ಕನ್ನಡ ಸುದ್ದಿ  /  ಜೀವನಶೈಲಿ  /  Mysterious Temple: ಈ ದೇವಸ್ಥಾನಕ್ಕೆ ಕಾಲಿಡಲು ಹೆದರುತ್ತಾರೆ ರಾಜಕಾರಣಿಗಳು; ತಮಿಳುನಾಡು ದೇಗುಲದ ಹಿಂದಿದೆ ನಿಗೂಢ ರಹಸ್ಯ

Mysterious Temple: ಈ ದೇವಸ್ಥಾನಕ್ಕೆ ಕಾಲಿಡಲು ಹೆದರುತ್ತಾರೆ ರಾಜಕಾರಣಿಗಳು; ತಮಿಳುನಾಡು ದೇಗುಲದ ಹಿಂದಿದೆ ನಿಗೂಢ ರಹಸ್ಯ

Tamilnadu Temple: ದೇಗುಲಗಳಿಗೆ ರಾಜಕಾರಣಿಗಳು ಭೇಟಿ ನೀಡುವುದು ಹೊಸ ವಿಚಾರವೇನಲ್ಲ. ಆದರೆ ತಮಿಳುನಾಡಿನ ತಂಜಾವೂರು ದೇವಸ್ಥಾನಕ್ಕೆ ಬರಲು ಯಾವುದೇ ರಾಜಕಾರಣಿ ಧೈರ್ಯ ಮಾಡುವುದಿಲ್ಲ. ಆದರೂ ಧೈರ್ಯ ಮಾಡಿ ಈ ದೇಗುಲ ಪ್ರವೇಶಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೆಲವೇ ದಿನಗಳಲ್ಲಿ ಹತ್ಯೆಗೀಡಾಗಿದ್ದರು.

ತಮಿಳುನಾಡು ತಂಜಾವೂರಿನ ಬೃಹದೀಶ್ವರ ದೇವಸ್ಥಾನ
ತಮಿಳುನಾಡು ತಂಜಾವೂರಿನ ಬೃಹದೀಶ್ವರ ದೇವಸ್ಥಾನ (PC: Pixabay)

Tamilnadu Temple: ಭಾರತದಲ್ಲಿ ದೇಗುಲಗಳಿಗೆ ಯಾವುದೇ ರೀತಿಯ ಕೊರತೆಯಿಲ್ಲ. ಪ್ರತಿಯೊಂದು ದೇಗುಲವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಭಾರತದಲ್ಲಿ ಅನೇಕ ದೇವಾಲಯಗಳು ತನ್ನ ಪುರಾಣದ ಕತೆಗಳ ಮೂಲಕವೇ ಪ್ರತೀತಿ ಪಡೆದಿವೆ. ಇದರ ಜೊತೆ ಕೆಲವು ನಿಗೂಢ ದೇವಾಲಯಗಳೂ ಸಹ ಇವೆ. ಈ ದೇವಾಲಯದಲ್ಲಿ ನಿಗೂಢತೆ ಎಷ್ಟರ ಮಟ್ಟಿಗೆ ಇದೆ ಎಂದರೆ ವಿಜ್ಞಾನಿಗಳಿಗೂ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹದ್ದೇ ಒಂದು ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

