Chandrashekhar Azad Ravan: ದಲಿತ ನಾಯಕ ಚಂದ್ರಶೇಖರ್ ಆಜಾದ್; ನೀಲಿ ಸ್ಕಾರ್ಫ್ , ಭೀಮ್ ಆರ್ಮಿ, ರಾವಣ್, ಈ ಕ್ರಾಂತಿಕಾರಿಗೆ ಐಡೆಂಟಿಟಿ
Chandrashekhar Azad Ravan: ಉತ್ತರ ಪ್ರದೇಶದ ಸಹರಣಪುರದಲ್ಲಿ ಕಳೆದ ವಾರ ಶೂಟ್‌ಔಟ್ ಒಂದು ನಡೆದಿತ್ತು. ಇದು ದಲಿತ ನಾಯಕ, ಭೀಮ್ ಆರ್ಮಿ ಸಹಸಂಸ್ಥಾಪಕ ಚಂದ್ರಶೇಖರ್ ಆಜಾದ್ ಅವರನ್ನು ಗುರಿಯಾಗಿಟ್ಟುಕೊಂಡು ನಡೆದ ದಾಳಿ ಆಗಿತ್ತು. ಈ ಮೂಲಕ ಅವರು ದೇಶದ ಗಮನಸೆಳೆದಿದ್ದರು. ಈ ಸಲದ ವ್ಯಕ್ತಿ-ವ್ಯಕ್ತಿತ್ವ ಅಂಕಣ (Vyakti Vyaktitva)ದಲ್ಲಿ ಅವರ ಕಿರು ವ್ಯಕ್ತಿಚಿತ್ರ.
ದಲಿತ ನಾಯಕ ಚಂದ್ರಶೇಖರ್ ಆಜಾದ್ ಸದ್ಯ ಪ್ರಚಲಿತದಲ್ಲಿರುವ ವ್ಯಕ್ತಿ. ಕಳೆದ ವಾರ ಉತ್ತರ ಪ್ರದೇಶದ ಸಹರಣಪುರದ ದೇವಬಂದ್‌ನಲ್ಲಿ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಸಂಬಂಧ ನಾಲ್ವರನ್ನು ಹರಿಯಾಣದ ಅಂಬಾಲದಲ್ಲಿ ಬಂಧಿಸಿದ ಪೊಲೀಸರು ಅವರನ್ನು ಸಹರಣಪುರಕ್ಕೆ ಕರೆತಂದಿದ್ದಾರೆ. ಬಂಧಿತ ಆರೋಪಿಗಳನ್ನು ವಿಕಾಸ್ ಅಲಿಯಾಸ್ ವಿಕ್ಕಿ, ಪ್ರಶಾಂತ್ ಮತ್ತು ಲವಿಶ್ ಎಂದು ಗುರುತಿಸಲಾಗಿದೆ. ವಿಕಾಸ್ ಹೊರತುಪಡಿಸಿ ಉಳಿದವರು ದೇವಬಂಧ್‌ನ ರಾಮ್‌ಖಂಡಿ ನಿವಾಸಿಗಳು. ವಿಕಾಸ್ ಹರಿಯಾಣದ ಕರ್ನಾಲ್ ಜಿಲ್ಲೆಯವನು ಎಂದು ಉತ್ತರ ಪ್ರದೇಶ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಭಾನುವಾರ ತಿಳಿಸಿದ್ದಾರೆ.
ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಕಂಡುಕೊಳ್ಳಲು ಪ್ರಯತ್ನಿಸಿರುವ ಪೊಲೀಸರಿಗೆ, ಚಂದ್ರಶೇಖರ್ ಆಜಾದ್ ಅವರ ಬೇಕಾಬಿಟ್ಟಿ ಹೇಳಿಕೆ ಕಾರಣ ಎಂಬ ಉತ್ತರ ಸಿಕ್ಕಿದೆ. ಆದರೆ ನಿರ್ದಿಷ್ಟವಾಗಿ ಇಂಥದ್ದೇ ಹೇಳಿಕೆ ಎಂಬ ಉಲ್ಲೇಖವನ್ನು ಆರೋಪಿಗಳು ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ದಲಿತ ನಾಯಕ ಚಂದ್ರಶೇಖರ್ ಆಜಾದ್ ಯಾರು ಎಂಬುದನ್ನು ಜಾಲಾಡಿದಾಗ ಸಿಕ್ಕ ಮಾಹಿತಿ ಹಲವು.
