ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಯೋಧ್ಯೆ ರಾಮಮಂದಿರದಲ್ಲಿ ಎಂಟ್ರಿ ರೂಲ್ಸ್‌, ಆರತಿ ಸಮಯ ಬದಲು; ಹೊಸ ನಿಯಮಗಳ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು

ಅಯೋಧ್ಯೆ ರಾಮಮಂದಿರದಲ್ಲಿ ಎಂಟ್ರಿ ರೂಲ್ಸ್‌, ಆರತಿ ಸಮಯ ಬದಲು; ಹೊಸ ನಿಯಮಗಳ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು

ಅಯೋಧ್ಯೆ ರಾಮಮಂದಿರಕ್ಕೆ ಪ್ರತಿನಿತ್ಯ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದು, ಇದೀಗ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಭಕ್ತಾದಿಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ, ಮಾತ್ರವಲ್ಲ ಆರತಿ ಸಮಯವನ್ನೂ ಬದಲಿಸಿದೆ. ಈ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳು ಇಲ್ಲಿವೆ.

ಅಯೋಧ್ಯೆ ರಾಮಮಂದಿರದ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು
ಅಯೋಧ್ಯೆ ರಾಮಮಂದಿರದ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು (ANI)

ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ, ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮುಗಿದು ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ. ಅಂದಿನಿಂದ ಪ್ರತಿದಿನ ಇಲ್ಲಿಗೆ 1 ರಿಂದ 1.5 ಲಕ್ಷ ಜನ ಭಕ್ತಾದಿ ಭೇಟಿ ನೀಡಿ, ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ. ಇದೀಗ ಅಯೋಧ್ಯೆ ರಾಮಮಂದಿರ ಟ್ರಸ್ಟ್‌ ಯಾತ್ರಾರ್ಥಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಯಲ್ಲಿ ದರ್ಶನದ ಸಮಯ, ಪ್ರವೇಶ ಹಾಗೂ ನಿರ್ಗಮನ ಪ್ರಕ್ರಿಯೆ, ಆರತಿ ಸಮಯ ಹಾಗೂ ಪ್ರವೇಶ ಪಾಸ್‌ಗೆ ಸಂಬಂಧಿಸಿದ ಅಂಶಗಳಿವೆ.

ಟ್ರೆಂಡಿಂಗ್​ ಸುದ್ದಿ

2024ರ ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಿದ್ದರು. ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಮಂಡಲೋತ್ಸವ ಕಾರ್ಯಕ್ರಮ ನಡೆದಿತ್ತು. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ 48 ದಿನದ ಕಾರ್ಯಕ್ರಮ ಮಂಡಲೋತ್ಸವ.

ಅಯೋಧ್ಯೆಯಲ್ಲಿನ ಬಾಲ ರಾಮನ ಪ್ರತಿಮೆಯನ್ನು ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತನೆ ಮಾಡಿದ್ದರು. ಪ್ರಧಾನಿ ಮೋದಿ ವೈದಿಕ ವಿಧಿಗಳನ್ನು ನೆರವೇರಿಸುವ ಮೂಲಕ ಬಾಲ ರಾಮನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

ರಾಮಮಂದಿರ ಲೋಕಾರ್ಪಣೆಗೊಂಡ ದಿನದಿಂದ ಈ ಪುಣ್ಯಕ್ಷೇತ್ರಕ್ಕೆ ಭಾರತ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಿಂದ ಹಲವರು ಭೇಟಿ ನೀಡುತ್ತಿದ್ದಾರೆ. ಇದೀಗ ರಾಮಮಂದಿರದಲ್ಲಿ ಹೊಸ ನಿಯಮಗಳು ಜಾರಿಯಾಗಿದ್ದು, ಅವುಗಳ ಕುರಿತ ವಿವರ ಇಲ್ಲಿದೆ.

* ಭಕ್ತರು ಬೆಳಿಗ್ಗೆ 6.30 ರಿಂದ 9.30ರವರೆಗೆ ಬಾಲ ರಾಮನ ದರ್ಶನ ಪಡೆಯಲು ರಾಮಮಂದಿರಕ್ಕೆ ಭೇಟಿ ನೀಡಬಹುದು.

* ರಾಮಮಂದಿರದಲ್ಲಿ ಬಾಲ ರಾಮನ ದರ್ಶನಕ್ಕೆ ಪ್ರವೇಶದಿಂದ ನಿರ್ಗಮನದವರೆಗಿನ ಸಂಪೂರ್ಣ ಪ್ರಕ್ರಿಯೆಯು ಅತ್ಯಂತ ಸರಳ ಮತ್ತು ಅನುಕೂಲಕರವಾಗಿದೆ. ಭಕ್ತಾದಿಗಳು 60 ರಿಂದ 75 ನಿಮಿಷದ ಒಳಗೆ ಸುಗಮ ದರ್ಶನ ಪಡೆಯಬಹುದು.

