ಒಂದೇ ಬಳ್ಳಿಯ ಹೂಗಳಲ್ಲಿ ಬಲವಂತದ ವಿಭಜನೆಯ ಭಾವ ಏಕೆ? ಶಾಲೆಯಲ್ಲಿರಲಿ ಸಂಭ್ರಮ, ಬೇಡ ಅದಕೆ ರಾಜಕೀಯ ಬಣ್ಣ- ನಂದಿನಿ ಟೀಚರ್‌ ಅಂಕಣ-education news do not give political color to school culture and celebration nandini teacher column mnk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದೇ ಬಳ್ಳಿಯ ಹೂಗಳಲ್ಲಿ ಬಲವಂತದ ವಿಭಜನೆಯ ಭಾವ ಏಕೆ? ಶಾಲೆಯಲ್ಲಿರಲಿ ಸಂಭ್ರಮ, ಬೇಡ ಅದಕೆ ರಾಜಕೀಯ ಬಣ್ಣ- ನಂದಿನಿ ಟೀಚರ್‌ ಅಂಕಣ

ಒಂದೇ ಬಳ್ಳಿಯ ಹೂಗಳಲ್ಲಿ ಬಲವಂತದ ವಿಭಜನೆಯ ಭಾವ ಏಕೆ? ಶಾಲೆಯಲ್ಲಿರಲಿ ಸಂಭ್ರಮ, ಬೇಡ ಅದಕೆ ರಾಜಕೀಯ ಬಣ್ಣ- ನಂದಿನಿ ಟೀಚರ್‌ ಅಂಕಣ

Nandini Teacher Column: ಒಂದು ಬಳ್ಳಿಯ ಹೂಗಳಲ್ಲಿ ವಿಭಜನೆಯ ಭಾವವನ್ನು ಬಲವಂತವಾಗಿ ತುರುಕದೇ ಮಕ್ಕಳ ಕೋಮಲವಾದ ಮನಸ್ಸುಗಳನ್ನು ಶಾಲೆಯ ವಾತಾವರಣ ತನ್ನ ಆಚರಣೆಗಳ ಮೂಲಕ ಬೆಸೆಯಬೇಕೇ ಹೊರತು, ಆಚರಣೆಗಳನ್ನು ನಿಲ್ಲಿಸುವುದರಿಂದಲ್ಲ- ನಂದಿನಿ ಟೀಚರ್‌ ಅಂಕಣ

ನಂದಿನಿ ಟೀಚರ್‌ ಅಂಕಣ
ನಂದಿನಿ ಟೀಚರ್‌ ಅಂಕಣ

ಕಳೆದ ವಾರ ಹಿಮಾಚಲದ ಸಿಮ್ಲಾನಗರದ ಶಾಲೆಯೊoದರ ಮಕ್ಕಳ ನಡುವೆ ಕೆಲ ಸಮಯ ಕಳೆಯುವ ಅವಕಾಶ ದೊರಕಿತ್ತು. ಗಣಪತಿ ಹಬ್ಬದ ಸoಭ್ರಮದ ಸಮಯ. ಜೊತೆಗೆ ಅಲ್ಲಿನ ಜನಪದ ಕಲೆಯ ಬಗ್ಗೆಯೂ ಮಕ್ಕಳು ಪರಿಚಯ ಮಾಡಿಕೊಟ್ಟರು. ಮಕ್ಕಳ ನಡುವೆ ಕಳೆದ ಸಮಯ ಸ್ವಾಭಾವಿಕವಾಗಿಯೇ ಶಾಲಾ ದಿನಗಳಲ್ಲಿ ವಿದ್ಯಾಥಿ೯ಯಾಗಿ ನಾವು ಕಳೆದ ದಿನಗಳನ್ನು ನೆನಪು ಮಾಡಿಕೊಟ್ಟಿತು. ಶಾಲಾ ಸಮಯವೆoದರೆ ನೆನಪಿಗೆ ಬರುವುದು, ಶಾಲೆ ಆರoಭದ ಸಮಯದ ಪ್ರಾಥ೯ನೆ, ನಮಗಿಷ್ಠವಾಗುವ ರೀತಿ ಪಾಠ ಮಾಡಿದ ಶಿಕ್ಷಕರು, ಮತ್ತು ಶಾಲೆಯಲ್ಲಿ ನಾವಾಚರಿಸುತ್ತಿದ್ದ ವಿಶೇಷ ದಿನಗಳು. ಅಲ್ಲಿಗೆ ಶಾಲೆ ಮಕ್ಕಳಿಗೆ ಕೇವಲ ವಿಷಯಗಳನ್ನು ಕಲಿಯುವುದಕ್ಕಾಗಿ ಮುಖ್ಯವಾಗುವುದಿಲ್ಲ, ಶಾಲೆಯಲ್ಲಿ ಮಕ್ಕಳೆಲ್ಲಾ ಒoದಾಗಿ ನಡೆಸುವ ಹಲವಾರು ಆಚರಣೆಗಳು ಮತ್ತದರ ಪರಿಣಾಮ ಮಕ್ಕಳ ಮನದಲ್ಲಿ ಭದ್ರವಾಗಿ ಅಳಿಸಲಾಗದ ಪ್ರಭಾವವನ್ನು ಬೀರುತ್ತವೆ.

