ಇಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನ; ನಿಮ್ಮ ಸುತ್ತಲಿನ ಹಿರಿಯರನ್ನು ಗೌರವಿಸಿ, ಅವರ ಅನುಭವವನ್ನು ಅಳವಡಿಸಿಕೊಳ್ಳಿ
ಅಕ್ಟೋಬರ್ 1ರಂದು ಸಮಾಜದಲ್ಲಿ ವಯಸ್ಸಾದವರ ಕೊಡುಗೆಗಳನ್ನು ಗುರುತಿಸಲು ಮತ್ತು ಅವರ ಶ್ರಮವನ್ನು ಗೌರವಿಸಲು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಆಚರಿಸಲಾಗುತ್ತದೆ. ನೀವು ನಿಮ್ಮ ಸುತ್ತಲಿನ ಹಿರಿಯರನ್ನು ಗೌರವಿಸಿ, ಅವರ ಅನುಭವವನ್ನು ಅಳವಡಿಸಿಕೊಳ್ಳಿ. ವಯಸ್ಸು ಕೇವಲ ಒಂದು ಸಂಖ್ಯೆ ಎಂಬಂತೆ ಬದುಕಲು ಪ್ರಯತ್ನಿಸಿ.
ಅಕ್ಟೋಬರ್ 1ರಂದು ಸಮಾಜದಲ್ಲಿ ವಯಸ್ಸಾದವರ ಕೊಡುಗೆಗಳನ್ನು ಗುರುತಿಸಲು ಮತ್ತು ಅವರ ಶ್ರಮವನ್ನು ಗೌರವಿಸಲು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಅವರಿಗಾಗೇ ಮೀಸಲಿಡಲಾಗಿದೆ. ವಯಸ್ಸಾದವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವವನ್ನು ಎಲ್ಲರೂ ಅರಿತು ನಿಮ್ಮ ಸುತ್ತಮುತ್ತಲಿನಲ್ಲಿ ಯಾರಾದರೂ ಅಸಹಾಯಕ ಹಿರಿಯ ಜೀವಿಗಳಿದ್ದರೆ ಅವರಿಗೆ ಸಹಾಯ ಮಾಡಿ. ಅವರ ಯೋಗಕ್ಷೇಮವನ್ನು ವಿಚಾರಿಸಿ. ಆರೈಕೆಯ ಅಗತ್ಯವಿದ್ದರೆ ಸಹಾಯ ಮಾಡಿ. ಹಿರಿಯ ನಾಗರಿಕರಿಗೆ ಬೆಂಬಲವಾಗಿ ಹಲವಾರು ಯೋಜನೆಗಳಿವೆ.
ಆದರೆ ಆ ಯೋಜನೆಗಳನ್ನು ತೆಗೆದುಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ಎಷ್ಟೋ ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಇಂದು ವಯಸ್ಸಾದವರೇ ತುಂಬಿ ಹೋಗಿದ್ದಾರೆ. ಮಕ್ಕಳು ಸಹ ತಮ್ಮ ಪಾಲಕರ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿಲ್ಲ. ಸಂತೆಯಿಂದ ತಂದ ವಸ್ತುವನ್ನು ಮತ್ತೆ ವಾಪಸ್ ಹಾಕುವಂತೆ ತಂದೆ, ತಾಯಿಗಳನ್ನೇ ಮನೆಯಿಂದ ಆಚೆ ತಳ್ಳುತ್ತಿದ್ದಾರೆ.
1990ರಲ್ಲಿ ನಿರ್ಧರಿಸಲಾಯಿತು
ಸಮಾಜಕ್ಕೆ ವಯಸ್ಸಾದ ವ್ಯಕ್ತಿಗಳ ಕೊಡುಗೆಗಳನ್ನು ಗುರುತಿಸಲು ಮತ್ತು ಅವರ ಯೋಗಕ್ಷೇಮವನ್ನು ಕಾಪಾಡಲು ಜನರಲ್ಲಿ ಜಾಗೃತಿ ಮೂಡಿಸಬೇಕಾದ ಕೆಲಸ ಆಗಬೇಕಿದೆ. ಆ ಕಾರಣಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. 1990 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಈ ರೀತಿ ಒಂದು ದಿನವನ್ನು ಆಚರಣೆ ಮಾಡಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. ಅದರಂತೆ ಪ್ರತಿವರ್ಷ ಅಕ್ಟೋಬರ್ 1ರಂದು ಈ ದಿನವನ್ನು ಆಚರಿಸಲಾಗುತ್ತದೆ.
