ಭಾರತದಲ್ಲಿ 6ಜಿ ಶುರುವಾಗುವುದು ಯಾವಾಗ?; ಪ್ರಧಾನಿ ಮೋದಿ ನೀಡಿದ್ದಾರೆ ಹೀಗೊಂದು ಭರವಸೆ
ದಶಕ ಮುಗಿಯುವುದರಲ್ಲಿಯೇ ಭಾರತದಲ್ಲಿ 6ಜಿ ಸೇವೆ ಆರಂಭವಾಗಲಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭರವಸೆ ನೀಡಿದ್ದಾರೆ
ನವದೆಹಲಿ: ಈ ದಶಕ ಮುಗಿಯುವುದರಲ್ಲಿಯೇ ಭಾರತದಲ್ಲಿ 6ಜಿ ಸೇವೆ ಆರಂಭವಾಗಲಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭರವಸೆ ನೀಡಿದ್ದಾರೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಬೆಳ್ಳಿ ಮಹೋತ್ಸವದ ದೇಶಿಯ 5ಜಿ ಟೆಸ್ಟ್ ಬೆಡ್ ಉದ್ಘಾಟಿಸಿ ಮಾತನಾಡಿದ ಮೋದಿ, ದೇಶದಲ್ಲಿ ಕನೆಕ್ಟಿವಿಯನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ, ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಸಮಯ ಬದಲಾದಂತೆ ಅದನ್ನು ಆಧುನೀಕರಿಸಬೇಕಾಗಿದೆ ಎಂದರು.
ದೇಶದ ಹಳ್ಳಿಗಳಿಗೂ ತಲುಪಲಿದೆ 5ಜಿ ತಂತ್ರಜ್ಞಾನ
ಭಾರತ ಟೆಲಿಕಾಂ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿರುವುದು ಮಹತ್ವದ ಹೆಜ್ಜೆಯಾಗಿದೆ. ದೇಶಿಯ ನಿರ್ಮಿತ 5ಜಿ ತಂತ್ರಜ್ಞಾನ ದೇಶದ ಎಲ್ಲ ಹಳ್ಳಿಗಳನ್ನೂ ತಲುಪಲಿದೆ. ಇದು ಹೆಮ್ಮೆಯ ವಿಚಾರವೂ ಹೌದು. ಇದರಿಂದ ಆಡಳಿತದಲ್ಲಿಯೂ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಸಾರಿಗೆ ಸೇರಿ ಪ್ರತಿಯೊಂದು ವಲಯದಲ್ಲಿ ಅಭಿವೃದ್ಧಿಗೆ ಸಹಾಯಕವಾಗಿಯೇ ಕೆಲಸ ಮಾಡಲಿದೆ. ಉದ್ಯೋಗಾವಕಾಶಗಳೂ ಅದೇ ನಿಟ್ಟಿನಲ್ಲಿ ತೆರೆದುಕೊಳ್ಳಲಿವೆ. ಒಟ್ಟಾರೆಯಾಗಿ ಸ್ವಾವಲಂಬನೆ ಮತ್ತು ಆರೋಗ್ಯಕರ ಸ್ಪರ್ಧೆಯು ಸಮಾಜ ಮತ್ತು ಆರ್ಥಿಕತೆಯ ಮೇಲೆ ಹೇಗೆ ಗುಣಾತ್ಮಕ ಪರಿಣಾಮ ಬೀರಬಹುದು ಎಂಬುದಕ್ಕೆ ಟೆಲಿಕಾಂ ವಲಯ ಉತ್ತಮ ಉದಾಹರಣೆಯಾಗಿದೆ ಎಂದರು.
ಪಂಚಾಮೃತ ಯಶಸ್ವಿ
ಕಳೆದ ಈ ಎಂಟು ವರ್ಷಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲಿ ಪಂಚಾಮೃತ ಯೋಜನೆಯೂ ಒಂದು. ಈ ಬಗ್ಗೆ ಹೇಳಿಕೊಳ್ಳುವ ಮೋದಿ, ಕಳೆದ ಎಂಟು ವರ್ಷಗಳಲ್ಲಿ ‘ರೀಚ್, ರಿಫಾರ್ಮ್, ರೆಗ್ಯುಲೇಟ್, ರೆಸ್ಪಾಂಡ್ ಅಂಡ್ ರೆವಲ್ಯೂಷನ್’ ಎಂಬ ‘ಪಂಚಾಮೃತ’ದೊಂದಿಗೆ ಟೆಲಿಕಾಂ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಾಗಿದೆ. ಇದೀಗ ಇದೆಲ್ಲವನ್ನು ಮೀರಿ ದೇಶ ಮುಂದುವರಿಯುತ್ತಿದೆ. ಇಂಟರ್‌ನೆಟ್ ಬಳಕೆಯ ವಿಚಾರದಲ್ಲಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಮುಂದುವರಿಯುತ್ತಿದ್ದೇವೆ ಎಂದೂ ಹೇಳಿದರು.
ಬಡವರಿಗೂ ತಲುಪಲಿದೆ
ದೇಶದಲ್ಲಿಯೇ ಮೊಬೈಲ್ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಒತ್ತು ನೀಡಲಾಗಿದೆ. ಇದರಿಂದ ಈ ಸೇವೆ ಪ್ರತಿ ಮನೆಯನ್ನೂ ತಲುಪಲಿದೆ. ಬಡ ಕುಟುಂಬಗಳಿಗೂ ಈ ಸೇವೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ ಎಂದೂ ಮೋದಿ ಹೇಳಿದರು. ಇಂದು ಭಾರತ ದೇಶದ ಪ್ರತಿಯೊಂದು ಹಳ್ಳಿಯನ್ನು ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕಿಸುತ್ತಿದೆ. 2014 ರ ಮೊದಲು, ಭಾರತದಲ್ಲಿ 100 ಗ್ರಾಮ ಪಂಚಾಯತ್‌ಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕವಿರಲಿಲ್ಲ. ಇಂದು ನಾವು 1.75 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಬ್ರಾಡ್‌ಬ್ಯಾಂಡ್ ಮೂಲಕ ತಲುಪಿದ್ದೇವೆ. ಇದರಿಂದ ಸರ್ಕಾರಿ ಸೇವೆಗಳು ಹಳ್ಳಿಗಳಿಗೂ ತಲುಪುತ್ತಿವೆ ಎಂದರು.
ವಿಭಾಗ