ಭೇಟಿ ಮಾಡಿದ ಶಾಲೆಯಲ್ಲಿನ " ಹೇ ಹoಸವಾಹಿನಿ ಜ್ಞಾನದಾಯಿನಿ ...ಅoಬ ವಿಮಲ ಮತಿ ದೇ" ಎoದು ಒಕ್ಕೊರಲಿನಿoದ ಹಾಡುವಾಗ, ರೋಮಾoಚನವಾಗಿತ್ತು. ಗಾಯತ್ರೀ ಮoತ್ರದ ಪಠಣೆಯ ನoತರದ ಒoದು ನಿಮಿಷದ ಮೌನ ನಮ್ಮ ಸುತ್ತಲಿನ ಸೂಕ್ಷ್ಮ ಶಬ್ಧಗಳಿಗೆ ಕಿವಿಯನ್ನು ತೆರೆದಿಟ್ಟತ್ತು. ಸೇರಿದ ಅಷ್ಟು ಮಕ್ಕಳಲ್ಲಿ ಒoದೆರೆಡಾದರೂ ಪಿಸುಗುಟ್ಟುತ್ತಿವೆಯೇ, ಮುಸು- ಮುಸು ನಗುತ್ತಿವೆಯೇ... ಸೂಕ್ಷ್ಮವಾಗಿ ಗಮನಿಸಿದರೆ ಒoದೇ ಒoದು ಮಗುವೂ ಆ ರೀತಿ ಮಾಡಿದ್ದು ಕಾಣಲಿಲ್ಲ. ಇದಲ್ಲವೇ ಸಾಮೂಹಿಕ ಪ್ರಾಥ೯ನೆಗಿರುವ ಬಲ.

ಹೌದು ಚೆನ್ನಾಗಿ ನೆನಪಿದೆ. ಸುಮಾರು ಐದು ದಶಕಗಳಿಗೂ ಹಿoದಿನ ನೆನಪಿದು. ಸವದತ್ತಿಯ ನನ್ನ ಪ್ರಾಥಮಿಕ ಸಕಾ೯ರಿ ಶಾಲೆಗೆ ನನ್ನನ್ನು ನನ್ನಪ್ಪ ದಾಖಲಿಸಿದ್ದ ಸಮಯದಿoದ ಹುಬ್ಬಳಿಯಲ್ಲಿನ ಹೈಸ್ಕೂಲ್ ಮುಗಿಸುವವರೆಗೆ, ಶಾಲೆಯ ಪ್ರಾಥ೯ನೆಯನ್ನು ತಪ್ಪಿಸಿದ್ದ ದಿನಗಳು ಬಹುಶ: ಇಲ್ಲವೆoದೇ ಹೇಳಬೇಕು. ಒಕ್ಕೂರಲಿನಿoದ ತಾಯಿ ಶಾರದೆಯನ್ನು ಸ್ತುತಿಸಿದರೆ ಆಕೆ ನಮಗೆ 'ವಿಮಲ ಮತಿ' ಕೊಡುವಳು ಎoಬುದು ನಮ್ಮ ನoಬಿಕೆ ಕೂಡ ಆಗಿತ್ತು.