ವಾಸ್ತವದಲ್ಲಿ ಚಂದ್ರಶೇಖರ್ ಆಜಾದ್ ಎಂದು ಹುಡುಕಾಡಿದರೆ ಮೊದಲು ಕಾಣಸಿಗುವುದು ನಮ್ಮ ದೇಶದ ಸ್ವಾತಂತ್ರ್ಯ ಸಮರವೀರ ಚಂದ್ರಶೇಖರ್ ಆಜಾದ್ ಅವರ ವಿವರ. ವಾಸ್ತವದಲ್ಲಿ ಈ ಚಂದ್ರಶೇಖರ್ ಆಜಾದ್ ದಲಿತ ನಾಯಕ. ಅಂಬೇಡ್ಕರ್ ವಾದ ಮುಂದಿಟ್ಟುಕೊಂಡು ಭೀಮ್ ಆರ್ಮಿ ಸ್ಥಾಪಿಸಿದವರ ಪೈಕಿ ಒಬ್ಬ. ಚಂದ್ರಶೇಖರ್ ಆಜಾದ್ ಹೆಸರಿನೊಂದಿಗೆ ʻರಾವಣ್ʼ ಎಂಬ ಹಿಂಬಾಲವೂ ಸೇರಿಕೊಂಡಿದೆ. ಹೀಗಾಗಿ ಇವರು ಚಂದ್ರಶೇಖರ್ ಆಜಾದ್ ರಾವಣ್.
ನಡೆ, ನುಡಿಯ ಮೂಲಕ ವಿವಾದವನ್ನು ಮೈಗೆಳೆದುಕೊಳ್ಳುತ್ತಿರುವ ಚಂದ್ರಶೇಖರ್ ಆಜಾದ್ ರಾವಣ್ ಕ್ರಾಂತಿಕಾರಿ. ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಉಲ್ಲೇಖಿಸುವ ಈ ಸಂದರ್ಭದಲ್ಲಿ ಐದು ವರ್ಷ ಹಿಂದಿನ ಅಂದರೆ 2017ರ ಜೂನ್ ತಿಂಗಳು ನಡೆದ ಸಹರಣಪುರ ಹಿಂಸಾಚಾರ/ಗಲಭೆಯ ಕಡೆಗೆ ಗಮನಸೆಳೆಯಬೇಕಾಗುತ್ತದೆ. ಅಂದು ಈ ಗಲಭೆ ಕಾರಣ ಚಂದ್ರಶೇಖರ್ ಆಜಾದ್ ರಾವಣ್ ಅವರನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿರಿಸಿದ್ದರು. ಆಗ ಅವರ ತಾಯಿ ಕಮಲೇಶ್ ದೇವಿ, ಸಹೋದರರಾದ ಭಗತ್ ಸಿಂಗ್, ಕಮಲ್ ಕಿಶೋರ್ ಚಂದ್ರಶೇಖರ್ ಆಜಾದ್ ರಾವಣ್ ಪರ ಪ್ರತಿಭಟನೆ ನಡೆಸಿದ್ದರು. ಅಂದಿನ ಆ ದಿನಗಳಲ್ಲಿ ಕಮಲೇಶ್ ದೇವಿ ಅವರು ನ್ಯೂಸ್ 18ನ ಉದಯ್ ಸಿಂಗ್ ರಾಣಾ ಜತೆಗೆ ಮಾತನಾಡುತ್ತ, ನನ್ನ ಮಗ ಚಂದ್ರಶೇಖರ್ ಆಜಾದ್ ರಾವಣ್ ದಲಿತ ಕ್ರಾಂತಿಕಾರಿ ಎಂದು ಹೇಳಿದ್ದರು. ಅಲ್ಲದೆ ಹಲವು ಚಂದ್ರಶೇಖರ್ ಆಜಾದ್ ರಾವಣ್ ಕುರಿತ ವಿಚಾರಗಳನ್ನು ಬಹಿರಂಗಪಡಿಸಿದ್ದರು.
