Hyundai Exter: ಇಂದು ಹ್ಯುಂಡೈ ಎಕ್ಸ್‌ಟೀರ್ ಎಸ್‌ಯುವಿ ಬಿಡುಗಡೆ, ಟಾಟಾ ಪಂಚ್ ಪ್ರತಿಸ್ಪರ್ಧಿಯ ದರ ಮೈಲೇಜ್ ಇತ್ಯಾದಿ 5 ವಿಷಯ ತಿಳಿಯಿರಿ
New Hyundai Exter SUV: ಹ್ಯುಂಡೈ ಮೋಟಾರ್ ಇಂಡಿಯಾವು ಇಂದು ಹೊಸ ಹ್ಯುಂಡೈ ಎಕ್ಸ್‌ಟೀರ್ ಎಸ್‌ಯುವಿಯನ್ನು ಭಾರತದ ರಸ್ತೆಗೆ ಬಿಡುಗಡೆ ಮಾಡಲಿದೆ. ಇದು ಕಂಪನಿಯ ಅಗ್ಗದ ಎಸ್‌ಯುವಿಯಾಗಿದ್ದು, ವೆನ್ಯೂ, ಕ್ರೇಟಾ, ಆಲಕಾಝರ್ ಮತ್ತು ಟಸ್ಕಾನ್ ಇತ್ಯಾದಿ ಎಸ್‌ಯುವಿಗಳನ್ನು ಹ್ಯುಂಡೈ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದೆ.
ಹ್ಯುಂಡೈ ಕಂಪನಿಯ ಹೊಸ ಎಸ್‌ಯುವಿ ಎಕ್ಸ್‌ಟೀರ್ ಇಂದು ಬಿಡುಗಡೆಯಾಗಲಿದೆ. ಇದು ಕಂಪನಿಯ ಅಗ್ಗದ ಎಸ್‌ಯುವಿ. ಹೀಗಾಗಿ, ದೇಶದ ಎಸ್‌ಯುವಿ ಪ್ರಿಯರು ಈ ಕಾರು ಹೇಗಿರಲಿದೆ, ಏನೇನು ಇರಲಿದೆ ಎಂಬ ಮಾಹಿತಿಯ ಹುಡುಕಾಟದಲ್ಲಿದ್ದಾರೆ. ಹ್ಯುಂಡೈ ಕಂಪನಿಯು 2020-2021ರಲ್ಲಿ ಭಾರತದ ಬೃಹತ್ ಎಸ್‌ಯುವಿ ಕಂಪನಿಯಾಗಿ ಹೊರಹೊಮ್ಮಿತ್ತು. 2022ರಲ್ಲಿ ಈ ಸ್ಥಾನವನ್ನು ಟಾಟಾ ಮೋಟಾರ್ಸ್ ಆಕ್ರಮಿಸಿತ್ತು. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿ ಎಸ್‌ಯುವಿ ಮಾರಾಟ ಮಾಡುತ್ತಿದೆ. ಭಾರತದ ಎಸ್‌ಯುವಿ ಮಾರುಕಟ್ಟೆಯಲ್ಲಿ ತಾನು ಕಳೆದುಕೊಂಡ ಸ್ಥಾನವನ್ನು ನೂತನ Hyundai Exter SUV ಮೂಲಕ ವಾಪಸ್ ಪಡೆಯಲು ಹ್ಯುಂಡೈ ನಿರ್ಧರಿಸಿದಂತೆ ಇದೆ.
ಹೊಸದಾಗಿ ಬಿಡುಗಡೆಯಾಗುವ ಎಕ್ಸ್‌ಟೀರ್ ಕುರಿತು ಅದು ಬಿಡುಗಡೆಯಾಗುವ ಮೊದಲೇ ಐದು ಪ್ರಮುಖ ಅಂಶಗಳನ್ನು ತಿಳಿದುಕೊಳ್ಳೋಣ.
̆1. ಹ್ಯುಂಡೈ ಎಕ್ಸ್‌ಟೀರ್ ಎಸ್‌ಯುವಿ ದರ
ಇದರ ದರ 6 ಲಕ್ಷ ರೂಪಾಯಿಯಿಂದ 9.50 ಲಕ್ಷ ರೂಪಾಯಿ ನಡುವೆ ಇರಲಿದೆ. ಇದು ಎಕ್ಸ್‌ಶೋರೂಂ ದರ. ಆನ್‌ರೋಡ್ ದರ ಟಾಪ್ ಎಂಡ್ ಮಾಡೆಲ್‌ಗೆ 10 ಲಕ್ಷ ರೂಪಾಯಿ ಇರುವ ನಿರೀಕ್ಷೆಯಿದೆ. ಇಎಕ್ಸ್, ಎಸ್, ಎಸ್‌ಎಕ್ಸ್ ಇತ್ಯಾದಿ ಐದು ಟ್ರಿಮ್‌ಗಳಲ್ಲಿ ಮತ್ತು 15 ಆವೃತ್ತಿಗಳಲ್ಲಿ ನೂತನ ಹ್ಯುಂಡೈ ಎಕ್ಸ್‌ಟೀರ್ ಎಸ್‌ಯುವಿ ದೊರಕಲಿದೆ.
