Ayyappa Swamy: ಮೈ ನವಿರೇಳಿಸತ್ತೆ ಅಯ್ಯಪ್ಪ ಸ್ವಾಮಿಯ ಕಥೆ; ಮಣಿಕಂಠನ ಹಿನ್ನೆಲೆ ಹೀಗಿದೆ
Ayyappa Swamy Story: ಅಯ್ಯಪ್ಪ ಸ್ವಾಮಿ ಕಥೆಯಲ್ಲಿ ತ್ರಿಮೂರ್ತಿಗಳ ಪಾತ್ರ, ಅಯ್ಯಪ್ಪನ ಜನನ, ಮಾತೃಪ್ರೇಮ, ಧೈರ್ಯ, ಸಾಹಸ ಮುಂತಾದವುಗಳು ಕಾಣಿಸುತ್ತವೆ. ಈ ಕಥೆಯು ಆರಂಭವಾಗುವುದೇ ಮಹಿಷಾಸುರನ ವಧೆಯಿಂದ. ಮಣಿಕಂಠನ ಹಿನ್ನೆಲೆ ಇಲ್ಲಿದೆ ನೋಡಿ.. (ಬರಹ: ಎಚ್. ಸತೀಶ್, ಜ್ಯೋತಿಷಿ)
ಪೌರಾಣಿಕ ಕಥೆಗಳು ಸಂಪೂರ್ಣವಾಗಿ ಅಸುರರು ಮತ್ತು ದೇವತೆಗಳ ನಡುವಿನ ಸಮರವನ್ನೇ ಆಧರಿಸುತ್ತದೆ. ಅಯ್ಯಪ್ಪ ಸ್ವಾಮಿ ಕಥೆಯಲ್ಲಿ ತ್ರಿಮೂರ್ತಿಗಳ ಪಾತ್ರ, ಅಯ್ಯಪ್ಪನ ಜನನ, ಮಾತೃಪ್ರೇಮ, ಧೈರ್ಯ, ಸಾಹಸ ಮುಂತಾದವುಗಳು ಕಾಣಿಸುತ್ತವೆ. ಈ ಕಥೆಯು ಆರಂಭವಾಗುವುದೇ ಮಹಿಷಾಸುರನ ವಧೆಯಿಂದ. ಮಹಿಷಾಸುರನ ತೊಂದರೆಯನ್ನು ತಾಳಲಾರದ ದೇವತೆಗಳು ದುರ್ಗಾಮಾತೆಯ ಮೂಲಕ ಮಹಿಷಾಸುರನ ಅವಸಾನವನ್ನು ಕಾಣುತ್ತಾರೆ. ಮಹಿಷಾಸುರನ ಸಂಹಾರಕ್ಕಾಗಿ ತಮ್ಮಲ್ಲಿರುವ ಶಕ್ತಿಯನ್ನು ದುರ್ಗಾಮಾತೆಗೆ ಧಾರೆ ಎರೆಯುತ್ತಾರೆ. ಈ ಮಹಿಷಾಸುರನಿಗೆ ಮಹಿಷಿ ಎಂಬ ತಂಗಿ ಇರುತ್ತಾಳೆ. ಅಣ್ಣನ ಸಾವಿನಿಂದ ದಿಗ್ಭ್ರಮೆಗೆ ಒಳಗಾಗುತ್ತಾಳೆ. ಇದರಿಂದ ಪಾಠ ಕಲಿಯುವ ಬದಲು ದೇವತೆಗಳ ಮೇಲೆ ಸೇಡನ್ನು ತೀರಿಸಿಕೊಳ್ಳಲು ಮುಂದಾಗುತ್ತಾಳೆ.
