ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು; ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ, 5 ಮುಖ್ಯ ಬೆಳವಣಿಗೆಗಳು
Bangladesh Crisis Latest Updates; ಬಾಂಗ್ಲಾದೇಶದಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಇಂದು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದರು. ಬೆನ್ನಿಗೆ ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದೆ. ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ 5 ಮುಖ್ಯ ಬೆಳವಣಿಗೆಗಳು ಹೀಗಿವೆ.
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಹಠಾತ್ ವಿದ್ಯಮಾನಗಳು ರಾಜಕೀಯ ತಲ್ಲಣ ಸೃಷ್ಟಿಸಿವೆ. ಇಂದು (ಆಗಸ್ಟ್ 5) ನಡೆದ ನಾಟಕೀಯ ವಿದ್ಯಮಾನದಲ್ಲಿ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಹೊರಟಿದ್ದಾರೆ. ಅವರು ಭಾರತದಲ್ಲಿ ಆಶ್ರಯ ಪಡೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ. ಈ ಹಿಂದೆ ಕೂಡ ದೇಶದಲ್ಲಿ ಮಿಲಿಟರಿ ದಂಗೆ ಉಂಟಾದಾಗ ಹಸೀನಾ ಮತ್ತು ಅವರ ಕುಟುಂಬ ಭಾರತದಲ್ಲೇ ಆಶ್ರಯ ಪಡೆದಿತ್ತು.
ಶೇಖ್ ಹಸೀನಾ ಅವರು ಭಾರತದ ತ್ರಿಪುರಾ ರಾಜ್ಯದ ರಾಜಧಾನಿ ಅಗರ್ತಲಾ ಕಡೆಗೆ ತೆರಳಿದ್ದಾರೆ ಎಂದು ಬಿಬಿಸಿ ಬಾಂಗ್ಲಾ ವರದಿ ಮಾಡಿದೆ. ಆದಾಗ್ಯೂ, ಶೇಖ್ ಹಸೀನಾ ಅವರು ಢಾಕಾ ತೊರೆಯುವ ಬಗ್ಗೆ ಅಥವಾ ತೊರೆದಿರುವ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಸೇನಾ ಮುಖ್ಯಸ್ಥ ವೇಕರ್ ಉಝ್ ಝಮಾನ್ ಈ ವಿಚಾರವನ್ನು ದೃಢಪಡಿಸಿದ್ದು, ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾನು ಆಡಳಿತ ಸೂತ್ರ ಹಿಡಿದಿದ್ದು, ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಸೋಮವಾರ ಮಧ್ಯಾಹ್ನ ಶೇಖ್ ಹಸೀನಾ ಅವರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿದ್ದರು. ನೂರಾರು ಜನ ಅಲ್ಲಿ ನುಗ್ಗಿ ದಾಂಧಲೆ ಉಂಟುಮಾಡಲಾರಂಭಿಸಿದ ಕಾರಣ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಅಲ್ಲಿನ ಟಿವಿ ಸುದ್ದಿವಾಹಿನಿ ಚಾನೆಲ್ 24 ವರದಿ ಮಾಡಿದೆ.
ಶೇಖ್ ಹಸೀನಾ ರಾಜೀನಾಮೆ; ಬಾಂಗ್ಲಾದೇಶ ಬಿಕ್ಕಟ್ಟು - 5 ಮುಖ್ಯ ಅಂಶಗಳು
1) ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂದರೆ 1971ರಲ್ಲಿ ಹೋರಾಡಿದ ಫಲಾನುಭವಿಗಳ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಯ ಬಗ್ಗೆ ಅವರ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳ ನಂತರ ಶೇಖ್ ಹಸೀನಾ ಅವರು ಪ್ರಧಾನ ಮಂತ್ರಿ ಸ್ಥಾನವನ್ನು ತ್ಯಜಿಸಬೇಕಾಯಿತು ಎಂದು ಖಾಸಗಿ ಜಮುನಾ ದೂರದರ್ಶನ ಸುದ್ದಿ ವಾಹಿನಿ ವರದಿ ಮಾಡಿದೆ.
2) 1971ರ ವಿಮೋಚನಾ ಯುದ್ಧದ ನಂತರ, ಬಾಂಗ್ಲಾದೇಶವು ಪಾಕಿಸ್ತಾನದಿಂದ ದೇಶವನ್ನು ಮುಕ್ತಗೊಳಿಸುವ ಚಳವಳಿಯಲ್ಲಿ ಭಾಗವಹಿಸಿದವರ ವಂಶಸ್ಥರಿಗೆ ನಾಗರಿಕ ಸೇವೆ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ 30 ಶೇಕಡಾ ಕೋಟಾವನ್ನು ನೀಡಿದೆ. ಶೇಖ್ ಹಸೀನಾ ಅವರ ತಂದೆ, 1972 ರಲ್ಲಿ ಕೋಟಾ ವ್ಯವಸ್ಥೆಯನ್ನು ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರು ಪರಿಚಯಿಸಿದರು. ಆದಾಗ್ಯೂ, 2018ರ ಅಕ್ಟೋಬರ್‌ನಲ್ಲಿ, ವಿದ್ಯಾರ್ಥಿಗಳ ದೊಡ್ಡ ಪ್ರಮಾಣದ ಪ್ರತಿಭಟನೆಗಳ ನಡುವೆ ಎಲ್ಲ ಮೀಸಲಾತಿಗಳನ್ನು ರದ್ದುಗೊಳಿಸಲು ಶೇಖ್ ಹಸೀನಾ ಒಪ್ಪಿಕೊಂಡಿದ್ದರು.
