Bhindi Recipes; ಪ್ರಿಯಾಂಕಾ ಛೋಪ್ರಾ ತರ ಬೆಂಡೆಯನ್ನು ಇಷ್ಟ ಪಡ್ತೀರಾ, ಈ 5 ವಿಶೇಷ ಬೆಂಡಿ ರೆಸಿಪಿ ಟ್ರೈಮಾಡಿ
Bhindi Recipes; ಬೆಂಡೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕೆಲವರಿಗಂತೂ ಪಂಚ ಪ್ರಾಣ. ಪ್ರಿಯಾಂಕಾ ಛೋಪ್ರಾ ತರ ಬೆಂಡೆಯನ್ನು ಇಷ್ಟ ಪಡ್ತೀರಾ, ಈ 5 ವಿಶೇಷ ಬೆಂಡಿ ರೆಸಿಪಿ ಟ್ರೈ ಮಾಡಬಹುದು ನೋಡಿ.
ಬೆಂಡೆ ಬಹುತೇಕರಿಗೆ ಅಚ್ಚುಮೆಚ್ಚು. ಬೆಂಡೆ ಖಾದ್ಯಗಳನ್ನು ಇಷ್ಟ ಪಟ್ಟು ಮಾಡಿ ಅಥವಾ ಮಾಡಿಸಿ ತಿನ್ನುವವರು ಅನೇಕರು. ಫ್ರೈ, ಪಲ್ಯ, ಸಾಂಬಾರ್, ಸಲಾಡ್ ಹೀಗೆ ಹತ್ತಾರು ರೀತಿಯಲ್ಲಿ ಅದನ್ನು ಉಪಯೋಗಿಸುತ್ತಾರೆ. ಮಧ್ಯಾಹ್ನದ ಊಟಕ್ಕೆ ಅನ್ನದ ಜೊತೆಗೆ ನೆಚ್ಚಿಕೊಂಡು ತಿಂದರೆ ಭಾರಿ ರುಚಿಕರ ಎಂಬುದು ಹಲವರ ಅಭಿಪ್ರಾಯ. ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಜೋನಾಸ್ ಅವರಿಗೂ ಅಷ್ಟೆ ಬೆಂಡೆ ಅಂದ್ರೆ ಪಂಚಪ್ರಾಣ.
ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಪ್ರಿಯಾಂಕಾ ಚೋಪ್ರಾ ಜೋನಾಸ್ ಚೋಪ್ರಾ ಅವರು ಜೋನಸ್ ಮನೆಯಲ್ಲಿ ರಾತ್ರಿ ಹೇಗಿರುತ್ತದೆ ಎಂಬುದನ್ನು ತೋರಿಸಿದ್ದಾರೆ. ಮಾಮಾ ಚೋಪ್ರಾ ಅಡುಗೆ ಮನೆಯಲ್ಲಿದ್ದರೆ, ಕುಟುಂಬ ಸದಸ್ಯರು ತಮ್ಮ ಭೋಜನಕ್ಕೆ ಬೆಂಡೆ ಫುಲ್ಕೆ ತಯಾರಿಸುವುದನ್ನು ಕಾಣಬಹುದು.
ಬೆಂಡೆಯು ಭಾರತೀಯ ಅಡುಗೆ ಮನೆಯಲ್ಲಿ ನಿತ್ಯ ಬಳಕೆಯ ತರಕಾರಿಗಳ ಪೈಕಿ ಮುಖ್ಯವಾದುದು. ನೀವು ಕೂಡ ಪ್ರಿಯಾಂಕಾ ಛೋಪ್ರಾ ಅವರಂತೆ ಬೆಂಡೆ ಪ್ರಿಯರಾಗಿದ್ದರೆ ಖಚಿತವಾಗಿ ಈ 5 ಹೊಸ ವಿಶೇಷ ಬೆಂಡಿ ರೆಸಿಪಿ ಟ್ರೈಮಾಡಬಹುದು.