ಭೀಮ್ ಆರ್ಮಿ ಹುಟ್ಟಿನ ಹಿನ್ನೆಲೆ ಹೀಗಿದೆ...
ಇದು ಹತ್ತು ವರ್ಷಗಳ ಹಿಂದಿನ ಮಾತು. ಆಗ ಚಂದ್ರಶೇಖರ್ ಡೆಹ್ರಾಡೂನ್‌ನಲ್ಲಿ ವಕೀಲಿಕೆ ಮಾಡ್ತಾ ಇದ್ದರು. ಸಹರಣಪುರದ ಚುಟ್ಮಲ್‌ಪುರದಲ್ಲಿ ಒಂದು ಶಾಲೆ ಇತ್ತು, ಅಲ್ಲಿ ದಲಿತರು ತಮ್ಮ ಮಕ್ಕಳನ್ನು ಓದಲು ಕಳುಹಿಸಿದರು. ಆಗ ಸ್ಥಳೀಯ ರಜಪೂತರು ತಮ್ಮ ಮಕ್ಕಳ ಜತೆಗೆ ದಲಿತ ಮಕ್ಕಳು ಜತೆಯಲ್ಲಿ ಓದುತ್ತಿದ್ದಾರೆ ಎಂದು ವಿವಾದ ಎಬ್ಬಿಸಿದರು. ದಲಿತ ಮಕ್ಕಳ ಶಾಲೆ ಪ್ರವೇಶಕ್ಕೆ ಬಿಡಲ್ಲ. ಅವರು ಅಸ್ಪೃಶ್ಯರು ಎಂದು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಶಾಲೆಗೆ ಹೋದ ಮಕ್ಕಳಿಗೆ ಅವರ ಅಪ್ಪ, ಅಮ್ಮ ಮಾಡುತ್ತಿರುವ ಕೆಲಸ ಮುಂದುವರಿಸುವಂತೆ ತಾಕೀತು ಮಾಡಿದರು. ಈ ವಿಚಾರ ಚಂದ್ರಶೇಖರ್ ಕಿವಿಗೆ ಬಿತ್ತು. ಆತ ಇದಕ್ಕಾಗಿ ಆಂದೋಲನ ಶುರುಮಾಡಿದರು. ಭಾರತದಲ್ಲಿ ಶಿಕ್ಷಣದ ಮೂಲಕ ದಲಿತ ಹಿಂದೂಗಳ ವಿಮೋಚನೆಗಾಗಿ ಕೆಲಸ ಮಾಡುವ ಸಂಸ್ಥೆಯಾಗಿ ಭೀಮ್ ಆರ್ಮಿ ರೂಪುಗೊಂಡಿತು. ಇದು ಪಶ್ಚಿಮ ಉತ್ತರ ಪ್ರದೇಶದಲ್ಲಿ ದಲಿತರಿಗಾಗಿ ಉಚಿತ ಶಾಲೆಗಳನ್ನು ನಡೆಸುತ್ತಿದೆ. ಇದಕ್ಕೆ ಅಧಿಕೃತ ಸಂಘಟನೆಯ ರೂಪು ಸಿಕ್ಕಿದ್ದು 2015ರ ಜುಲೈ 21ರಂದು. ವಿನಯ್ ರತನ್ ಸಿಂಗ್ ಮತು ಸತೀಶ್ ಕುಮಾರ್ ಸಹಸಂಸ್ಥಾಪಕರಾದರು. ಈ ಆರ್ಮಿಗೆ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಎಂದೂ, ಅಂಬೇಡ್ಕರ್ ಆರ್ಮಿ ಎಂದೂ ಗುರುತಿಸಲ್ಪಟ್ಟಿದೆ.
ಭೀಮ್ ಆರ್ಮಿ ಕೆಲಸವೇನು...
