Garlic Price Hike: ಈರುಳ್ಳಿ, ಟೊಮೆಟೊ ನಂತರ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ; ಕೆಜಿಗೆ 400 ರೂ ದಾಟಿದೆ ಧಾರಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Garlic Price Hike: ಈರುಳ್ಳಿ, ಟೊಮೆಟೊ ನಂತರ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ; ಕೆಜಿಗೆ 400 ರೂ ದಾಟಿದೆ ಧಾರಣೆ

Garlic Price Hike: ಈರುಳ್ಳಿ, ಟೊಮೆಟೊ ನಂತರ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ; ಕೆಜಿಗೆ 400 ರೂ ದಾಟಿದೆ ಧಾರಣೆ

Garlic Price Hike: ಅತಿಯಾದ ಮಳೆಯಿಂದ ಕೆಲವೆಡೆ ಬೆಳೆ ನಾಶವಾದ ಕಾರಣ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದೆ. ಕೆಲವೆಡೆ ಒಂದು ಕಿಲೋ ಬೆಳ್ಳುಳ್ಳಿಗೆ 300 ರೂ. ನಿಂದ 400 ರೂ. ವರೆಗೂ ಮಾರಲಾಗುತ್ತಿದೆ.

ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ
ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ (PC: pixabay)

Garlic Price Hike: ಈರುಳ್ಳಿ, ಟೊಮೆಟೊ ನಂತರ ಈಗ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದೆ. ಕೆಲವೊಂದು ಕಡೆ ಕಿಲೋ ಬೆಳ್ಳುಳ್ಳಿಗೆ 400 ರೂ. ಡಿಮ್ಯಾಂಡ್‌ ಇದೆ. ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಬೆಳೆಗಳು ಹಾನಿಗೀಡಾಗಿವೆ. ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೆ ಬೆಲೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಕಿಲೋ ಬೆಳ್ಳುಳ್ಳಿಗೆ 400 ರೂ.

ಕಳೆದ 6 ವಾರಗಳಿಂದ ಬೆಳ್ಳುಳ್ಳಿ ಬೆಲೆ ಎರಡರಷ್ಟಾಗಿದೆ. ವರದಿಗಳ ಪ್ರಕಾರ ರೀಟೇಲ್‌ ಮಾರ್ಕೆಟ್‌ನಲ್ಲಿ ಒಂದು ಕೆಜಿಗೆ 180 ರಿಂದ 300 ರೂ. ಬೆಲೆ ನಿಗದಿಯಾಗಿದೆ. ಎಕನಾಮಿಕ್ಸ್‌ ಟೈಮ್ಸ್‌ ವರದಿಯ ಪ್ರಕಾರ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಕಿಲೋ ಬೆಳ್ಳುಳ್ಳಿಗೆ 130 ರೂ. ನಿಂದ 140 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನೂ ಹೆಚ್ಚಿನ ಗುಣಮಟ್ಟದ ಬೆಳ್ಳುಳ್ಳಿ 220 ರೂ.ನಿಂದ 250 ರೂ.ವರೆಗೆ ಏರಿದೆ. ಬೆಳ್ಳುಳ್ಳಿ ಹೆಚ್ಚಿನ ಪೂರೈಕೆ ಇಲ್ಲದ ಕಡೆಗಳಲ್ಲಿ ಸುಮಾರು 300 ರೂ. ನಿಂದ 400 ರೂ. ವರೆಗೂ ಮಾರಲಾಗುತ್ತಿದೆ. ಇದರಿಂದ ಜನರು ಬೆಳ್ಳುಳ್ಳಿ ಕೊಳ್ಳುವ ಮೊದಲು ಯೋಚಿಸುವಂತಾಗಿದೆ.