5 ವಿಶೇಷ ಬೆಂಡಿ ರೆಸಿಪಿ
1) ಕುರುಕುಲಾಗಿ ಹುರಿದ ಬೆಂಡೆ ಚಿಪ್ಸ್: ಹಬೆಯಾಡುವ ಬಿಸಿ ದಾಲ್, ಸ್ವಲ್ಪ ಹಸಿರು ಮೆಣಸಿನಕಾಯಿ ಮತ್ತು ಮಾವಿನಕಾಯಿ ಉಪ್ಪಿನಕಾಯಿಯೊಂದಿಗೆ ಚಂದಕ್ಕೆ ಜೋಡಿಸಬಹುದಾದ್ದು ಈ ಹುರಿದ ಬೆಂಡೆ ಚಿಪ್ಸ್. ಸಂಡಿಗೆಗೆ ಪರ್ಯಾಯವಾಗಿ ಉಪಯೋಗಿಸಬಹುದು. ಬಹಳ ಸರಳ ಪಾಕ ವಿಧಾನ. ಕೇವಲ 4 ಉತ್ಪನ್ನಗಳಿದ್ದರೆ ಸಾಕು. ಪೂರ್ವಸಿದ್ಧತಾ ಸಮಯವೂ ಅಷ್ಟೆ ಕಡಿಮೆ ಸಾಕು.
ಬೇಕಾಗುವ ಸಾಮಗ್ರಿ: 150 ಗ್ರಾಂ ಬೆಂಡೆ, 1 ಟೇಬಲ್ ಸ್ಪೂಲ್ ಒಲಿವ್ ಎಣ್ಣೆ, 2 ಟೇಬಲ್ ಸ್ಪೂನ್ ಉಪ್ಪು, 2 ಟೇಬಲ್ ಸ್ಪೂನ್ ಕಾಳುಮೆಣಸು, 1 ಟೀಸ್ಪೂನ್ ಮೆಣಸಿನ ಹುಡಿ (ಬೇಕಾದರೆ ಬಳಸಿ)
ರೆಸಿಪಿ- ನಿಮ್ಮ ಓವನ್ ಅನ್ನು 220 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಬಿಸಿ ಮಾಡಿ. ಕತ್ತರಿಸಿದ ಬೆಂಡೆಯನ್ನು ಒಲಿವ್ ಎಣ್ಣೆ, ಉಪ್ಪು, ಕಾಳುಮೆಣಸು ಮಿಶ್ರಣದೊಂದಿಗೆ ಬೆರೆಸಿ. ಈ ಬೆಂಡೆ ತುಂಡುಗಳನ್ನು 10-15 ನಿಮಿಷ ಕಾಲ ಲಘುವಾಗಿ ಓವೆನ್‌ನಲ್ಲಿ ಬಿಸಿಮಾಡಿ. ಅದರ ಬಣ್ಣ ಹಗುರ ಬಂಗಾರದ ಬಣ್ಣಕ್ಕೆ ತಿರುಗಿದಾಗ ಅದನ್ನು ಹೊರತೆಗೆದಿಡಿ. ಕುರುಂಕುರುಂ ಬೆಂಡೆ ಚಿಪ್ಸ್ ರೆಡಿ.
