ಕನ್ನಡ ಸುದ್ದಿ  /  Lifestyle  /  How To Understand Women Tips To Men To Understand Women Mindset Of Women Yuva Mana Column Mgb

ಈ ಬರಹ ಗಂಡಸರಿಗಾಗಿ: ಅವಳೇಕೆ ಹೀಗೆ ಎನ್ನದಿರಿ, ಹೆಣ್ಣಿನ ಮನಸ್ಸು, ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಹೀಗೆ ಪ್ರಯತ್ನಿಸಿ; ಡಾ ರೂಪಾ ರಾವ್ ಬರಹ

ಹೆಣ್ಣಿನ ಅಂತರಂಗವೇ ದೊಡ್ಡ ಸಾಗರ, ಆ ಸಾಗರದಲ್ಲಿ ನಿಮಗೊಂದು ಶಾಶ್ವತ ಸ್ಥಾನ ಸಿಗಬೇಕಾದರೆ ಆಕೆಯನ್ನ ನೀವು ಅರ್ಥ ಮಾಡಿಕೊಳ್ಳಬೇಕು ಎಂದು ‘ಯುವ ಮನ’ ಅಂಕಣದಲ್ಲಿ ವಿವರಿಸಿದ್ದಾರೆ ಬೆಂಗಳೂರಿನ ಆಪ್ತ ಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್.

ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಹೇಗೆ (ಪ್ರಾತಿನಿಧಿಕ ಚಿತ್ರ)
ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಹೇಗೆ (ಪ್ರಾತಿನಿಧಿಕ ಚಿತ್ರ)

ಹೆಣ್ಣಿನ ಮನಸು ಒಂದು ಸಂಕೀರ್ಣ ಕಗ್ಗಂಟು. ಒಂದು ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಗಂಡಸರ ಮಿದುಳು ಹೆಂಗಸರ ಮಿದುಳಿಗಿಂತ ಶೇ 10 ರಷ್ಟು ದೊಡ್ಡದು ಮತ್ತು ಹೆಂಗಸರ ಮಿದುಳಿಗಿಂತ ಶೇ 4 ರಷ್ಟು ಹೆಚ್ಚು ನರಗಳನ್ನು ಹೊಂದಿವೆ. ಆದರೆ ಹೆಣ್ಣಿನ ಮಿದುಳು ಹೆಚ್ಚು ಫೋಲ್ಡ್ (ಮಡಿಕೆ) ಹೊಂದಿರುವುದರಿಂದ ಆಕೆ ಗಂಡಿಗಿಂತ ಹೆಚ್ಚು ವಿಷಯಗಳನ್ನು ಮಾತಾಡಬಲ್ಲಳು. ಹಾಗಾಗಿ ಅವಳು ಒಮ್ಮೆಗೆ ಸಾವಿರ ವಿಷಯಗಳನ್ನು ಯೋಚಿಸಬಲ್ಲಳು. ಅವಳ ಪ್ರತಿ ಚಲನೆಗೂ, ಮಾತಿಗೂ, ಭಾವನೆಗೂ ವಿವಿಧ ಅರ್ಥಗಳು ಇರುತ್ತವೆ. ಪುರುಷ ಮತ್ತು ಸ್ತ್ರೀ ಮಿದುಳುಗಳ ನಡುವಿನ ವ್ಯತ್ಯಾಸಗಳು ಅರಿವಿನ ಕಾರ್ಯಗಳು ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳಲ್ಲಿನ ವ್ಯತ್ಯಾಸಗಳನ್ನು ಉಂಟುಮಾಡುತ್ತವೆ. ಅವುಗಳಲ್ಲಿ ಮಹತ್ವದ್ದು ಕೆಳಗಿವನವುಗಳು.

