ಮನದ ಮಾತು: ಮಕ್ಕಳ ಉಗುರು ಕಚ್ಚುವ ದುರಭ್ಯಾಸ ಬಿಡಿಸಲೂ ಇವೆ ಹಲವು ಟ್ರಿಕ್ಸ್, ಉಗುರು ಕಚ್ಚುವ ಅಭ್ಯಾಸದ ಹಿಂದೆ ಇಷ್ಟೆಲ್ಲಾ ಸಮಸ್ಯೆಗಳು ಇರಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ಮನದ ಮಾತು: ಮಕ್ಕಳ ಉಗುರು ಕಚ್ಚುವ ದುರಭ್ಯಾಸ ಬಿಡಿಸಲೂ ಇವೆ ಹಲವು ಟ್ರಿಕ್ಸ್, ಉಗುರು ಕಚ್ಚುವ ಅಭ್ಯಾಸದ ಹಿಂದೆ ಇಷ್ಟೆಲ್ಲಾ ಸಮಸ್ಯೆಗಳು ಇರಬಹುದು

ಮನದ ಮಾತು: ಮಕ್ಕಳ ಉಗುರು ಕಚ್ಚುವ ದುರಭ್ಯಾಸ ಬಿಡಿಸಲೂ ಇವೆ ಹಲವು ಟ್ರಿಕ್ಸ್, ಉಗುರು ಕಚ್ಚುವ ಅಭ್ಯಾಸದ ಹಿಂದೆ ಇಷ್ಟೆಲ್ಲಾ ಸಮಸ್ಯೆಗಳು ಇರಬಹುದು

How to stop biting your nails: ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಕಾಣಿಸಿಕೊಳ್ಳುವ ಉಗುರು ಕಚ್ಚುವ ದುರಭ್ಯಾಸದಿಂದ ಹೊರಬರುವುದು ಹೇಗೆ? ಎಷ್ಟೋ ಸಲ ನೀವೂ ಇಂಥ ಪ್ರಯತ್ನ ಮಾಡಿ ವಿಫಲರಾಗಿರಬಹುದು. ಉಗುರು ಕಚ್ಚುವ ಅಭ್ಯಾಸದಿಂದ ಮುಕ್ತರಾಗುವುದು ಹೇಗೆ ಎಂದು ಈ ಸಂಚಿಕೆಯಲ್ಲಿ ಉತ್ತರಿಸಿದ್ದಾರೆ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್.

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್

ಪ್ರಶ್ನೆ: 1) ಕೆಲವರು ಉಗುರು ಕಚ್ಚುತ್ತಲೇ ಇರುತ್ತಾರೆ. ನಿಜ ಅಂದ್ರೆ ಮೇಡಂ, ನನ್ನ ಮಗಳೂ ಹೀಗೆಯೇ ಮಾಡ್ತಿದ್ದಾಳೆ. ಅವಳು ಬಿಡಬೇಕು ಅಂದುಕೊಂಡರೂ ಬಿಡಲು ಆಗ್ತಿಲ್ಲ. ಏಕೆ ಹೀಗೆ? ಇದು ಕಾಯಿಲೆಯೇ? -ಗಾಯತ್ರಿ, ಕತ್ರಿಗುಪ್ಪೆ, ಬೆಂಗಳೂರು