ಅಪ್ರತಿಮ ಶಕ್ತಿಯನ್ನು ಪಡೆಯಲು ಸಾವನ್ನು ಗೆಲ್ಲುವ ವರವನ್ನು ಪಡೆಯಲು ಮಹಿಷಿಯು ಬ್ರಹ್ಮನನ್ನು ನೆನೆದು ತಪಸ್ಸನ್ನು ಮಾಡುತ್ತಾಳೆ. ದೇವತೆಗಳು ಇದನ್ನು ತಡೆಯಲು ಪ್ರಯತ್ನಿಸಿದರೂ ಇವಳ ಭಕ್ತಿಗೆ ಸಂಪನ್ನನಾದ ಬ್ರಹ್ಮದೇವನು ಪ್ರತ್ಯಕ್ಷನಾಗುತ್ತಾನೆ. ಆಗ ಮಹಿಷಿಯು ಹರಿಹರರ ಸಮಾಗಮದಿಂದ ಜನಿಸುವ ಮಗುವಿನಿಂದ ತನ್ನ ಅಂತ್ಯವಾಗಬೇಕೆಂದು ವರವನ್ನು ಕೇಳುತ್ತಾಳೆ. ವಿಧಿ ಇಲ್ಲದೆ ಬ್ರಹ್ಮನು ಈ ವರವನ್ನು ನೀಡುತ್ತಾನೆ.
ದೇವತೆಗಳು ನಾರದರ ಸಲಹೆಯಂತೆ ಮಹಿಷಿಯನ್ನು ಸಂಹರಿಸಲು ಮತ್ತೊಮ್ಮೆ ತ್ರಿಮೂರ್ತಿಗಳ ಸಹಾಯವನ್ನು ಬೇಡುತ್ತಾರೆ. ಆದರೆ ಆಗ ಪುರುಷರೂಪಿ ಶಿವ ಮತ್ತು ಮೋಹಿನಿ ಮಾಯೆಯ ವಿಷ್ಣುವಿಗೆ ಮಗುವಿನ ಜನನವಾಗುತ್ತದೆ. ತ್ರಿಮೂರ್ತಿಗಳ ಅಭಯವನ್ನು ಪಡೆದ ಈ ಮಗುವು ಕಾಡಿನ ಮಧ್ಯೆ ಮಲಗಿರುತ್ತದೆ. ದಿನನಿತ್ಯದ ಅಭ್ಯಾಸದಂತೆ ಪಂದಳ ರಾಜನು ಆ ಕಾಡಿಗೆ ಆಗಮಿಸುತ್ತಾನೆ. ಅರಣ್ಯದಲ್ಲಿ ಮಗುವೊಂದು ಅಳುತ್ತಿರುವ ಧ್ವನಿ ಕೇಳಿಸುತ್ತದೆ. ಆಗ ಸಂತಾನ ಭಾಗ್ಯವಿಲ್ಲದ ರಾಜನು ಆ ಮಗುವನ್ನು ಅರಮನೆಗೆ ಕರೆದೊಯ್ಯುತ್ತಾನೆ. ಈ ಮಗು ದೇವರೇ ಕೊಟ್ಟ ವರಪ್ರಸಾದ ಎಂದು ನಂಬಿ ರಾಜಾರಾಣಿಯರು ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ. ಈ ಮಗುವಿಗೆ ಆಸ್ಥಾನದ ವಿದ್ವಾಂಸರ ಸಲಹೆಯಂತೆ ಮಣಿಕಂಠ ಎಂದು ನಾಮಕರಣ ಮಾಡುತ್ತಾರೆ.
ದೈವಾನುಗ್ರಹದಿಂದ ರಾಜ ರಾಣಿಗೆ ಮತ್ತೊಂದು ಗಂಡು ಸಂತಾನವಾಗುತ್ತದೆ. ಆದರೆ ಮಕ್ಕಳ ಬಗ್ಗೆ ಯಾವುದೇ ಭೇದ ಭಾವ ತೋರದೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತಾರೆ. ಹಿರಿಯನಾದ ಮಣಿಕಂಠನನ್ನು ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಲು ತೀರ್ಮಾನಿಸುತ್ತಾರೆ. ಮಣಿಕಂಠನ ಜೊತೆ ಮತ್ತೊಬ್ಬ ಮಗನು ಸಹ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾನೆ. ಗುರುವಿನ ಅನುಗ್ರಹದಿಂದ ಮಣಿಕಂಠನು ಸಕಲ ವಿದ್ಯಾಪಾರಂಗತನಾಗುತ್ತಾನೆ.