ಚಳಿಗಾಲದಲ್ಲಿ ಕಡಿಮೆಯಾಗುವ ಬೆಳ್ಳುಳ್ಳಿ ಪೂರೈಕೆ

ಇತ್ತೀಚೆಗೆ ಬರ ಮತ್ತು ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗುವುದರಿಂದ ಅದರ ಬೆಲೆ ಏರಿಕೆಯಾಗುತ್ತದೆ. ಭಾರತವು ಈರುಳ್ಳಿ ಬಿಕ್ಕಟ್ಟನ್ನು ಎದುರಿಸುತ್ತಿರುವಾಗಲೂ ಈ ಬೆಳವಣಿಗೆಯನ್ನು ಗಮನಿಸಬಹುದು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಮುಂದಿನ ಕೆಲವು ದಿನಗಳವರೆಗೂ ಬೆಳ್ಳುಳ್ಳಿ ಬೆಲೆಯಲ್ಲಿ ಇಳಿಕೆ ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಬೆಳ್ಳುಳ್ಳಿ ಬೆಳೆ ನಾಶವಾಗಿದೆ. ದಕ್ಷಿಣದ ರಾಜ್ಯಗಳಿಂದ ಕೂಡಾ ಬೆಳ್ಳುಳ್ಳಿ ಸರಬರಾಜು ಕಡಿಮೆಯಾಗಿದೆ. ಪಶ್ಚಿಮ ರಾಜ್ಯದ ಎಪಿಎಂಸಿ ಹೋಲ್‌ಸೇಲ್‌ ಯಾರ್ಡ್‌ಗಳಲ್ಲಿ ಬೆಳ್ಳುಳ್ಳಿ ಪ್ರತಿ ಕಿಲೋಗೆ 150 ರಿಂದ 250 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ರೀಟೇಲ್‌ ಬೆಲೆಯಲ್ಲಿ ಪ್ರತಿ ಕೆಜಿಗೆ 300 ರಿಂದ 400 ರೂ.ಗೆ ಹೆಚ್ಚಾಗಿದೆ.

ಹಠಾತ್ ಮಳೆಯಿಂದ ನಷ್ಟ ಅನುಭವಿಸದ ರೈತರು

ಮಾನ್ಸೂನ್ ಸಮಯದಲ್ಲಿ ಅತಿಯಾದ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ನಮ್ಮಲ್ಲಿ ಹೆಚ್ಚು ಬೆಳ್ಳುಳ್ಳಿ ಬೆಳೆಯಲಾಗಲಿಲ್ಲ. ಈ ಕಾರಣದಿಂದ ನಾವು ಗುಜರಾತ್‌, ರಾಜಸ್ಥಾನ್‌ ಹಾಗೂ ಮಧ್ಯಪ್ರದೇಶದಿಂದ ಬರುವ ಬೆಳ್ಳುಳ್ಳಿ ಮೇಲೆ ಅವಲಂಬಿತವಾಗಿದ್ದೇವೆ. ಇದು ಬಹಳ ದುಬಾರಿ ವ್ಯವಹಾರ ಎಂದು ಮುಂಬೈ ಎಪಿಎಂಸಿ ನಿರ್ದೇಶಕ ಅಶೋಕ್ ವಲುಂಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಬೆಳ್ಳುಳ್ಳಿ ಸರಬರಾಜಿಗೆ ಸಮಸ್ಯೆ ಉಂಟಾಯ್ತು. ಆ ಸಮಯದಲ್ಲಿ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ರೈತರು ಸೆಪ್ಟೆಂಬರ್‌ನಲ್ಲಿ ಹಠಾತ್ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದರು. ಭಾರೀ ಮಳೆ ಸುರಿದ ಕಾರಣ ಕೃಷಿ ಉಪಜ್ ಮಂಡಿಯಲ್ಲಿನ ರೈತರು ಬೆಳೆದ ಬೆಳ್ಳುಳ್ಳಿ ನೀರು ಪಾಲಾಯ್ತು. ಇದು ಬೆಳ್ಳುಳ್ಳಿ ಬೆಲೆ ಗಗನಕ್ಕೇರಲು ಕಾರಣವಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.