Tripura Assembly Election 2023: ತ್ರಿಪುರಾದಲ್ಲಿ ಕಾಣದ ಕೈ ನಾಯಕರು: ಬಿಜೆಪಿಯ ಸುಲಭ ಜಯಕ್ಕೆ ಕಾರಣರಾಗುವರು?
ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಒಂದು ಕಡೆ ಆಡಳಿತಾರೂಢ ಬಿಜೆಪಿ ಭರ್ಜರಿ ಪ್ರಚಾರವನ್ನು ಆರಂಭಿಸಿದೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಪಾಳೆಯದಲ್ಲಿ ಚುನಾವಣಾ ರಣೋತ್ಸಾಹ ಕಾಣದಾಗಿದೆ. ತ್ರಿಪುರಾದಲ್ಲಿ ಕಾಂಗ್ರೆಸ್ ಹಾಗೂ ಸಿಪಿಎಂ ನಡುವೆ ಮೈತ್ರಿ ಏರ್ಪಟ್ಟಿದ್ದು, ಇದುವರೆಗೂ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಚುನಾವಣಾ ಪ್ರಚಾರ ಆರಂಭಿಸಿಲ್ಲ.
ಅಗರ್ತಲಾ: ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಒಂದು ಕಡೆ ಆಡಳಿತಾರೂಢ ಬಿಜೆಪಿ ಭರ್ಜರಿ ಪ್ರಚಾರವನ್ನು ಆರಂಭಿಸಿದೆ. ಈಗಾಗಲೇ ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಚಾರ ನಡೆಸಿದ್ದಾರೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಪಾಳೆಯದಲ್ಲಿ ಚುನಾವಣಾ ರಣೋತ್ಸಾಹ ಕಾಣದಾಗಿದೆ.
ತ್ರಿಪುರಾದಲ್ಲಿ ಕಾಂಗ್ರೆಸ್ ಹಾಗೂ ಸಿಪಿಎಂ ನಡುವೆ ಮೈತ್ರಿ ಏರ್ಪಟ್ಟಿದ್ದು, ಎರಡೂ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಎದುರಿಸುವ ನಿರ್ಣಯ ಮಾಡಿವೆ. ಆದರೆ ಈ ಮೈತ್ರಿ ಪಾಳೆಯದಲ್ಲಿ ಚುನಾವಣಾ ರಣೋತ್ಸಾಹ ಅಷ್ಟೊಂದು ಕಂಡುಬರುತ್ತಿಲ್ಲ. ರಾಜ್ಯದಲ್ಲಿ ಎಲ್ಲೆಡೆ ಬಿಜೆಪಿ ಅಬ್ಬರವೇ ಕೇಳಿ ಬರುತ್ತಿದ್ದು, ಬಿಜೆಪಿ ಎರಡನೇ ಬಾರಿಗೆ ತ್ರಿಪುರಾದಲ್ಲಿ ಅಧಿಕಾರಕ್ಕೇರಿದರೆ ಅಚ್ಚರಿಯಿಲ್ಲ ಅಂತಿದ್ದಾರೆ ಚುನಾವಣಾ ಪಂಡಿತರು.
ತ್ರಿಪುರಾದಲ್ಲಿ ಇದುವರೆಗೂ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಚುನಾವಣಾ ಪ್ರಚಾರ ಆರಂಭಿಸಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸ್ಟಾರ್ ಪ್ರಚಾರಕ ರಾಹುಲ್ ಗಾಂಧಿ ಸೇರಿದಂತೆ ಯಾವುದೇ ಪ್ರಮುಖ ಕೈ ನಾಯಕರು, ತ್ರಿಪುರಾ ಚುನಾವಣಾ ಅಖಾಡದಲ್ಲಿ ಇದುವರೆಗೂ ಕಂಡಿಲ್ಲ.
ಅದೇ ರೀತಿ ಸಿಪಿಎಂ ತನ್ನ ಸಿಮೀತ ಸಂಪನ್ಮೂಲದೊಂದಿಗೆ ಚುನಾವಣಾ ಪ್ರಚಾರ ಕೈಗೊಂಡಿದೆಯಾದರೂ, ಬಿಜೆಪಿಯ ಅಬ್ಬರದ ಪ್ರಚಾರದ ಮುಂದೆ ಸಪ್ಪೆಯಾಗಿ ಕಾಣುತ್ತಿದೆ. ಸಿಪಿಎಂ ಜನರಲ್ ಸೆಕ್ರೆಟರಿ ಸೀತಾರಾಮ್ ಯೆಚೂರಿ ರಾಜ್ಯ ಪ್ರವಾಸ ಕೈಗೊಂಡಿದ್ದಾರಾದರೂ, ಪಕ್ಷವನ್ನು ಅಧಿಕಾರಕ್ಕೇರಿಸಲು ಇಷ್ಟು ಸಾಲದು ಎಂಬುದು ಎಡಪಕ್ಷಗಳ ನಾಯಕರಿಗೆ ಚೆನ್ನಾಗಿ ಗೊತ್ತಿದೆ.
