ಭಾರತೀಯರಿಗೆ ಹೊಸದಾಗಿ 2.50 ಲಕ್ಷ ವೀಸಾ ಅನುಮತಿ ನೀಡಲು ಮುಂದಾದ ಅಮೆರಿಕಾ; ಯುಎಸ್‌ ಮಿಷನ್‌ ಟು ಇಂಡಿಯಾ ಸೇವೆ ವಿಸ್ತರಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತೀಯರಿಗೆ ಹೊಸದಾಗಿ 2.50 ಲಕ್ಷ ವೀಸಾ ಅನುಮತಿ ನೀಡಲು ಮುಂದಾದ ಅಮೆರಿಕಾ; ಯುಎಸ್‌ ಮಿಷನ್‌ ಟು ಇಂಡಿಯಾ ಸೇವೆ ವಿಸ್ತರಣೆ

ಭಾರತೀಯರಿಗೆ ಹೊಸದಾಗಿ 2.50 ಲಕ್ಷ ವೀಸಾ ಅನುಮತಿ ನೀಡಲು ಮುಂದಾದ ಅಮೆರಿಕಾ; ಯುಎಸ್‌ ಮಿಷನ್‌ ಟು ಇಂಡಿಯಾ ಸೇವೆ ವಿಸ್ತರಣೆ

ಯುಎಸ್‌ ವೀಸಾ ಮಿಷನ್‌ ಟು ಇಂಡಿಯಾ ಅಡಿ ಅಮೆರಿಕಾಕ್ಕೆ ಹೋಗ ಬಯಸುವ ಭಾರತೀಯರಿಗೆ ವೀಸಾ ನೀಡುವ ಪ್ರಕ್ರಿಯೆಗೆ ಅಮೆರಿಕಾ ರಾಯಭಾರಿ ಕಚೇರಿ ಚಾಲನೆ ನೀಡಿದೆ.

ಭಾರತೀಯರಿಗೆ ಯುಎಸ್‌ ವೀಸಾ ನೀಡುವ ಪ್ರಕ್ರಿಯೆಯನ್ನು ಅಮೆರಿಕಾ ಚುರುಕುಗೊಳಿಸಿದೆ.
ಭಾರತೀಯರಿಗೆ ಯುಎಸ್‌ ವೀಸಾ ನೀಡುವ ಪ್ರಕ್ರಿಯೆಯನ್ನು ಅಮೆರಿಕಾ ಚುರುಕುಗೊಳಿಸಿದೆ.

ದೆಹಲಿ: ಕಳೆದ ವಾರವಿನ್ನೂ ಅಮೆರಿಕಾ ಪ್ರವಾಸ ಕೈಗೊಂಡು ಭಾರತದ ಪ್ರಧಾನಿ ನರೇಂದ್ರ ಮೋದಿ ವಾಪಾಸಾದ ಬೆನ್ನಲ್ಲೇ ಭಾರತದಿಂದ ಅಮೆರಿಕಾಕ್ಕೆ ಪ್ರವಾಸ ಹಾಗೂ ವಹಿವಾಟು ಪ್ರವಾಸ ಕೈಗೊಳ್ಳುವವರಿಗೆ ಸಿಹಿ ಸುದ್ದಿ ನೀಡಿದೆ. ಅಮೆರಿಕಾಕ್ಕೆ ಪ್ರವಾಸ ಹೋಗ ಬಯಸುವ ಸುಮಾರು 2.50 ಲಕ್ಷ ಭಾರತೀಯರಿಗೆ ವೀಸಾ ನೀಡುವ ಪ್ರಕ್ರಿಯೆಗೆ ಭಾರತದಲ್ಲಿರುವ ಅಮೆರಿಕಾದ ರಾಯಭಾರೀ ಕಚೇರಿಗಳು ಚಾಲನೆ ನೀಡಿವೆ. ಯುಎಸ್‌ ಮಿಷನ್‌ ಟು ಇಂಡಿಯಾ ಎನ್ನುವ ಟ್ಯಾಗ್‌ಲೈನ್‌ನಡಿ ವೀಸಾ ನೀಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಉಭಯ ದೇಶಗಳ ನಡುವಿನ ವಹಿವಾಟು ವೃದ್ದಿ, ಸಂಬಂಧ ಬಲಪಡಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌ ಮೂಲಕ ಪೋಸ್ಟ್‌ ಮಾಡಿರುವ ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಅಮೆರಿಕಾಕ್ಕೆ ಹೋಗಬಯಸುವ ಭಾರತೀಯರ ಬೇಡಿಕೆಗೆ ಅನುಗುಣವಾಗಿ ಯುಎಸ್‌ ಮಿಷನ್‌ ಟು ಇಂಡಿಯಾ ಎನ್ನುವ ಚಟುವಟಿಕೆಗೆ ಚಾಲನೆ ನೀಡಿದ್ದೇವೆ. ಇದರಡಿ ಭಾರತೀಯ ಪ್ರವಾಸಿಗರು, ನುರಿತ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಯಾಣಿಕರಿಗೆ ಹೆಚ್ಚುವರಿ 250,000 ವೀಸಾ ನೀಡುವ ಭೇಟಿ ವ್ಯವಸ್ಥೆಗೂ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