"ದ ಗ್ರೇಟ್ ಚಾಮರ್ ಆಫ್ ಧಡ್ಕೌಲಿ ನಿಮಗೆ ಸ್ವಾಗತ" ಎಂಬ ಫಲಕವನ್ನು ಸಾರ್ವಜನಿಕವಾಗಿ ಸ್ಥಾಪಿಸಿದ ಬಳಿಕ ಆಜಾದ್ ದೇಶದ ಗಮನ ಸೆಳೆದರು. ಮೇಲ್ಜಾತಿ ಠಾಕೂರ್‌ಗಳು ದಲಿತರ ಈ ಚಳವಳಿಯ ಕಾರಣ ಅಸಮಾಧಾನಗೊಂಡರು ಮತ್ತು ಬೋರ್ಡ್‌ನ ಸ್ಥಾಪನೆಗೆ ಆಕ್ಷೇಪಿಸಿದರು. ಆದರೆ, ಭೀಮ್ ಆರ್ಮಿ ಮಧ್ಯಪ್ರವೇಶಿಸಿ ಠಾಕೂರ್‌ಗಳು ಯಾವುದೇ ಹಿಂಸಾಚಾರವನ್ನು ಮಾಡದಂತೆ ನೋಡಿಕೊಂಡರು. ಇನ್ನೊಂದು ಘಟನೆಯಲ್ಲಿ, ಠಾಕೂರರು ದಲಿತ ವರನನ್ನು ತನ್ನ ಮದುವೆಗೆ ಕುದುರೆ ಸವಾರಿ ಮಾಡದಂತೆ ತಡೆದರು. ಆಗಲೂ ಭೀಮ್ ಆರ್ಮಿ ಮಧ್ಯಪ್ರವೇಶಿಸಿ ವರನನ್ನು ಕರೆದೊಯ್ದಿತು.
ಉತ್ತರ ಪ್ರದೇಶದಲ್ಲಿ ನಡೆದ ಘರ್ಷಣೆಯ ನಂತರ ಭೀಮ್ ಆರ್ಮಿ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆಯಿತು. 2017ರ ಜೂನ್‌ನಲ್ಲಿ, ಚಂದ್ರಶೇಖರ್ ಆಜಾದ್ ಅವರನ್ನು ಪೊಲೀಸರು ಬಂಧಿಸಿದರು. ನವೆಂಬರ್ ತನಕ ಚಂದ್ರಶೇಖರ್ ಜೈಲಿನಲ್ಲಿದ್ದರು. ಬಳಿಕ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತು. ಮುಂದೆ, ಉತ್ತರ ಪ್ರದೇಶ ಸರ್ಕಾರ 2018ರ ಸೆಪ್ಟೆಂಬರ್ ತನಕ ರಾಷ್ಟ್ರೀಯ ಭದ್ರತಾ ಕಾಯ್ದೆ ಪ್ರಕಾರ ಬಂಧನದಲ್ಲಟ್ಟಿತ್ತು.
ಭೀಮ್ ಆರ್ಮಿಯು ಬಿಜೆಪಿಯ ಪೌರತ್ವ (ತಿದ್ದುಪಡಿ) ಕಾಯಿದೆ, 2019 (ಸಿಎಎ) ಶಾಸನವನ್ನು ವಿರೋಧಿಸಿದೆ. 2020ರ ಜನವರಿ ಮತ್ತು ಫೆಬ್ರವರಿಯಲ್ಲಿ ಭೀಮ್ ಆರ್ಮಿಯು ಸಿಎಎ ವಿರುದ್ಧ ಪ್ರತಿಭಟನೆ ನಡೆಸಿತ್ತು. ಇದೇ ಅವಧಿಯ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿ ಸಿಎಎ ಪರ ಬಿಜೆಪಿ ಬೆಂಬಲಿಗರು ಮತ್ತು ಭೀಮ್ ಆರ್ಮಿ ಬೆಂಬಲಿಗರ ನಡುವೆ ಬೀದಿ ಘರ್ಷಣೆಗಳು ನಡೆದವು.