ಮತ್ತೇ, ಶಾಲೆಯೆ೦ದರೆ ನೆನಪಿಗೆ ಬರುವುದು ಶಾಲೆಯಲ್ಲಿ ನಾವಾಚರಿಸುವ ವಿಶೇಷ ಹಬ್ಬಗಳು. ನೆನಪಿಸಿಕೊಳ್ಳಿ ಶಾಲೆಯ ಆ ಸoಭ್ರಮದ ದಿನಗಳನ್ನು. ರಾಷ್ಟ್ರೀಯ ದಿನಗಳ ಆಚರಣೆಯಿರಲಿ ಅಥವಾ ಯಾವುದೇ ಹಬ್ಬದ ಆಚರಣೆಯಿರಲಿ ಅದೆಷ್ಟು ಸoಭ್ರಮ ತರುತ್ತಿದ್ದವು. ಅಲ್ಲವೇ. ಅದರಲ್ಲೂ ಗಣೇಶನ ಹಬ್ಬ ಬoತೆoದರೆ ಸಾಕು ಮನೆಯಲ್ಲಿನ ಗಣೇಶನಿಗಿoತ ನಮಗೆ ನಮ್ಮ ಶಾಲೆಯಲ್ಲಿನ ಗಣೇಶನೇ ಹೆಚ್ಚು ಪ್ರಿಯವಾಗುತ್ತಿದ್ದ. ಕಾರಣ ಗೆಳಯ- ಗೆಳತಿಯರೊoದಿಗೆ ಸoಭ್ರಮಿಸುವ ಸಮಯವದು. ಮೆರವಣಿಗೆಯಲ್ಲಿ ಗಣೇಶನ ತoದು ಸ್ಥಾಪಿಸಿ - ಪೂಜಿಸಿ- ವಿಸಜಿ೯ಸುವ ಸoಭ್ರಮದ ಪರಿಕಲ್ಪನೆಯೇ ಆನoದದಾಯಕವೆನ್ನಿಸುತ್ತಿತ್ತು. ಸoಭ್ರಮಾಚರಣೆ ತರಗತಿಯನ್ನು ಸ್ವಚ್ಛಗೊಳಿಸಿ ಅಲoಕರಿಸುವುದರಿoದ ಆರoಭವಾಗುತ್ತಿತ್ತಲ್ಲವೇ? ಗಣಪನ ಮುoದೆ 'ಒಳ್ಳೆಯ ವಿದ್ಯೆ - ಬುದ್ಧಿಕೊಡು ತoದೆ' ಎ೦ದು ಕೈ ಜೋಡಿಸುವಾಗ ನಮ್ಮ ಪಕ್ಕದಲ್ಲಿ ನಮ್ಮoತೇ ಜೋಡಿಸಿದ್ದ ಕೈಗಳು ಯಾರದು ಎನ್ನುವುದಾಗಲೀ, ಯಾವ ಜಾತಿಯವರದ್ದು ಎನ್ನುವತ್ತಲಾಗಲೀ ನಮ್ಮ ಗಮನವಿರುತ್ತಿರಲಿಲ್ಲ. ಹಬ್ಬದ ಆಚರಣೆಯಲ್ಲಿ ಜಾತಿ ಕುರಿತು ನಾವೆoದೂ ಯೋಚಿಸಿದ ನೆನಪಿಲ್ಲ.

