ಕನ್ನಡ ಸುದ್ದಿ  /  Lifestyle  /  Vastu Tips These 7 Nature Paintings Fill Your Home With Positive Energy Vastu Shastra Bgy

Vastu Tips: ನಿಮ್ಮ ಮನೆಗೆ ಧನಾತ್ಮಕ ಶಕ್ತಿ ನೀಡತ್ತೆ ನಿಸರ್ಗಕ್ಕೆ ಸಂಬಂಧಿಸಿದ ಈ 7 ವರ್ಣಚಿತ್ರಗಳು

Nature Paintings: ಕೆಲವು ವರ್ಣಚಿತ್ರಗಳು ಕೇವಲ ನಿಮ್ಮ ಮನೆಯ ಒಳಾಂಗಣದ ಅಂದವನ್ನು ಹೆಚ್ಚಿಸುವುದಿಲ್ಲ, ಮನೆಗೆ ಧನಾತ್ಮಕ ಶಕ್ತಿಯನ್ನು ಕೂಡ ನೀಡುತ್ತವೆ. ವಾಸ್ತು ಪ್ರಕಾರವಾಗಿ ಮನೆಯಲ್ಲಿ ಯಾವ ದಿಕ್ಕಿಗೆ ಯಾವ ವಿಧವಾದ ವರ್ಣಚಿತ್ರಗಳನ್ನು ಬಳಕೆ ಮಾಡಿದರೆ ಧನಾತ್ಮಕ ಶಕ್ತಿ ನಿಮ್ಮ ಮನೆಯನ್ನು ತುಂಬಿಕೊಳ್ಳುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ನಿಸರ್ಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳು (pixabay)
ನಿಸರ್ಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳು (pixabay)

ಮನೆಯಲ್ಲಿರುವ ಪ್ರತಿಯೊಂದು ವಸ್ತು ಮತ್ತು ಆ ವಸ್ತುವನ್ನು ನಾವು ಇಟ್ಟಿರುವ ದಿಕ್ಕು, ಇಲ್ಲವೇ ಜಾಗ ವಾಸ್ತು ಪ್ರಕಾರ ಸರಿಯಿದೆಯೇ ಎಂಬುದಾಗಿ ಪರಿಶೀಲಿಸಿಕೊಳ್ಳಬೇಕು. ಯಾಕೆಂದರೆ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿಕೊಂಡಿದೆಯೇ, ಇಲ್ಲವೇ ಋಣಾತ್ಮಕ ಶಕ್ತಿಯೇ ಎಂಬುದು ಅದರ ಮೇಲೆಯೇ ಅವಲಂಭಿಸಿದೆ. ಧನಾತ್ಮಕ ಶಕ್ತಿ ಇಲ್ಲವೇ ಚೈತನ್ಯವು ಮನೆ ಮಂದಿಯ ಸುಖ, ಸಂತೋಷ, ನೆಮ್ಮದಿ ಮಾತ್ರವಲ್ಲದೇ ಅಭಿವೃದ್ಧಿಗೂ ಕಾರಣವಾಗಲಿದೆ. ಮನೆಯ ಅಂದವನ್ನು ಹೆಚ್ಚಿಸುವ ವಸ್ತುಗಳ ಪೈಕಿ ಪ್ರಮುಖವಾದವು ವರ್ಣಚಿತ್ರಗಳು. ಇವು ನಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ವಾಸ್ತು ಪ್ರಕಾರ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುವ ನಿಸರ್ಗ ಸಂಬಂಧಿತ ವರ್ಣಚಿತ್ರಗಳ ಮಾಹಿತಿ ಇಲ್ಲಿದೆ..

1. ಹಚ್ಚ ಹಸಿರಿನ ಕಾಡಿನ ಪೇಂಟಿಂಗ್​: ನಿಮ್ಮ ಮನೆಯಲ್ಲಿ ಹಚ್ಚ ಹಸಿರಿನ ಕಾಡಿನಿಂದ ಕೂಡಿದ ವರ್ಣಚಿತ್ರಗಳಿವೆಯೇ ? ಇಲ್ಲವಾದರೆ ಇಂದೇ ಅಂತಹ ವರ್ಣಚಿತ್ರವನ್ನು ಮನೆಗೆ ತನ್ನಿ. ಯಾಕೆಂದರೆ ಹಸಿರಿನಿಂದ ಕೂಡಿದ ಆ ಮರಗಳು ಮನೆ ಮಂದಿಯ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ. ಅಲ್ಲದೆ ವಾಸ್ತು ಪ್ರಕಾರ ಇದು ಕುಟುಂಬದಲ್ಲಿ ಸಾಮರಸ್ಯವನ್ನು ಹೆಚ್ಚಿಸುತ್ತದೆ.

2. ಹರಿಯುವ ನೀರಿನ ಪೇಂಟಿಂಗ್​: ನದಿಗಳು, ಜಲಪಾತಗಳಂತಹ ಹರಿಯುವ ನೀರನ್ನು ಬಿಂಬಿಸುವ ವರ್ಣಚಿತ್ರಗಳು ನಿಮ್ಮ ಮನೆಗೆ ಪ್ರಶಾಂತತೆ ಮತ್ತು ಸಮೃದ್ಧಿಯ ಭಾವವನ್ನು ತರುತ್ತವೆ. ಅಲ್ಲದೆ ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿಯ ಹರಿವನ್ನು ಸಾಂಕೇತಿಕವಾಗಿ ಹೇಳುತ್ತದೆ.