ವೈಶಿಷ್ಟ್ಯತೆ, ನಿಗೂಢತೆಗೆ ಸಾಕ್ಷಿಯಾದ ದೇವಾಲಯ

ಈ ದೇವಾಲಯವು ತನ್ನ ವೈಶಿಷ್ಟ್ಯತೆ ಹಾಗೂ ನಿಗೂಢತೆಯಿಂದಲೇ ಹಲವರ ಗಮನ ಸೆಳೆಯುತ್ತಲೇ ಇದೆ. ಅಂದಹಾಗೆ ಈ ದೇಗುಲ ಇರುವುದು ತಮಿಳುನಾಡಿನ ತಂಜಾವೂರಿನಲ್ಲಿ. ಇಲ್ಲಿರುವ ಬೃಹದೀಶ್ವರ ದೇಗುಲವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಈ ದೇವಾಲಯದ ವಾಸ್ತುಶಿಲ್ಪ ಎಷ್ಟು ವಿಶಿಷ್ಟವಾಗಿದೆಯೆಂದರೆ ದೇವಾಲಯದ ನೆರಳು ಯಾವುದೇ ಸಮಯದಲ್ಲೂ ನೆಲದ ಮೇಲೆ ಬೀಳುವುದೇ ಇಲ್ಲ. ಅಂತಹ ಯಾವ ವಾಸ್ತುಶಿಲ್ಪವನ್ನು ಆಧರಿಸಿ ಈ ದೇಗುಲ ನಿರ್ಮಾಣ ಮಾಡಲಾಗಿದೆ ಎನ್ನುವುದು ಇಂದಿಗೂ ಯಾರಿಗೂ ಅರ್ಥವಾಗಿಲ್ಲ.

ಈ ದೇವಾಲಯದ ಬಗ್ಗೆ ಇನ್ನೂ ಒಂದು ಕುತೂಹಲಕಾರಿ ವಿಚಾರವಿದೆ. ಅದೇನೆಂದರೆ ಯಾವುದೇ ರಾಜಕಾರಣಿಗಳು ಈ ದೇವಸ್ಥಾನಕ್ಕೆ ಬರುವ ಧೈರ್ಯ ಮಾಡುವುದೇ ಇಲ್ಲ. 1980 ರಿಂದಲೂ ಈ ಸಂಪ್ರದಾಯ ನಡೆದುಕೊಂಡು ಬರುತ್ತಲೇ ಇದೆ. ಪೂರ್ವ ದಿಕ್ಕಿನಲ್ಲಿರುವ ಮುಖ್ಯದ್ವಾರದ ಮೂಲಕ ಈ ದೇವಾಲಯ ಪ್ರವೇಶಿಸಿದರೆ ವ್ಯಕ್ತಿಯು ತನ್ನ ಶಕ್ತಿ ಅಥವಾ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿ ಯಾವುದೇ ರಾಜಕಾರಣಿಗಳು ಈ ಊರಿಗೆ ಬಂದರೂ ದೇವಾಲಯಕ್ಕೆ ಮಾತ್ರ ಕಾಲಿಡುವುದಿಲ್ಲ.

ಈ ದೇಗುಲದಲ್ಲಿ ನಿಗೂಢ ನಂಬಿಕೆಯಿರಲು ಕಾರಣಗಳು

ಮಾಜಿ ಪ್ರಧಾನಿ ಇಂದಿರಾ ಗಾಂದಿ ದೆಹಲಿಯ ತಮ್ಮ ಅಧಿಕೃತ ನಿವಾಸದ ಬಳಿಯಲ್ಲಿ ಹತ್ಯೆಗೀಡಾಗಿದ್ದು ತಿಳಿದಿರುವ ವಿಚಾರ. ಆದರೆ ಇಂದಿರಾ ಗಾಂಧಿ ಸಾಯುವ ಕೆಲವೇ ವಾರಗಳ ಮುನ್ನ ತಂಜಾವೂರಿನ ಈ ದೇವಾಲಯಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ದೇಗುಲಕ್ಕೆ ಭೇಟಿ ನೀಡಿದ ಬಳಿಕ ಇಂದಿರಾ ಗಾಂಧಿ ಹತ್ಯೆಗೀಡಾಗಿದ್ದರು. ಇನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂಜಿಆರ್​​​ ಕೂಡಾ ಈ ದೇವಾಲಯದ ಮುಖ್ಯದ್ವಾರ ಪ್ರವೇಶಿಸಿದ್ದರು. ಇದಾದ ಬಳಿಕ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. ಮೂರು ವರ್ಷಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದ ಎಂಜಿಆರ್​ ರಾಜ್ಯದ ಸಿಎಂ ಆಗಿದ್ದಾಗಲೇ 1987ರಲ್ಲಿ ನಿಧನರಾಗಿದ್ದರು.