1) ಅಭಿವ್ಯಕ್ತಿಶೀಲತೆ: ಹೆಣ್ಣು ಹೆಚ್ಚು ಭಾವನೆಗಳ ಅಭಿವ್ಯಕ್ತಿ (ಎಮೋಷನಲ್ ಎಕ್ಸ್‌ಪ್ರೆಶನ್) ಮತ್ತು ವಿಸ್ತಾರವಾದ ಭಾಷೆಯನ್ನು ಬಳಸುತ್ತಾಳೆ, ಭಾವನೆಗಳಲ್ಲಿ ಸಣ್ಣ, ಸೂಕ್ಷ್ಮ ವ್ಯತ್ಯಾಸಗಳನ್ನು ಕಂಡುಹಿಡಿಯಬಲ್ಲಳು. ಆದ್ದರಿಂದಲೇ ಗಂಡಿನ ಮುಖದಲ್ಲಿ ಆಗುವ ಸಣ್ಣ ಬದಲಾವಣೆಯನ್ನು ಅರಿಯಬಲ್ಲಳು. ಇದಕ್ಕೆ ಕಾರಣ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್, ಅಷ್ಟೇ ಅಲ್ಲ ಕೆಳಗಿನ ಬಹುತೇಕ ವಿಷಯಗಳಿಗೂ ಈ ಹಾರ್ಮೋನುಗಳೇ‌ ಕಾರಣ. ಈ ಋತುಚಕ್ರಕ್ಕೆ ಸಂಬಂಧಿಸಿದ ಹಾರ್ಮೋನುಗಳು ಮೂಡ್ ಮತ್ತು ಕಾರ್ಯಕ್ಷಮತೆಯ ಏರಿಳಿತಗಳೊಂದಿಗೆ ಸಂಬಂಧ ಹೊಂದಿವೆ. ಈಸ್ಟ್ರೊಜೆನ್ ನೆನಪಿನ ಶಕ್ತಿ ಮತ್ತು ಸಂವಹನ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಎನ್ನಬಹುದು.

ಹಾಗೆಯೇ ಹೆಣ್ಣಿಗೆ ಆಕ್ಟೀವ್ ಲಿಸನಿಂಗ್, ಅಂದರೆ‌ ಸಕ್ರಿಯವಾಗಿ ಕೇಳಿಸಿಕೊಳ್ಳುವಿಕೆ ಇಷ್ಟ. ತಾನೊಂದು ಮಾತಿನಲ್ಲಿ ತನ್ಮಯಳಾಗಿದ್ದೇನೆ ಎಂದು ಪ್ರದರ್ಶಿಸಲು ಮುಖದ ಭಾವನೆಗಳ‌ ಮೂಲಕ ಸಂವಹನ ತೋರಿಸುತ್ತಾಳೆ. ತಲೆ ಆಡಿಸುವುದು ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವುದು, ತನ್ನ ಕೈ ಅನ್ನು ಆಡಿಸಿ‌ ಮಾತಾಡುವುದು ಇತ್ಯಾದಿ. ಮಾತಿನ ನಡುವೆ ಆಕೆ ಒಂದೇ ಸಲ ಹತ್ತು ವಿಚಾರಗಳಿಗೆ ಜಂಪ್ ಆಗಬಲ್ಲಳು.

2) ಶರೀರ ಭಾಷೆ: ತಮ್ಮ ಸಹಾನುಭೂತಿಯನ್ನೋ ಅಥವಾ ಪ್ರೇಮವನ್ನೋ ವ್ಯಕ್ತಪಡಿಸಲು ಹೆಣ್ಣು ದೀರ್ಘಾವಧಿಯ ಕಣ್ಣಿನ ಸಂಪರ್ಕವನ್ನು ಹುಡುಕುತ್ತಾಳೆ

3) ಟೋನ್ ಮತ್ತು ಪಿಚ್: ಮಹಿಳೆಯರು ವಿಶಾಲವಾದ ಸ್ವರಗಳು ಮತ್ತು ಪಿಚ್‌ಗಳನ್ನು ಬಳಸುವುದರಿಂದ, ಇದು ಹೆಚ್ಚು ಸುಮಧುರ ಸಂಭಾಷಣೆಯ ಶೈಲಿಗೆ ಕೊಡುಗೆ ನೀಡುತ್ತದೆ. ಆದ್ದರಿಂದಲೇ ಆಕೆ ಮಧುರ ದನಿಯಲ್ಲಿ ಮಾತಾಡಬಲ್ಲಳು

