Indian Economy: 2030ರೊಳಗೆ ಭಾರತ ಜಗತ್ತಿನ ಮೂರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಲಿದೆ: ವರದಿ
ಭಾರತವು 2030ರೊಳಗೆ ಜಗತ್ತಿನ ಮೂರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ಮೊರ್ಗನ್ ಸ್ಟ್ಯಾನ್ಲಿ ವರದಿ ಹೇಳಿದೆ. ಮೂಲಭೂತ ಸೌಕರ್ಯ, ಶಕ್ತಿಯ ಪರಿವರ್ತನೆ ಮತ್ತು ಡಿಜಿಟಲ್ ತಂತ್ರಜ್ಞಾನ ಬೆಳವಣಿಗೆ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಾಣಲಿದ್ದು, ಭಾರತ ಈ ಅವಕಾಶಗಳನ್ನು ಬಳಸಿಕೊಳ್ಳಲಿದೆ ಎಂದು ವರದಿ ಉಲ್ಲೇಖಿಸಿದೆ.
ನವದೆಹಲಿ: ಭಾರತವು 2030ರೊಳಗೆ ಜಗತ್ತಿನ ಮೂರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ಮೊರ್ಗನ್ ಸ್ಟ್ಯಾನ್ಲಿ ವರದಿ ಹೇಳಿದೆ.
ಮೂಲಭೂತ ಸೌಕರ್ಯ, ಶಕ್ತಿಯ ಪರಿವರ್ತನೆ ಮತ್ತು ಡಿಜಿಟಲ್ ತಂತ್ರಜ್ಞಾನ ಬೆಳವಣಿಗೆ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಾಣಲಿದ್ದು, ಇವು 2030ರೊಳಗೆ ಜಗತ್ತಿನ ಮೂರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಭಾರತಕ್ಕೆ ನೆರವು ನೀಡಲಿವೆ ಎಂದು ಮೊರ್ಗನ್ ಸ್ಟ್ಯಾನ್ಲಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'Why This Is Indiaʼs Decade?'(ಈ ದಶಕ ಭಾರತಕ್ಕೆ ಏಕೆ ಸೇರಿದೆ?) ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ವರದಿಯಲ್ಲಿ, ಭಾರತದ ಆರ್ಥಿಕ ಪ್ರಗತಿಯನ್ನು ಜಗತ್ತು ಅಚ್ಚರಿಯ ಕಣ್ಣುಗಳಿಂದ ನೋಡಲಿದೆ ಎಂದು ಮೊರ್ಗನ್ ಸ್ಟ್ಯಾನ್ಲಿ ಹೇಳಿದೆ.
ಭಾರತದ ಆರ್ಥಿಕ ನೀತಿಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ಈ ನೀತಿಗಳು ಭಾರತವನ್ನು ಆರ್ಥಿಕ ಜಗತ್ತಿನ ಶಿಖರದತ್ತ ಕೊಂಡೊಯ್ಯಲಿವೆ. ಭಾರತದ ಹೊಸ ಪೀಳಿಗೆಯು ಕ್ರಾಂತಿಯನ್ನುಂಟು ಮಾಡಲಿದ್ದು, ಭಾರತ ಬಲಾಢ್ಯ ಅರ್ಥ ವ್ಯವಸ್ಥೆಯನ್ನು ಹೊಂದಲಿದೆ. ಹಲವಾರು ಕ್ಷೇತ್ರಗಳಲ್ಲಿ ಭಾರತ ಸಾಧಿಸುವ ಅಭಿವೃದ್ಧಿ ಜಗತ್ತಿನ ಗಮನ ಸೆಳೆಯಲಿದೆ ಎಂದು ಮೊರ್ಗನ್ ಸ್ಟ್ಯಾನ್ಲಿ ಭರವಸೆ ವ್ಯಕ್ತಪಡಿಸಿದೆ.
ಜಾಗತಿಕ ಕಂಪನಿಗಳು ಕೂಡ ಮುಂಬರುವ ವರ್ಷಗಳಲ್ಲಿ ಭಾರತದತ್ತ ಮುಖ ಮಾಡಲಿದ್ದು, ಭಾರತದಲ್ಲಿ ಹೂಡಿಕೆ ಮಾಡಲು ಪೈಪೋಟಿ ನಡೆಸಲಿವೆ, ಇದು ಸಹಜವಾಗಿ ಭಾರತದ ಅರ್ಥ ವ್ಯವಸ್ಥೆಯನ್ನು ಗಟ್ಟಿಗೊಳಿಸಲಿದೆ. ಜನಸಂಖ್ಯೆ, ಡಿಜಿಟಲೀಕರಣ, ಪರಿಸರ ಹಾಗೂ ಜಾಗತೀಕರಣದ ನೀತಿಗಳ ಪಾಲನೆಯಿಂದಾಗಿ ಈ ದಶಕದ ಕೊನೆಯಲ್ಲಿ ನವ ಭಾರತವೊಂದು ಉದಯವಾಗಲಿದೆ ಎಂದು ಮೊರ್ಗನ್ ಸ್ಟ್ಯಾನ್ಲಿ ಹೇಳಿದೆ.
