Car Mileage: ಸಣ್ಣಕಾರು ಹೆಚ್ಚು ಮೈಲೇಜ್‌ ನೀಡುತ್ತಾ? ಇಂಧನ ದಕ್ಷತೆ ಕುರಿತಾದ 5 ಮಿಥ್ಯೆಗಳನ್ನು ತಿಳಿಯಿರಿ, ವಾಹನ ಮಾಲೀಕರಿಗೆ ಸತ್ಯದರ್ಶನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Car Mileage: ಸಣ್ಣಕಾರು ಹೆಚ್ಚು ಮೈಲೇಜ್‌ ನೀಡುತ್ತಾ? ಇಂಧನ ದಕ್ಷತೆ ಕುರಿತಾದ 5 ಮಿಥ್ಯೆಗಳನ್ನು ತಿಳಿಯಿರಿ, ವಾಹನ ಮಾಲೀಕರಿಗೆ ಸತ್ಯದರ್ಶನ

Car Mileage: ಸಣ್ಣಕಾರು ಹೆಚ್ಚು ಮೈಲೇಜ್‌ ನೀಡುತ್ತಾ? ಇಂಧನ ದಕ್ಷತೆ ಕುರಿತಾದ 5 ಮಿಥ್ಯೆಗಳನ್ನು ತಿಳಿಯಿರಿ, ವಾಹನ ಮಾಲೀಕರಿಗೆ ಸತ್ಯದರ್ಶನ

Five common fuel economy myths busted: ಹಣ ಉಳಿತಾಯವೋ, ಪರಿಸರದ ಉಳಿತಾಯವೋ ಅಥವಾ ಇವೆರಡು ಉದ್ದೇಶವೋ, ಒಟ್ಟಿನಲ್ಲಿ ಬಹುತೇಕರು ತಮ್ಮ ವಾಹನದ ಇಂಧನ ದಕ್ಷತೆ ಹೆಚ್ಚಿಸಲು ಬಯಸುತ್ತಾರೆ. ಆದರೆ, ಇಂಧನ ಉಳಿತಾಯದ ಕುರಿತಾಗಿ ಹಲವು ಮಿಥ್ಯೆಗಳು ಚಾಲ್ತಿಯಲ್ಲಿವೆ. ಇಲ್ಲಿದೆ ಸತ್ಯ ದರ್ಶನ.

Fuel Economy Myths: ಇಂಧನ ದಕ್ಷತೆ ಕುರಿತಾದ 5 ಮಿಥ್ಯೆ
Fuel Economy Myths: ಇಂಧನ ದಕ್ಷತೆ ಕುರಿತಾದ 5 ಮಿಥ್ಯೆ (HT_PRINT)

ಕಾರು ಅಥವಾ ಬೈಕ್‌ ಮಾಲೀಕರಿಗೆ "ಎಷ್ಟು ಮೈಲೇಜ್‌ ನೀಡುತ್ತೆ?ʼ ಎಂಬ ಪ್ರಶ್ನೆ ಸಾಮಾನ್ಯವಾಗಿ ಎದುರಾಗುತ್ತದೆ. ದುಬಾರಿ ಪೆಟ್ರೋಲ್‌, ಡೀಸೆಲ್‌ ಕಾಲದಲ್ಲಿಯಂತೂ ವಾಹನಗಳ ಬಕಾಸುರ ಹೊಟ್ಟೆಗೆ ಎಷ್ಟು ಇಂಧನ ತುಂಬಿಸಿದರೂ ಸಾಕಾಗದು. ಹಣ ಉಳಿತಾಯವೋ, ಪರಿಸರದ ಉಳಿತಾಯವೋ ಅಥವಾ ಇವೆರಡು ಉದ್ದೇಶವೋ, ಒಟ್ಟಿನಲ್ಲಿ ಬಹುತೇಕರು ತಮ್ಮ ವಾಹನದ ಇಂಧನ ದಕ್ಷತೆ ಹೆಚ್ಚಿಸಲು ಬಯಸುತ್ತಾರೆ. ಇಂಟರ್‌ನೆಟ್‌ನಲ್ಲಿ ಇಂಧನ ದಕ್ಷತೆ ಹೆಚ್ಚಿಸುವ ಸಲುವಾಗಿ ಲೆಕ್ಕವಿಲ್ಲದಷ್ಟು ಸಲಹೆಗಳು ದೊರಕುತ್ತವೆ. ಆದರೆ, ಈ ಕುರಿತಾದ ಬಹುತೇಕವು ಸತ್ಯಗಳಿರಬಹುದು. ಇನ್ನು ಹಲವು ಮಿಥ್ಯೆಗಳೂ ಇಂಟರ್‌ನೆಟ್‌ನಲ್ಲಿವೆ.

ವಾಹನದ ಇಂಧನ ದಕ್ಷತೆ ಕುರಿತಂತೆ ಇರುವ ಐದು ಪ್ರಮುಖ ಮಿಥ್ಯೆಗಳ ವಿವರ ಇಲ್ಲಿದೆ.