4) ಭಾವನಾತ್ಮಕ ಅಭಿವ್ಯಕ್ತಿ: ಕೆಲವು ಅಧ್ಯಯನಗಳ ಪ್ರಕಾರ ಹೆಣ್ಣು ಬೇರೆಯವರ ಭಾವನೆಗಳಿಗೆ‌ ಸುಲಭವಾಗಿ ಕನೆಕ್ಟ್ ಆಗಬಲ್ಲಳು (ಎಂಪತಿ). ಆದ್ದರಿಂದಲೇ‌ ಬಹಳಷ್ಟು ಹೆಂಗಸರು ಸಿನಿಮಾ ಅಥವಾ ಧಾರಾವಾಹಿ ನೋಡುತ್ತಾ ಅಳುವುದು ಅಥವಾ ಆ ಪಾತ್ರಗಳಲ್ಲಿ ಒಂದಾಗಿ ಹೋಗುವುದು.

5) ಸಂಪರ್ಕ ಕೌಶಲ್ಯ: ಹೆಣ್ಣು ಜಾಸ್ತಿ ಮಾತನಾಡುತ್ತಾಳಾದ್ದರಿಂದ ಕೆಲವೊಂದು ಸಂಶೋಧನೆಗಳ‌‌ ಪ್ರಕಾರ ಅವಳಿಗೆ ಸಾಮಾಜಿಕ ಸಂಪರ್ಕ ಕೌಶಲ್ಯ ಜಾಸ್ತಿ. ನೀವು ಬೇಕಾದರೆ ನೋಡಿ ವರಮಹಾಲಕ್ಷ್ಮಿ, ಅರಿಶಿನ ಕುಂಕುಮ, ಕಿಟ್ಟಿ ಪಾರ್ಟಿ, ಗುಂಪು‌ಗುಂಪು ಪಾರ್ಟಿ ಹಿಂಗೆಲ್ಲಾ ಅವಳು ಸುಲಭವಾಗಿ ಬೆರೆಯಬಲ್ಲಳು. ಹೆಣ್ಣು ಯಾವುದೇ ಸಮಸ್ಯೆಗೆ ತನ್ನ ಇಂಟ್ಯೂಶನ್‌ನಿಂದ (ಹೊಳಹು) ಪರಿಹಾರ ಹುಡುಕುತ್ತಾಳೆ.‌ ಲಾಜಿಕ್‌ಗೆ ಯಾವತ್ತಿದ್ದರೂ ಎರಡನೇ ಸ್ಥಾನ.

ಹೆಣ್ಣಿಗೆ ಪ್ರಕೃತಿಯೇ ಕೊಟ್ಟಿರುವ ಇಷ್ಟೆಲ್ಲಾ ಇದ್ದರೂ‌ ಆಕೆಯ ಗಂಡ/ಪ್ರೇಮಿಗೆ ಮಾತ್ರ ಅವುಗಳು ಅರ್ಥಹೀನ ಅನ್ನಿಸುತ್ತದೆ. ಈ ನಡೆ, ನುಡಿ, ಚಲನೆ ಮತ್ತು ಅವಳ ಮನಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದಲ್ಲಿ ಮುಕ್ಕಾಲು ಪಾಲು ಅವಳನ್ನು ಗೆದ್ದಂತೆ. ಅಂತಹ ಕೆಲವು ಟಿಪ್ಸ್ ಇಲ್ಲಿವೆ.