2031ರಲ್ಲಿ ಭಾರತದ ಜಿಡಿಪಿ 7.5 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಲಿದೆ. ಅಷ್ಟೇ ಅಲ್ಲದೇ ಭಾರತದ ತಲಾ ಆದಾಯ 2031ರಲ್ಲಿ ಪ್ರಸ್ತುತ 2,278 ಅಮೆರಿಕನ್ ಡಾಲರ್‌ನಿಂದ 5,242 ಅಮೆರಿಕನ್ ಡಾಲರ್‌ಗೆ ಏರಿಕೆಯಾಗಲಿದೆ. ಇದು ಭಾರತದ ಕೊಳ್ಳುವ ಶಕ್ತಿಯನ್ನು ಭಾರೀ ಪ್ರಮಾಣದಲ್ಲಿ ವೃದ್ಧಿಸಲಿದೆ ಎಂದು ಮೊರ್ಗನ್ ಸ್ಟ್ಯಾನ್ಲಿ ಅಭಿಪ್ರಾಯಪಟ್ಟಿದೆ.
ಕಳೆದ ಎರಡು ವರ್ಷಗಳಲ್ಲಿ ಭಾರತದ ಸೇವಾ ಕ್ಷೇತ್ರದ ಕೊಡುಗೆ ಶೇ.4.3ಕ್ಕೆ ಏರಿದ್ದು, ಒಟ್ಟು 60 ಮೂಲ ಅಂಕವನ್ನು ಗಳಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಮುಂಬರುವ ದಶಕದಲ್ಲಿ ಹೊರದೇಶಗಳಲ್ಲಿ ಕೆಲಸ ಮಾಡುವ ಭಾರತೀಯರ ಸಂಖ್ಯೆ 11 ಮಿಲಿಯನ್‌ಗಳಿಗೆ ಏರಿಕೆಯಾಗಲಿದೆ ಎಂದು ಮೊರ್ಗನ್ ಸ್ಟ್ಯಾನ್ಲಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೇ ಹೊರಗುತ್ತಿಗೆಯೀಂದ ಭಾರತಕ್ಕೆ ದೊರೆಯುತ್ತಿರು ಆದಾಯ ಪ್ರಸ್ತುತ 180 ಬಿಲಿಯನ್ ಅಮೆರಿಕನ್ ಡಾಲರ್ ಇದ್ದು, ಇದು 2030ರಲ್ಲಿ 500 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದೂ ಮೊರ್ಗನ್ ಸ್ಟ್ಯಾನ್ಲಿ ವರದಿ ಅಂದಾಜಿಸಿದೆ
ಇನ್ನು ಭಾರತದ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಕೊಡುಗೆ 2031ರಲ್ಲಿ ಶೇ.21ಕ್ಕೆ ಏರಿಕೆಯಾಗಲಿದ್ದು, ಈ ವಲಯದಿಂದ ಜಿಡಿಪಿಗೆ ಸುಮಾರು 1 ಟ್ರಿಲಿಯನ್ ಅಮೆರಿಕನ್ ಡಾಲರ್ ಆದಾಯ ಬರಲಿದೆ ಎಂದು ಮೊರ್ಗನ್ ಸ್ಟ್ಯಾನ್ಲಿ ಭವಿಷ್ಯ ನುಡಿದಿದೆ.
ಹಾಗೆಯೇ ಭಾರತದ ಜಾಗತಿಕ ರಫ್ತು ಮಾರುಕಟ್ಟೆ ಪ್ರಮಾಣ 2031ರಲ್ಲಿ ಶೇ.4.5ಕ್ಕೆ ಏರಿಕೆ ಕಾಣಲಿದ್ದು, ಈ ವಲಯದಿಂದ ಭಾರತವು 1.2 ಟ್ರಿಲಿಯನ್ ಅಮೆರಿಕನ್ ಡಾಲರ್ ಆದಾಯ ಗಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೊರ್ಗನ್ ಸ್ಟ್ಯಾನ್ಲಿ ಹೇಳಿದೆ.
ತಂತ್ರಜ್ಞಾನ ಸೇವಾ ಕ್ಷೇತ್ರದಲ್ಲಿ ಭಾರತದ ಕಾರ್ಯಪಡೆ ಪ್ರಸ್ತುತ 5.1 ಮಿಲಿಯನ್ ಇದ್ದು, 2031ರಲ್ಲಿ ಇದು 12.2 ಮಿಲಿಯನ್‌ಗೆ ಏರಿಕೆ ಕಾಣಲಿದೆ ಎಂದು ಮೊರ್ಗನ್ ಸ್ಟ್ಯಾನ್ಲಿ ಹೇಳಿದೆ.
ಒಟ್ಟಿನಲ್ಲಿ ಮೊರ್ಗನ್ ಸ್ಟ್ಯಾನ್ಲಿ ಬಿಡುಗಡೆ ಮಾಡಿರುವ ವರದಿಯು, ಮುಂಬರುವ ದಶಕ ಭಾರತಕ್ಕೆ ಸೇರಿದೆ ಎಂದು ಹೇಳಿದ್ದು, ಭಾರತದ ಆರ್ಥಿಕ ಪ್ರಗತಿ ಕಂಡು ಜಗತ್ತು ಅಚ್ಚರಿಗೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ.
ವಿಭಾಗ