ಗುರುಗಳ ಆಶ್ರಮದಲ್ಲಿ ಅಚ್ಚರಿಯ ಘಟನೆಯೊಂದು ನಡೆಯುತ್ತದೆ. ಗುರುಗಳಿಗೆ ಕಣ್ಣು ಕಾಣದ, ಮಾತು ಬಾರದ ಮಗನೊಬ್ಬನಿರುತ್ತಾನೆ. ಅವರ ಜೀವನ ಈ ಕಾರಣದಿಂದಾಗಿ ದುಃಖದಿಂದ ಕೂಡಿರುತ್ತದೆ. ಈ ವಿಚಾರವನ್ನು ತಿಳಿದ ಮಣಿಕಂಠನು ಆಶ್ರಮದಲ್ಲಿರುವ ಬಾಲಕನನ್ನು ಭೇಟಿ ಮಾಡುತ್ತಾನೆ. ಕೇವಲ ಮಣಿಕಂಠನ ಹಸ್ತಸ್ಪರ್ಶದಿಂದಾಗಿ ಆ ಬಾಲಕನಿಗೆ ಕಣ್ಣು ಮತ್ತು ಮಾತು ಬರುತ್ತದೆ. ಇದರಿಂದ ಆ ಬಾಲಕನಿಗೆ ಪುನರ್ಜನ್ಮ ಸಿಕ್ಕಂತಾಗುತ್ತದೆ. ಇದನ್ನು ಕಂಡ ಗುರುಗಳು ಮಣಿಕಂಠನ ಶಕ್ತಿಯನ್ನು ಕಂಡು ಆಶ್ಚರ್ಯ ಚಕಿತರಾಗುತ್ತಾರೆ. ತಮ್ಮ ದಿವ್ಯದೃಷ್ಟಿಯಿಂದ ಈತನ ಜನನ ಲೋಕಾಭಿವೃದ್ಧಿಗಾಗಿ ಆಗಿದೆ ಎಂದು ತಿಳಿಯುತ್ತಾರೆ.
ವಿದ್ಯಾಭ್ಯಾಸವು ಸಂಪೂರ್ಣವಾಗುವ ಕಾರಣ ಮಣಿಕಂಠನು ತನ್ನ ಸೋದರನ ಜೊತೆ ಅರಮನೆಗೆ ಮರಳುತ್ತಾನೆ. ಇದರ ನಡುವೆ ದೇವತೆಗಳಿಗೆ ಮತ್ತು ಋಷಿಮುನಿಗಳಿಗೆ ಮಹಿಷಿನಿಂದ ಅಗಾದ ಪ್ರಮಾಣದ ಕಷ್ಟ ಕಾರ್ಪಣ್ಯಗಳು ಎದುರಾಗಿರುತ್ತವೆ. ಈ ಮಧ್ಯೆ ಮಹಾರಾಜನು ಮಣಿಕಂಠನನ್ನು ರಾಜ್ಯದ ಯುವರಾಜನನ್ನಾಗಿ ಮಾಡಬೇಕೆಂದು ತೀರ್ಮಾನಿಸುತ್ತಾನೆ. ಈ ವಿಚಾರಕ್ಕೆ ಮಹಾರಾಣಿಯ ಸಹಿತ ಆಸ್ಥಾನದ ಪ್ರತಿಯೊಬ್ಬರು ಒಪ್ಪಿಗೆಯನ್ನು ಸೂಚಿಸುತ್ತಾರೆ.
ರಾಜ್ಯದ ಸಾಮಾನ್ಯ ಜನರಿಂದ ಹಿಡಿದು ಆಸ್ಥಾನದ ಪಂಡಿತರವರೆಗೂ ಇದರ ಬಗ್ಗೆ ಒಪ್ಪಿಗೆ ಇರುತ್ತದೆ. ಆದರೆ ಮಹಾಮಂತ್ರಿ ಮಾತ್ರ ವಿರೋಧಿಸುತ್ತಾನೆ. ಆದರೆ ಮಹಾರಾಜನು ತನ್ನ ತೀರ್ಮಾನವನ್ನು ಬದಲಾಯಿಸುವುದಿಲ್ಲ.
