ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ಪೂಜೆ; ಅವರ ತಾಯಿಯ ತವರು ತುಳಸೇಂದ್ರಪುರಂ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ಪೂಜೆ; ಅವರ ತಾಯಿಯ ತವರು ತುಳಸೇಂದ್ರಪುರಂ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ಪೂಜೆ; ಅವರ ತಾಯಿಯ ತವರು ತುಳಸೇಂದ್ರಪುರಂ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತದ ತಮಿಳುನಾಡಿನಲ್ಲಿ ಕಮಲಾ ಹ್ಯಾರಿಸ್ ಗೆಲುವಿಗಾಗಿ ಪೂಜೆ ನಡೆಯಿತು. ಕಮಲಾ ಹ್ಯಾರಿಸ್‌ ಅವರ ತಾಯಿಯ ತವರು ತುಳಸೇಂದ್ರಪುರಂನ ಜನರಲ್ಲಿ ಈಗ ತವಕ. ಕಳೆದ ಬಾರಿ ಕಮಲಾ ಉಪಾಧ್ಯಕ್ಷೆ ಆದಾಗ ಸಂಭ್ರಮಿಸಿದ್ದರು.

ಲಾಸ್ ವೇಗಾಸ್‌ನಲ್ಲಿ ಕಂಡ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಪ್ರಚಾರ ಗೋಳ.
ಲಾಸ್ ವೇಗಾಸ್‌ನಲ್ಲಿ ಕಂಡ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಪ್ರಚಾರ ಗೋಳ. (AFP)

ಚೆನ್ನೈ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇಂದು (ನವೆಂಬರ್ 5) ಮತದಾನ ನಡೆಯಲಿದೆ. ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅಮೆರಿಕದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ. ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎದುರಾಳಿಯಾಗಿ ಕಣದಲ್ಲಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಗೆಲುವಿಗಾಗಿ ತಮಿಳುನಾಡಿನ ತುಳಸೇಂದ್ರಪುರಂನಲ್ಲಿ ಪ್ರಾರ್ಥನೆಗಳು ನಡೆದವು. ಭಾರತದ ತಮಿಳುನಾಡಿಗೂ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೂ ಒಂದು ನಂಟಿದೆ. ಹೀಗಾಗಿ ಈ ಪ್ರಾರ್ಥನೆ.

ಕಮಲಾ ಹ್ಯಾರಿಸ್ ಭಾರತ - ಆಫ್ರಿಕಾ ನಂಟು

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಭಾರತೀಯ ಅಮೆರಿಕನ್‌ ಮತ್ತು ಮೊದಲ ಆಫ್ರಿಕನ್ ಅಮೆರಿಕನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ನಾಟಕೀಯ ವಿದ್ಯಮಾನದ ಬಳಿಕ ಜುಲೈ 21 ರಂದು ಡೆಮಾಕ್ರಟಿಕ್ ಅಭ್ಯರ್ಥಿ ಸ್ಥಾನದಿಂದ ಹಿಂದೆ ಸರಿದಿದ್ದರು. ಆ ಮೂಲಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು. 2020ರಲ್ಲಿ ಕಮಲಾ ಹ್ಯಾರಿಸ್ ಅವರು ಅಮೆರಿಕದ ಮೊದಲ ಭಾರತೀಯ ಅಮೆರಿಕನ್ ಮತ್ತು ಮೊದಲ ಆಫ್ರಿಕನ್ ಅಮೆರಿಕನ್ ಮಹಿಳಾ ಉಪಾಧ್ಯಕ್ಷೆ ಎನಿಸಿಕೊಂಡರು.

ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ತಮಿಳುನಾಡು ಮೂಲದವರು. ತಂದೆ ಡೊನಾಲ್ಡ್ ಜೆ ಹ್ಯಾರಿಸ್‌. ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಅವರ ತಂದೆ ಪಿವಿ ಗೋಪಾಲನ್ ಅವರು ಒಂದು ಶತಮಾನದ ಹಿಂದೆ ಇದೇ ಗ್ರಾಮದಲ್ಲಿ ಜನಿಸಿದ್ದರು. ಗೋಪಾಲನ್ ಅವರು ಚೆನ್ನೈನಲ್ಲಿ ಸರ್ಕಾರಿ ಸೇವೆಯಲ್ಲಿದ್ದರು. ಬಳಿಕ ಝಾಂಬಿಯಾಗೆ ಹೋದರು. ಅಲ್ಲಿ ಭಾರತ ಸರ್ಕಾರದ ರಾಜತಾಂತ್ರಿಕ ಅಧಿಕಾರಿಯಾಗಿ ಅಲ್ಲಿ ಕೆಲಸ ಮಾಡಿದರು. ಶ್ಯಾಮಲಾ ಅವರು 1958ರಲ್ಲಿ ಅಮೆರಿಕಕ್ಕೆ ಹೋಗುವ ಮೊದಲು ತಮಿಳುನಾಡಿನಲ್ಲಿದ್ದರು. ಬಳಿಕ ಅಮೆರಿಕದಲ್ಲಿ ಶಿಕ್ಷಣ ಮುಂದುವರಿಸಿದರು.