2. ಹ್ಯುಂಡೈ ಎಕ್ಸ್‌ಟೀರ್ ಮೈಲೇಜ್ ಎಷ್ಟು
ನೂತನ ಹ್ಯುಂಡೈ ಎಕ್ಸ್‌ಟೀರ್ ಎಸ್‌ಯುವಿ ಮೈಲೇಜ್ ಒಂದು ಲೀಟರ್ ಪೆಟ್ರೋಲ್‌ಗೆ ಸುಮಾರು 19 ಕಿ.ಮೀ. ಇರುವ ನಿರೀಕ್ಷೆಯಿದೆ. ಸಿಎನ್‌ಜಿ ಆವೃತ್ತಿಯು ಸುಮಾರು 25 ಕಿ.ಮೀ. ಮೈಲೇಜ್ ನೀಡುವ ಸಾಧ್ಯತೆಯಿದೆ.
3. ಸ್ಪೆಸಿಫಿಕೇಷನ್‌ಗಳೇನಿರಬಹುದು?
ಈಗಾಗಲೇ ಹ್ಯುಂಡೈ ಕಂಪನಿಯು ನೂತನ ಎಕ್ಸ್‌ಟೀರ್‌ನ ಸ್ಪೆಸಿಫಿಕೇಷನ್ ಕುರಿತು ಸಾಕಷ್ಟು ಮಾಹಿತಿ ಹಂಚಿಕೊಂಡಿದೆ. ಇದರಲ್ಲಿ 1.2 ಲೀಟರ್‌ನ ಕಪ್ಪಾ ಪೆಟ್ರೋಲ್ ಎಂಜಿನ್ ಇರಲಿದೆ. ಇದು ಈಗಾಗಲೇ ಐ10 ನಿಯೊಸ್ ಮತ್ತು ಔರಾ ಕಾರುಗಳಲ್ಲಿ ಇದೆ. ಇದು 83 ಪಿಎಸ್ ಗರಿಷ್ಠ ಶಕ್ತಿ ತ್ತು 113.8 ಎನ್‌ಎಂ ಟಾರ್ಕ್ ಒದಗಿಸಲಿದೆ. ಐದು ಸ್ಪೀಡ್‌ನ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗಿಯರ್ ಬಾಕ್ಸ್‌ಗಳಲ್ಲಿ ನೂತನ ಹ್ಯುಂಡೈ ಎಕ್ಸ್‌ಟೀರ್ ಎಸ್‌ಯುವಿ ದೊರಕಲಿದೆ. ಸಿಎನ್‌ಜಿ ಆವೃತ್ತಿಯು ಮ್ಯಾನುಯಲ್ ಗಿಯರ್‌ನಲ್ಲಿ ಮಾತ್ರ ದೊರಕಲಿದೆ. ಹ್ಯುಂಡೈ ಎಕ್ಸ್‌ಟೀರ್ ಎಸ್‌ಯುವಿ ಕಾರಿನ ಗಾತ್ರದ ಕುರಿತೂ ಕಂಪನಿ ಮಾಹಿತಿ ನೀಡಿದೆ. ಇದರ ವೀಲ್‌ಬೇಸ್ 2,450 ಮಿ.ಮೀ. ಮತ್ತು ಎತ್ತರ 1,631 ಮಿ.ಮೀ. ಇರಲಿದೆ.
4. ಎಕ್ಸ್‌ಟೀರ್ ಇಂಟೀರಿಯರ್
ಸಾಕಷ್ಟು ಫೀಚರ್‌ಗಳನ್ನು ಕಾರಿನೊಳಗೆ ಕಂಪನಿಯು ತುಂಬಿಸಿರುವ ನಿರೀಕ್ಷೆಯಿದೆ. 8 ಇಂಚಿನ ಎಚ್‌ಡಿ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಇರಲಿದ್ದು, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಬೆಂಬಲ ನೀಡಲಿದೆ. 4.2 ಇಂಚಿನ ಬಣ್ಣದ ಟಿಎಫ್‌ಟಿ ಸ್ಕ್ರೀನ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇರಲಿದೆ. ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸೆಮಿ ಲೆದರ್‌ನ ಅಪ್‌ಹೋಲೆಸ್ಟೆ, ಎಲ್ಲಾ ಸೀಟುಗಳಿಗೂ ಸೀಟು ಬೆಲ್ಟ್ ಹಾಕಿರುವುದನ್ನು ನೆನಪಿಸುವ ವ್ಯವಸ್ಥೆ, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾದ ಡ್ಯಾಷ್‌ಕ್ಯಾಮ್ ಇತ್ಯಾದಿ ಹಲವು ಫೀಚರ್‌ಗಳನ್ನು ನಿರೀಕ್ಷಿಸಬಹುದು.
5. ಹೊರವಿನ್ಯಾಸ ಹೇಗಿದೆ
ಈಗಾಗಲೇ ಎಕ್ಸ್‌ಟೀರ್‌ನ ಚಿತ್ರಗಳನ್ನು ನೀವು ಗಮನಿಸಿರಬಹುದು. ಪ್ಯಾರಾಮೆಟ್ರಿಕ್ ಗ್ರಿಲ್‌ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಚ್ ಸಿಗ್ನೆಚರ್ ಎಲ್‌ಇಡಿ ಡಿಆರ್‌ಎಲ್‌ಗಳು, ಎಚ್ ಸಿಗ್ನೇಚರ್ ಎಲ್‌ಇಡಿ ಟೇಲ್ ಲ್ಯಾಪ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್‌ಗಳು, ಡೈಮಾಂಡ್ ಕಟ್ ಅಲಾಯ್ ವೀಲ್‌ಗಳು ಈ ಕಾರಿನ ಆಕರ್ಷಣೆಯ್ನನು ಹೆಚ್ಚಿಸಿದೆ.
ವಿಭಾಗ