US Navy in Taiwan: ತೈವಾನ್‌ ಜಲಸಂಧಿಯಲ್ಲಿ ಯುಸ್‌ ನೇವಿ ಪೈಲ್ವಾನ್:‌ ಮತ್ತೆ ಹೂಂಕರಿಸಿದ ಚೀನಿ ಶೈತಾನ್‌!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Us Navy In Taiwan: ತೈವಾನ್‌ ಜಲಸಂಧಿಯಲ್ಲಿ ಯುಸ್‌ ನೇವಿ ಪೈಲ್ವಾನ್:‌ ಮತ್ತೆ ಹೂಂಕರಿಸಿದ ಚೀನಿ ಶೈತಾನ್‌!

US Navy in Taiwan: ತೈವಾನ್‌ ಜಲಸಂಧಿಯಲ್ಲಿ ಯುಸ್‌ ನೇವಿ ಪೈಲ್ವಾನ್:‌ ಮತ್ತೆ ಹೂಂಕರಿಸಿದ ಚೀನಿ ಶೈತಾನ್‌!

ಅಮೆರಿಕದ ನೌಕಾಪಡೆಯ ನಿರ್ದೇಶಿತ ಕ್ಷಿಪಣಿ ಕ್ರೂಸರ್‌ಗಳಾದ ಯುಎಸ್‌ಎಸ್‌ ಎಂಟಿಯಟಾಮ್‌ ಮತ್ತು ಯುಎಸ್‌ಎಸ್‌ ಚಾನ್ಸೆಲರ್ಸ್‌ವಿಲ್ಲೆ, ತೈವಾನ್‌ ಜಲಸಂಧಿಯಲ್ಲಿ ಕಾರ್ಯಾಚರಣೆ ನಡೆಸಿವೆ. ಇದನ್ನು ಅಮೆರಿಕ ವಾಡಿಕೆಯ ʼತೈವಾನ್ ಸ್ಟ್ರೀಟ್‌ ಟ್ರಾನ್ಸಿಟ್ʼ ಪ್ರಕ್ರಿಯೆಯ ಭಾಗ ಎಂದು ಅಮೆರಿಕದ ನೌಕಾಸೇನೆ ಸ್ಪಷ್ಟಪಡಿಸಿದೆ. ಆದರೆ ಇದರಿಂದ ಕುಪಿತಗೊಂಡಿರುವ ಚೀನಾ, ಎಚ್ಚರಿಕೆಯ ಸಂದೇಶ ರವಾನಿಸಿದೆ.

<p>ಅಮೆರಿಕ ಯುದ್ಧ ನೌಕೆ</p>
ಅಮೆರಿಕ ಯುದ್ಧ ನೌಕೆ (VIA REUTERS)

ಬೀಜಿಂಗ್‌: ಚೀನಾ-ತೈವಾನ್‌ ನಡುವಿನ ಮಿಲಿಟರಿ ಸಂಘರ್ಷ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಯುದ್ಧಕ್ಕೆ ಹಾತೋರೆಯುತ್ತಿರುವ ಚೀನಾ ಒಂದೆಡೆಯಾದರೆ, ತನ್ನ ಸಾವರ್ಭೌಮತ್ವವನ್ನು ಕಾಪಾಡಲು ಪ್ರಯತ್ನಿಸುತ್ತಿರುವ ತೈವಾನ್‌ ಮತ್ತೊಂದೆಡೆ. ಈ ಮಧ್ಯೆ ತೈವಾನ್‌ಗೆ ಬೆಂಬಲ ನೀಡುವುದಾಗಿ ಹೇಳಿರುವ ಅಮೆರಿಕ, ಆಗಾಗ್ಗೆ ಈ ವಿವಾದಿತ ಪ್ರದೇಶದಲ್ಲಿ ತನ್ನ ಅಸ್ತಿತ್ವದ ಪ್ರದರ್ಶನ ಮಾಡುತ್ತಿದೆ.

ಚೀನಾ-ತೈವಾನ್‌ ಬಿಕ್ಕಟ್ಟು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ತೈವಾನ್‌ನನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಹವಣಿಸುತ್ತಿ ಚೀನಾ ಯುದ್ಧೋನ್ಮಾದದಿಂದ ಹೂಂಕರಿಸುತ್ತಿದೆ. ಆದರೆ ಚೀನಾದ ದೈತ್ಯ ಮಿಲಿಟರಿ ಶಕ್ತಿಯನ್ನು ಎದುರು ಹಾಕಿಕೊಂಡಿರುವ ಪುಟಾಣಿ ರಾಷ್ಟ್ರ ತೈವಾನ್‌, ತನ್ನ ಸಾರ್ವಭೌಮತ್ವ ಕಾಪಾಡಿಕೊಳ್ಳಲು ಅಮೆರಿಕ ಮತ್ತು ಜಗತ್ತಿನ ಇತರೆ ದೇಶಗಳ ಸಹಾಯದ ನಿರೀಕ್ಷೆಯಲ್ಲಿದೆ.