ಈ ಸಾಕ್ಷ್ಯಗಳು ಇಲ್ಲಿಗೆ ಮುಗಿಯುವುದಿಲ್ಲ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ 2010ರ ಸೆಪ್ಟೆಂಬರ್​ ತಿಂಗಳಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಇವರು ದೇಗುಲದ ಮುಖ್ಯದ್ವಾರದ ಮೂಲಕ ಪ್ರವೇಶ ಮಾಡಿರಲಿಲ್ಲ. ದೇವಾಲಯಕ್ಕೆ ಮುಖ್ಯದ್ವಾರದ ಮೂಲಕ ಪ್ರವೇಶಿಸಿದ ರಾಜಕಾರಣಿಗಳ ಕತೆಯನ್ನು ಕೇಳಿದ ಬಳಿಕ ಕರುಣಾನಿಧಿ ಬದಿಯ ದ್ವಾರದಿಂದ ಶಿವನ ದರ್ಶನವನ್ನು ಮಾಡಿದ್ದರು. ಇನ್ನು ಈ ದೇಗುಲವನ್ನು ವಿಶ್ವದ ಅತೀದೊಡ್ಡ ಗ್ರೈನೇಟ್​​ ದೇವಾಲಯವಾಗಿದೆ. ಈ ದೇವಾಲಯದ ಮುಖ್ಯದ್ವಾರದ ಮೂಲಕ ಪ್ರವೇಶಿಸುತ್ತಿದ್ದಂತೆಯೇ ನಿಮಗೆ ದೊಡ್ಡದಾದ ನಂದಿ ವಿಗ್ರಹ ಕಾಣಿಸಲಿದೆ. ಇದು ದಕ್ಷಿಣ ಭಾರತದ ಅತೀ ದೊಡ್ಡ ಏಕಶಿಲಾ ನಂದಿ ಪ್ರತಿಮೆಯಾಗಿದೆ.

ಚೋಳರು ನಿರ್ಮಿಸಿರುವ ದೇವಾಲಯ

11ನೇ ಶತಮಾನದಲ್ಲಿ ಚೋಳರು ಈ ದೇಗುಲವನ್ನು ನಿರ್ಮಿಸಿದ್ದರು. 13.5 ಅಡಿ ಎತ್ತರ ಹಾಗೂ 60 ಅಡಿ ಅಗಲದ ಶಿವಲಿಂಗವು ದೇಗುಲದ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ಇಲ್ಲಿ ದಕ್ಷಿಣಾಮೂರ್ತಿ, ಸೂರ್ಯ ಹಾಗೂ ಚಂದ್ರಮೂರ್ತಿಗಳಿವೆ. ಅಷ್ಟ ದಿಕ್ಪಾಲಕರ ವಿಗ್ರಹ ಕೂಡ ಇದೆ. ಇದು ಮಾತ್ರವಲ್ಲದೇ ದೇವಾಲಯದ ಮೇಲೆ ಸಾಂಪ್ರದಾಯಿಕ ಭರತನಾಟ್ಯ ಭಂಗಿಯಲ್ಲಿ 81 ವಿಗ್ರಹಗಳನ್ನು ಕೆತ್ತಲಾಗಿದೆ .

ಗಮನಿಸಿ: ಇದು ಪ್ರಚಲಿತ ನಂಬಿಕೆಗಳು ಮತ್ತು ಘಟನೆಗಳನ್ನು ಆಧರಿಸಿದ ಬರಹ. ಇದನ್ನು ನಂಬುವುದು, ಬಿಡುವುದು ಓದುಗರ ವಿವೇಚನೆಗೆ ಬಿಟ್ಟ ಸಂಗತಿ. ಈ ಬರಹದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು 'ಎಚ್‌ಟಿ ಕನ್ನಡ' ಪುಷ್ಟೀಕರಿಸುತ್ತದೆ ಎಂದು ಭಾವಿಸಬೇಕಿಲ್ಲ.