* ಭಕ್ತರು ತಮ್ಮ ಅನುಕೂಲಕ್ಕಾಗಿ ಹಾಗೂ ಸಮಯ ಉಳಿಸುವ ಸಲುವಾಗಿ ಮೊಬೈಲ್‌ ಫೋನ್‌, ಪಾದರಕ್ಷೆ ಹಾಗೂ ಪರ್ಸ್‌ ಇತ್ಯಾದಿಗಳನ್ನು ಮಂದಿರದ ಹೊರಗೆ ಬಿಡುವಂತೆ ಸೂಚಿಸಲಾಗಿದೆ.

* ರಾಮಮಂದಿರಕ್ಕೆ ಬರುವ ಭಕ್ತರು ಹೂವು, ಮಾಲೆ, ಪ್ರಸಾದ ಇತ್ಯಾದಿಗಳನ್ನು ತರದಂತೆ ವಿನಂತಿಸಲಾಗಿದೆ.

* ಎಂಟ್ರಿ ಪಾಸ್‌ ಪಡೆಯವರಿಗೆ ಮುಂಜಾನೆ 4 ಗಂಟೆಗೆ ಮಂಗಳಾರತಿ, 6.15ಕ್ಕೆ ಶೃಂಗಾರ ಆರತಿ ಮತ್ತು ರಾತ್ರಿ 10 ಗಂಟೆಗೆ ಶಯನ ಆರತಿ ಲಭ್ಯವಿದೆ. ಇತರ ಆರತಿಗಳಿಗೆ ಯಾವುದೇ ಪ್ರವೇಶ ಪಾಸ್‌ಗಳ ಅಗತ್ಯವಿಲ್ಲ.

* ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವೆಬ್‌ಸೈಟ್‌ನಿಂದಲೂ ಪ್ರವೇಶ ಪಾಸ್‌ ಪಡೆಯಬಹುದು. ಎಂಟ್ರಿ ಪಾಸ್‌ ಉಚಿತವಾಗಿದ್ದು ಯಾವುದೇ ಹಣ ನೀಡುವಂತಿಲ್ಲ.

* ಎಂಟ್ರಿ ಪಾಸ್‌ ಪಡೆಯಲು ಭಕ್ತರ ಹೆಸರು, ವಯಸ್ಸು, ಆಧಾರ್‌ ಕಾರ್ಡ್‌, ಮೊಬೈಲ್‌ ಸಂಖ್ಯೆ ಹಾಗೂ ಊರು ಮುಂತಾದ ಮಾಹಿತಿ ಅಗತ್ಯ.

* ಶ್ರೀರಾಮ ಮಂದಿರದಲ್ಲಿ ಯಾವುದೇ ವಿಶೇಷ ಪಾಸ್‌ ವ್ಯವಸ್ಥೆ ಇಲ್ಲ, ಅಲ್ಲದೇ ಎಂಟ್ರಿ ಪಾಸ್‌ಗೆ ಹಣ ನೀಡುವಂತಿಲ್ಲ. ಒಂದು ವೇಳೆ ಹಣ ಪಾವತಿಸಬೇಕು ಎಂದು ನೀವು ಎಲ್ಲಿಯಾದರೂ ಕೇಳಿದ್ದರೆ ಅದು ಹಗರಣವಾಗಿರಬಹುದು ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ತಿಳಿಸಿದೆ.

* ವಯೋವೃದ್ಧರು ಮತ್ತು ಅಂಗವಿಕರಿಗಾಗಿ ಮಂದಿರದಲ್ಲಿ ಗಾಲಿಕುರ್ಚಿಗಳನ್ನು ಲಭ್ಯವಿವೆ. ಈ ಗಾಲಿಕುರ್ಚಿಗಳನ್ನು ಶ್ರೀರಾಮ ಮಂದಿರದ ಆವರಣದಲ್ಲಿ ಮಾತ್ರ ಬಳಸಬಹುದಾಗಿದೆ. ಇದನ್ನು ಅಯೋಧ್ಯೆ ನಗರ ಸುತ್ತಲು ಅಥವಾ ಬೇರೆ ಮಂದಿರಕ್ಕೆ ಹೋಗಲು ಬಳಸುವಂತಿಲ್ಲ. ಗಾಲಿಕುರ್ಚಿಗೆ ಯಾವುದೇ ಬಾಡಿಗೆ ಶುಲ್ಕವಿಲ್ಲ.

ಈ ಎಲ್ಲವೂ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡುವವರು ಪಾಲಿಸಬೇಕಾದ ಹೊಸ ನಿಯಮಗಳು. ನೀವು ಅಯೋಧ್ಯೆಗೆ ಹೋಗುವ ಪ್ಲಾನ್‌ ಇದ್ದರೆ ಈ ನಿಯಮಗಳನ್ನು ಮೊದಲೇ ತಿಳಿದುಕೊಂಡಿರಿ.

IPL_Entry_Point