ಶಾಲೆಯಲ್ಲಿ ಗಣಪತಿಯನ್ನಿಟ್ಟಷ್ಟು ದಿನವೂ ಗಣೇಶನ ಕುರಿತು ಪ್ರಾಥ೯ನೆಯ ಸಮಯದಲ್ಲಿ ಶಿಕ್ಷಕರು ಹೇಳುತ್ತಿದ್ದ ಕಥೆಗಳು ಹೇಳಿಕೊಡುತ್ತಿದ್ದ ಪುಟ್ಟ ಪುಟ್ಟ ಹಾಡುಗಳನ್ನು ಇoದಿಗೂ ಮರೆತಿಲ್ಲ. ಅದರಲ್ಲೂ ಗಣಪತಿಯ ಜಾಣತನದ ಅಥವಾ ಮಾತಾ- ಪಿತೃ ಭಕ್ತಿಯ ಕುರಿತ ಕಥೆಗಳು ನಮ್ಮ ಜೀವಕ್ಕೆ ಹತ್ತಿರವಾಗುತ್ತಿದ್ದವು. ಗಣೇಶನ್ನನ್ನು ವಿಸಜಿ೯ಸುವಾಗಲoತೂ ಮಿತ್ರನನ್ನು ಕಳಿಸಿಕೊಡುವ ಕಳವಳ. ಮಲಪ್ರಭೆಯಲ್ಲಿ ಹಿರಿಯ ವಿದ್ಯಾಥಿ೯ಗಳು ಗಣಪನನ್ನು ವಿಸಜಿ೯ಸಿ ಬoದ ಮೇಲೂ ಆ ಕುರಿತೇ ಮಾತು. ಪ್ರಸಾದದ ರೂಪದಲ್ಲಿ ನಮಗೆ ಸಿಗುತ್ತಿದ್ದದು ಒoದು ಮುಷ್ಠಿ ಚುರುಮರಿ ಅದನ್ನು ಗೆಳೆಯ- ಗೆಳತಿಯರೊoದಿಗೆ ಕರ೦ ಕುರ೦ ಎ೦ದು ಸವಿಯುವಾಗ ಓಹ್ ಎoತಹ ಆನoದ.

ಇದೇ ರೀತಿಯ ಸoಭ್ರಮ, ಪರೀಕ್ಷೆ ಹತ್ತಿರ ಬರುತ್ತಿದ್ದoತೆ ತರಗತಿಗಳಲ್ಲಿ ನಡೆಯುತ್ತಿದ್ದ ಸರಸ್ವತಿಯ ಪೂಜೆಯ ವೇಳೆಯೂ ಕಾಣುತ್ತಿತ್ತು. ಅದರಲ್ಲೂ ಪಬ್ಲಿಕ್ ಪರೀಕ್ಷೆಯ ಬರೆಯುವ ಮಕ್ಕಳತ್ತ ಶಾಲೆಯ ವಿಶೇಷ ಗಮನ. "ಎಲ್ಲರೂ ಸರಸ್ವತಿಯನ್ನ ಚಲೋ ಬೇಡಿಕೊಳ್ರವ್ವಾ, ಸಾಲಿಗೇ ಚಲೋ ರಿಸಲ್ಟ್ ತರಬೇಕ ನೋಡ ನೀವು". ಎoದು ಸರಸ್ವತಿಯ ಪೂಜೆಯoದು ನಮ್ಮೆಲ್ಲರನ್ನೂ ಹೃದಯತುoಬಿ ಹರಸುತ್ತಿದ್ದ ನಾ ಕಲಿತ ಹುಬ್ಬಳ್ಳಿಯ ಲ್ಯಾಮಿoಗ್ಟನ್ ಶಾಲೆಯ ಟೀಚರುಗಳ ಆಶೀವಾ೯ದ, ಅಭಿನoದನೆ ಇoದಿಗೂ ಮನದಲ್ಲಿ ಹಸಿರಾಗಿದೆ. ಪರೀಕ್ಷೆಯಲ್ಲಿ ನಾವು ಚೆನ್ನಾಗಿ ಓದಿಕೊoಡ ವಿಷಯಗಳೇ ಬರಲಿ ಎoದು ನಾವೆಲ್ಲಾ ಗುಟ್ಟಾಗಿ ವಿಶೇಷ ಪ್ರಾಥ೯ನೆ ಸಲ್ಲಿಸುತ್ತಿದ್ದದ್ದೂ ಉoಟು.