ಉತ್ತರ: ಉಗುರು ಕಚ್ಚುವ ಚಟ ಒಬ್ಬ ವ್ಯಕ್ತಿಯ ಆತಂಕ, ಒತ್ತಡ, ಬೇಸರ ಮತ್ತು ಭಯ ಸೂಚಿಸುವ ನಡವಳಿಕೆಯಾಗಿರಬಹುದು. ಇದು ಪುನರಾವರ್ತಿತ ವರ್ತನೆ / ನಡವಳಿಕೆಯಾಗಿದ್ದು, ಕಠಿಣ ಭಾವನೆಗಳನ್ನು ನಿಭಾಯಿಸಲು ವ್ಯಕ್ತಿ ಈ ಮಾರ್ಗ ಆರಿಸಿಕೊಂಡಿರಬಹುದು. ಹಸಿವೆಯಾದಾಗ, ಬೇಜಾರಾದಾಗ ಕೂಡ ಉಗುರು ಕಚ್ಚುವುದು ಮತ್ತು ಕೂದಲು ಸುತ್ತುವುದು ಸಾಮಾನ್ಯ ಸಂಗತಿ. ಇದರ ಬಗ್ಗೆ ಚಿಂತೆ ಮಾಡಬೇಡಿ. ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರವಿದೆ. ಮೊದಲು ಸಮಸ್ಯೆಯ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳಿ. ನಂತರ ಈ ಕೆಳಕಂಡ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ.

ಏಕೆ ಉಗುರು ಕಚ್ಚುವ ಚಟ ರೂಢಿಯಾಗುತ್ತದೆ?

1) ಈ ಚಟವು ಚಿಕ್ಕ ವಯಸ್ಸಿನಿಂದಲೇ ಬೆಳೆಯುತ್ತದೆ. ಸಣ್ಣಪುಟ್ಟ ಭಯ, ಮತ್ತು ಆತಂಕದ ಸನ್ನಿವೇಶಗಳನ್ನು ಎದುರಿಸಬೇಕಾದರೆ ಮಕ್ಕಳು ಉಗುರು ಕಚ್ಚಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಅಥವಾ ನಿಭಾಯಿಸುತ್ತಾರೆ. ಈ ರೀತಿ ಮಾಡುವುದರಿಂದ ಒಮ್ಮೊಮ್ಮೆ ಅವರ ಆತಂಕವೂ ಕಡಿಮೆಯಾಗಬಹುದು.

2) ಬಹುತೇಕ ಮಕ್ಕಳು ಉಗುರು ಕಚ್ಚುವ ಕ್ರಿಯೆಯನ್ನು ತಮಗೆ ಗೊತ್ತಿಲ್ಲದೆ ಮಾಡುತ್ತಾರೆ. ನಂತರ ಇದು ಅವರಿಗೆ ಅಭ್ಯಾಸ / ಹವ್ಯಾಸ ಆಗುತ್ತದೆ.

3) ಈ ಚಟವು ಪದೇಪದೆ ಮಾಡುವ ನಡವಳಿಕೆಯಾದ್ದರಿಂದ ಇದನ್ನು ಒಂದು ರೀತಿಯ ಗೀಳು, ಅಂದರೆ (Obsessive Compulsive Order - OCD) ಎಂದು ಕರೆಯಲಾಗುತ್ತದೆ. ಇದನ್ನು ಬೇನೆ ಮನೋರೋಗ ಎಂದೂ ಕರೆಯಬಹುದು.

4) ಯೋಚನೆಗಳ ಕಾರಣದಿಂದ ಗೀಳು ಉಂಟಾಗುತ್ತದೆ. ಕೈ ಗಲೀಜಾಗಿದೆ ಎಂಬ ಯೋಚನೆ ಇರುವವರು ಪದೇಪದೇ ಕೈ ತೊಳೆಯುತ್ತಾರೆ. ಬ್ಯಾಂಕಿನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುವವರು ಎಣಿಸಿದ ನೋಟುಗಳನ್ನೇ ಪದೇಪದೇ ಎಣಿಸುವುದನ್ನು ನೀವು ಗಮನಿಸಿರಬಹುದು. ಇವೆಲ್ಲವೂ ಹಾಗೆಯೇ.

ಉಗುರು ಕಚ್ಚುವ ಅಭ್ಯಾಸ ನಿಯಂತ್ರಣಕ್ಕೆ ಬಾರದಿದ್ದರೆ ಏನಾಗುತ್ತದೆ?

1) ಉಗುರು ಕಚ್ಚುವುದು ಹಲವು ಗೊಂದಲಗಳಿಗೂ ಕಾರಣ ಆಗಬಹುದು.