2) ಬಾಮ್ಯಾ ಸ್ಟ್ಯೂ
ಎಲ್ಲ ದೇಶಗಳ ಆಹಾರ ಕ್ರಮದಲ್ಲೂ ಬೆಂಡೆ ಕಾಯಿ ಬಳಕೆಯಲ್ಲಿದೆ. ಪಶ್ಚಿಮ ಆಫ್ರಿಕನ್ ಅಥವಾ ಮೆಡಿಟರೇನಿಯನ್ ಪಾಕಪದ್ಧತಿಯಲ್ಲಿ ನಿಜವಾಗಿಯೂ ಬೆಂಡೆಕಾಯಿಗೆ ವಿಶೇಷ ಸ್ಥಾನವಿದೆ. ಅಲ್ಲಿಯ ಒಂದು ಬೆಂಡೆ ಖಾದ್ಯ ಬಾಮಿಯಾ ಅಥವಾ ಬಾಮ್ಯ ಸ್ಟ್ಯೂ. ಇದು ಸಾಂಪ್ರದಾಯಿಕ ಟರ್ಕಿಶ್ ಖಾದ್ಯವಾಗಿದ್ದು, ಬಹಳಷ್ಟು ಭಾರತೀಯ ರುಚಿಗೆ ಸಮೀಪವಿದೆ. ಮೆಡಿಟರೇನಿಯನ್ ಭಕ್ಷ್ಯ ಸುಲಭ ಪಾಕವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿ: 1 ಟೇಬಲ್ ಸ್ಪೂಲ್ ಒಲಿವ್ ಎಣ್ಣೆ, 1 ಹೆಚ್ಚಿದ ಈರುಳ್ಳಿ, ಬಿಡಿಸಿದ ಬೆಳ್ಳುಳ್ಳಿ ಎಸಳು 4, ಜಲಪೀನೊ ಪೆಪ್ಪರ್ 2,
ಮುಖ್ಯ ಸಾಮಗ್ರಿ- ಅರ್ಧ ಕಿಲೋ ಬೆಂಡೆ ಕಾಯಿ, ಉಪ್ಪು ಮತ್ತು ಕಾಳುಮೆಣಸು. 1 ಟೀಸ್ಪೂನ್ ಅರೆದ ಮಸಾಲೆ, ಅರ್ಧ ಟೀ ಸ್ಪೂನ್ ಅಥವಾ ಮುಕ್ಕಾಲು ಟೀಸ್ಪೂನ್ ಕೊತ್ತಂಬರಿ ಹುಡಿ, ಅರ್ಧ ಟೀಸ್ಪೂನ್ ಮೆಣಸಿನ ಪುಡಿ, ಒಂದೂವರೆ ಕಪ್ ಅರೆದ ಟೊಮೆಟೊ.
ಅಲಂಕಾರಕ್ಕೆ ಕತ್ತರಿಸಿದ ಟೊಮೆಟೊ, ಪಾರ್ಸ್ಲಿ ಮತ್ತು ½ ನಿಂಬೆ ರಸ
ರೆಸಿಪಿ: ಈಗಾಗಲೇ ಸಿದ್ಧಪಡಿಸಿ ಇಟ್ಟುಕೊಂಡ ಅರೆದಿಟ್ಟ ಟೊಮೆಟೊ ಮತ್ತು ಮಸಾಲೆ ಪದಾರ್ಥವನ್ನು ಪ್ಯಾನ್‌ಗೆ ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ನಂತರ ತುಂಡು ಮಾಡಿದ ಬೆಂಡೆಯನ್ನು ಸೇರಿಸಿ ಮತ್ತು ಇನ್ನೊಂದು 5 -7 ನಿಮಿಷ ಬೇಯಿಸಿ. ಎಲ್ಲ ಮಸಾಲೆಗಳೊಂದಿಗೆ ಸರಿಯಾಗಿ ಮಿಕ್ಸ್ ಮಾಡಿ. ನಂತರ ಟೊಮ್ಯಾಟೊ ತುಂಡುಗಳನ್ನು ಮತ್ತು 1.5 ಕಪ್ ನೀರು ಸೇರಿಸಿ. 25 ನಿಮಿಷ ಕಾಲ ಅಥವಾ ಬೆಂಡೆ ಬೇಯುವ ತನಕ ಬೇಯಿಸಿ. ನಂತರ ಕೆಳಗಿಳಿಸಿ ಅದನ್ನು ಅಲಂಕರಿಸಿ. ಅನ್ನದ ಅಥವಾ ಬ್ರೆಡ್ ಜೊತೆಗೆ ಉಣಬಡಿಸಿ.
