World Bicycle Day: ಸೈಕ್ಲಿಂಗ್ ಮಾಡುವವರು ಈ ವಿಷಯಗಳನ್ನು ನೆನಪಿನಲ್ಲಿಡಿ
ಫಿಟ್ನೆಸ್ ಕಾಪಾಡಿಕೊಳ್ಳಲು ಸೈಕ್ಲಿಂಗ್ ಉತ್ತಮ ವ್ಯಾಯಾಮ. ಇದು ಕೊಬ್ಬನ್ನು ಕರಗಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಮುಖ್ಯವಾದ ವಿಚಾರವೆಂದರೆ ಬೈಸಿಕಲ್ ಬಳಸುವುದರಿಂದ ಶಬ್ಧ ಮಾಲಿನ್ಯ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು.
2018 ರಿಂದ ಪ್ರತಿವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಬೈಸಿಕಲ್ ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಗುರುತಿಸಲಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ಈ ದಿನವು ಬೈಸಿಕಲ್‌ನ ವಿಶಿಷ್ಟತೆ, ದೀರ್ಘಾಯುಷ್ಯ ಮತ್ತು ಬಹುಮುಖತೆಯನ್ನು ಎತ್ತಿ ತೋರಿಸುತ್ತದೆ.
ಫಿಟ್ನೆಸ್ ಕಾಪಾಡಿಕೊಳ್ಳಲು ಸೈಕ್ಲಿಂಗ್ ಉತ್ತಮ ವ್ಯಾಯಾಮ. ಲಘು ವ್ಯಾಯಾಮದೊಂದಿಗೆ ಸೈಕ್ಲಿಂಗ್ ಮಾಡುವುದು ಕೊಬ್ಬನ್ನು ಕರಗಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಮೈ ಕೊರೆಯುವ ಚಳಿಯಲ್ಲೂ, ಬೇಸಿಗೆಯ ಸಮಯದಲ್ಲೂ ಬೆವರು ಸುರಿಸಿ ದೇಹ ಸದೃಢವಾಗಿರಲು ಸೈಕ್ಲಿಂಗ್ ಉತ್ತಮ ವ್ಯಾಯಾಮ.
ಇನ್ನೊಂದು ಮುಖ್ಯವಾದ ವಿಚಾರವೆಂದರೆ ಬೈಸಿಕಲ್ ಬಳಸುವುದರಿಂದ ಶಬ್ಧ ಮಾಲಿನ್ಯ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಾದರೂ ಜನರು ಹೆಚ್ಚೆಚ್ಚು ಬೈಸಿಕಲ್ ಬಳಸುವುದು ಉತ್ತಮ.
ಸೈಕ್ಲಿಂಗ್‌ಗೆ ಕೆಲವು ಮುನ್ನೆಚ್ಚರಿಕೆಗಳ ಅಗತ್ಯವಿರುತ್ತದೆ, ಜೊತೆಗೆ ಕೆಲವು ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಅವುಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಬಹುದು. ಅವೇನೋ ನೋಡೋಣ ಬನ್ನಿ..
ಸೈಕ್ಲಿಂಗ್‌ಗೆ ಸಲಹೆಗಳು:
1. ನೀವು ಸೈಕ್ಲಿಂಗ್ ಪ್ರಾರಂಭಿಸಿದಾಗ ನಿಮ್ಮ ಸ್ಥಾನವು ಸರಿಯಾಗಿರಬೇಕು ಎಂಬುದನ್ನು ನೆನಪಿಡಿ. ನೀವು ಕುಳಿತುಕೊಳ್ಳುವ ಆಸನಕ್ಕೆ ವಿಶೇಷ ಗಮನ ಕೊಡಿ. ಆಸನವು ನಿಮಗೆ ಸರಿಹೊಂದದಿದ್ದರೆ ಅವುಗಳನ್ನು ಬದಲಾಯಿಸಿ. ಸೈಕಲ್ ತುಳಿಯುವಾಗ ನಿಮಗೆ ಸ್ವಲ್ಪ ಅನಾನುಕೂಲ ಅನಿಸಿದರೆ, ನಿಮ್ಮ ಆಸನದಿಂದ ಎದ್ದು ಮತ್ತೆ ಕುಳಿತುಕೊಳ್ಳಿ ಅಥವಾ ಸ್ವಲ್ಪ ಹೊತ್ತು ನಿಂತುಕೊಂಡು ನಿಮ್ಮ ಸೈಕಲ್ ಸವಾರಿ ಮಾಡಿ. ಹೀಗೆ ಮಾಡುವುದರಿಂದ ಬೆನ್ನು ನೋವನ್ನು ತಡೆಯಬಹುದು.