1) ಅವಳ ಆಲೋಚನೆಗೆ ಮಹತ್ವ ಕೊಡಿ: ಗಂಡಿನ ಮೆದುಳು ಎಡಗಡೆಯ ಆದೇಶದಂತೆ ಕೆಲಸ ಮಾಡಲು ಮುಂದಾಗುತ್ತದೆ. ಎಡಬದಿಯ ಮೆದುಳು ತಾರ್ಕಿಕತೆಗೆ ಹೆಚ್ಚು ಒತ್ತು ನೀಡುತ್ತದೆ. ಆದರೆ ಹೆಣ್ಣಿನ ಮೆದುಳು ಎರಡೂ ಬದಿಯ ಆದೇಶವನ್ನೂ 4 ಪಟ್ಟು ಹೆಚ್ಚು ಸ್ವೀಕರಿಸುವದಲ್ಲದೆ ಅವುಗಳ ನಡುವೆ ಸಂವಹನ ಕ್ರಿಯೆಯನ್ನೂ ಗಂಡಿಗಿಂತ ನಾಲ್ಕು ಪಟ್ಟು ಹೆಚ್ಚು ಬೇಗ ನಡೆಸುತ್ತದೆ. ಆದ್ದರಿಂದಲೇ ಆಕೆ ಬಲು ಬೇಗ ಯೋಚಿಸಬಲ್ಲಳು, ಮತ್ತು ಬೇಗ ನಿರ್ಧಾರ ಕೈಗೊಳ್ಳುತ್ತಾಳೆ. ಪಟಪಟ ಮಾತಾಡಬಲ್ಲಳು.

2) ಹೆಣ್ಣು ಭಾವುಕ ಜೀವಿ: ಹೆಣ್ಣು ಭಾವನಾ ಜೀವಿಯಾಗಿರೋದಿಕ್ಕೆ ಆಕೆಯ ನರಮಂಡಲ ರಚನೆಯೂ ಒಂದು ಕಾರಣ, ನರಮಂಡಲದ ಲಿಂಬಿಕ್ ಎಂಬ ವ್ಯವಸ್ಥೆ ಈ ಭಾವನೆ, ಎಮೋಷನಲ್ ಅನುಬಂಧ, ಮತ್ತು ಭಾವಗಳಿಗೆ ಕಾರಣ, ಸರಾಸರಿ ಮಹಿಳೆಯರು ಗಂಡಸರಿಗಿಂತ ಆಳವಾದ ಲಿಂಬಿಕ್ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಆದ್ದರಿಂದಲೇ ಆಕೆ ಬಹಳ ಬೇಗ ತನ್ನ ಭಾವನೆ ವ್ಯಕ್ತಪಡಿಸುತ್ತಾಳೆ. ಮತ್ತು ಗಂಡಿಗಿಂತ ಹೆಚ್ಚು ಭಾಂಧವ್ಯಕ್ಕೆ ಒತ್ತು ನೀಡುತ್ತಾಳೆ.