ಚೀನಾದ ಮಿಲಿಟರಿ ಶಕ್ತಿಯ ಸೊಕ್ಕಡಗಿಸಲು ಅಮೆರಿಕ ಆಗಾಗ ಈ ವಿವಾದಾತ್ಮಕ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸುತ್ತಿರುತ್ತದೆ. ಅದರಂತೆ ಈ ಬಾರಿ ತೈವಾನ್‌ ಜಲಸಂಧಿಯಲ್ಲಿ ಅಮೆರಿಕದ ನೌಕಾಸೇನೆಯ ಎರಡು ಯುದ್ಧನೌಕೆಗಳು ಹಾದು ಹೋಗಿದ್ದು, ಚೀನಿ ಡ್ರ್ಯಾಗನ್‌ನ ಕಣ್ಣು ಕೆಂಪಾಗಿಸಿದೆ.

ಹೌದು, ಅಮೆರಿಕದ ನೌಕಾಪಡೆಯ ನಿರ್ದೇಶಿತ ಕ್ಷಿಪಣಿ ಕ್ರೂಸರ್‌ಗಳಾದ ಯುಎಸ್‌ಎಸ್‌ ಎಂಟಿಯಟಾಮ್‌ ಮತ್ತು ಯುಎಸ್‌ಎಸ್‌ ಚಾನ್ಸೆಲರ್ಸ್‌ವಿಲ್ಲೆ, ತೈವಾನ್‌ ಜಲಸಂಧಿಯಲ್ಲಿ ಕಾರ್ಯಾಚರಣೆ ನಡೆಸಿವೆ. ಇದನ್ನು ಅಮೆರಿಕ ವಾಡಿಕೆಯ ʼತೈವಾನ್ ಸ್ಟ್ರೀಟ್‌ ಟ್ರಾನ್ಸಿಟ್ʼ ಪ್ರಕ್ರಿಯೆಯ ಭಾಗ ಎಂದು ಅಮೆರಿಕದ ನೌಕಾಸೇನೆ ಸ್ಪಷ್ಟಪಡಿಸಿದೆ. ಅಲ್ಲದೇ ಅಂತರಾಷ್ಟ್ರೀಯ ಜಲಗಡಿ ಕಾನೂನಿಗೆ ಅನುಗುಣವಾಗಿಯೇ, ಎರಡೂ ಯುದ್ಧ ನೌಕೆಗಳು ತೈವಾನ್‌ ಜಲಸಂಧಿ ಸಮೀಪದಿಂದ ಹಾದು ಹೋಗಿವೆ ಎಂದು ಅಮೆರಿಕದ ನೌಕಾಸೇನೆ ಹೇಳಿದೆ.

ತೈವಾನ್‌ ಜಲಸಂಧಿ ಬಳಿ ಚೀನಾ ಮಿಲಿಟರಿ ಕವಾಯತು ನಡೆಸಿದ ಬಳಿಕ, ಇದೇ ಮೊದಲ ಬಾರಿಗೆ ಅಮೆರಿಕದ ಎರಡು ಯುದ್ಧ ನೌಕೆಗಳು ತೈವಾನ್‌ ಜಲಸಂಧಿ ಬಳಿ ಹಾದು ಹೋಗಿವೆ. ಇದು ಚೀನಾದ ಕೋಪಕ್ಕೆ ಕಾರಣವಾಗಿದ್ದು, ಈ ವಿವಾದಾತ್ಮಕ ಪ್ರದೇಶದಲ್ಲಿ ಅಮೆರಿಕದ ಯುದ್ಧ ನೌಕೆಗಳ ಅಸ್ತಿತ್ವ ಬೆಂಕಿಗೆ ತುಪ್ಪ ಸುರಿಯುವ ಇರಾದೆಯನ್ನು ಹೊಂದಿದೆ ಎಂದು ಕಿಡಿಕಾರಿದೆ.

