ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಮೊಸರು ಇಷ್ಟಪಡುವಿರಾ ಅಥವಾ ಮಜ್ಜಿಗೆಯೋ: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಮಾಹಿತಿ

ನೀವು ಮೊಸರು ಇಷ್ಟಪಡುವಿರಾ ಅಥವಾ ಮಜ್ಜಿಗೆಯೋ: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಮಾಹಿತಿ

ಬೇಸಿಗೆಯ ಬಿಸಿಲಿನ ಬೇಗೆಗೆ ತಂಪಾದ ಪಾನೀಯಗಳತ್ತ ಮನಸ್ಸು ಹಾಗೂ ದೇಹ ವಾಲುತ್ತದೆ. ಈಗ ತಂಪಾದ ಮಜ್ಜಿಗೆ ಸಿಕ್ಕರೆ, ದೇಹಕ್ಕೆ ತಣ್ಣನೆಯ ಅನುಭವ. ಇದೇ ವೇಳೆ ಊಟದೊಂದಿಗೆ ಮೊಸರು ಇದ್ದರೆ ಹೊಟ್ಟೆಗೆ ಖುಷಿ. ಹಾಗಿದ್ದರೆ ಈ ಮೊಸರು ಮತ್ತು ಮಜ್ಜಿಗೆ ನಡುವೆ ಆರೋಗ್ಯಕ್ಕೆ ಯಾವುದು ಉತ್ತಮ ಎಂಬುದನ್ನು ನೋಡಿಯೇ ಬಿಡೋಣ.

ಮೊಸರು ಮತ್ತು ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
ಮೊಸರು ಮತ್ತು ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?

ಮಜ್ಜಿಗೆ ಮತ್ತು ಮೊಸರು ಅತ್ಯಂತ ಆರೋಗ್ಯಕರ ಡೈರಿ ಉತ್ಪನ್ನಗಳಾಗಿವೆ. ಕೆಲವರು ಮೊಸರನ್ನು ತುಂಬಾ ಇಷ್ಟಪಟ್ಟು ಸೇವಿಸಿದರೆ, ಇನ್ನೂ ಕೆಲವರು ಮಜ್ಜಿಗೆ ಇಷ್ಟಪಡುತ್ತಾರೆ. ಇದೀಗಂತೂ ರಣ ಬಿಸಿಲು. ಬಿಸಿಲಿನ ತಾಪಕ್ಕೆ ಬಾಯಾರಿಕೆ ಆಗುವುದು ಸಹಜ. ಹೀಗಾಗಿ ಬಹುತೇಕರು ಮಜ್ಜಿಗೆಯ ಮೊರೆ ಹೋಗುತ್ತಾರೆ. ಇದರಿಂದ ನಮ್ಮ ದೇಹಕ್ಕೂ ಅನೇಕ ಉಪಯೋಗಗಳಿವೆ.

ಟ್ರೆಂಡಿಂಗ್​ ಸುದ್ದಿ

ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್‌ ಇದ್ದರೆ; ಮೊಸರಿನಲ್ಲಿ ಸೋಡಿಯಂ, ಪ್ರೋಟೀನ್, ಕ್ಯಾಲ್ಸಿಯಂ ಹೆಚ್ಚಿದೆ. ಈ ಎರಡೂ ಆಹಾರ ಪದಾರ್ಥಗಳು ಭಾರತೀಯ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿವೆ. ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ಸಹ ಇವು ಸಹಾಯ ಮಾಡುತ್ತದೆ. ಹಾಗಿದ್ದರೆ ಮಜ್ಜಿಗೆ ಉತ್ತಮವೋ, ಮೊಸರು ಉತ್ತಮವೋ? ಇವೆರಡರಲ್ಲಿ ಯಾವುದು ಉತ್ತಮ ಎಂಬುದನ್ನು ನೋಡೋಣ.

ಮಜ್ಜಿಗೆ ಆರೋಗ್ಯಕ್ಕೆ ಉತ್ತಮವೇ?

ಮೊಸರನ್ನು ಚೆನ್ನಾಗಿ ಕಡೆದರೆ ಬೆಣ್ಣೆ ಹೊರಬರುತ್ತದೆ. ಬೆಣ್ಣೆ ಬಂದ ಬಳಿಕ ಉಳಿಯುವ ದ್ರವವೇ ಮಜ್ಜಿಗೆ. ಸಾಮಾನ್ಯವಾಗಿ ನಮ್ಮಲ್ಲಿ ಜನರು ಮಜ್ಜಿಗೆಗೆ ಚಿಟಿಕೆ ಉಪ್ಪು, ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಚಾಟ್ ಮಸಾಲವನ್ನು ಮಿಕ್ಸ್ ಮಾಡಿ ಕುಡಿಯುತ್ತಾರೆ. ಇನ್ನೂ ಕೆಲವರು ಮಜ್ಜಿಗೆಗೆ ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಅನ್ನದ ಜೊತೆಗೆ ಮಜ್ಜಿಗೆ ಅನ್ನದ ರೂಪದಲ್ಲಿ ಸವಿಯುತ್ತಾರೆ.