3) ಉದ್ದೇಶ ಅರ್ಥ ಮಾಡಿಕೊಳ್ಳಿ: ಹೆಣ್ಣು ಯಾವುದನ್ನೂ ನೇರವಾಗಿ ಬಾಯಿ ಬಿಟ್ಟು ಹೇಳಲಾರಳು ಅದರಲ್ಲೂ ಪ್ರೀತಿ ಪ್ರೇಮದ ವಿಷಯಗಳಲ್ಲಿ ಅವಳು ತುಂಬಾ ರಿಸರ್ವ್ಡ್. ಹೇಳಬೇಕಾದ್ದನ್ನು ನೇರವಾಗಿ ಹೇಳಿದರೆ ಎಲ್ಲಿ ತನ್ನ ಅರಿಕೆ ತಿರಸ್ಕೃತವಾಗುತ್ತದೋ ಎಂಬ ಸಂಕೋಚ. ಆದ್ದರಿಂದಲೇ ನಾಳೆ ಮೀಟ್ ಮಾಡೋಣ ಎಂದು ಹೇಳುವ ಬದಲು ನಾಳೆ ನಂಗೆ ಕ್ಲಾಸ್ ಇಲ್ಲ, ಅಥವಾ ವರ್ಕ್ ರಜಾ ಎನ್ನುತ್ತಾಳೆ, ನೀನು ನಾಳೆ ಎಷ್ಟು ಹೊತ್ತಿಗೆ ಕೆಲಸದಿಂದ ಮನೆಗೆ ಬರ್ತೀಯ ಎನ್ನುವಾಗ ಎಲ್ಲಿಯಾದರೂ ಕರೆದೊಯ್ಯಲು ಸಾಧ್ಯವೇ ಎನ್ನುವ ಇಂಗಿತವಿರುತ್ತೆ. ಇದಕ್ಕೆ ಕಾರಣ ಅವಳ ಸಂವಹನಾ ಶಕ್ತಿ. ಇದೇ ಕಾರಣಕ್ಕೆ ಒಗಟು ಮತ್ತು ‌ಕಥೆ ಹೇಳುವ ರೀತಿಯ‌ ಆಟ ಅವಳಿಗೆ ಇಷ್ಟವಾಗುತ್ತೆ. ಅವಳ ಮಾತಿನ ನೇರ ಅರ್ಥಕ್ಕಿಂತ ಅದರ ಹಿಂದಿನ ಉದ್ದೇಶ ಅರಿತುಕೊಳ್ಳುವ ಪ್ರಯತ್ನ ಮಾಡಿ. ಪ್ರಶ್ನಿಸಿ

4) ಕಾಳಜಿಗೆ ಸೋಲ್ತಾಳೆ: ಹೆಣ್ಣು ಎಷ್ಟೇ ಬುದ್ದಿವಂತಳಾಗಿದ್ದರೂ ಪ್ರೀತಿ, ಪ್ರೇಮ ಮತ್ತು ಕಾಳಜಿಗೆ ಸೋಲುತ್ತಾಳೆ. ಮುನಿದ ಹೆಣ್ಣಿನ ಮನಸನ್ನು ಗೆಲ್ಲೋಕೆ ನಿಮ್ಮ ಒಂದೇ ಒಂದು ಪ್ರೀತಿಯ ನುಡಿ ಸಾಕು

5) ಮೆಚ್ಚುಗೆ‌ ಸೂಸಿ: ನೀವು ಲಕ್ಷ ರೂ ಕೊಟ್ಟು ಕೊಡಿಸಿದ ವಜ್ರಕ್ಕಿಂತ, ಸಾವಿರ ರೂ ಕೊಟ್ಟು ಕೊಡಿಸಿದ ಸೀರೆ ಉಟ್ಟಾಗ ಈ ಸೀರೆಯಲ್ಲಿ ನಿನಗಿಂತ ಬೇರೆ ಯಾರೂ ಚೆಂದಕ್ಕೆ ಕಾಣಿಸಲು ಸಾಧ್ಯವಿಲ್ಲ .ಅಥವಾ ನಿನ್ನಿಂದ ಈ ಸೀರೆಗೆ ಮೆರಗು ಬಂದಿದೆ ಅನ್ನಿ, ಅವಳ ಮುಖ ವಜ್ರಕ್ಕಿಂತ ಹೊಳಪು ಪಡೆಯುತ್ತದೆ. ಅವಳ ಕೆಲಸಗಳಿಗೆ ಮೆಚ್ಚುಗೆ‌ ಸೂಸಿ.

6) ಅವಳ ಜೊತೆಗಿರಿ: ಅವಳು ಜೊತೆಯಲ್ಲಿದ್ದಾಗ ಆದಷ್ಟೂ ಮೊಬೈಲ್ ಫೋನ್ ಅಟೆಂಡ್ ಮಾಡಬೇಡಿ. ಪದೇಪದೆ ಮೆಸೇಜ್ ಕಳಿಸದಿರಿ. ಸುಮ್ಮನೆ ಮೊಬೈಲ್ ಕೀಲಿ ಪ್ರೆಸ್ ಮಾಡುತ್ತಾ ಕೂತಿರಬೇಡಿ.ನೀವು ಮೊಬೈಲ್‌ಗೆ ಅಂಟಿಕೊಂಡಂತೆ ವರ್ತಿಸಿದರೆ ತನ್ನ ಇರುವಿಕೆ ಅವನಿಗೆ ಪ್ರಮುಖವಲ್ಲ ಅಂತ ಆಕೆ ತಿಳಿದುಕೊಳ್ಳುತ್ತಾಳೆ.

