯಾಗಿ ರಸವನ್ನು ಹಿಂಡುತ್ತದೆ.

6. ಗಾಳಿಸುವಿಕೆ : ನಿಮಗೆ ಯಾವುದೇ ತಿರುಳುಗಳಿಲ್ಲದ ರಸ ಮಾತ್ರ ಬೇಕು ಎನಿಸಿದರೆ ನೀವು ಜಾಲರಿಯನ್ನು ಬಳಸಿ ಅಥವಾ ಬಟ್ಟೆಯನ್ನು ಬಳಸಿ ಸೆಲರಿ ರಸವನ್ನು ಸೋಸಿಕೊಳ್ಳಬಹುದಾಗಿದೆ.

7. ತಕ್ಷಣವೇ ಸೇವಿಸಿ : ಸೆಲರಿ ಜ್ಯೂಸ್‌ನಿಂದ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಪಡೆಯಬೇಕು ಎಂದುಕೊಂಡಿದ್ದರೆ ನೀವು ಸೆಲರಿ ಪಾನೀಯವನ್ನು ತಯಾರಿಸಿದ ಕೂಡಲೇ ಅದನ್ನು ಸೇವನೆ ಮಾಡಬೇಕು. ತಾಜಾ ಸೆಲರಿ ಜ್ಯೂಸ್ ಹೆಚ್ಚಿನ ಆರೋಗ್ಯ ಪ್ರಯೋಜನ ನೀಡುತ್ತದೆ. ಕೂಡಲೇ ಸೇವಿಸುವುದು ಸಾಧ್ಯವಿಲ್ಲ ಎಂದಾದರೆ ಫ್ರಿಜ್‌ನಲ್ಲಿಟ್ಟು ಒಂದು ದಿನದ ಒಳಗಾಗಿ ಸೇವಿಸುವಂತೆ ನೋಡಿಕೊಳ್ಳಿ.

ಯಾವೆಲ್ಲ ರೀತಿ ಸೆಲರಿ ಜ್ಯೂಸ್ ತಯಾರಿಸಬಹುದು?

  • ಸಿಟ್ರಸ್ ಸೆಲರಿ ಜ್ಯೂಸ್

ಬೇಕಾಗುವ ಸಾಮಗ್ರಿಗಳು :

- 4 ಸೆಲರಿ ಕಾಂಡಗಳು

- 1 ಸೌತೆಕಾಯಿ

- 1 ಹಸಿರು ಸೇಬು

- 1/2 ನಿಂಬೆ

ಮಾಡುವ ವಿಧಾನ

1. ಸೆಲರಿ, ಸೌತೆಕಾಯಿ, ಸೇಬನ್ನು ತೊಳೆದುಕೊಂಡು ಚೆನ್ನಾಗಿ ಕತ್ತರಿಸಿಕೊಳ್ಳಿ.

2. ಎಲ್ಲಾ ಪದಾರ್ಥಗಳನ್ನು ಜ್ಯೂಸರ್‌ಗೆ ಹಾಕಿ ನಿಂಬು ರಸವನ್ನು ಸೇರಿಸಿ ಬ್ಲೆಂಡ್ ಮಾಡಿ.

3. ಇದಕ್ಕೆ ನೀವು ಮಂಜುಗಡ್ಡೆಗಳನ್ನು ಸೇರಿಸಿಕೊಂಡು ಕುಡಿಯಬಹುದಾಗಿದೆ.

ಸೆಲರಿ ಕಾಂಡಗಳು 5,

1 ಇಂಚಿನ ತಾಜಾ ಶುಂಠಿ (ಸಿಪ್ಪೆ ಸುಲಿದ)

1 ಹಸಿರು ಸೇಬು

1/2 ಸೌತೆಕಾಯಿ

ಮಾಡುವ ವಿಧಾನ :

1. ಸೆಲರಿ, ಶುಂಠಿ, ಸೇಬು ಮತ್ತು ಸೌತೆಕಾಯಿಯನ್ನು ತೊಳೆದು ಕತ್ತರಿಸಿಕೊಳ್ಳಿ.

2. ಎಲ್ಲಾ ಪದಾರ್ಥಗಳನ್ನು ಜ್ಯೂಸರ್‌ಗೆ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ.

3. ಪುದೀನಾ ಎಲೆಗಳು, ಸೌತೆಕಾಯಿ ತುಂಡನ್ನು ಹಾಕಿ ಅಲಂಕರಿಸಿ ಸವಿಯಲು ನೀಡಬಹುದು.