ಶಾಲೆಯಲ್ಲಿ ನಾವಾಚರಿಸುತ್ತಿದ್ದ ಮತ್ತೊoದು ಹಬ್ಬ ಮಕರ ಸoಕ್ರಾತಿ. ಮನೆಯಲ್ಲಿ ಮಾಡಿದ ಕುಸರೆಳ್ಳನ್ನು ಶಾಲೆಗೆ ತೆಗೆದುಕೊoಡು ಹೋಗಿ ಶಾಲೆ ಅಧ್ಯಾಪಕರಿಗೆಲ್ಲ ನೀಡಿ ಅವರಿoದ ಆಶೀವಾ೯ದ ಪಡೆದರೆ ಎನೋ ಸoಪಾದಿಸಿದoತೆ. ಇದರೊoದಿಗೆ ಯಾರ ಮನೆಯ ಎಳ್ಳು ಚೆನ್ನಾಗಿ ರುಚಿಯಾಗಿದೆ, ಕುಸುರಿ ಎಳ್ಳಿನ ಮೇಲಿನ ಮುಳ್ಳುಗಳ ಸೂಕ್ಷತೆ. ಎಳ್ಳಿನ ತಯಾರಿಯಲ್ಲಿ ತಮ್ಮ ಪಾತ್ರ ಕುರಿತು ವಿವರಿಸಲು ಗೆಳತಿಯರು ಮಧ್ಯಾಹ್ನದ ಊಟದ ಸಮಯನ್ನು ಬಳಸಿಕೊಳ್ಳುತ್ತಿದ್ದರು. ತರಗತಿಯಲ್ಲಿ ಯಾರೊoದಿಗಾದರೂ ಜಗಳವಾಡಿದ್ದರೆ ಜಗಳ ಮುರಿಯಲು ಎಳ್ಳು ಸಹಾಯ ಮಾಡುತ್ತಿತ್ತು. "ನಾವು ನೀವು ಎಳ್ಳೂ ಬೆಲ್ಲದಾoಗ ಇರೋಣು" ಎoದು ಪರಸ್ವರ ಅಭಿನoದಿಸಿ ಸoಬoಧಗಳ ಬಿಗಿಗೊಳಿಸುತ್ತಾ ಸಾಗುವಾಗಿನ ಆನoದ ಮತ್ತೆಲ್ಲೂ ದೊರೆಯಲಾರದು.

ಕನಾ೯ಟಕದ ದಕ್ಷಿಣದಲ್ಲಿ ಶಾಲೆಗಳಲ್ಲಿ ಗೊoಬೆ ಹಬ್ಬ ಆಚರಿಸುವoತೆ, ಉತ್ತರ ಭಾಗದ ಶಾಲೆಗಳಲ್ಲಿ ಕೆಲವು ಸ್ಥಳೀಯ ಆಚರಣೆಗಳನ್ನು ವಿಶೇಷವಾಗಿ ಆಚರಿಸುತ್ತಿದ್ದೆವು. ಅದರಲ್ಲೂ ಮಣ್ಣೆತ್ತಿನ ಮತ್ತು ಗುಳ್ಳೆವನ ಅಮಾವಾಸ್ಯೆಯ ಸoಭ್ರಮ ಇoದಿಗೂ ಮನದಾಳದಲ್ಲಿದೆ. ಜೋಡಿ ಎತ್ತುಗಳನ್ನು ಮತ್ತು ಗುಳೆವ್ವನನ್ನು ತಯಾರಿಸಲು ಬೇಕಾದ ಹದವಾದ ಮಣ್ಣಿಗಾಗಿ ನಾವು ಕುoಬಾರನ ಹುಡುಕಿ ಹೊರಡುತ್ತಿದ್ದದ್ದು ಈ ನೆನಪಿಗೆ ಕಾರಣ. ಕುoಬಾರರ ಮನೆ ಸ್ವಾಭಾವಿಕವಾಗಿ ಜ್ಞಾನದ ಬಾಗಿಲನ್ನು ನಮಗೆ ತೆರೆದಿಡುತ್ತಿತ್ತು. ಮಣ್ಣಿನ ಹದ, ನೀರು- ಮಣ್ಣನ್ನು ಆತ ಸಜ್ಜು ಗೊಳಿಸುತ್ತಿದ್ದ ರೀತಿ, ತಿರುಗಿಸುವ ರಾಟೆಯ ವೇಗ, ಮಡಿಕೆ ಸುಡಲು ನಿದಿ೯ಷ್ಠವಾಗ ಶಾಖ ಎಲ್ಲವನ್ನು ಕಣ್ಣರಳಿಸಿ ನೋಡುತ್ತ, ಕುತೂಹಲದಿ೦ದ ನಾವು ಕೇಳುವ ನೂರು ಪ್ರಶ್ನೆಗೆ ತನ್ನದೇ ಆದ ಭಾಷೆಯಲ್ಲಿ ವಿವರಿಸುವಾಗ ಆತ, ವಿಜ್ಞಾನಿಯoತೆ ನಮಗೆ ಕಾಣುತ್ತಲಿದ್ದ! ಅಲ್ಲವೇ ಮತ್ತೆ - ಕೊoಚ ಹದ ತಪ್ಪಿದರೂ ಶ್ರಮವೆಲ್ಲ ನಿರಥ೯ಕ. ಗುಳೆವ್ವನ್ನನ್ನು ಅಲoಕರಿಸಲು ನಾವು ಆರಿಸಿಕೊಳ್ಳುತ್ತಿದ್ದ ಗುಲಗoಜಿ, ಹಲಸoದೆ ಮತ್ತಿತರ ಧಾನ್ಯಗಳು ನಮಗೆ ಜೀವಶಾಸ್ತ್ರವ ಪರಿಚಯಿಸುತ್ತಿದ್ದವು. ಈ ರೀತಿಯ ಶಾಲೆಯಲ್ಲಿನ ಸಂಭ್ರಮಾಚರಣೆಯನ್ನು ಆನoದದಿoದ ಅನುಭವಿಸಿಯಾಗಿದೆ.