ಮಿಥ್ಯೆ: ಸಣ್ಣ ಕಾರುಗಳು ಹೆಚ್ಚು ಇಂಧನ ದಕ್ಷತೆ ನೀಡುತ್ತವೆ

ಆಧುನಿಕ ಕಾರುಗಳಲ್ಲಿ ವಾಹನದ ಇಂಧನ ದಕ್ಷತೆಯು ಅವು ಬಳಸುವ ತಂತ್ರಜ್ಞಾನವನ್ನು ಅವಲಂಬಿಸಿವೆ, ಅವುಗಳ ಗಾತ್ರವನ್ನಲ್ಲ. ಸಣ್ಣ ಕಾರುಗಳಲ್ಲಿ ಯಾವಾಗಲೂ ಅತ್ಯುತ್ತಮ ಇಂಧನ ದಕ್ಷತೆ ದೊರಕುತ್ತದೆ ಎಂದು ಹೇಳಲಾಗದು. ಆಧುನಿಕ ಎಂಜಿನ್‌ ಹೊಂದಿರುವ ಮತ್ತು ಡೀಪ್‌ ಟ್ರೆಡ್‌ ಟೈರ್‌ ಇರುವ ಬೃಹತ್‌ ಕಾರುಗಳೂ ಅತ್ಯುತ್ತಮ ಇಂಧನ ದಕ್ಷತೆ ಒದಗಿಸಬಲ್ಲದು. ಉದಾಹರಣೆಗೆ ಮಾರುತಿ ಸುಜುಕಿ ಗ್ರ್ಯಾಂಡ್‌ ವಿಟಾರಾ ಎಸ್‌ಯುವಿಯು ಲೀಟರ್‌ಗೆ 27.89 ಕಿ.ಮೀ. ಮೈಲೇಜ್‌ ನೀಡುತ್ತದೆ. ಸಣ್ಣ ಮಾರುತಿ ಸೆಲೆರಿಯೊ ಕಾರು ನೀಡುವ ಮೈಲೇಜ್‌ ಲೀಟರ್‌ಗೆ 25.24 ಕಿ.ಮೀ. ಇದೆ.

ಮಿಥ್ಯೆ: ಆಟೋಮ್ಯಾಟಿಕ್‌ ಕಾರುಗಳಿಗಿಂತ ಮ್ಯಾನುಯಲ್‌ ಕಾರುಗಳು ಹೆಚ್ಚು ಮೈಲೇಜ್‌ ನೀಡುತ್ತವೆ

ಈ ಹಿಂದಿನ ಸಂದರ್ಭಗಳಲ್ಲಿ ಇದು ನಿಜವಾಗಿರಬಹುದು. ಆದರೆ, ಈಗ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ತಂತ್ರಜ್ಞಾನವು ಸಾಕಷ್ಟು ಸುಧಾರಿಸಿದೆ. ಆಟೋಮ್ಯಾಟಿಕ್‌ ಗಿಯರ್‌ ಕಾರುಗಳಲ್ಲಿ ಹೆಚ್ಚು ಗಿಯರ್‌ಗಳನ್ನು ಹಾಕಲಾಗಿದೆ, ಕಡಿಮೆ ಫ್ರಿಕ್ಷನ್‌ ಮೆಟಿರಿಯಲ್‌ಗಳನ್ನು ಬಳಸಲಾಗಿದೆ. ಅತ್ಯುತ್ತಮ ಲುಬ್ರಿಕೆಂಟ್‌ಗಳೂ ಇವೆ. ಇವೆಲ್ಲದರಿಂದ ಆಟೋಮ್ಯಾಟಿಕ್‌ ಕಾರುಗಳ ಇಂಧನ ದಕ್ಷತೆ ಗಮನಾರ್ಹವಾಗಿ ಹೆಚ್ಚಾಗಿದೆ. ಎಲೆಕ್ಟ್ರಾನಿಕ್‌ ಶಿಫ್‌ ಕಂಟ್ರೋಕ್‌ ಸಿಸ್ಟಮ್‌ ಕೂಡ ಇಂಧನ ದಕ್ಷತೆ ಹೆಚ್ಚಿಸಲು ನೆರವಾಗುತ್ತದೆ. ಈಗ ಬಹುತೇಕ ಆಟೋಮ್ಯಾಟಿಕ್‌ ಗಿಯರ್‌ ಕಾರುಗಳು ಮ್ಯಾನುಯಲ್‌ ಗಿಯರ್‌ ಕಾರುಗಳಿಗಿಂತ ಹೆಚ್ಚು ಇಂಧನ ದಕ್ಷತೆ ಒದಗಿಸುತ್ತವೆ.