2. ಬೈಸಿಕಲ್ ಸವಾರಿ ಮಾಡುವಾಗ ಸಾಧ್ಯವಾದಷ್ಟು ನೇರವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ. ನಿಮ್ಮ ಭುಜಗಳನ್ನು ಸಹ ಆರಾಮದಾಯಕವಾಗಿ ಇರಿಸಿ. ದೀರ್ಘಕಾಲದವರೆಗೆ ಒಂದೇ ಭಂಗಿಯಲ್ಲಿ ಸೈಕಲ್ ಸವಾರಿ ಮಾಡುವುದರಿಂದ ಕುತ್ತಿಗೆ ಬಿಗಿತ ಮತ್ತು ಕುತ್ತಿಗೆ ನೋವು ಉಂಟಾಗುತ್ತದೆ.
3. ನೀವು ಈಗಷ್ಟೇ ಫಿಟ್‌ನೆಸ್‌ಗಾಗಿ ಸೈಕ್ಲಿಂಗ್ ಆರಂಭಿಸಿದ್ದರೆ, ನೇರ ಹ್ಯಾಂಡಲ್ ಇರುವ ಬೈಸಿಕಲ್ ಅನ್ನು ಆಯ್ಕೆ ಮಾಡಿ. ಹ್ಯಾಂಡಲ್ನ ದುಂಡಗಿನ ಆಕಾರದಿಂದಾಗಿ, ಸೊಂಟವನ್ನು ದೀರ್ಘಕಾಲದವರೆಗೆ ಬಾಗಿಸಬೇಕಾಗುತ್ತದೆ. ಇದು ಬೆನ್ನುನೋವಿಗೆ ಕಾರಣವಾಗುತ್ತದೆ.
4. ನೀವು ಸೈಕ್ಲಿಂಗ್ ಮಾಡಲು ಹೊಸಬರಾಗಿದ್ದರೆ ಆರಾಮದಾಯಕವಾದ ಶೂಗಳನ್ನು ಧರಿಸಿ ಅದು ಸೈಕ್ಲಿಂಗ್ ಅನ್ನು ಸುಲಭಗೊಳಿಸುತ್ತದೆ. ಇದು ನಿಮ್ಮ ಕಾಲ್ಬೆರಳುಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುವುದಿಲ್ಲ.
5. ಬೈಸಿಕಲ್ ಸವಾರಿ ಮಾಡುವ ಮೊದಲು, ನಿಮ್ಮ ಎತ್ತರಕ್ಕೆ ಸರಿಯಾದ ಎತ್ತರಕ್ಕೆ ಸೀಟನ್ನು ಹೊಂದಿಸುವುದು ಮುಖ್ಯ. ಆಸನದ ಎತ್ತರವು ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಇರಬಾರದು. ನಿಮ್ಮ ಎರಡೂ ಪಾದಗಳು ನೆಲಕ್ಕೆ ಸರಿಯಾಗಿ ತಾಗುವಂತೆ ಆಸನವನ್ನು ಹೊಂದಿಸಿ. ಹೀಗೆ ಮಾಡುವುದರಿಂದ ಮೊಣಕಾಲು ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
6. ಸೈಕ್ಲಿಂಗ್ ಮಾಡುವಾಗ ಕಾಲುಗಳು ಮತ್ತು ತೊಡೆಯ ಸ್ನಾಯುಗಳು ಹೆಚ್ಚು ಒತ್ತಡಕ್ಕೊಳಗಾಗುತ್ತವೆ. ಆದ್ದರಿಂದ ಮೊದಲ ದಿನಗಳಲ್ಲೇ ಹೆಚ್ಚು ಸಮಯ ಸೈಕಲ್ ಮಾಡಬೇಡಿ, ನಿಧಾನವಾಗಿ ಸಮಯವನ್ನು ಹೆಚ್ಚಿಸಿ.
