Rahul Gandhi on Media: 'ಗೋದಿ ಮೀಡಿಯಾ' ನುಡಿಗಟ್ಟನ್ನು ನಾನೆಂದೂ ಬಳಸಿಲ್ಲ: ಮಾಧ್ಯಮಗಳ ಬಗ್ಗೆ ರಾಹುಲ್‌ ಹೇಳಿದ್ದೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi On Media: 'ಗೋದಿ ಮೀಡಿಯಾ' ನುಡಿಗಟ್ಟನ್ನು ನಾನೆಂದೂ ಬಳಸಿಲ್ಲ: ಮಾಧ್ಯಮಗಳ ಬಗ್ಗೆ ರಾಹುಲ್‌ ಹೇಳಿದ್ದೇನು?

Rahul Gandhi on Media: 'ಗೋದಿ ಮೀಡಿಯಾ' ನುಡಿಗಟ್ಟನ್ನು ನಾನೆಂದೂ ಬಳಸಿಲ್ಲ: ಮಾಧ್ಯಮಗಳ ಬಗ್ಗೆ ರಾಹುಲ್‌ ಹೇಳಿದ್ದೇನು?

ನಾನು ಪ್ರಸ್ತುತ ಭಾರತೀಯ ಮಾಧ್ಯಮಗಳ ರಚನೆಯನ್ನು ವಿರೋಧಿಸುತ್ತೇನೆಯೇ ಹೊರತು, ಆ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರನ್ನಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಭಾರತ್‌ ಜೋಡೋ ಯಾತ್ರೆಯ ನೇಪಥ್ಯದಲ್ಲಿ ಹೋಶಿಯಾರ್‌ಪುರ್‌ದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, 'ಗೋದಿ ಮೀಡಿಯಾ' ನುಡಿಗಟ್ಟನ್ನು ನಾನು ಆರಂಭಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ (PTI)

ಹೋಶಿಯಾರ್‌ಪುರ್:‌ ನಾನು ಪ್ರಸ್ತುತ ಭಾರತೀಯ ಮಾಧ್ಯಮಗಳ ರಚನೆಯನ್ನು ವಿರೋಧಿಸುತ್ತೇನೆಯೇ ಹೊರತು, ಆ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರನ್ನಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಭಾರತ್‌ ಜೋಡೋ ಯಾತ್ರೆಯ ನೇಪಥ್ಯದಲ್ಲಿ ಹೋಶಿಯಾರ್‌ಪುರ್‌ದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, 'ಗೋದಿ ಮೀಡಿಯಾ' ನುಡಿಗಟ್ಟನ್ನು ನಾನು ಆರಂಭಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಮಾಧ್ಯಮಗಳನ್ನು 'ಗೋದಿ ಮೀಡಿಯಾ' ಎಂದು ಕರೆಯುತ್ತಾರೆ ಎಂದು ಪತ್ರಕರ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ರಾಹುಲ್‌ ಗಾಂಧಿ, ನಾನೆಂದೂ 'ಗೋದಿ ಮೀಡಿಯಾ' ನುಡಿಗಟ್ಟನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಪ್ರಸ್ತುತ ಮಾಧ್ಯಮಗಳ ರಚನೆಯನ್ನು ವಿರೋಧಿಸುತ್ತೇನೆ. ಮಾಧ್ಯಮಗಳು ದೇಶದ ರೈತರ, ಸಣ್ಣ ವ್ಯಾಪಾರಸ್ಥರ, ಬಡವರ, ಮಹಿಳೆಯರ ಸಮಸ್ಯೆ ಬಗ್ಗೆ ಗಮನಹರಿಸಬೇಕೆ ಹೊರತು, ಐಶ್ವರ್ಯ ರೈ, ಶಾರೂಖ್‌ ಖಾನ್‌, ಸಚಿನ್‌ ತೆಂಡೂಲ್ಕರ್‌ ಬಗ್ಗೆ ಅಲ್ಲ. ಆದರೆ ಭಾರತೀಯ ಮಾಧ್ಯಮಗಳು ಸಮಸ್ಯೆಗಳಿಂದ ವಿಷಯಾಂತರ ಮಾಡಲು, ಬೇಡದ ಸುದ್ದಿಗಳಿಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತವೆ ಎಂದು ರಾಹುಲ್‌ ಅಭಿಪ್ರಾಯಪಟ್ಟರು.