ಆಜಾದ್ ಸಮಾಜ್ ಪಾರ್ಟಿ ಸ್ಥಾಪನೆ
ಚಂದ್ರಶೇಖರ್ ಆಜಾದ್ ರಾವಣ್ 2020ರ ಮಾರ್ಚ್ 15ರಂದು ಚುನಾವಣಾ ರಾಜಕೀಯಕ್ಕೆ ಇಳಿಯುವ ನಿರ್ಧಾರ ತೆಗೆದುಕೊಂಡು ಆಜಾದ್ ಸಮಾಜ್ ಪಾರ್ಟಿ ಎಂಬ ಹೆಸರಿನ ರಾಜಕೀಯ ಪಕ್ಷವನ್ನು ಘೋಷಿಸಿದರು. ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕದಳದ 98 ಮಾಜಿ ನಾಯಕರು ಹೊಸದಾಗಿ ಆರಂಭಿಸಿದ ಪಕ್ಷಕ್ಕೆ ಸೇರ್ಪಡೆಗೊಂಡರು.
ಕರ್ನಾಟಕದ ಜತೆಗೊಂದು ಲಿಂಕ್....
ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಹತ್ಯೆಯ ಸುದ್ದಿ ಚಂದ್ರಶೇಖರ್ ಆಜಾದ್ ಅವರಿಗೆ ತಲುಪಿದಾಗ, ಅವರು ಉತ್ತರ ಪ್ರದೇಶ ಸರ್ಕಾರವನ್ನು "ಕಾಲೇ ಆಂಗ್ರೇಜ್" (ಕಪ್ಪು ಆಂಗ್ಲರು) ಎಂದು ಕರೆದರು. ಗೌರಿ ಲಂಕೇಶ್ ಪರವಾಗಿ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದರು. ನನ್ನ ಅಂಬೇಡ್ಕರ್‌ವಾದಿ ಅಕ್ಕ ಗೌರಿ ಲಂಕೇಶ್ ಅವರ ಹತ್ಯೆಯಿಂದ ನಾನು ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ನಮಸ್ಕರಿಸುತ್ತೇನೆ. ಈ ಬಲಿದಾನ ವ್ಯರ್ಥವಾಗುವುದಿಲ್ಲ. ಗೌರಿ ಎಂದಿಗೂ ತನ್ನ ಜೀವನದಲ್ಲಿ ಎಂದಿಗೂ ತಲೆಬಾಗಲಿಲ್ಲ ಎಂಬುದು ನನಗೆ ಸಂತೋಷ ಕೊಟ್ಟ ವಿಚಾರ. ನಾಳೆ ನಾನು ಸತ್ತರೂ ನೀವು ನಮ್ಮ ಸಾಂಘಿಕ ಹೋರಾಟದಿಂದ ಹಿಂದೆ ಸರಿಯಬಾರದು ಎಂದು ನಿಮಗೆಲ್ಲ ಹೇಳಬಯಸುತ್ತೇನೆ..... ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲಾ ಕಾರಾಗೃಹ ಸದ್ಯ ನನ್ನ ಮನೆ. ಕರಿಯ ಆಂಗ್ಲರ ಸರ್ವಾಧಿಕಾರಿ ಸರ್ಕಾರ ಮತ್ತು ಅವರ ಕೈಗೊಂಬೆ ಜಿಲ್ಲಾಡಳಿತ ನಾನು ಜಾಮೀನಿಗೆ ಅರ್ಜಿ ಸಲ್ಲಿಸಲು ಬಯಸುವುದಿಲ್ಲ ಎಂದು ನಾನು ಕಲಿತಿದ್ದೇನೆ. ನಾನು ಜಾಮೀನಿಗೆ ಅರ್ಜಿ ಸಲ್ಲಿಸಿದರೆ, ಅವರು ನನ್ನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ದಾಖಲಿಸುತ್ತಾರೆ ಎಂದು ಅವರು ಹೇಳುತ್ತಾರೆ ಎಂದು ಕಟುಪದಗಳ ಲೇಖನವನ್ನು ಬರೆದಿದ್ದರು.
ಸ್ವಾತಂತ್ರ್ಯ ಹೋರಾಟ ಕಾಲದ ಕ್ರಾಂತಿಕಾರಿಗಳ ಹೆಸರು ಯಾಕೆ ಬಂತು?
