ಭಾರತದಲ್ಲಿ ಕೋವಿಡ್ ಉಪತಳಿ ಜೆಎನ್ 1 ಮೊದಲ ಪ್ರಕರಣ ಪತ್ತೆ; ಎಚ್ಚರ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ದೆಹಲಿ: ದೇಶದಲ್ಲಿ ಕೋವಿಡ್ ಉಪತಳಿ ಜೆಎನ್ 1 (Covid JN 1) ಮೊದಲ ಪ್ರಕರಣ ಪತ್ತೆಯಾಗಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಂಜಾಗ್ರತೆ ವಹಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಕೋವಿಡ್-19 ವೈರಸ್ ಪತ್ತೆಯಾದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ, ಕ್ರಮಗಳಿಂದ ಪ್ರಕರಣಗಳ ಕುಸಿತಿ ಮತ್ತು ವ್ಯಾಪಕವಾದ ಪ್ರತಿರಕ್ಷಣೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೆವು. 2 ವರ್ಷಗಳಲ್ಲಿ ಈ ಗಮನಾರ್ಹವಾದ ಸಾಧನೆಯಿಂದಾಗಿ ಕೋವಿಡ್ ಅನ್ನು ಶೂನ್ಯಕ್ಕೆ ತರಲಾಗಿತ್ತು. ಆ ಬಳಿಕ ಎಲ್ಲಾ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗಿತ್ತು,
ಇದೀಗ ಕೋವಿಡ್-19 ವೈರಸ್ ಮತ್ತೆ ಹರಡುವಿಕೆ ಮುಂದುವರಿಯುತ್ತಿರುವುದರಿಂದ ನಾವು ನಿರಂತರವಾಗಿ ಜಾಗರೂಕತೆಯ ಸ್ಥಿತಿಯನ್ನು ಜಿಲ್ಲಾ ಮಟ್ಟದಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ಮುಂಬರುವ ಹಬ್ಬಗಳ ಋತುವಿನಲ್ಲಿ ಕೋವಿಡ್ ಹರಡುವ ಹೆಚ್ಚಿನ ಅಪಾಯ ಇರುತ್ತದೆ. ಹೀಗಾಗಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳು ಹಾಗೂ ಇತರೆ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ರಾಜ್ಯಗಳಿಗೆ ತಿಳಿಸಿದೆ. ಅಲ್ಲದೆ, ವೈರಸ್ ಕಣ್ಗಾವಲು ಕಾರ್ಯತಂತ್ರಕ್ಕಾಗಿ ವಿವರವಾದ ಪರಿಷ್ಕೃತ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಲಹೆಗಳನ್ನು ನೀಡುವಂತೆಯೂ ರಾಜ್ಯಗಳನ್ನು ಕೇಳಿದೆ.
ರಾಜ್ಯ ಸರ್ಕಾರಗಳು ಏನೇನು ಮಾಡಬೇಕು?
ಜಿಲ್ಲಾವಾರು ಆರೋಗ್ಯಕ್ಕೆ ಸಂಬಂಧಿಸಿದ, ತೀವ್ರ ಉಸಿರಾಟದ ಕಾಯಿಲೆ, ಮೇಲ್ವಿಚಾರಣೆ ಸೇರಿದಂತೆ ಇತರೆ ಮಾಹಿತಿಯನ್ನು ಸಮಗ್ರ ಆರೋಗ್ಯ ಮಾಹಿತಿ ವೇದಿಕೆ (ಐಎಚ್‌ಐಪಿ) ಪೋರ್ಟಲ್‌ನಲ್ಲಿ ನಮೂದಿಸಬೇಕು. ಪರೀಕ್ಷಾ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿ ಪರೀಕ್ಷೆಗಳನ್ನು ಆರಂಭಿಸಬೇಕು. ಹೆಚ್ಚು ಹೆಚ್ಚು ಆರ್‌ಟಿ-ಪಿಸಿಆರ್ ಹಾಗೂ ಆಂಟಿಜೆನ್ ಪರೀಕ್ಷೆಗಳನ್ನು ನಡೆಸಬೇಕು. ಹೊಸ ವೈರಸ್ ಅನ್ನು ಪತ್ತೆಹಚ್ಚಲು ಪರೀಕ್ಷೆಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಬೇಕು.
ಸಚಿವಾಲಯವು ನಡೆಸುತ್ತಿರುವ ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಸನ್ನದ್ಧತೆ, ಪ್ರಕ್ರಿಯೆಗಳ ಸಾಮರ್ಥ್ಯಗಳನ್ನು ಸರ್ಕಾರಗಳು ಪರಿಶೀಸಲಿಸಬೇಕು. ಸೋಂಕು ಹರಡುವಿಕೆಯನ್ನು ತಡೆಯಲು ನಿರಂತರ ಸಮುದಾಯದ ಬೆಂಬಲ ಪಡೆಯುವುದರ ಜೊತೆಗೆ ಜಾಗೃತಿಯನ್ನು ಉತ್ತೇಜಿಸಬೇಕು ಎಂದು ಹೇಳಿದೆ.
ಕೇರಳದ ತಿರುವನಂತಪುರಂನಲ್ಲಿ 2023ರ ಡಿಸೆಂಬರ್ 8 ರಂದು ಮಹಿಳೆಯೊಬ್ಬರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದಾಗ ಜೆಎನ್ 1 ಪ್ರಕರಣ ಪಾಸಿಟಿವ್ ಬಂದಿತ್ತು. ಇದು ದೇಶದ ಮೊದಲ ಪ್ರಕರಣವಾಗಿದೆ. 79 ವರ್ಷದ ಮಹಿಳೆಯಲ್ಲಿ ಕೋವಿಡ್‌ನ ಈ ರೂಪಾಂತರಿ ತಳಿ ಪತ್ತೆಯಾಗಿದೆ. ಈ ವೈರಸ್ ಅಮೆರಿಕ, ಚೀನಾ, ಸಿಂಗಾಪುರ್ ಹಾಗೂ ಭಾರತದಲ್ಲಿ ಪತ್ತೆಯಾಗಿದೆ.
ವಿಭಾಗ