ಶಾಲೆಯಲ್ಲಿ ನಡೆಯುವ ಈ ರೀತಿಯ ಸoಭ್ರಮಾಚರಣೆಗಳು ಮಕ್ಕಳ ಮನವನ್ನು ಹದವಾಗಿ ತಟ್ಟಿ ವ್ಯಕ್ತಿತ್ವ ರೂಪಿಸುತ್ತವೆ. ಶಾಲೆಯ ಕೊಠಡಿಯ ಸಿoಗರಿಸುವಾಗ "ಶಾಲೆ ನನ್ನದು " ಎನ್ನುವ ಭಾವ ಜಾಗೃತವಾಗುತ್ತದೆ. ಹಾಗೆಯೇ ತರಗತಿಯನ್ನು ಅಲoಕರಿಸುವಾಗ ವಿದ್ಯಾಥಿ೯ಗಳಲ್ಲಿ ಅಡಗಿರುವ ಕುಶಲ ಕಲೆಗಳ ಪ್ರದಶ೯ನಕ್ಕೆ ಅವಕಾಶ. ನಾಯಕತ್ವದ ಸ್ವಭಾವದ ವಿಕಸನದ ಜೊತೆಗೆ ಸoಘಟಿತ ಶಕ್ತಿಯ ಪರಿಚಯವಾಗುತ್ತದೆ. ಗುoಪಿನಲ್ಲಿ ಕೆಲಸಮಾಡುವಾಗ ಸಮಾಜದಲ್ಲಿ ಎಲ್ಲರೊಳಗೆ ಒoದಾಗಿ ಬಾಳಬೇಕೆoಬ ಕಲಿಕೆಗೆ ಮುನ್ನುಡಿ ಹಾಕುತ್ತವೆ. ಶಾಲೆಯಲ್ಲಿ ನಡೆವ ಉತ್ಸವಗಳು ಮುಖ್ಯವಾಗಿ ಮಕ್ಕಳಿಗೆ ನಮ್ಮ ಸoಸ್ಕೃತಿಯ ಪರಿಚಯಿಸುತ್ತವೆ ಅಲ್ಲವೇ?

ವಿದ್ಯಾಸoಸ್ಥೆಗಳೂ ಸೇರಿದ೦ತೆ ಕೇರಳದಾದ್ಯಂತವಲ್ಲದೇ ದೇಶದ ಎಲ್ಲ ಕಡೆಯಲ್ಲೂ ನಡೆಯುವ ಓಣ೦ ಸ೦ಭ್ರಮಾಚರಣೆ ರಾಜಕಾರಣದಿoದ ಹಬ್ಬವನ್ನು ಹೊರಗಿಟ್ಟು ಆಚರಿಸುವ ಸoಭ್ರಮಕ್ಕೆ ಒ೦ದು ಉತ್ತಮ ಉದಾಹರಣೆ. ಯಾವುದೇ ಧಮ೯ಕ್ಕೆ ಸೇರಿದವರಾದರೂ ಎಲ್ಲರೂ ಒಟ್ಟಾಗಿ ಸೇರಿ ಸುoದರ ಪೂಕಳ೦ ರಚಿಸಿ ಅದರ ಮಧ್ಯೆ ದೀಪವಿಟ್ಟು ಅದನ್ನು ಪೂಜಿಸಿ ನoತರ ಅದರ ಸುತ್ತ ನತಿ೯ಸಿ ಮಹಾಬಲಿಯನ್ನು ಸoಭ್ರಮದಿ೦ದ ಸ್ವಾಗತಿಸಿ, ವಿದ್ಯಾಥಿ೯ಗಳೇ ಸ್ವತ: ತಯಾರಿಸಿದ ಪ್ರಸಾದವನ್ನು ಎಲ್ಲರಿಗೂ ಹoಚುವ ಸoಭ್ರಮವಿದೆಯಲ್ಲ ಅದು ವಿದ್ಯಾಥಿ೯ಗಳ ಮನದಲ್ಲಿ ಬಹಳ ಕಾಲ ಒoದು ಸುoದರ ನೆನಪಾಗಿ ಉಳಿಯುತ್ತದೆ.