2024 ರಲ್ಲಿ ಇಲ್ಲಿಯವರೆಗೆ 1.2 ಮಿಲಿಯನ್ ಭಾರತೀಯರು ಅಮೆರಿಕಾಕ್ಕೆ ಪ್ರಯಾಣಿಸಿದ್ದಾರೆ, 2023 ರಲ್ಲಿ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಶೇ.35ರಷ್ಟು ಇದು ಹೆಚ್ಚಳವಾಗಿದೆ. ಕನಿಷ್ಠ ಆರು ಮಿಲಿಯನ್ ಭಾರತೀಯರು ಈಗಾಗಲೇ ಅಮೆರಿಕಾಕ್ಕೆ ಭೇಟಿ ನೀಡಲು ವಲಸೆರಹಿತ ವೀಸಾವನ್ನು ಹೊಂದಿದ್ದಾರೆ. ಪ್ರತಿ ದಿನ ಹೊಸ ಬೇಡಿಕೆ ಬರುತ್ತಿದ್ದು, ಅವುಗಳಿಗೆ ಅನುಮತಿ ನೀಡಲಾಗುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ಹೊಸ ಸ್ಲಾಟ್‌ಗಳು ಲಕ್ಷಾಂತರ ಭಾರತೀಯ ಅರ್ಜಿದಾರರಿಗೆ ಪೂರಕವಾಗಿ ಸೂಕ್ತ ಸಮಯದಲ್ಲಿ ಭೇಟಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇದು ಅಮೆರಿಕಾ-ಭಾರತದ ನಡುವಿನ ಹಲವಾರು ಕಾರಣಗಳಿಗೆ ಭೇಟಿ ನೀಡುವ, ಪ್ರವಾಸ ಕೈಗೊಳ್ಳುವ ಹಾಗೂ ನಂಟು ಹೊಂದಿರುವ ಜನರ ನಡುವಿನ ಸಂಬಂಧಗಳ ಬೆನ್ನೆಲುಬಾಗಿರುವ ಪ್ರಯಾಣವನ್ನು ಸರಳೀಕರಳಿಸುವ ಜತೆಗೆ ಸುಗಮಗೊಳಿಸಲಿದೆ.

ಯುಎಸ್‌ ಮಿಷನ್ ಟು ಇಂಡಿಯಾ ಈಗಾಗಲೇ ಸತತ ಎರಡನೇ ವರ್ಷಕ್ಕೆ ಹತ್ತು ಲಕ್ಷ ವಲಸೆರಹಿತ ವೀಸಾ ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಈ ಬೇಸಿಗೆಯಲ್ಲಿ ನಮ್ಮ ವಿದ್ಯಾರ್ಥಿ ವೀಸಾ ಅವಧಿಯಲ್ಲಿ, ನಾವು ದಾಖಲೆ ಸಂಖ್ಯೆಗಳನ್ನು ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಮೊದಲ ಬಾರಿಗೆ ವಿದ್ಯಾರ್ಥಿ ಅರ್ಜಿದಾರರು ಭಾರತದಾದ್ಯಂತ ನಮ್ಮ ಐದು ಕಾನ್ಸುಲೇಟ್‌ ವಿಭಾಗಗಳ ಒಂದರಲ್ಲಿ ಭೇಟಿ ಸಮಯ ಪಡೆಯಲು ಸಾಧ್ಯವಾಯಿತು. ನಾವು ಈಗ ಕುಟುಂಬಗಳನ್ನು ಒಟ್ಟಿಗೆ ತರಲು, ವಹಿವಾಟು ವೃದ್ದಿಗೊಳಿಸುವ ಜತೆಗೆ ಪ್ರವಾಸೋದ್ಯಮ ನಂಟನ್ನು ಸುಗಮ ಹಾಗೂ ಬಲಗೊಳಿಸಲು ಗಮನಹರಿಸಿದ್ದೇವೆ ಎಂದು ಹೇಳುತ್ತಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಅವರು ವೀಸಾ ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ವೇಗಗೊಳಿಸಲು ಮಹತ್ವಾಕಾಂಕ್ಷೆಯ ಯೋಜನೆಗಳೊಟ್ಟಿಗೆ ಸೂಕ್ತ ಗುರಿಯನ್ನು ಹೊಂದಿದ್ದಾರೆ. ದೇಶದ ಪ್ರಮುಖ ನಾಯಕರ ಆಶಯದಂತೆಯೇ ನಾವು ಆ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಇದೆ. ರಾಯಭಾರ ಕಚೇರಿಯಲ್ಲಿನ ನಮ್ಮ ಕಾನ್ಸುಲರ್ ತಂಡಗಳು ಮತ್ತು ನಾಲ್ಕು ದೂತಾವಾಸಗಳು ಹೆಚ್ಚುತ್ತಿರುವ ಬೇಡಿಕೆ ಪೂರೈಸುವುದಕ್ಕಾಗಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿವೆ ಎಂದು ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳುತ್ತಾರೆ.

 

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.