ಸೈಕ್ಲಿಂಗ್‌ನಿಂದ ದೇಹಕ್ಕೆ ಆಗುವ ಪ್ರಯೋಜನಗಳೇನು?
- ದಿನಕ್ಕೆ ಒಂದು ಗಂಟೆ ಸೈಕ್ಲಿಂಗ್ ಮಾಡುವುದರಿಂದ ಸುಮಾರು 300 ಕ್ಯಾಲೋರಿಗಳನ್ನು ಸುಡಬಹುದು.
- ಸೈಕ್ಲಿಂಗ್ ಅನ್ನು ನಿಯಮಿತವಾಗಿ ಮಾಡುವುದರಿಂದ ನಮ್ಮ ಉಸಿರಾಟವು ಸುಧಾರಿಸುತ್ತದೆ. ಹೃದಯ ಮತ್ತು ಉಸಿರಾಟದ ತೊಂದರೆಗಳು ದೂರವಾಗುತ್ತವೆ.
- ಸೈಕ್ಲಿಂಗ್ ವೇಗವಾಗಿ ಕೊಬ್ಬನ್ನು ಕರಗಿಸುತ್ತದೆ ಮತ್ತು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಧಿಕ ತೂಕದಿಂದ ಬಳಲುತ್ತಿರುವವರಿಗೆ ಸೈಕ್ಲಿಂಗ್ ತುಂಬಾ ಪ್ರಯೋಜನಕಾರಿಯಾಗಿದೆ.
- ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ಶೇಕಡಾ 50 ರಷ್ಟು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
- ಸೈಕ್ಲಿಂಗ್ನಿಂದಾಗಿ ದೇಹದ ಬಹುತೇಕ ಎಲ್ಲಾ ಸ್ನಾಯುಗಳನ್ನು ಕೆಲಸ ಮಾಡುತ್ತದೆ. ಇದು ಸ್ನಾಯುಗಳನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ.
- ದಿನನಿತ್ಯದ ಸೈಕ್ಲಿಂಗ್ ಕೂಡ ಕ್ರಮೇಣ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಕಾಲ ಪ್ರಣಯವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
- ಸೈಕ್ಲಿಂಗ್ನಿಂದಾಗಿ ನಿಮ್ಮ ದೇಹದಲ್ಲಿನ ಎಲ್ಲಾ ಸ್ನಾಯುಗಳು ಪ್ರಚೋದನೆಗೆ ಒಳಗಾಗುತ್ತವೆ ಮತ್ತು ನೀವು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಪಡೆಯುತ್ತೀರಿ.
- ಸೈಕ್ಲಿಸ್ಟ್‌ಗಳಲ್ಲಿ ಚಯಾಪಚಯವು ಸುಧಾರಿಸುತ್ತದೆ. ಇದು ದೇಹವು ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ನೀವು ದಿನವಿಡೀ ಕ್ರಿಯಾಶೀಲರಾಗಿರುತ್ತೀರ.
- ಸೈಕ್ಲಿಂಗ್ನಿಂದಾಗಿ ನಿಮ್ಮ ಕೀಲುಗಳು, ಮೊಣಕಾಲುಗಳು ಮತ್ತು ಮೂಳೆಗಳು ಗಟ್ಟಿಯಾಗುತ್ತವೆ.
- ಸೈಕ್ಲಿಂಗ್ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹವನ್ನು ನಿಯಂತ್ರಿಸುತ್ತದೆ.
ವಿಭಾಗ