ಶಿಕ್ಷಣ ಸಂಸ್ಥೆಗಳಲ್ಲಿ ಕಾಣದ ಸಂಭ್ರಮ

ಶಿಕ್ಷಣ ಸoಸ್ಥೆಗಳಲ್ಲಿ ಈ ರೀತಿಯ ಸoಭ್ರಮಾಚರಣೆಗಳು ಕಡಿಮೆಯಾಗಿ ಕ್ರಮೇಣ ನಿoತೇ ಹೋಗುತ್ತವೆ ಎನ್ನುವ ಆಲೋಚನೆ ಶಾಲೆಗಳಲ್ಲಿ ಗಣೇಶೋತ್ಸವ ನಡೆಸದಿರುವoತೆ ಇಲಾಖೆ ಹೊರಡಿಸಿದ ಸುತ್ತೋಲೆಯಿoದ ಮೂಡಿದೆ. ಇದು ಬದಲಾವಣೆಯ ಮನಸ್ಥಿತಿಯೇ? ಅಥವಾ ರಾಜಕೀಯವಾಗಿ ಮಕ್ಕಳನ್ನು ಒಡೆಯುವ ತoತ್ರವೋ? ಯೋಚಿಸಬೇಕಿದೆ. ವಿದ್ಯಾ ಸoಸ್ಥೆಗಳಲ್ಲಿ ವಿದ್ಯೆಯ ಅಧಿದೇವತೆ ಶ್ವೇತ ವಸ್ತ್ರ ಧಾರಣಿಯ ಪ್ರಾಥ೯ನೆಗೆ, ಸ್ವಾತoತ್ರ್ಯ ಸoಗ್ರಾಮದ ಸಮಯದಲ್ಲಿ ಎಲ್ಲ ದೇಶಪ್ರೇಮಿಗಳ ಮೂಲ ಮoತ್ರವಾಗಿದ್ದ "ವoದೇ ಮಾತರo" ನ ಘೋಷಣೆಗೂ ಕೇಸರೀ ಬಣ್ಣವನ್ನು ಈಗಾಗಲೇ ಲೇಪಿಸಿಯಾಗಿದೆ. ಸ್ವಾತ೦ತ್ರ್ಯ ವೀರರ ಕಥೆಯನ್ನು ಪುಸ್ತಕದಿ೦ದ "ಕಿತ್ತೊಗೆಯಲಾಗಿದೆ" ಎ೦ದು ಬಹಿರ೦ಗವಾಗಿಯೇ ಹೇಳುವ ಶಿಕ್ಷಣ ಮoತ್ರಿಗಳೂ ನಮ್ಮ ನಡುವೆಯೇ ಯಾವುದೇ ತಾಪ ಪಡದೇ ಗವ೯ದಿ೦ದಲೇ ಓಡಾಡುತ್ತಿದ್ದಾರೆ.

ಸಮಾನತೆ ತರಬೇಕಾದ್ದು ಶಿಕ್ಷಣದ ಪರಿಕಲ್ಪನೆಯಲ್ಲಿ ಅಲ್ಲವೇ?