೬೦ ವಿಧಾನಸಭಾ ಕ್ಷೇತ್ರಗಳ ತ್ರಿಪುರಾ ವಿಧಾನಸಭೆಗೆ ಇದೇ ಫೆ.16(ಗುರುವಾರ) ಮತದಾನ ನಡೆಯಲಿದೆ. ಆದರೆ ಇದುವರೆಗೂ ಕಾಂಗ್ರೆಸ್‌ನ ಯಾವುದೇ ಉನ್ನತ ನಾಯಕರು ರಾಜ್ಯದಲ್ಲಿ ಪ್ರಚಾರ ಕೈಗೊಳ್ಳದೇ ಇರುವುದು, ಚುನಾವಣೆಗೂ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆಯೇ ಎಂಬ ಅನುಮಾನ ಮೂಡಲು ಕಾರಣವಾಗಿದೆ.
ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ಇಂತಹ ಉದಾಸೀನತೆ ಮೆರೆದಿತ್ತು. ಕಾಟಾಚಾರಕ್ಕೆ ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಎಲ್ಲಿ ತನಗೆ ಸೋಲು ಖಚಿತ ಎಂಬುದು ಕಾಂಗ್ರೆಸ್‌ಗೆ ಮನವರಿಕೆಯಾಗುತ್ತದಯೋ, ಅಲ್ಲಿ ಆ ಪಕ್ಷ ಉತ್ಸಾಹದಿಂದ ಚುನಾವಣಾ ಪ್ರಚಾರ ಕೈಗೊಳ್ಳುವುದಿಲ್ಲ ಎಂಬುದು ರಾಜಕೀಯ ವಿಶ್ಲೇಷಕ ಅಭಿಪ್ರಾಯ.
ಅಂತಿಮ ಕ್ಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರಕ್ಕೆ ಬಂದರೆ, ಅದರಿಂದ ಯಾವ ಪ್ರಯೋಜನವೂ ಇಲ್ಲ ಎನ್ನುತ್ತಾರೆ ರಾಜಕೀಯ ತಜ್ಞರು. ತ್ರಿಪುರಾ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ನಾಯಕರ ಅನುಪಸ್ಥಿತಿ, ಬಿಜೆಪಿಯ ಗೆಲುವಿನ ದಾರಿಯನ್ನು ಸುಗಮಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿ ಈಗಾಗಲೇ ತ್ರಿಪುರಾದ ಎರಡು ಕಡೆ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲದೇ ಈಶಾನ್ಯ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.
ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತ್ರಿಪುರಾದ ಎರಡು ಕಡೆ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ್ದು, ಕಾಂಗ್ರೆಸ್ ಹಾಗೂ ಸಿಪಿಎಂ ನಡುವಿನ ಮೈತ್ರಿಯನ್ನು ಟೀಕಿಸಿದ್ದಾರೆ. ಕೇರಳದಲ್ಲಿ ಪರಸ್ಪರ ಬಡಿದಾಡಿಕೊಳ್ಳುವ ಕಾಂಗ್ರೆಸ್ ಹಾಗೂ ಸಿಪಿಎಂ, ತ್ರಿಪುರಾದಲ್ಲಿ ಒಂದಾಗಿರುವುದು ಅವರ ಅಧಿಕಾರ ಲಾಲಸೆಗೆ ಸಾಕ್ಷಿ ಎಂದು ಅಮಿತ್ ಶಾ ಹರಿಹಾಯ್ದಿದ್ದಾರೆ.
ಒಟ್ಟಿನಲ್ಲಿ ನಾಳೆ (ಫೆ.14-ಮಂಗಳವಾರ) ತ್ರಿಪುರಾ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ತೆರೆ ಬೀಳಲಿದ್ದು, ಈಗಲಾದರೂ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ತ್ರಿಪುರಾಗೆ ತೆರಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.