ಸ್ಕೀಯರ್ಡ್ ಬೆಂಡೆ
ವಾರಾಂತ್ಯದಲ್ಲಿ ಸ್ನೇಹಿತರ ಗುಂಪು ಒಟ್ಟು ಸೇರುವಾಗ ಸವಿಯಲು ಮಾನ್ಸೂನ್ ಬಾರ್ಬೆಕ್ಯೂಗಿಂತ ಉತ್ತಮವಾದದ್ದೇನೂ ಇಲ್ಲ. ಈ ಋತುವಿನಲ್ಲಿ ಮಾಂಸವನ್ನು ತಿನ್ನುವುದು ಸ್ವಲ್ಪ ಸವಾಲಿನ ಸಂಗತಿ. ಹೀಗಾಗಿ ಸಸ್ಯಾಹಾರಿ ಬಿಬಿಕ್ಯೂ ಮೆನುವಿಗಾಗಿ ಅದ್ಭುತವಾದ ಸ್ಕೀಯರ್ಡ್ ಬೆಂಡೆ ಬಳಸಬಹುದು ನೋಡಿ. ಸುವಾಸನೆಯ ಡಿಜಾನ್ ಡಿಪ್ಪಿಂಗ್ ಸಾಸ್‌ನೊಂದಿಗೆ ಸವಿಯಬಹುದಾದ ರಸಭರಿತ ಸುಟ್ಟ ಓಕ್ರಾ ಮತ್ತು ಪೆಪ್ಪರ್ ಸ್ಕೇವರ್‌ನ ಪಾಕವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು: 16 ಮಧ್ಯಮ ಗಾತ್ರದ ತಾಜಾ ಬೆಂಡೆಕಾಯಿ, 12 ಸಿಹಿ ಮಿನಿ ಮೆಣಸು, ಆಲಿವ್ ಎಣ್ಣೆ (ಪ್ಯಾನ್‌ಗೆ ಒರೆಸಲು), ¼ ಕಪ್ ಮಯೋನೀಸ್, 1 ಟೀಸ್ಪೂನ್ ಡಿಜಾನ್ ಸಾಸಿವೆ, 2 ಟೀಸ್ಪೂನ್ ಆಂಚೊವಿ ಪೇಸ್ಟ್, 1 ಟೀಸ್ಪೂನ್ ತಾಜಾ ನಿಂಬೆ ರಸ, ¼ ಟೀಸ್ಪೂನ್ ಬಿಸಿ ಸಾಸ್
ರೆಸಿಪಿ: ಬೆಂಡೆ ಮತ್ತು ಮೆಣಸುಗಳನ್ನು ಪರ್ಯಾಯವಾಗಿ ಕಡ್ಡಿಯಲ್ಲಿ ಸೇರಿಸಿ. ಅದನ್ನು ಎಣ್ಣೆ ಪ್ಯಾನ್‌ನಲ್ಲಿಟ್ಟು ಅಥವಾ ಬಾರ್ಬೆಕ್ಯೂ ಮೇಲೆ ಇರಿಸಿ ಗ್ರಿಲ್ ಮಾಡಿ. ತರಕಾರಿ ಸುಟ್ಟು ಮೃದುವಾಗುವ ತನಕ ಬೇಯಿಸಿ. ಈ ಪ್ರಕ್ರಿಯೆ ಸಾಮಾನ್ಯವಾಗಿ 6-8 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ನಡುವೆ ಅವುಗಳನ್ನು ತಿರುಗಿಸಿ, ಇನ್ನೊಂದು ಬದಿ ಕೂಡ ಸುಟ್ಟು ಮೃದುವಾಗುವಂತೆ ನೋಡಿಕೊಳ್ಳಿ.
ಇದಕ್ಕೆ ನೆಚ್ಚಿಕೊಳ್ಳಲು ಸಾಸ್‌ಗಾಗಿ, ಮಯೋನಿಸ್, ಡಿಜಾನ್ ಸಾಸಿವೆ, ಆಂಚೊವಿ ಪೇಸ್ಟ್, ತಾಜಾ ನಿಂಬೆ ರಸ ಮತ್ತು ಬಿಸಿ ಸಾಸ್ ಅನ್ನು ಸಣ್ಣ ಬಟ್ಟಲಿನಲ್ಲಿ ಮಿಶ್ರಣ ಮಾಡಿಟ್ಟುಕೊಳ್ಳಿ.