ಅಮೆರಿಕ ಮೊದಲಿನಿಂದಲೂ ತೈವಾನ್-ಚೀನಾ ನಡುವಿನ ಬಿಕ್ಕಟ್ಟು ಸದಾ ಜೀವಂತವಾಗಿರಬೇಕು ಎಂದು ಬಯಸುತ್ತದೆ. ಮಿಲಿಟರಿ ಸಹಾಯದ ನೆಪದಲ್ಲಿ ತೈವಾನ್‌ನಲ್ಲಿ ತನ್ನ ಸೇನಾಡಳಿತ ಸ್ಥಾಪನೆ ಮಾಡುವುದು ಅಮೆರಿಕದ ಇರಾದೆಯಾಗಿದೆ. ಇದೇ ಕಾರಣಕ್ಕೆ ಯಾವಾಗ ವಿವಾದ ತಣ್ಣಗಾಗುತ್ತಿದೆ ಎನ್ನುತ್ತಿರುವಾಗಲೇ, ತನ್ನ ಮಿಲಿಟರಿ ಅಸ್ತಿತ್ವದ ಮೂಲಕ ಅಮೆರಿಕ ಮತ್ತೆ ಈ ವಿವಾದವನ್ನು ಜೀವಂತವಾಗಿಸುತ್ತದೆ ಎಂದು ಚೀನಾ ತೀವ್ರ ವಾಗ್ದಾಳಿ ನಡೆಸಿದೆ.

ಅಮೆರಿಕ ಮತ್ತು ತೈವಾನ್‌ ನಡುವೆ ಯಾವುದೇ ರೀತಿಯ ಔಪಚಾರಿಕ ರಾಜತಾಂತ್ರಿಕ ಸಂಬಂಧ ಇಲ್ಲ. ಆದರೆ ಬಾಹ್ಯ ದಾಳಿಗಳಿಂದ ತೈವಾನ್‌ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಅಮೆರಿಕ ನೇನಾ ನೆರವು ನೀಡಲಿದೆ ಎಂಬ ಭರವಸೆಯನ್ನು ನೀಡಿದೆ. ಇದೇ ಕಾರಣಕ್ಕೆ ತೈವಾನ್‌ ಮೇಲೆ ಚೀನಾ ತನ್ನ ವಕ್ರದೃಷ್ಟಿ ಬೀರಿದಾಗಲೆಲ್ಲಾ, ಅಮೆರಿಕವು ದ್ವೀಪ ರಾಷ್ಟ್ರದ ಪರವಾಗಿ ಸೇನಾ ಕಾರ್ಯಾಚರಣೆ ನಡೆಸಲು ಸಿದ್ಧ ಎಂದು ಗುಟುರು ಹಾಕುತ್ತದೆ.

ತನ್ನ ಮೇಲಿನ ಚೀನಾದ ಹಕ್ಕುಸ್ವಾಮ್ಯವನ್ನು ನಿರಾಕರಿಸುತ್ತಲೇ ಬಂದಿರುವ ತೈವಾನ್‌, ಈ ದ್ವೀಪ ರಾಷ್ಟ್ರವನ್ನು ಚೀನಾ ಎಂದಿಗೂ ತನ್ನ ಆಳ್ವಿಕೆಗೆ ಒಳಪಡಿಸಿಲ್ಲ. ಹೀಗಾಗಿ ತೈವಾನ್‌ ಒಂದು ಸ್ವತಂತ್ರ್ಯ ಮತ್ತು ಸಾರ್ಔಭೌಮ ರಾಷ್ಟ್ರವಾಗಿದ್ದು, ತೈವಾನ್‌ನ ಭವಿಷ್ಯವನ್ನು ನಿರ್ಧರಿಸುವ ಹಕ್ಕು, ಈ ದ್ವೀಪ ರಾಷ್ಟ್ರದ 23 ಮಿಲಿಯನ್ ಜನರಿಗೆ ಮಾತ್ರ ಇದೆ ಎಂದು ವಾದಿಸುತ್ತಿದೆ.

ಒಟ್ಟಿನಲ್ಲಿ ಈಗಾಗಲೇ ರಷ್ಯಾ-ಉಕ್ರೇನ್‌ ಯುದ್ಧದಿಂದ ಆತಂಕಗೊಂಡಿರುವ ಜಾಗತಿಕ ಶಾಂತಿಪ್ರಿಯ ನಾಗರಿಕ ಸಮುದಾಯ, ಚೀನಾ-ತೈವಾನ್‌ ನಡುವೆ ಯುದ್ಧ ನಡೆಯದೇ ಇರಲಿ ಎಂದು ಪ್ರಾರ್ಥಿಸುತ್ತಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.