3.ಹೂವುಗಳಿಂದ ತುಂಬಿಕೊಂಡ ಮರಗಳ ವರ್ಣಚಿತ್ರ: ಬಣ್ಣದ ಹೂವುಗಳಿಂದ ತುಂಬಿಕೊಂಡಿರುವ ಮರಗಳು ಅಥವಾ ವಿಭಿನವಾದ ಹಣ್ಣುಗಳಿಂದ ಕೂಡಿರುವ ಮರಗಳು ಅಭಿವೃದ್ಧಿಯ ಸಂಕೇತ ಮಾತ್ರವಲ್ಲದೇ ಅವಕಾಶಗಳು ಚಿಗುರೊಡೆಯುವ ಸಂದೇಶವನ್ನು ಸಾರುತ್ತವೆ. ಈ ವರ್ಣಚಿತ್ರಗಳು ವಾಸ್ತು ಪ್ರಕಾರ ನಿಮ್ಮ ಮನೆಗೆ ಸೂಕ್ತ ಆಯ್ಕೆಯಾಗಿರುತ್ತದೆ.

4. ಹೊಂಬಣ್ಣದ ಸೂರ್ಯ: ಉದಯಿಸುವ ಸೂರ್ಯ ಅಥವಾ ಸೂರ್ಯಾಸ್ತಮಾನದ ವರ್ಣಚಿತ್ರಗಳು ಹೊಸ ಆರಂಭದ ಸೂಚಕವಾಗಿವೆ ಅಲ್ಲವೇ ದಿನವು ಫಲಪ್ರದವಾಗಿ ಅಂತ್ಯ ಕಾಣುವುದರ ಸಂಕೇತವೂ ಹೌದು. ಇದು ನಿಮ್ಮ ಸುಂದರವಾದ ಸೂರಿನಲ್ಲಿ ಧನಾತ್ಮಕ ಶಕ್ತಿ ಮತ್ತು ಶಾಂತಿಯನ್ನು ತರಬಲ್ಲುದು.

5. ಪಕ್ಷಿಗಳು ಮತ್ತು ಚಿಟ್ಟೆಗಳು: ಬಣ್ಣ ಬಣ್ಣದ ಪಕ್ಷಿಗಳು ಮತ್ತು ಚಿಟ್ಟೆಗಳು ಸಂತೋಷ ಮತ್ತು ಸಕಾರಾತ್ಮಕ ಕಂಪನಗಳನ್ನು ತರುತ್ತವೆ. ವಾಸ್ತು ಪ್ರಕಾರ ಅವುಗಳು ಮನೆ ಮಂದಿಯ ಒಗ್ಗಟ್ಟು, ನೆಮ್ಮದಿ ಮಾತ್ರವಲ್ಲದೆ ಸ್ವಾತಂತ್ರ್ಯ ವನ್ನು ಸಾಂಕೇತಿಕವಾಗಿದೆ.

6. ಪರ್ವತಗಳು ಮತ್ತು ಬೆಟ್ಟಗಳು: ಅದ್ಭುತವಾಗಿ ಮನಸೂರೆಗೈವಂತಿರುವ ಪರ್ವತಗಳು ಮತ್ತು ಬೆಟ್ಟಗಳ ವರ್ಣಚಿತ್ರಗಳನ್ನು ನಿಮ್ಮ ಮನೆಯ ಗೋಡೆಯ ಮೇಲೆ ತೂಗುಹಾಕಿ ನೋಡಿ. ಇದು ದೃಢತೆ ಹಾಗೂ ಸ್ಥಿರತೆಯ ಸಂಕೇತ. ವಾಸ್ತು ಪ್ರಕಾರ, ಈ ಭವ್ಯವಾದ ಪರ್ವತಗಳು ಶಕ್ತಿಯನ್ನು ಪ್ರತಿನಿಧಿಸುತ್ತವೆ ಮತ್ತು ಭದ್ರತೆಯ ಭಾವನೆವನ್ನು ಮನೆಯ ಮಂದಿಯಲ್ಲಿ ತುಂಬುತ್ತದೆ.

7. ತಾವರೆ ಕೊಳ: ದೇಶಿಯ ಹೂವು ಎಂಬ ಪಟ್ಟವನ್ನು ಅಲಂಕರಿಸಿರುವ ತಾವರೆಯು ಶುದ್ಧತೆ, ಶುಭ್ರತೆ ಮತ್ತು ಆಧ್ಯಾತ್ಮಿಕ ಅರಿವನ್ನು ತಿಳಿಸುತ್ತವೆ. ತಾವರೆಗಳ ಕೊಳವನ್ನು ಬಿಂಬಿಸುವಂತಹ ವರ್ಣಚಿತ್ರಗಳು ಮನೆಯಲ್ಲಿ ಆಧ್ಯಾತ್ಮಿಕ ಅರಿವಿನ ಮಟ್ಟವನ್ನು ಪ್ರತಿಬಿಂಬಿಸುತ್ತವೆ.

ಅದೇನೇ ಇದ್ದರೂ ಮನೆಯನ್ನು ಒಪ್ಪ ಓರಣಗೊಳಿಸುವುದಕ್ಕಾಗಿ ಸಿಕ್ಕ ಸಿಕ್ಕ ವರ್ಣಚಿತ್ರಗಳನ್ನು ಕೊಂಡುತರುವ ಮುನ್ನ ವಾಸ್ತು ಪ್ರಕಾರ, ಮನೆಗೆ ಯಾವ ತರಹದ ವರ್ಣಚಿತ್ರಗಳು ಸೂಕ್ತ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಈ ಮೂಲಕ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಲು ಹಾಗೂ ಶಾಂತಿ ನೆಮ್ಮದಿಯಿಂದ ಕೂಡಿರಲು ಸಹಕಾರಿಯಾಗಲಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)