ತಮಿಳುನಾಡಿನ ತುಳಸೇಂದ್ರಪುರಂನಲ್ಲಿ ಪ್ರಾರ್ಥನೆ

ತಮಿಳುನಾಡಿನ ತುಳಸೇಂದ್ರಪುರಂ ನಾಲ್ಕು ವರ್ಷಗಳ ಹಿಂದೆ 2020 ರಲ್ಲಿ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಗೆಲುವಿಗಾಗಿ ಪ್ರಾರ್ಥಿಸಿದಾಗ ಜಾಗತಿಕ ಗಮನ ಸೆಳೆದಿತ್ತು. ಅಂದು ಗ್ರಾಮಸ್ಥರು ಪಟಾಕಿ ಹಚ್ಚಿ ಸಂಭ್ರಮಿಸಿದ್ದರಲ್ಲದೆ ಮತ್ತು ಆಹಾರ ವಿತರಿಸುವ ಮೂಲಕ ಅವರು ಯುಎಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೋಡಿ ಖುಷಿಪಟ್ಟಿದ್ದರು. ಈ ಸಲ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕಾರಣ ಮತ್ತೆ ಪೂಜೆಗಳನ್ನು ಮಾಡುತ್ತಿದ್ದಾರೆ. ಅವರ ಗೆಲುವಿಗಾಗಿ ಪ್ರಾರ್ಥನೆ ನಡೆಸಿದ್ದಾರೆ ಈ ಗ್ರಾಮಸ್ಥರು.

“ನನ್ನ ತಾಯಿ ಡಾ.ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರು 19 ನೇ ವಯಸ್ಸಿನಲ್ಲಿ ಭಾರತದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಬಂದರು. ಅವರು ನನಗೆ ಮತ್ತು ನನ್ನ ಸಹೋದರಿ ಮಾಯಾ ಅವರಿಗೆ ಧೈರ್ಯ ಮತ್ತು ದೃಢತೆಯನ್ನು ಕಲಿಸಿದರು. ಅವರಿಗೆ ಧನ್ಯವಾದಗಳು" ಎಂದು ಕಮಲಾ ಹ್ಯಾರಿಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹ್ಯಾರಿಸ್ ತಂದೆ ಆಫ್ರಿಕನ್‌ ಆಗಿರುವ ಕಾರಣ ಅವರು ಆಫ್ರಿಕನ್ ಅಮೆರಿಕನ್ ಆಗಿಯೂ ಗುರುತಿಸಲ್ಪಟ್ಟಿದ್ದಾರೆ. ಆದರೆ, ಅವರು ತಮ್ಮ ತಾಯಿ ಮತ್ತು ಅಜಿಯ ಪ್ರಭಾವ ಹೆಚ್ಚು ಎಂದು ಹೇಳಿಕೊಂಡಿದ್ದಾರೆ. "ನನ್ನ ತಾಯಿ ನನ್ನ ಅಜ್ಜಿಯ ಶಕ್ತಿ ಮತ್ತು ಶೌರ್ಯವನ್ನು ಸಾಕಾರಗೊಳಿಸಿದ್ದಾರೆ" ಮತ್ತು ತನ್ನ ಕುಟುಂಬದ ನಿರಂತರ ಪ್ರಭಾವಕ್ಕೆ ಸಾಮಾಜಿಕ ನ್ಯಾಯಕ್ಕೆ ಅವರ ಬದ್ಧತೆಯನ್ನು ಸಲ್ಲುತ್ತದೆ. ಸಾಮಾಜಿಕ ನ್ಯಾಯದಲ್ಲಿ ತಮ್ಮ ಕುಟುಂಬದ ಪರಂಪರೆಗೆ ಕಾರಣರಾಗಿದ್ದಾರೆ" ಎಂದು ಅವರು ತಮ್ಮ ಜೀವನಚರಿತ್ರೆಯಲ್ಲಿ ಬರೆದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.