ಆರೋಗ್ಯ, ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ವಯಸ್ಸಾದವರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಸವಾಲುಗಳನ್ನು ಪರಿಹರಿಸುವ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಲಾಗುತ್ತದೆ. ಆದರೂ ಪ್ರತಿವರ್ಷವೂ ಎಷ್ಟೋ ಹಿರಿಯ ಜೀವಗಳು ಅನಾಥವಾಗಿ ಸಾವನ್ನಪ್ಪುತ್ತವೆ.
ವಯಸ್ಕರಿಗಾಗಿ ಸ್ಪರ್ಧೆ
ಭಾರತದಲ್ಲಿ, ವಯಸ್ಸಾದ ವ್ಯಕ್ತಿಗಳಿಗೆ ಅಂತರರಾಷ್ಟ್ರೀಯ ದಿನವನ್ನು ವಿವಿಧ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಆಚರಣೆ ಮಾಡಲಾಗುತ್ತದೆ. ವೃದ್ಧರನ್ನು ಗೌರವಿಸುವ ಮತ್ತು ಬೆಂಬಲಿಸುವ ದೃಷ್ಟಿಯಿಂದ ಅವರಿಗಾಗಿಯೇ ಹಲವು ಸ್ಪರ್ಧೆಗಳನ್ನು ಇಡಲಾಗುತ್ತದೆ. ವಯಸ್ಕರ ಕ್ರೀಡೆ ಇಡಲಾಗುತ್ತದೆ. ನಿವೃತ್ತಿ ಜೀವನ ಅನುಭವಿಸುತ್ತಿರುವ ಎಷ್ಟೋ ಜನರಿಗೆ ಇದು ಖುಷಿ ನೀಡುವ ದಿನವಾಗುತ್ತದೆ.
ಜಾಗೃತಿ ಅಭಿಯಾನ: ಭಾರತದಲ್ಲಿ ದತ್ತಿ ಸಂಸ್ಥೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ವಯಸ್ಸಾದ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಜಾಗೃತಿ ಅಭಿಯಾನಗಳನ್ನು ಮಾಡುತ್ತವೆ. ಆರೋಗ್ಯ ಮತ್ತು ಆರ್ಥಿಕ ಭದ್ರತೆಯ ಅಗತ್ಯತೆ ಬಗ್ಗೆ ಈ ಅಭಿಯಾನದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಎನ್‌ಜಿಒಗಳು: ವೃದ್ಧರ ಹಕ್ಕುಗಳನ್ನು ರಕ್ಷಿಸಲು ಎನ್‌ಜಿಒಗಳು ಪ್ರಯತ್ನ ಮಾಡುತ್ತವೆ. ಹಿರಿಯರ ಬಗ್ಗೆ ಇರುವ ನಿರ್ಲಕ್ಷ್ಯ ಮತ್ತು ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸಲು ಸದಾ ಪ್ರಯತ್ನಿಸುತ್ತದೆ. ಹೀಗೆ ಹಲವಾರು ರೀತಿಯಲ್ಲಿ ವಯಸ್ಕರಿಗೆ ಬೆಂಬಲವಾಗಿ ನಿಲ್ಲುವ ಕೆಲಸವನ್ನು ಈ ದಿನದಂದು ಮಾಡಲಾಗುತ್ತದೆ.
ಇಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವಾದ್ದರಿಂದ ನಿಮ್ಮ ಸುತ್ತಲಿನ ಹಿರಿಯರನ್ನು ಗೌರವಿಸಿ, ಅವರ ಅನುಭವವನ್ನು ಅಳವಡಿಸಿಕೊಳ್ಳಿ. ಅವರ ಸಾಧನೆಯ ದಿನಗಳನ್ನು ಅವರೊಂದಿಗೆ ಮೆಲುಕುಹಾಕಿ ಸ್ವಲ್ಪ ಖುಷಿ ನೀಡಿ.
ವಿಭಾಗ