2) ವೈಯಕ್ತಿಕ ಸ್ವಚ್ಚತೆಗೆ ಅಡ್ಡಿಯಾಗಬಹುದು. ಉಗುರು ಕಚ್ಚುವುದರಿಂದ ಆನಾರೋಗ್ಯವೂ ಉಂಟಾಗಬಹುದು. ದೇಹಕ್ಕೆ ಸೋಂಕುಗಳು ತಾಕಬಹುದು

3) ಹಲ್ಲುಗಳ ಮತ್ತು ವಸಡಿನ ಸಮಸ್ಯೆ ಆಗಬಹುದು. ಉಗುರಿಗೆ ಸಂಬಧಪಟ್ಟ ಕಾಯಿಲೆಗಳು ಬರಬಹುದು.

4) ಆತ್ಮವಿಶ್ವಾಸ ಮತ್ತು ಗೌರವದ ಕೊರತೆಯಾಗಬಹುದು

5) ಸ್ನೆೇಹ, ಸಂಬಂಧಗಳಲ್ಲಿ ಅಪಮಾನ, ಅಗೌರವದಿಂದ ಮನಸ್ಥಾಪಗಳಾಗಬಹುದು

6) ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು

ಮಕ್ಕಳಲ್ಲಿ ಉಗುರು ಕಚ್ಚುವ ಸನ್ನಿವೇಶಗಳು ಸಾಮಾನ್ಯವಾಗಿ ಹೇಗಿರುತ್ತವೆ?

1) ಪರೀಕ್ಷೆಯ ಸಿದ್ಧತೆ ಸಮಯದಲ್ಲಿ

2) ಸ್ಪರ್ಧೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ

3) ಯಾವುದೇ ತಪ್ಪು ಮಾಡಿರುವುದು ತಿಳಿದಿದ್ದಾಗ ಹೆದರಿಕೆಯಿಂದಾಗಿ

4) ಫಲಿತಾಂಶದ ನಿರೀಕ್ಷೆಯಲ್ಲಿದ್ದಾಗ

5) ಕಡಿಮೆ ಅಂಕಗಳನ್ನು ಗಳಿಸಿದಾಗ

6) ಪರೀಕ್ಷೆ / ಸ್ಪರ್ಧೆಯಲ್ಲಿ ವಿಫಲವಾದಾಗ

7) ಅಸಹಾಯಕತೆ ಮತ್ತು ಸಿಟ್ಟು ಬಂದಾಗ

8) ಒಂಟಿಯಾಗಿದ್ದಾಗ, ಬೇಸರವಾದಾಗ

ಹೀಗೆ ಹಲವು ಸಂದರ್ಭಗಳಲ್ಲಿ ಮಕ್ಕಳಲ್ಲಿ ಉಗುರು ಕಚ್ಚುವ ಪ್ರವೃತ್ತಿ ಕಂಡುಬರಬಹುದು.

ವಯಸ್ಕರಲ್ಲಿ ಉಗುರ ಕಚ್ಚುವ ಅಭ್ಯಾಸ ಆರಂಭವಾಗುವುವುದು ಏಕೆ?

1) ವಿವಾಹದ ಸಮಯದಲ್ಲಿ. ಬಾಳ ಸಂಗಾತಿ ಹುಡುಕುವ ವೇಳೆ ಆತಂಕದಿಂದ ಮಾಡಬಹುದು

2) ಉದ್ಯೋಗಸ್ಥರು ಪ್ರೆಸೆಂಟೇಶನ್‌ ಪ್ರಸ್ತುತಪಡಿಸುವ ಸಂದರ್ಭದಲ್ಲಿ, ಸಿದ್ಧತೆ ಮಾಡಿಕೊಳ್ಳುವಾಗ ಆತಂಕದಿಂದ ಇಂತ ಸನ್ನಿವೇಶ ಬರಬಹುದು

3) ಪ್ರೇಮ ವೈಫಲ್ಯ ಸಂಧರ್ಭದಲ್ಲಿ

4) ಒಂಟಿತನ, ದುಗುಡ, ಅಸಹಾಯಕತೆ.. ಇತ್ಯಾದಿ ಕಾರಣಗಳು ಇರುತ್ತವೆ.