7) ತಪ್ಪೊಪ್ಪಿಗೆ ಅವಮಾನವಲ್ಲ: ನಿಮ್ಮಿಂದ ತಪ್ಪಾಗಿದೆ ಎಂದಲ್ಲಿ ತುಂಬು ಹೃದಯದಿಂದ ಕ್ಷಮೆ ಕೇಳಿ, ಎಂತಹುದೇ ತಪ್ಪಾದರೂ ನಿಮ್ಮದು ನೈಜ ತಪ್ಪೊಪ್ಪಿಗೆಯಾದಲ್ಲಿ ಕ್ಷಮಿಸಿಬಿಡುತ್ತಾಳೆ, ಹಾಗೆಯೇ ಅವಳಿಂದ ತಪ್ಪಾದಲ್ಲಿ ಅವಳು ಕ್ಷಮೆ ಕೇಳಿದಲ್ಲಿ ಕ್ಷಮಿಸಿಬಿಡಿ. ಹೀಯಾಳಿಕೆಯ, ಮನ ನೋಯುವ ಮಾತುಗಳು ಬೇಡ

8) ಮಾತೇ ಅಭಿವ್ಯಕ್ತಿ: ಅವಳಿಗೆ ನೋವಾಗಿದ್ದಲ್ಲಿ ಸಾಂತ್ವನ ಹೇಳಿ. ಕೋಪದಲ್ಲಿ ಆಡಿದ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದಿರಿ. ಹೆಣ್ಣಿಗೆ ನೋವನ್ನು ಹೊರಹಾಕುವ ಏಕೈಕ ಸಾಧನ ಮಾತು, ಕೂಗು, ಅಳು. ಅವು ಪ್ರಕಟಗೊಳ್ಳಲಿ ಬಿಟ್ಟುಬಿಡಿ,

9) ಒಲುಮೆಗೆ ಸಮಯ ಬೇಕು: ನಿಮ್ಮಿಷ್ಟದಂತೆ ಅವಳನ್ನ ಬಗ್ಗಿಸದಿರಿ, ಅವಳಾಗಿಯೇ ಒಲಿದು ಬರುವುದನ್ನು ಕಾಯಿರಿ. ಬಲವಂತವಾಗಿಯೋ, ಎಮೋಷನಲ್ ಬ್ಲಾಕ್ ಮೇಲ್ ಮಾಡಿಯೋ, ಬೆಳೆಸಿದ ನಂಟಿಗೆ ಆಯಸ್ಸು ಕಡಿಮೆ.

10) ಅವಳ ಮಾತಿಗೆ ಕಿವಿ ಕೊಡಿ: ನಿಮಗೆ ಎಂಥದ್ದೇ ಕೆಲಸವಿದ್ದರು ಅವಳಿಗಾಗಿ ಕೆಲ ಸಮಯ ಮೀಸಲಿಡಿ. ಅವಳಿಗಾಗಿಯೇ, ಕೇವಲ ಅವಳೊಡನೆಯೇ ಒಡನಾಡಿ.

11) ಮೌನಕ್ಕೂ ಅರ್ಥವಿದೆ: ಹೆಣ್ಣಿನ ಮಾತಿಗೆ ನೂರು ಅರ್ಥವಿದ್ದರೆ, ಮೌನಕ್ಕೆ ಸಾವಿರ ಅರ್ಥವಿರುತ್ತದೆ. ಮುಕ್ಕಾಲು ಭಾಗ ಅರ್ಥಗಳು ಕಣ್ಣಿನಲ್ಲಿ ಗೋಚರವಾಗುತ್ತದೆ. ಆದ್ದರಿಂದ ಪ್ರಿಯೆಯೊಡನೆ ಮಾತನಾಡುವಾಗ ಕಣ್ಣಲ್ಲಿ ಕಣ್ಣನಿಟ್ಟು ಮಾತಾಡಿ. ಇದರಿಂದ ನಿಮ್ಮ ಸಂಪೂರ್ಣ ಗಮನ ಆಕೆಯ ಮೇಲಿದೆ ಎಂಬ ನಿರಾಳತೆ ಆಕೆಯಲ್ಲಿರುತ್ತೆ.