- 4 ಸೆಲರಿ ಕಾಂಡಗಳು

- 1 ಕಪ್ ಅನಾನಸ್ ತುಂಡುಗಳು

- 1/2 ನಿಂಬೆ

- ಸ್ವಲ್ಪ ಪುದೀನ ಎಲೆಗಳು

ಮಾಡುವ ವಿಧಾನ

1. ಸೆಲರಿ, ಅನಾನಸ್‌ ಮತ್ತು ಪುದೀನವನ್ನು ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ

2. ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಜ್ಯೂಸರ್‌ಗೆ ಹಾಕಿ ನಿಂಬು ರಸವನ್ನು ಹಿಂಡಿಕೊಳ್ಳಿ.

3. ಈಗ ಇದನ್ನು ಒಂದು ಗಾಜಿನ ಲೋಟಕ್ಕೆ ಹಾಕಿ ಐಸ್ ಕ್ಯೂಬ್‌ ಸೇರಿಸಿ ಪುದೀನಾ ಎಲೆಗಳಿಂದ ಸಿಂಗರಿಸಿ

  • ಮಸಾಲಾ ಸೆಲರಿ ಜ್ಯೂಸ್

ಬೇಕಾಗುವ ಸಾಮಗ್ರಿಗಳು :

- 5 ಸೆಲರಿ ಕಾಂಡಗಳು

- 1 ಸಣ್ಣ ಬೀಟ್ರೂಟ್

- 1/2 ಮೆಣಸು

- 2 ಕ್ಯಾರೆಟ್

ಮಾಡುವ ವಿಧಾನ

1. ಸೆಲರಿ, ಬೀಟ್ರೂಟ್, ಮೆಣಸು ಮತ್ತು ಕ್ಯಾರೆಟ್‌ಗಳನ್ನು ತೊಳೆದು ಕತ್ತರಿಸಿಕೊಳ್ಳಿ.

2. ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಜ್ಯೂಸರ್‌ನಲ್ಲಿ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ.

3. ನಿಮಗೆ ಎಷ್ಟು ಮಸಾಲೆ ಬೇಕು ಎನ್ನುವುದನ್ನು ಆಧರಿಸಿ ಮೆಣಸನ್ನು ಸೇರಿಸಿ

ಸೆಲರಿ ಜ್ಯೂಸ್ ಸೇವಿಸುವ ಉತ್ತಮ ಸಮಯ ಯಾವುದು?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೆಲರಿ ಜ್ಯೂಸ್ ಸೇವಿಸುವುದು ಉತ್ತಮ ಎನ್ನುವುದು ಆಹಾರ ತಜ್ಞರ ಅಭಿಪ್ರಾಯವಾಗಿದೆ. ಖಾಲಿ ಹೊಟ್ಟೆಯಲ್ಲಿ ನಿಮ್ಮ ದೇಹಕ್ಕೆ ಪೋಷಕಾಂಶವನ್ನು ಹೀರಿಕೊಳ್ಳುವುದು ಸುಲಭವಾಗುತ್ತದೆ. ತಾಜಾ ಸೆಲರಿ ಕಾಂಡಗಳು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ ಆದಷ್ಟು ತಾಜಾ ಸೆಲರಿ ಕಾಂಡಗಳನ್ನೇ ಜ್ಯೂಸ್ ಮಾಡಲು ಆಯ್ಕೆ ಮಾಡಿಕೊಳ್ಳಿ.

ಯಾವ ಪ್ರಮಾಣದಲ್ಲಿ ಸೇವಿಸಬೇಕು?

ನಿಮ್ಮ ದೇಹವು ಹೇಗೆ ಪ್ರತಿಕ್ರಯಿಸುತ್ತದೆ ಎಂಬುದನ್ನು ಆಧರಿಸಿ ಇದನ್ನು ನಿರ್ಧರಿಸಬೇಕಾಗುತ್ತದೆ. ಮೊದಲು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಕ್ರಮೇಣವಾಗಿ ಜ್ಯೂಸ್‌ನ ಪ್ರಮಾಣವನ್ನು ಹೆಚ್ಚಿಸಬಹುದು.

ಯಾವಾಗ ಸೇವಿಸಬೇಕು?

ಇನ್ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸುವ ಕನಿಷ್ಟ 15ರಿಂದ 20 ನಿಮಿಷಗಳ ಮೊದಲು ಸೆಲರಿಯನ್ನು ಸೇವಿಸಬಹುದಾಗಿದೆ. ಇದರಿಂದ ದೇಹಕ್ಕೆ ಪೋಷಕಾಂಶಗಳನ್ನು ಸೇವಿಸಲು ಸಹಕಾರ ಸಿಕ್ಕಂತಾಗುತ್ತದೆ

Whats_app_banner