ಉಗುರು ಕಚ್ಚುವ ಸಮಸ್ಯೆಗೆ ಏನು ಪರಿಹಾರ?

1) ಉಗುರುಗಳು ಆದಷ್ಟು ಚಿಕ್ಕದಾಗಿ ಇರಲಿ

2) ಈ ಚಟವನ್ನು ಆರೋಗ್ಯಕರ ಅಭ್ಯಾಸ ಅಥವಾ ಹವ್ಯಾಸದಿಂದ ಬದಲುಮಾಡಿ.

ಉದಾ: ಯಾವ ಸಮಯ ಸಂದರ್ಭದಲ್ಲಿ ಉಗುರು ಕಚ್ಚಬೇಕು ಎನಿಸುತ್ತದೆಯೋ ಆಗ ಚಾಕೊಲೇಟ್, ಅಡಿಕೆಯಂಥ ಪದಾಥ೯ಗಳನ್ನು ಅಗಿಯಿರಿ. ಒತ್ತಡ ಕಡಿಮೆ ಮಾಡಿಕೊಳ್ಳುವ ಚೆಡನ್ನು (Stress Ball) ಬೆರಳುಗಳಿಂದ ಸ್ವಲ್ಪ ಸಮಯ ಹಿಸುಕಿ. ಸಾಧ್ಯವಿದ್ದರೆ ತಕ್ಷಣ ಜಾಗ ಬದಲಾಯಿಸಿ.

3) ಮನಸ್ಸನ್ನು ಉಲ್ಲಾಸಗೊಳಿಸುವ ಧ್ಯಾನ, ಯೋಗ, ಉಪವಾಸ, ಪ್ರಕೃತಿ ವೀಕ್ಷಣೆ, ಸಂಗೀತ, ದೀರ್ಘ ಉಸಿರಾಟ ಇವು ವ್ಯಕ್ತಿಯ ಭಯ, ಆತಂಕ, ಬೇಸರವನ್ನು ನಿವಾರಿಸಬಲ್ಲವು

4) ನಿಮಗೆ ಉಗುರು ಕಚ್ಚುವುದಕ್ಕೆ ಯಾವ ಸಮಯ ಸಂದರ್ಭಗಳು ಪ್ರಚೋದನೆ ಮಾಡುತ್ತವೆ ಎಂದು (triggers) ಗುರುತಿಸಿ. ಅವುಗಳನ್ನು ತಡೆಗಟ್ಟುವುದಕ್ಕೆ ಪ್ರಯತ್ನಿಸಬೇಕು. ಸಮಸ್ಯೆಗಳನ್ನು ನಿಭಾಯಿಸುವ ಮತ್ತು ವ್ಯಕ್ತಪಡಿಸುವ ರೀತಿಗಳನ್ನು ತಿಳಿಯಬೇಕು. ಕಾರಣಗಳ ಕುರಿತು ಮಾತನಾಡಬೇಕು.

5) ಮನೋವಿಶ್ಲೇಷಣೆ, ಆಪ್ತಸಮಾಲೋಚನೆಯ ಮಾರ್ಗದರ್ಶನ ತೆಗೆದುಕೊಳ್ಳಿ. ವೈದ್ಯರನ್ನು ಸಂಪರ್ಕಿಸಿ. ಅಗತ್ಯವಿದ್ದರೆ, ವೈದ್ಯರು ಶಿಫಾರಸು ಮಾಡಿದರೆ ಔಷಧಿ ಸೇವಿಸಬೇಕಾಗಬಹುದು.

(ಎಲ್ಲರ ಹೆಸರು ಮತ್ತು ಊರು ಬದಲಿಸಲಾಗಿದೆ)

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಇನ್ನು ಮುಂದೆ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

Whats_app_banner