ಇದನ್ನೂ ಓದಿ | Ringworm: ಬೇಸಿಗೆಯಲ್ಲಿ ಚರ್ಮದ ಕಿರಿಕಿರಿಗೆ ಕಾರಣವಾಗುವ ರಿಂಗ್‌ವರ್ಮ್‌ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು

ಬಾಯಿ ಚಪಲಕ್ಕೆ ಮಾತ್ರವಲ್ಲದೆ, ಮಜ್ಜಿಗೆಯು ಅಗತ್ಯ ದ್ರವಗಳನ್ನು ಒದಗಿಸುವ ಮೂಲಕ ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕವು ಮೂಳೆಗಳಿಗೆ ಅವಶ್ಯಕವಾಗಿದೆ. ಕಡಿಮೆ ಕ್ಯಾಲರಿ ಮಜ್ಜಿಗೆಯನ್ನು ಸೇವಿಸಿದರೆ, ನೀವು ತೂಕ ಕಳೆದುಕೊಳ್ಳಬಹುದು. ಹೆಚ್ಚು ಕೊಬ್ಬಿನಂಶ ಹೊಂದಿರುವ ಹಾಲಿಗಿಂತ ಮಜ್ಜಿಗೆಯು ಉತ್ತಮ ಆಯ್ಕೆಯಾಗಿದೆ. ಮಜ್ಜಿಗೆ ಸೇವನೆಯು ದೇಹವನ್ನು ತಂಪಾಗಿಸುತ್ತದೆ. ಹೀಗಾಗಿ ಬೇಸಿಗೆಯ ಬಿಸಿಲಿನ ಶಾಖದಿಂದ ಹೊರಬರಲು ಮಜ್ಜಿಗೆ ಸೇವಿಸುತ್ತಾರೆ. ಇದರಲ್ಲಿರುವ ಪ್ರೋಬಯಾಟಿಕ್ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಸರು ನಮ್ಮ ದೇಹಕ್ಕೆ ಎಷ್ಟು ಉತ್ತಮ?

ಹಾಲನ್ನು ಹೆಪ್ಪುಗಟ್ಟಿಸಿ ಮೊಸರನ್ನು ತಯಾರಿಸಲಾಗುತ್ತದೆ. ನಿಂಬೆ ರಸ ಅಥವಾ ವಿನೆಗರ್ ಅನ್ನು ಬಿಸಿ ಮಾಡಿ ತಣ್ಣಗಾಗಿರುವ ಹಾಲಿಗೆ ಸೇರಿಸಿದರೆ ಹಾಲೊಡೆದು ಮೊಸರಾಗುತ್ತದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಮತ್ತು ಪ್ರೋಬಯಾಟಿಕ್‌ಗಳಿವೆ. ಇದು ನಮ್ಮ ಕರುಳಿಗೆ ಬಹಳ ಒಳ್ಳೆಯದು. ಅದನ್ನು ಆರೋಗ್ಯಕರವಾಗಿರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ಹೆಚ್ಚಿನ ಪ್ರೊಟೀನ್ ಅಂಶವು ಸ್ನಾಯುವಿನ ಆರೋಗ್ಯ ಮತ್ತು ಒಟ್ಟಾರೆ ದೇಹದ ಚಲನೆಗೆ ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ಕ್ಯಾಲ್ಸಿಯಂ ಪೋಷಕಾಂಶವು ಹಲ್ಲು ಮತ್ತು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಮೊಸರಿನ ನಿಯಮಿತ ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ.

ನಿಮ್ಮ ದೇಹದ ಅಗತ್ಯಗಳನ್ನು ಅವಲಂಬಿಸಿ, ನಿಮ್ಮ ಆಹಾರದಲ್ಲಿ ಮೊಸರು ಮತ್ತು ಮಜ್ಜಿಗೆ ಎರಡನ್ನೂ ಸೇರಿಸುವುದನ್ನು ನೀವು ಪರಿಗಣಿಸಬಹುದು. ಒಂದು ವೇಳೆ ನಿಮಗೆ ಮೊಸರು ಮಾತ್ರ ಇಷ್ಟವಿದ್ದಲ್ಲಿ ಅದನ್ನಷ್ಟೇ ಸೇವಿಸಬಹುದು. ಅಥವಾ ಮಜ್ಜಿಗೆಯನ್ನಷ್ಟೇ ಸೇವಿಸಬಹುದು. ಎರಡೂ ಕೂಡ ದೇಹಕ್ಕೆ ಒಳ್ಳೆಯದು.