Budget 2024: ಈ ಬಾರಿ ಬಿಜೆಪಿ ಸರಕಾರಕ್ಕೆ ಚುನಾವಣಾ ವಿಕ್ಟರಿ; ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್
Union Budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡುತ್ತಿದ್ದು, ಸರಕಾರದ ಸಾಧನೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಜನರ ಪ್ರಬಲ ಬೆಂಬಲದಿಂದ ಮತ್ತೆ ಅಧಿಕಾರ ಹಿಡಿಯುವ ಆಶಯ ವ್ಯಕ್ತಪಡಿಸಿದ್ದಾರೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ 2024 ಮಂಡನೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಈ ಬಾರಿಯೂ ಬಿಜೆಪಿ ಸರಕಾರವು ವಿಕ್ಟರಿ ಸಾಧಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. "ನಮ್ಮ ಸರಕಾರದ ಅತ್ಯದ್ಭುತ ಕೆಲಸದ ನೆರವಿನಿಂದ ಮತ್ತೊಮ್ಮೆ ಪ್ರಬಲ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ಭಾವಿಸುವೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ಅಭಿವೃದ್ಧಿ ತತ್ವದ ಕುರಿತು ಮಾತನಾಡಿದ್ದಾರೆ. "ನಮ್ಮ ಅವಧಿಯಲ್ಲಿ ಅಭಿವೃದ್ಧಿಯ ಫಲಗಳು ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪಲು ಪ್ರಾರಂಭಿಸಿದವು. ದೇಶದ ಉದ್ದೇಶ ಹೊಸ ಅರ್ಥ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಎರಡನೇ ಅವಧಿಯಲ್ಲಿ ಸರಕಾರವು ತನ್ನ ಕಾರ್ಯಸೂಚಿಯನ್ನು ದ್ವಿಗುಣಗೊಳಿಸಿತು" ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರಕಾರವು ಎಲ್ಲಾ ಸರ್ವಾಂಗೀಣ, ಸರ್ವವ್ಯಾಪಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯತ್ತ ಗಮನಹರಿಸುತ್ತದೆ ಎಂದು ಅವರು ಹೇಳಿದ್ದಾರೆ. 2024 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಕೇಂದ್ರವು ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
"ನಮ್ಮ ದೇಶದ ಯುವ ಜನರು ಹೆಚ್ಚಿನ ಆಕಾಂಕ್ಷೆಗಳನ್ನು ಹೊಂದಿದ್ದಾರೆ. ವರ್ತಮಾನದ ಬಗ್ಗೆ ಹೆಮ್ಮೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಭರವಸೆ ಮತ್ತು ವಿಶ್ವಾಸ ಹೊಂದಿದೆ. ನಮ್ಮ ಸರಕಾರವು ತನ್ನ ಅತ್ಯದ್ಭುತ ಕೆಲಸದ ಆಧಾರದ ಮೇಲೆ ಮತ್ತೊಮ್ಮೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದೇ ಸಮಯದಲ್ಲಿ ನೇರ ಲಾಭ ವರ್ಗಾವಣೆ ಯೋಜನೆಯಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 34 ಲಕ್ಷ ಕೋಟಿಯ ಡಿಬಿಟಿಯಿಂದ ಸರ್ಕಾರಕ್ಕೆ 2.7 ಲಕ್ಷ ಕೋಟಿ ಉಳಿತಾಯವಾಗಿದೆ ಎಂದರು. ಮೋದಿ ಸರಕಾರವು ನಾಲ್ಕು ಕೇಂದ್ರೀಕೃತ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತದೆ. ಗರೀಬ್, ಮಹಿಳಾ, ಯುವ ಮತ್ತು ಅನ್ನದಾತ ಎಂಬ ನಾಲ್ಕು ವಿಭಾಗದ ಅಗತ್ಯಗಳನ್ನು ಪೂರೈಸುವುದು ನಮ್ಮ ಆದ್ಯತೆಗಳಾಗಿವೆ ಎಂದು ಅವರು ಹೇಳಿದ್ದಾರೆ.
ಅನ್ನದಾತರಿಗೆ (ರೈತರಿಗೆ) ಕನಿಷ್ಠ ಬೆಂಬಲ ಬೆಲೆ ನಿಯತಕಾಲಿಕವಾಗಿ ಏರಿಕೆಯಾಗಿದೆ. 11.8 ಕೋಟಿ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಆರ್ಥಿಕ ನೆರವು ಪಡೆದಿದ್ದಾರೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ನಮ್ಮ ಸರಕಾರವು ಬಡವರು, ಮಹಿಳೆಯರು, ಯುವಕರು ಮತ್ತು ರೈತರು ಎಂಬ ನಾಲ್ಕು ಜಾತಿಗಳ ಬಗ್ಗೆ ಮಾತ್ರ ಗಮನ ನೀಡಲಿದೆ. ಕಳೆದ 10 ವರ್ಷಗಳಲ್ಲಿ, 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರದ ಸ್ಕಿಲ್ ಇಂಡಿಯಾ ಮಿಷನ್ ಮೂಲಕ 1.4 ಕೋಟಿ ಯುವ ಜನತೆಗೆ ತರಬೇತಿ ನೀಡಿದೆ. 54 ಲಕ್ಷ ಯುವ ಜನತೆಗೆ ಕೌಶಲವೃದ್ಧಿ, ರಿಸ್ಕಿಲ್‌ಗೆ ನೆರವು ನೀಡಿದೆ. ಮೂರು ಸಾವಿರ ಹೊಸ ಐಟಿಐಗಳನ್ನು ಸ್ತಾಪಿಸಲಾಗಿದೆ ಎಂದು ಅವರು ವಿವರ ನೀಡಿದ್ದಾರೆ.