ಅಂಬೇಡ್ಕರ್ ವಿವಾದ; ಸಂಸತ್‌ ಆವರಣದಲ್ಲಿ ಹೈಡ್ರಾಮಾ, ರಾಹುಲ್ ಗಾಂಧಿ ತಳ್ಳಿದ್ದರಿಂದ ಐಸಿಯು ಸೇರಿದ ಬಿಜೆಪಿ ಸಂಸದ ಮುಕೇಶ್ ರಜಪೂತ್‌, ಆರೋಪ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಂಬೇಡ್ಕರ್ ವಿವಾದ; ಸಂಸತ್‌ ಆವರಣದಲ್ಲಿ ಹೈಡ್ರಾಮಾ, ರಾಹುಲ್ ಗಾಂಧಿ ತಳ್ಳಿದ್ದರಿಂದ ಐಸಿಯು ಸೇರಿದ ಬಿಜೆಪಿ ಸಂಸದ ಮುಕೇಶ್ ರಜಪೂತ್‌, ಆರೋಪ

ಅಂಬೇಡ್ಕರ್ ವಿವಾದ; ಸಂಸತ್‌ ಆವರಣದಲ್ಲಿ ಹೈಡ್ರಾಮಾ, ರಾಹುಲ್ ಗಾಂಧಿ ತಳ್ಳಿದ್ದರಿಂದ ಐಸಿಯು ಸೇರಿದ ಬಿಜೆಪಿ ಸಂಸದ ಮುಕೇಶ್ ರಜಪೂತ್‌, ಆರೋಪ

Ambedkar row: ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಸಂಸತ್‌ನ ಮಕರ ದ್ವಾರವೇರಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಬಿಜೆಪಿ ಸದಸ್ಯರೂ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಹುಲ್ ಗಾಂಧಿ ತಳ್ಳಿದ್ದರಿಂದ ಬಿಜೆಪಿ ಸಂಸದ ಮುಕೇಶ್ ರಜಪೂತ್‌ ಐಸಿಯು ಸೇರಿದರು ಎಂಬ ಆರೋಪ ಕೇಳಿಬಂದಿದೆ.

ವಿಪಕ್ಷ ಸಂಸದರು ಸಂಸತ್‌ನ ಮಕರ ದ್ವಾರದ ಮೇಲೇರಿ ಪ್ರತಿಭಟನೆ ನಡೆಸಿದ ದೃಶ್ಯ (ಎಡ ಚಿತ್ರ). ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡು ಚಿಕಿತ್ಸೆ ಪಡೆಯಿತ್ತಿರುವ ದೃಶ್ಯ (ಬಲ ಚಿತ್ರ)
ವಿಪಕ್ಷ ಸಂಸದರು ಸಂಸತ್‌ನ ಮಕರ ದ್ವಾರದ ಮೇಲೇರಿ ಪ್ರತಿಭಟನೆ ನಡೆಸಿದ ದೃಶ್ಯ (ಎಡ ಚಿತ್ರ). ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡು ಚಿಕಿತ್ಸೆ ಪಡೆಯಿತ್ತಿರುವ ದೃಶ್ಯ (ಬಲ ಚಿತ್ರ) (PTI images)

Ambedkar row: ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರವಾಗಿ ಶುರುವಾದ ರಾಜಕೀಯ ಕೆಸರೆರಚಾಟ ಪ್ರತಿಪಕ್ಷಗಳನ್ನು ಸಂಸತ್ತಿನ 'ಮಕರ ದ್ವಾರ'ದ ಮೇಲೆ ನಿಂತು ಪ್ರತಿಭಟಿಸುವಂತೆ ಮಾಡಿದೆ. ಇದರಿಂದಾಗಿ ಸಂಸತ್ ಆವರಣದಲ್ಲಿ ರಾಜಕೀಯ ಹೈಡ್ರಾಮಾನ ನಡೆದಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ತಳ್ಳುವಿಕೆಯ ಪರಿಣಾಮವಾಗಿ ಇಬ್ಬರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದರು ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಗೊಂಡಿರುವ ಬಿಜೆಪಿ ಸಂಸದರ ಪೈಕಿ ಮುಕೇಶ್‌ ರಜಪೂತ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ತಿಳಿಸಿದೆ.