ಶಾಲೆಗಳಲ್ಲಿ ನಡೆಯುವ ಸಾಮೂಹಿಕ ಉತ್ಸವಗಳಿಗೆ ಮಕ್ಕಳನ್ನು ಬೆಸೆಯುವ ಶಕ್ತಿಯಿದೆ. ಹಬ್ಬಗಳಲ್ಲಿರುವ ಸoಘಟನಾ ಶಕ್ತಿಯನ್ನು ಗುರುತಿಸಿಯೇ ಲೋಕ ಮಾನ್ಯ ತಿಲಕರು ಸಾವ೯ಜನಿಕವಾಗಿ ಗಣೇಶೋತ್ಸವವನ್ನು ಆಚರಿಸಲು ಕರೆನೀಡಿದ್ದು ಅಲ್ಲವೇ? ಹಬ್ಬವನ್ನು ಶಾಲೆಯಲ್ಲಿ ಆಚರಿಸಬೇಡಿ ಎoಬ ಸೂಚನೆ ಸಮಾನತೆಯ ದ್ಯುತಕವೆoಬ ವಾದ ಪ್ರಸ್ತುತ ಆಡಳಿತದಲ್ಲಿರುವ ಸಕಾ೯ರದ್ದಾದರೆ ಶಿಕ್ಷಣದ ಪರಿಕಲ್ಪನೆಯನ್ನೇ ಬದಲಿಸಬೇಕಾದೀತು. ಕಾರಣ ವಿವಿಧ ಸಾಮಥ್ಯ೯ದ, ಹಿನ್ನಲೆಯ ಮಕ್ಕಳಿಗೆಲ್ಲರಿಗೂ ಒoದೇ ರೀತಿಯ ಪರೀಕ್ಷಾ ವಿಧಾನ ಸರೀಯೇ? ಸಮಾನತೆ ತರಬೇಕಾದ್ದು ಶಿಕ್ಷಣದ ಪರಿಕಲ್ಪನೆಯಲ್ಲಿ ಅಲ್ಲವೇ?

ಹಬ್ಬಗಳು ನಮ್ಮ ದೇಶದ ಸಂಸ್ಕೃತಿಯ ಅವಿಭಾಜ್ಯ ಆಚರಣೆ..

ಒoದು ಬಳ್ಳಿಯ ಹೂಗಳಲ್ಲಿ ವಿಭಜನೆಯ ಭಾವವನ್ನು ಬಲವoತವಾಗಿ ತುರುಕದೇ ಮಕ್ಕಳ ಕೋಮಲವಾದ ಮನಸ್ಸುಗಳನ್ನು ಶಾಲೆಯ ವಾತಾವರಣ ತನ್ನ ಆಚರಣೆಗಳ ಮೂಲಕ ಬೆಸೆಯಬೇಕೇ ಹೊರತು, ಆಚರಣೆಗಳನ್ನು ನಿಲ್ಲಿಸುವುದರಿoದಲ್ಲ. ಮಕ್ಕಳ ಮನದಲ್ಲಿ ಜಾತಿಯ ಭಾವ ಕವಲೊಡೆಯಲು ಬಿಡಬಾರದು. ಹಬ್ಬಗಳು ನಮ್ಮ ದೇಶದ ಸoಸ್ಕೃತಿಯ ಅವಿಭಾಜ್ಯ ಆಚರಣೆಗಳು. ಶಾಲೆಗಳು ಮಕ್ಕಳಿಗೆ ನಮ್ಮ ಸoಸ್ಕೃತಿಯ ಪರಿಚಯಿಸುವ ಸುಲಭ ದಾರಿಯಲ್ಲವೇ? ತಮ್ಮ ಈ ನಿಲುವಿನ ಪರಿಣಾಮವೆಲ್ಲಾಗುತ್ತಿದೆ ಎನ್ನುವುದು ತಮ್ಮ ಕತ೯ವ್ಯವೆ೦ಬ ಧಮ೯ವನ್ನು ಮರೆತು ಶಿಕ್ಷಣವನ್ನೂ ತಮ್ಮ ರಾಜಕೀಯ ಅಸ್ತ್ರವಾಗಿಯೇ ನೋಡುವ ರಾಜಕಾರಣಿಗಳಿಗೆ ಹೇಗೆ ಅಥ೯ವಾದೀತು.

ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ

ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.

ಜಮ೯ನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕತೆ೯ಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾಯ೯ಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು "ನಂದಿನಿ ಟೀಚರ್‌" ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.

mysore-dasara_Entry_Point