ಬೆಂಡೆ ರಾಯ್ತ
ದಕ್ಷಿಣ ಭಾರತ ಪಾಕವಿಧಾನ ಇದು. ಬೆಂಡೆ ರಾಯ್ತ ಅಥವಾ ವೆಂಡಕ್ಕೈ ಕಿಚಡಿ ಸಾಮಾನ್ಯವಾಗಿ ದಕ್ಷಿಣ ಭಾರತದ ಮದುವೆ ಊಟದಲ್ಲಿ ಅಥವಾ ಹಬ್ಬಗಳ ಸಮಯದಲ್ಲಿ ಅನ್ನದೊಂದಿಗೆ ಬಡಿಸಲಾಗುತ್ತದೆ. ಇದರ ಪಾಕವಿಧಾನ ಇಲ್ಲಿದೆ.
ಮುಖ್ಯ ಸಾಮಗ್ರಿಗಳು- 14 ತುಂಡು ಮಾಡಿದ ಬೆಂಡೆಕಾಯಿ, 4 ಹೆಚ್ಚಿನ ಹಸಿ ಮೆಣಸಿನಕಾಯಿ, 2 ಟೇಬಲ್ ಸ್ಪೂನ್ ತೆಂಗಿನ ಎಣ್ಣೆ, ಮುಕ್ಕಾಲು ಕಪ್ ಮೊಸಲು, ರುಚಿಗೆ ತಕ್ಕಷ್ಟು ಉಪ್ಪು.
ತೆಂಗಿನ ಕಾಯಿ ಮಸಾಲೆಗಾಗಿ - ಅರ್ಧ ಕಪ್ ತೆಂಗಿನ ಕಾಯಿ ತುರಿ, ಕಾಲು ಟೀಸ್ಪೂನ್ ಸಾಸಿವೆ, ಅರ್ಧ ಟೀ ಸ್ಪೂನ್ ಜೀರಿಗೆ, ಕಾಲು ಕಪ್ ಮೊಸರು.
ಒಗ್ಗರಣೆಗೆ ಬೇಕಾದ ಸಾಮಗ್ರಿ- ಒಂದು ಟೀಸ್ಪೂನ್ ತೆಂಗಿನ ಎಣ್ಣೆ, ಅರ್ಧ ಟೀಸ್ಪೂನ್ ಸಾಸಿವೆ, 3 ಒಣಮೆಣಸು, ಕರಿಬೇವಿನ ಎಲೆಗಳು 10 (ಒಂದು ಕಣೆ)
ಪಾಕವಿಧಾನ: ಬಾಣಲೆಗೆ ಎಣ್ಣೆ ಹಾಕಿ. ಬೆಂಡೆ ಮತ್ತು ಹೆಚ್ಚಿದ ಮೆಣಸಿನ ಕಾಯಿ ಸೇರಿಸಿ ಗರಿಗರಿಯಾಗುವ ತನಕ ಹುರಿಯಿರಿ.
ನಂತರ ತೆಂಗಿನಕಾಯಿ ಮಸಾಲೆ ಪೇಸ್ಟ್‌ಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್‌ಗೆ ಹಾಕಿ ಮತ್ತು ನಯವಾಗುವ ತನಕ ರುಬ್ಬಿ. ಈ ಪೇಸ್ಟ್ ಅನ್ನು ಬಾಣಲೆಗೆ ಸುರಿಯಿರಿ. ಬೆಂಡೆ ಮತ್ತು ಹೆಚ್ಚಿದ ಮೆಣಸಿನಕಾಯಿ ಹೋಳುಗಳ ಜೊತೆಗೆ ಮಿಕ್ಸ್ ಮಾಡಿ. ಒಗ್ಗರಣೆ ಕೊಡಿ. ಅಲ್ಲಿಗೆ ಬೆಂಡೆ ರಾಯ್ತ ರೆಡಿ.
ದಾಲ್ ರೈಸ್, ಚಿಕನ್ ಕರಿ ಅಥವಾ ಸ್ವಲ್ಪ ಮಸಾಲಾ ಉತ್ತಪಮ್ ಜೊತೆಗೆ ಉಣಬಡಿಸಬಹುದು.