3) ಈ ವರ್ಷ ಜೂನ್‌ನಲ್ಲಿ, 1971 ರ ನಿವೃತ್ತ ಯೋಧರ ಸಂಬಂಧಿಕರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶೇಖ್ ಹಸೀನಾ ಸರ್ಕಾರದ ಆ ನಿರ್ಧಾರವನ್ನು ರದ್ದುಗೊಳಿಸಿತು. ಮೀಸಲಾತಿಯನ್ನು ಮರುಸ್ಥಾಪಿಸಿತು. ಈ ತೀರ್ಪಿನ ನಂತರ, ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮತ್ತು ಮೊಮ್ಮಕ್ಕಳು ಮತ್ತು ಮಹಿಳೆಯರು ಮತ್ತು 'ಹಿಂದುಳಿದ ಜಿಲ್ಲೆಗಳ' ಜನರು ಸೇರಿದಂತೆ ನಿರ್ದಿಷ್ಟ ಗುಂಪುಗಳಿಗೆ 56 ಪ್ರತಿಶತ ಸರ್ಕಾರಿ ಉದ್ಯೋಗ ಮೀಸಲಾತಿ ಮರಳಿ ಸಿಕ್ಕಿದೆ.
4) ಈ ವಿದ್ಯಮಾನವು ಇತ್ತೀಚಿನ ಭಾರಿ ಪ್ರಮಾಣದ ಪ್ರತಿಭಟನೆಗಳಿಗೆ ಕಾರಣವಾಯಿತು. ಸ್ವಾತಂತ್ರ್ಯ ಹೋರಾಟಗಾರರ ಮೂರನೇ ತಲೆಮಾರಿನವರಿಗೆ ಯಾಕೆ ಈ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಶ್ನೆ. ಈ ನಡುವೆ ಕಳೆದ ತಿಂಗಳು ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು ಸರ್ಕಾರಿ ಉದ್ಯೋಗದ ಅರ್ಜಿದಾರರಿಗೆ ವಿವಾದಾತ್ಮಕ ಕೋಟಾ ವ್ಯವಸ್ಥೆಯನ್ನು ಹಿಂತೆಗೆದುಕೊಂಡಿತು. ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, 93 ಪ್ರತಿಶತದಷ್ಟು ಸರ್ಕಾರಿ ಉದ್ಯೋಗಗಳನ್ನು ಅರ್ಹತೆ ಆಧಾರಿತ ವ್ಯವಸ್ಥೆಯಲ್ಲಿ ನಿಯೋಜಿಸಲು ಆದೇಶಿಸಿತು. ಉಳಿದ 7 ಪ್ರತಿಶತವನ್ನು ಇತರ ವರ್ಗಗಳ ನಡುವೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಕರಿಗೂ ನೀಡುವಂತೆ ಸೂಚಿಸಿತು.
5) ಇಷ್ಟಾಗುತ್ತಲೇ, ಸರ್ಕಾರ ವಿರುದ್ಧವೇ ಸಾಮೂಹಿಕ ಪ್ರತಿಭಟನೆಗಳು ಶುರುವಾದವು. ಇವುಗಳ ಜೊತೆಗೆ ವಿದ್ಯಾರ್ಥಿ ಸಂಘಟನೆಗಳು ಅಸಹಕಾರ ಚಳವಳಿ ಶುರುಮಾಡಿದವು. ತೆರಿಗೆ, ಕರೆಂಟ್ ಬಿಲ್ ಸೇರಿ ಯಾವುದನ್ನೂ ಪಾವತಿಸದಂತೆ ಸಾರ್ವಜನಿಕರಿಗೆ ಕರೆ ನೀಡಿದವು. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕುವುದಕ್ಕೂ ಕರೆ ನೀಡಿದ್ದವು. ಇದರ ಪರಿಣಾಮ ಸರ್ಕಾರದ ಕೆಲಸ ಸ್ಥಗಿತವಾಗಿಯಿತು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಶೇಖ್ ಹಸೀನಾ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು ಹೀಗೆ
ತೀವ್ರಗೊಳ್ಳುತ್ತಿದ್ದ ಪ್ರತಿಭಟನೆಯನ್ನು ಗಮನಿಸಿದ ಪ್ರಧಾನಿ ಶೇಖ್ ಹಸೀನಾ, ಪ್ರತಿಭಟನಾಕಾರರನ್ನು ರಜಾಕರು ಎಂದು ಟೀಕಿಸಿದ್ದರು. ರಜಾಕರು ಎಂದರೆ 1971ರ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಮಿಲಿಟರಿ ಪರವಾಗಿ ಕೆಲಸ ಮಾಡಿದವರು ಎಂದು ಅರ್ಥ. ಆದರೆ, ನಂತರ ಶೇಖ್ ಹಸೀನಾ ಅವರು ತಮ್ಮ ಟೀಕೆಗಳನ್ನು ಕಡಿಮೆ ಮಾಡಿದರು. ಪ್ರತಿಭಟನಾಕಾರರು 'ರಜಾಕರಲ್ಲ' ಎಂದು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕೈ ಮೀರಿದಾಗ, ಪ್ರಧಾನಿ ಹಸೀನಾ ಈ ಹಿಂದೆ ವಿದ್ಯಾರ್ಥಿ ನಾಯಕರೊಂದಿಗೆ ಬೇಷರತ್ ಮಾತುಕತೆಗೆ ಕರೆ ನೀಡಿದರು. ಆದಾಗ್ಯೂ, ಪ್ರತಿಭಟನಾಕಾರರು ಅದನ್ನು ನಿರಾಕರಿಸಿದರು. ರಾಜೀನಾಮೆಗೆ ಒತ್ತಡ ಹಾಕಿದ್ದರು.
ವಿಭಾಗ