ಮಿಥ್ಯೆ: ಪ್ರೀಮಿಯಂ ಇಂಧನ ಉತ್ತಮ

ಇದು ಕೂಡ ಸಾಮಾನ್ಯವಾದ ಮಿಥ್ಯೆಯಾಗಿದೆ. ನೀವು ಪರ್ಫಾಮೆನ್ಸ್‌ ಕಾರು ಅಥವಾ ಟರ್ಬೊಚಾರ್ಜ್ಡ್‌/ಸೂಪರ್‌ಚಾರ್ಜ್ಡ್‌ ಎಂಜಿನ್‌ ಕಾರು ಹೊಂದಿದ್ದರೆ ಮಾತ್ರ ಪ್ರೀಮಿಯಂ ಇಂಧನಕ್ಕೆ ಮಹತ್ವ. ಸಾಮಾನ್ಯ ಎಂಜಿನ್‌ ಕಾರುಗಳಿಗೆ ಪ್ರೀಮಿಯಂ ಇಂಧನ ಬಳಸಿದರೆ ಏನೂ ವ್ಯತ್ಯಾಸವಾಗದು. ಹೀಗಾಗಿ ಪ್ರೀಮಿಯಂ ಇಂಧನ ಉತ್ತಮ ಎನ್ನುವುದೂ ಕೂಡ ಮಿಥ್ಯೆಯಾಗಿದೆ.

ಮಿಥ್ಯೆ: ಚಾಲನೆಗೆ ಮುನ್ನ ಎಂಜಿನ್‌ ಬೆಚ್ಚಗಾಗಿಸಬೇಕು

ಈ ತಂತ್ರವು ಹಳೆಯ ಕಾರುಗಳಲ್ಲಿ ಉಪಯೋಗಕ್ಕೆ ಬರಬಹುದು. ಆದರೆ, ಆಧುನಿಕ ಕಾರುಗಳಲ್ಲಿ ತಂತ್ರಜ್ಞಾನ ಸಾಕಷ್ಟು ಬದಲಾಗಿದೆ. ಹಳೆಯ ಕಾರುಗಳ ಈ ಮಿಥ್ಯೆ ಈಗಲೂ ಉಳಿದಿದೆ. ಆಧುನಿಕ ಎಂಜಿನ್‌ಗಳಲ್ಲಿ ಸರಿಯಾದ ವಾತಾವರಣದಲ್ಲಿ ಪವರ್‌ ಮಿಲ್‌ ತನ್ನಷ್ಟಕ್ಕೆ ಚಾಲು ಆಗುತ್ತದೆ. ಹೀಗಾಗಿ, ಎಂಜಿನ್‌ ಬಿಸಿಯಾಗಿಸುವ ಅವಶ್ಯಕತೆ ಇಲ್ಲ.

ಮಿಥ್ಯೆ: ಎಂಜಿನ್‌ ಆಫ್‌ ಮಾಡುವ ಬದಲು, ಐಡಲ್‌ ಇಡಿ

ಬಂಪರ್‌ ಟು ಬಂಪರ್‌ ಟ್ರಾಫಿಕ್‌ ಇರುವಾಗ ಕಾರನ್ನು ಆನ್‌ ಅಥವಾ ಆಫ್‌ ಮಾಡಬೇಕಾಗುತ್ತದೆ. ಈ ರೀತಿ ಆನ್‌ ಆಫ್‌ ಮಾಡುವ ಬದಲು ಐಡಲ್‌ನಲ್ಲಿ ಎಂಜಿನ್‌ ಇದ್ದರೆ ಒಳ್ಳೆಯದು ಎನ್ನುವುದು ಕೂಡ ಮಿಥ್ಯೆಯಾಗಿದೆ. ಕಾರು ಎಂಜಿನ್‌ ಆನ್‌ ಮಾಡುವಾಗ ಹೆಚ್ಚು ಇಂಧನ ಬೇಕು, ಹೀಗಾಗಿ ಐಡಲ್‌ನಲ್ಲಿ ಇಡಿ ಎಂದು ಸಲಹೆ ನೀಡಲಾಗುತ್ತದೆ. ಆದರೆ, ಟ್ರಾಫಿಕ್‌ನಲ್ಲಿ ಹಲವು ನಿಮಿಷಗಳ ಕಾಲ ಐಡಲ್‌ನಲ್ಲಿ ಕಾರನ್ನು ಚಾಲುವಾಗಿಟ್ಟುಕೊಳ್ಳುವ ಬದಲು ಆನ್‌ ಆಫ್‌ ಮಾಡುವುದೇ ಉತ್ತಮ. ಏಕೆಂದರೆ, ಕಾರು ಆನ್‌ ಆಗಿ ಸಮರ್ಪಕವಾಗಿ ಸ್ಟಾರ್ಟ್‌ ಆಗಲು ಹೆಚ್ಚೆಂದರೆ 20 ಸೆಕೆಂಡ್‌ ಸಾಕು. ಅದರ ಬದಲು ಹಲವು ನಿಮಿಷಗಳ ಕಾಲ ಐಡಲ್‌ನಲ್ಲಿಟ್ಟರೆ ಹೆಚ್ಚು ಇಂಧನ ವ್ಯಯವಾಗುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.