ಭಿಂಡಿವಾಲಾ ಮೀಟ್
ಮಟನ್ ಮತ್ತು ಬೆಂಡೆ ನಿಜಾಮಿ ಮತ್ತು ಮುಘಲಾಯಿ ಆಹಾರದಲ್ಲಿ ಬಳಕೆಯಾಗುತ್ತದೆ. ಊಹಿಸಿಕೊಳ್ಳುವುದಕ್ಕಿಂತಲೂ ಉತ್ತಮ ರುಚಿಯನ್ನು ನೀಡುತ್ತದೆ. ಫಾತಿಮಾ ಕುಕ್ಸ್ ಅವರು ಕೊಟ್ಟಿರುವ ಸುಲಭ ಮತ್ತು ಕ್ಷಿಪ್ರ ಒನ್-ಪಾಟ್ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು : ½ ಕಪ್ ಆಲಿವ್ ಎಣ್ಣೆ, 175 ಗ್ರಾಂ ತಾಜಾ ಭಿಂಡಿ, 1 ಈರುಳ್ಳಿ, 350 ಗ್ರಾಂ ಮಟನ್, 2 ಸಣ್ಣ ಟೊಮ್ಯಾಟೊ, 4 ಲವಂಗ ಬೆಳ್ಳುಳ್ಳಿ, ಶುಂಠಿಯ ಸಣ್ಣ ತುಂಡು, 1 ಟೀಸ್ಪೂನ್ ಜೀರಿಗೆ, 2 ಟೀಸ್ಪೂನ್ ಕೊತ್ತಂಬರಿ ಪುಡಿ, 2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 2 ಟೀಚಮಚ ಉಪ್ಪು ಅಥವಾ ರುಚಿಗೆ, 0.5 ಟೀಸ್ಪೂನ್ ಅರಿಶಿನ, ½ ಮಧ್ಯಮ ಗಾತ್ರದ ಈರುಳ್ಳಿ ಮತ್ತು ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು.
ಪಾಕವಿಧಾನ: ಪಾತ್ರೆ ಸ್ಟವ್ ಮೇಲಿಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಮೊದಲು ಬೆಂಡೆ ಹೋಳುಗಳನ್ನು ಹಾಕಿ. ಅದು ಬಂಗಾರದ ಬಣ್ಣಕ್ಕೆ ಬರುವ ತನಕ ಫ್ರೈ ಮಾಡಿ. ನಂತರ ಅರ್ಧದಷ್ಟು ಎಣ್ಣೆಯನ್ನು ತೆಗೆದುಹಾಕಿ. ಈರುಳ್ಳಿ ಸೇರಿಸಿ. ಅವು ಅರೆಪಾರದರ್ಶಕವಾದ ನಂತರ, ಮಾಂಸ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ ಮತ್ತು ಮಾಂಸವು ಇನ್ನು ಮುಂದೆ ಗುಲಾಬಿ ಬಣ್ಣಕ್ಕೆ ಬರುವವರೆಗೆ ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಎಲ್ಲಾ ಮಸಾಲೆಗಳು, ಟೊಮ್ಯಾಟೊ ಮತ್ತು 3 ಕಪ್ ನೀರು ಸೇರಿಸಿ. ನಂತರ 1ಗಂಟೆ 45ನಿಮಿಷಗಳ ಕಾಲ ಕುದಿಸಿ.
ಸಮಯ ಕಳೆದಂತೆ ಪ್ಯಾನ್‌ನಲ್ಲಿ ಗ್ರೇವಿ ಹಿಡಿಯಲು ಪ್ರಾರಂಭವಾಗುವವರೆಗೆ ಮತ್ತು ಎಣ್ಣೆಯು ಮೇಲೋಗರದಿಂದ ಬೇರ್ಪಡುವವರೆಗೆ ಶಾಖವನ್ನು ಹೆಚ್ಚಿಸಿ. ಈ ಹಂತದಲ್ಲಿ, ಬೆಂಡೆ ಮತ್ತು ಉಳಿದ ಈರುಳ್ಳಿಯನ್ನು ½ ಕಪ್ ನೀರಿನೊಂದಿಗೆ ಸೇರಿಸಿ. 10-15 ನಿಮಿಷಗಳ ಕಾಲ ಕುದಿಸಿ. ಅದಾಗಿ, ಅನ್ನದ ಜೊತೆಗೆ ಸ್ವಲ್ಪ ತುಪ್ಪ ಸೇರಿಸಿ ಉಣಬಡಿಸಿ.