ಚಂದ್ರಶೇಖರ್ ಆಜಾದ್ ಕುಟುಂಬದಲ್ಲಿ ಮೂವರು ಗಂಡು ಮಕ್ಕಳು. ತಾಯಿ ಕಮಲೇಶ್ ದೇವಿ ಅವರು ಹೇಳಿದರ ಪ್ರಕಾರ, ಚುಟ್ಮಲ್‌ಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು ಪತಿ. ದಲಿತರ ಮೇಲಿನ ದೌರ್ಜನ್ಯವನ್ನು ಕಣ್ಣಾರೆ ಕಂಡವರು ಅನುಭವಿಸಿದವರು. ದಲಿತ ಶಿಕ್ಷಕರನ್ನು ಕೂಡ ಅಂದು ನಡೆಸಿಕೊಂಡ ರೀತಿ ಅದಕ್ಕೆ ಕಾರಣವಾಯಿತಿ. ಆಹಾರಕ್ಕಾಗಿ ಪ್ರತ್ಯೇಕ ಪಾತ್ರೆಗಳನ್ನು ಮತ್ತು ನೀರಿಗಾಗಿ ಪ್ರತ್ಯೇಕ ಲೋಟ ಇರಿಸಲಾಗುತ್ತಿತ್ತು. ತನ್ನ ಮಕ್ಕಳು ಸ್ವಲ್ಪ ಬದಲಾವಣೆ ತರಬೇಕೆಂದು ಅವರು ಬಯಸಿದ್ದರು. ಹೀಗಾಗಿ, ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಕ್ರಾಂತಿಕಾರಿಗಳಿಬ್ಬರ ಹೆಸರನ್ನು ಇಬ್ಬರು ಮಕ್ಕಳಿಗೆ ಇಟ್ಟರು. ಚಂದ್ರಶೇಖರ್ ಆಜಾದ್ ಮತ್ತು ಭಗತ್ ಸಿಂಗ್. ಇಂದು ಚಂದ್ರಶೇಖರ ದಲಿತ ಕ್ರಾಂತಿಕಾರಿ. ಚಿಕ್ಕವನು ಕಮಲ್ ಕಿಶೋರ್ ಸೇರಿ ಎಲ್ಲ ಮಕ್ಕಳು ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಹೆಸರಿನ ಹಿಂದೆ ರಾವಣ್ ಸೇರಿಕೊಂಡದ್ದು ಹೇಗೆ..
ರಾಮಾಯಣದಲ್ಲಿ ರಾವಣ ಖಳನಾಯಕ. ಆ ಹೆಸರನ್ನು ದಲಿತ ನಾಯಕ ಚಂದ್ರಶೇಖರ್ ಆಜಾದ್ ತಮ್ಮ ಹೆಸರಿನ ಹಿಂಬದಿಗೆ ಸೇರಿಕೊಂಡದ್ದು ಯಾಕೆ ಎಂಬ ಪ್ರಶ್ನೆಗೆ ಅವರ ತಾಯಿ ನೀಡಿದ ಉತ್ತರ ಹೀಗಿದೆ - ರಾವಣ ವಿದ್ವಾಂಸ. ಸಹೋದರಿಯರ ಗೌರವ ಕಾಪಾಡುವುದಕ್ಕೆ ಹೋರಾಟ ನಡೆಸಿದವನು. ಚಂದ್ರಶೇಖರ್ ತಮ್ಮ ಸಮುದಾಯದ ಸಹೋದರಿಯರ ಗೌರವ ಕಾಪಾಡಲು ಯಾವುದೇ ಹಂತಕ್ಕೆ ಹೋಗಬಹುದು ಆದರೆ ಬೇರೆಯವರಿಗೆ ಅನ್ಯಾಯ ಮಾಡಲ್ಲ.
ಅಂದ ಹಾಗೆ ಚಂದ್ರಶೇಖರ್ ರಾವಣ್ ಹುಟ್ಟಿದ್ದು 1986ರ ಡಿಸೆಂಬರ್ 3ರಂದು. ತಂದೆ ಗೋವರ್ಧನ್ ದಾಸ್ (ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದವರು). ತಾಯಿ ಕಮಲೇಶ್ ದೇವಿ. ಚಂದ್ರಶೇಖರ್ ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್ಸ್ ಟ್ವಿಟರ್ - @BhimArmyChief ಫೇಸ್‌ಬುಕ್ - @bhimarmychief001
--------------------
(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)