ಬಹುತೇಕ ಭಾರತೀಯ ಮಾಧ್ಯಮಗಳು ಆಳುವ ಪಕ್ಷದ ಕೈಗೊಂಬೆಯಂತೆ ಕೆಲಸ ಮಾಡುತ್ತಿವೆ. ಇದಕ್ಕೆ ಈ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಹೊಣೆಗಾರರಲ್ಲ. ಒಂದು ವೇಳೆ ಮಾಧ್ಯಮ ಸಂಸ್ಥೆಗಳು ಪತ್ರಕರ್ತರಿಗೆ ಸ್ವಾತಂತ್ರ್ಯ ನೀಡಿದರೆ, ಅವರು ಖಂಡಿತವಾಗಿಯೂ ದೇಶದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಆದರೆ ದುರದೃಷ್ಟವಶಾತ್‌ ಮಾಧ್ಯಮ ಸಂಸ್ಥೆಗಳು ಪತ್ರಕರ್ತರಿಗೆ ಈ ಸ್ವಾತಂತ್ರ್ಯವನ್ನು ನೀಡುತ್ತಿಲ್ಲ ಎಂದು ರಾಹುಲ್‌ ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್‌ ಪಕ್ಷ ಸದಾ ಪತ್ರಿಕಾ ಸ್ವಾತಂತ್ರ್ಯದ ಪರ ಇರುತ್ತದೆ. ಆದರೆ ಮಾಧ್ಯಮಗಳು ಆಳುವವರ ಕೈಗೊಂಬೆಗಳಾಗಬಾರದು ಎಂಬುದಷ್ಟೇ ನಮ್ಮ ಕಳಕಳಿ. ನಾವು ಕೇವಲ ಮಾಧ್ಯಮ ಸಂಸ್ಥೆಗಳನ್ನು ಪ್ರಶ್ನಿಸುತ್ತಿದ್ದೇವೆಯೇ ಹೊರತು, ವೈಯಕ್ತಿಕವಾಗಿ ಯಾವುದೇ ಪತ್ರಕರ್ತರ ವಿರುದ್ಧ ಮಾತನಾಡುತ್ತಿಲ್ಲ ಎಂದು ರಾಹುಲ್‌ ಗಾಂಧಿ ಇದೇ ವೇಳೆ ಸ್ಪಷ್ಟಪಡಿಸಿದರು.

ಮಾಧ್ಯಮಗಳು ಒಬ್ಬ ವ್ಯಕ್ತಿ ಅಥವಾ ಒಂದು ಸರ್ಕಾರದ ಪರ ಮಾತನಾಡದೇ, ಈ ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಆಗ ಮಾತ್ರ ಪತ್ರಿಕಾ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ. ಮಾಧ್ಯಮಗಳು ಜನರ ಪರವಾಗಿ ಧ್ವನಿ ಎತ್ತುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ರಾಹುಲ್‌ ಗಾಂಧಿ ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್‌ ಪಕ್ಷ ಪತ್ರಕರ್ತರ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುತ್ತದೆ. ನನ್ನ ವ್ಯಕ್ತಿತ್ವವನ್ನು ಹಾಳು ಮಾಡುವ ಉದ್ದೇಶ ಕೆಲವು ಮಾಧ್ಯಮ ಸಂಸ್ಥೆಗಳಾಗಿದ್ದೆಯೇ ಹೊರತು, ಯಾವುದೇ ಪತ್ರಕರ್ತರದ್ದಲ್ಲ. ಆದರೆ ನಾನಾಗಲಿ, ಕಾಂಗ್ರೆಸ್‌ ಪಕ್ಷವಾಗಲಿ ಈ ವೈಯಕ್ತಿಕ ದಾಳಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದರು.

ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ನಾವು ಪರಿಗಣಿಸುತ್ತೇವೆ. ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿ ಇದ್ದಂತೆ. ಮಾಧ್ಯಮಗಳು ಆಳುವ ಪಕ್ಷಗಳ ಹೊಗಳುಭಟರಾಗದೇ, ಜನಸಾಮಾನ್ಯರ ಧ್ವನಿಯಾಗಬೇಕು. ಪ್ರಜಾಪ್ರಭುತ್ವದ ಯಶಸ್ಸಿಗೆ ಮಾಧ್ಯಮಗಳು ತಟಸ್ಥವಾಗಿ ಉಳಿಯವುದು ಅತ್ಯಂತ ಮುಖ್ಯ ಎಂದು ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟರು.

ಪತ್ರಕರ್ತರು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯನ್ನು ವಿಜೃಂಭಿಸಲು ಮತ್ತೊಬ್ಬರನ್ನು ಕೀಳಾಗಿ ತೋರಿಸುವ, ಮತ್ತೊಬ್ಬರ ಬಗ್ಗೆ ಕೀಳಾಗಿ ಬರೆಯುವ ಅನಿವಾರ್ಯತೆಗೆ ಅವರನ್ನು ದೂಡಲಾಗಿದೆ. ಮಾಧ್ಯಮಗಳ ಇಂದಿನ ಸ್ಥಿತಿ ಕಂಡು ದು:ಖವಾಗುತ್ತದೆ ಎಂದು ಪರೋಕ್ಷವಾಗಿ ಬಹುತೇಕ ಮಾಧ್ಯಮಗಳು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ವಿಜೃಂಭಿಸುತ್ತವೆ ಎಂದು ರಾಹುಲ್‌ ಗಾಂಧಿ ಹೇಳಿದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.