ಲೆಬನಾನ್‌ನಲ್ಲಿ ಪೇಜರ್ ಸ್ಫೋಟ; 8 ಹಿಜ್ಬುಲ್ಲಾ ಸದಸ್ಯರು ಸಾವು, 2750ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ದೇಶಾದ್ಯಂತ ನಡೆದ ಪೇಜರ್ ಸ್ಫೋಟಗಳಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 2,750 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ.
ಲೆಬನಾನ್ ದೇಶದ ಸಶಸ್ತ್ರ ಪಡೆ ಹಿಜ್ಬುಲ್ಲಾ ಭಾರಿ ಅಪಾಯಕ್ಕೆ ತುತ್ತಾಗಿದೆ. ಸೆಪ್ಟೆಂಬರ್ 17ರ ಮಂಗಳವಾರ ನಡೆದ ಭದ್ರತಾ ಲೋಪದಿಂದ ಸಶಸ್ತ್ರ ಪಡೆಯಾದ ಹಿಜ್ಬುಲ್ಲಾ (Hezbollah)ದ 8 ಸದಸ್ಯರು ಸಾವನ್ನಪ್ಪಿದ್ದಾರೆ. ಅಲ್ಲದೆ 2750ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ತಿಳಿಸಿದ್ದಾರೆ. ಸಶಸ್ತ್ರ ಪಡೆಯು ತಮ್ಮ ಸದಸ್ಯರ ನಡುವಿನ ಸಂವಹನಕ್ಕಾಗಿ ಬಳಸುವ ಪೇಜರ್ (pagers) ಸ್ಫೋಟದಿಂದಾಗಿ ವೈದ್ಯರು ಸೇರಿದಂತೆ ಸಾವಿರಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಪ್ರಕಾರ, ಇಸ್ರೇಲ್‌ನೊಂದಿಗಿನ ಸುಮಾರು ಒಂದು ವರ್ಷದ ಯುದ್ಧದಲ್ಲಿ ಸಶಸ್ತ್ರ ಪಡೆ ಅನುಭವಿಸಿದ ಅತಿದೊಡ್ಡ ಭದ್ರತಾ ಲೋಪ ಇದಾಗಿದೆ ಎಂದು ಹಿಜ್ಬುಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಪೇಜರ್ ಸ್ಫೋಟಗಳಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹಿಜ್ಬುಲ್ಲಾ ಮೂಲಗಳು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ.
ಸ್ಫೋಟದಲ್ಲಿ ಓರ್ವ ಬಾಲಕಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಮಾರು 2,750 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 200ಕ್ಕೂ ಹೆಚ್ಚು ಜನರ ಮುಖ, ಕೈ ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ವ್ಯಾಪಕ ಭೀತಿಯ ನಡುವೆ ಲೆಬನಾನ್ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳ ಮೂಲಕ ಆಂಬ್ಯುಲೆನ್ಸ್‌ಗಳು ಧಾವಿಸುತ್ತಿರುವುದನ್ನು ರಾಯಿಟರ್ಸ್ ಪತ್ರಕರ್ತರೊಬ್ಬರು ನೋಡಿದ್ದಾರೆ. ಆರಂಭಿಕ ಸ್ಫೋಟ ಸಂಭವಿಸಿದ 30 ನಿಮಿಷಗಳ ನಂತರವೂ ಸ್ಫೋಟಗಳು ನಡೆಯುತ್ತಿದ್ದವು ಎಂದು ಸ್ಥಳೀಯ ನಿವಾಸಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅತ್ತ ಲೆಬನಾನ್‌ನ ದಕ್ಷಿಣದಲ್ಲಿಯೂ ಸಶಸ್ತ್ರ ಪಡೆಯ ಸಾಧನಗಳು ಸ್ಫೋಟಗೊಳ್ಳುತ್ತಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಗಾಝಾ ಯುದ್ಧಕ್ಕೆ ಸಮಾನಾಂತರವಾಗಿ ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾದೊಂದಿಗೆ ಇಸ್ರೇಲ್ ಮಿಲಿಟರಿ ಪಡೆ ಗುಂಡಿನ ಚಕಮಕಿ ನಡೆಸುತ್ತಿದೆ. ಇಸ್ರೇಲ್‌ನಿಂದ ಸದ್ಯ ಈ ಬಗ್ಗೆ ಪ್ರತಿಕ್ರಿಯೆ ಬಂದಿಲ್ಲ.
ಇಸ್ರೇಲ್ ದೂಷಿಸಿದ ಲೆಬನಾನ್
ಲೆಬನಾನ್‌ನಾದ್ಯಂತ ನಡೆಯುತ್ತಿರುವ ಪೇಜರ್ ಸ್ಫೋಟಗಳಿಗೆ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯು ಇಸ್ರೇಲ್ ಅನ್ನು ದೂಷಿಸಿದೆ. ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಸಂಘಟನೆಯು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ತಕ್ಕ ಶಿಕ್ಷೆಯ ಎಚ್ಚರಿಕೆ
“ಈ ಕ್ರಿಮಿನಲ್ ಆಕ್ರಮಣಕ್ಕೆ ನಾವು ಶತ್ರು ಇಸ್ರೇಲ್ ಅನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡುತ್ತೇವೆ” ಎಂದು ಹಿಜ್ಬುಲ್ಲಾ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ “ಈ ಪಾಪದ ಕ್ರಿಯೆಗಾಗಿ ಇಸ್ರೇಲ್ ಖಂಡಿತ ತಕ್ಕ ಶಿಕ್ಷೆ ಅನುಭವಿಸಲಿದೆ” ಎಂದು ಹೇಳಿದೆ.