ಅವಮಾನದಿಂದ ಬೇಸತ್ತ ಮಂತ್ರಿಯು ಮಹಾರಾಣಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಯುವರಾಜನಾಗಿ ಸ್ವಂತ ಮಗನನ್ನು ನೇಮಿಸಲು ಹೇಳುತ್ತಾನೆ. ಇದರಿಂದ ತನ್ನ ಮನಸ್ಸನ್ನು ಬದಲಾಯಿಸಿದ ಮಹಾರಾಣಿಯು ಇದು ಅಸಾಧ್ಯವಾದ ಕೆಲಸ ಎಂದು ಅರಿಯುತ್ತಾಳೆ. ಆಗ ಮಂತ್ರಿಯ ಉಪಾಯದಂತೆ ಹೊಟ್ಟೆ ನೋವೆಂದು ನರಳಲು ಆರಂಭಿಸುತ್ತಾಳೆ. ಭಯಗೊಂಡ ಮಹಾರಾಜನು ವೈದ್ಯನೊಬ್ಬನನ್ನು ಕರೆಸುತ್ತಾನೆ. ಆದರೆ ಮಂತ್ರಿಯಿಂದ ಹಣವನ್ನು ಸ್ವೀಕರಿಸಿರುತ್ತಾನೆ. ಆದ್ದರಿಂದ ತನ್ನ ಬಳಿ ಇರುವ ಔಷಧಿಯನ್ನು ಹುಲಿಯ ಹಾಲಿನಲ್ಲಿ ಮಿಶ್ರಗೊಳಿಸಿ ರಾಣಿಗೆ ಕುಡಿಸಬೇಕು ಇಲ್ಲದೆ ಹೋದರೆ ರಾಣಿಯ ಜೀವಕ್ಕೆ ಆಪತ್ತು ಎಂದು ತಿಳಿಸುತ್ತಾನೆ.
ಇದನ್ನು ಮಣಿಕಂಠನ ತಾಯಿಯನ್ನು ಉಳಿಸಿಕೊಳ್ಳಲು ಹುಲಿಯ ಹಾಲನ್ನು ತರುವುದಾಗಿ ತಿಳಿಸಿ ಕಾಡಿಗೆ ತೆರಳುತ್ತಾನೆ. ಈ ಮಧ್ಯೆ ಮಹಿಷಿಯ ಸಂಹಾರವನ್ನು ಮಾಡಿ ದೇವತೆಗಳ ಸಂಕಷ್ಟವನ್ನು ದೂರ ಮಾಡುತ್ತಾನೆ. ಆನಂತರ ಮಣಿಕಂಠನ ಜನ್ಮ ರಹಸ್ಯವನ್ನು ತಿಳಿದ ಇಂದ್ರನು ಹುಲಿಯಾಗಿ ಮಾರ್ಪಾಡಾಗುತ್ತಾನೆ. ಹುಲಿಯ ಮೇಲೇರಿ ಮಣಿಕಂಠನು ಅರಮನೆಗೆ ಆಗಮಿಸುತ್ತಾನೆ. ಇದನ್ನು ಕಂಡ ರಾಜನಿಗೆ ಸಂತೋಷ ಮತ್ತು ಅಭಿಮಾನಗಳು ಉಂಟಾಗುತ್ತವೆ. ಆದರೆ ಮಹಾರಾಣಿಯು ಕ್ಷಮೆ ಯಾಚಿಸುತ್ತಾಳೆ. ಆನಂತರ ಮಣಿಕಂಠನನ್ನು ಯುವರಾಜರನ್ನಾಗಿ ಮಾಡಬೇಕೆಂದು ಎಲ್ಲರೂ ನಿರ್ಧರಿಸುತ್ತಾರೆ. ಆದರೆ ಮಣಿಕಂಠನು ತನ್ನ ಜನ್ಮದ ಕಾರಣವನ್ನು ತಿಳಿಸಿ ಶಬರಿಮಲೆಯಲ್ಲಿ ನೆಲೆಸುತ್ತಾನೆ. ಇಂದಿಗೂ ಬರುವ ಭಕ್ತಾದಿಗಳಿಗೆ ಮಣಿಕಂಠನು ಜ್ಯೋತಿಯ ರೂಪದಲ್ಲಿ ದರ್ಶನವಿಟ್ಟು ಎಲ್ಲರನ್ನೂ ಕಾಪಾಡುತ್ತಾನೆ ಎಂಬುದು ನಿತ್ಯ ಸತ್ಯ.
ಬರಹ: ಎಚ್. ಸತೀಶ್
ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832