ಅಂಬೇಡ್ಕರ್ ವಿವಾದ; ಸಂಸತ್ ಆವರಣದಲ್ಲಿ ಏನು ನಡೆಯಿತು

ರಾಜ್ಯಸಭೆಯಲ್ಲಿ ಅಮಿತ್ ಶಾ ಅವರು ಮಂಗಳವಾರ (ಡಿಸೆಂಬರ್ 18) ಬಿಆರ್ ಅಂಬೇಡ್ಕರ್ ಕುರಿತು ಮಾಡಿದ ಹೇಳಿಕೆಗಳು ಭಾರೀ ಗದ್ದಲ ಎಬ್ಬಿಸಿದ್ದು, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರವನ್ನು ಮೂಲೆಗುಂಪು ಮಾಡಲು ಮತ್ತು ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿವೆ. ಇಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಕಾಂಗ್ರೆಸ್ ನಾಯಕರು ಸಂಸತ್ ಆವರಣದಲ್ಲೂ ಪ್ರತಿಭಟನೆ ನಡೆಸಿದರು.

ಅಮಿತ್ ಶಾ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಇಂಡಿಯಾ ಬ್ಲಾಕ್‌ನ ಸಂಸದರು ಗೃಹ ಸಚಿವ ಅಮಿತ್ ಶಾ ಅವರ ಕ್ಷಮೆಯಾಚನೆ ಮತ್ತು ರಾಜೀನಾಮೆಗೆ ಒತ್ತಾಯಿಸುವ ಫಲಕಗಳೊಂದಿಗೆ ಗುರುವಾರ ಸಂಸತ್ತಿನ ಮಕರ ದ್ವಾರದ ಮೇಲೇರಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಂಸದ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ಮಕರ ದ್ವಾರದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದೇ ಸ್ಥಳದಲ್ಲಿ ಬಿಜೆಪಿ ಸಂಸದರು ಕೂಡ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿ ರಾಹುಲ್ ಗಾಂಧಿ ಬಿಜೆಪಿ ಸಂಸದರನ್ನು ಜೋರಾಗಿ ತಳ್ಳಿದ್ದರಿಂದಾಗಿ ನಾವು ಬಿದ್ದುಬಿಟ್ಟೆವು. ನಮಗೆ ಗಾಯಗಳಾಗಿವೆ ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ. ಅವರು ಚಿಕಿತ್ಸೆ ಪಡೆಯುತ್ತಿರುವ ದೃಶ್ಯ ವೈರಲ್ ಆಗಿದೆ.

"ನನ್ನ ಮೇಲೆ ಬಿದ್ದ ಸಂಸದರನ್ನು ರಾಹುಲ್ ಗಾಂಧಿ ತಳ್ಳಿದರು. ಆ ರಭಸಕ್ಕೆ ನಾನು ಕೆಳಗೆ ಬಿದ್ದೆ, ನಾನು ಮೆಟ್ಟಿಲುಗಳ ಬಳಿ ನಿಂತಿದ್ದೆ. ರಾಹುಲ್ ಗಾಂಧಿ ಬಂದು ನನ್ನ ಮೇಲೆ ಬಿದ್ದ ಸಂಸದರನ್ನು ತಳ್ಳಿದರು" ಎಂದು ಪ್ರತಾಪ್ ಚಂದ್ರ ಸಿಂಗ್ ಹೇಳಿದರು. ಗಾಲಿಕುರ್ಚಿ ಮೇಲೆ ಕುಳಿತ ಸಾರಂಗಿ ಅವರು ರಕ್ತ ಸೋರುತ್ತಿದ್ದ ಗಾಯದ ಮೇಲೆ ಕರವಸ್ತ್ರವನ್ನು ವೈದ್ಯಕೀಯ ಸಿಬ್ಬಂದಿ ಹಿಡಿದ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.

ಬಿಜೆಪಿ ಸಂಸದರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಿಜೆಪಿ ಸಂಸದರು ನನ್ನನ್ನು ತಡೆಯಲು ಪ್ರಯತ್ನಿಸಿದರು. ಬೆದರಿಸಿದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.

"ನಾನು ಸಂಸತ್ತಿನ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಆಗ ಬಿಜೆಪಿ ಸಂಸದರು ನನ್ನನ್ನು ತಡೆಯಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ಈ ಘಟನೆ ಸಂಭವಿಸಿದೆ. ಇದು ಸಂಸತ್ತಿನ ಭವನದ ಪ್ರವೇಶ ದ್ವಾರದಲ್ಲಾಗಿದೆ. ಸಂಸತ್ ಪ್ರವೇಶಿಸುವುದಕ್ಕೆ ನಮಗೂ ಹಕ್ಕಿದೆ" ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.