12) ಈ ಸೂಕ್ಷ್ಮ ತಿಳ್ಕೊಳಿ: ನಿಮ್ಮ ಹಳೆಯ ಪ್ರೇಮಿಯ ಬಗ್ಗೆ ಪುರಾಣ ಹೇಳಬೇಡಿ. ಇದು ಆಕೆಗೆ ನೋವು ತರುತ್ತದೆ. ಹೆಣ್ಣಿನ ಕಡೆಯವರನ್ನಾಗಲಿ ಅವಳ ಹವ್ಯಾಸವನ್ನಾಗಲಿ ಹಳಿಯದಿರಿ. ಅವಳ ಸೌಂದರ್ಯದ ಬಗ್ಗೆ ಕೊಂಕು ತೆಗೆಯದಿರಿ.

ಇಷ್ಟೆಲ್ಲಾ ತಿಳ್ಕೋಬೇಕಾ ಎಂಬ ಉದ್ಗಾರ ಬೇಡ, ಹೆಣ್ಣಿನ ಅಂತರಂಗವೇ ದೊಡ್ಡ ಸಾಗರ, ಆ ಸಾಗರದಲ್ಲಿ ನಿಮಗೊಂದು ಶಾಶ್ವತ ಸ್ಥಾನ ಸಿಗಬೇಕಾದರೆ ಇವೆಲ್ಲಾವನ್ನೂ‌ ಅರಿತಿರಲೇಬೇಕು.

ಮೇಲನದೆಲ್ಲವನ್ನೂ ಮೀರಿ ಹೆಣ್ಣು ಕೂಡ‌ ಒಬ್ಬ ಮನುಷ್ಯಳೇ. ಹಾಗಾಗಿ ಪ್ರತಿ ಮಹಿಳೆಯೂ ವಿಭಿನ್ನಳೇ. ಕೆಲವೊಮ್ಮೆ ವ್ಯಕ್ತಿತ್ವದಿಂದಲೋ, ತಾನು ಬೆಳೆದ / ಇರುವ ಪರಿಸರದಿಂದಲೋ, ಪರಿಸ್ಥಿತಿಗೆ‌ ಸಿಲುಕಿಯೂ‌ ಕಠಿಣ‌‌ ಹೃದಯಿಯಾಗಬಹುದು. ಗಂಡಿನ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದು. ಅಷ್ಟೇ‌ ಅಲ್ಲ ಕೆಲವೊಮ್ಮೆ ಮಿದುಳಿನ ರಚನೆ ‌ಅಥವಾ ಹಾರ್ಮೋನುಗಳ ಬದಲಾವಣೆಗಳೂ‌ ಹೆಣ್ಣಿನ ಸಹಜ ಸ್ವಾಭಾವಿಕ ಗುಣವನ್ನು ಬದಲಾಯಿಸಿ ಬಿಡಬಹುದು. ಹಾಗಾಗೀ‌ ಮೇಲೇ ಹೇಳಿದ ಎಲ್ಲಾ ಗುಣಗಳೂ ಎಲ್ಲರಿಗೂ‌ ಅನ್ವಯಿಸಲೇಬೇಕೆಂದಿಲ್ಲ ಎಂಬುದನ್ನು ನೆನಪಲ್ಲಿ ಇಟ್ಟುಕೊಂಡು ಓದಿದ್ದೀರಿ ಎಂದು ಭಾವಿಸುವೆ.‌

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

ವಿಭಾಗ