Viral News: ಅಪ್ಪನ ರಹಸ್ಯ ಪ್ರೇಮಿಯ ಮಗನೇ ಆಕೆಯ ಬಾಸ್; ಡಿಎನ್‌ಎ ಸೀಕ್ರೆಟ್ನಿಂದ ಕೆಲಸ ಕಳೆದುಕೊಂಡ ಯುವತಿ, ವಿಚಿತ್ರ ಸ್ಟೋರಿ ಓದಿ
Secret Love Child: ಡಿಎನ್‌ಎ ಪರೀಕ್ಷೆಯಲ್ಲಿ ಈ ಉದ್ಯೋಗಿಯ ಬಾಸ್ ಈಕೆಗೆ ಸಂಬಂಧಿಯೆಂದು ತಿಳಿದುಬಂದಿತ್ತು. ಇದೇ ಕಾರಣವನ್ನು ಇಟ್ಟುಕೊಂಡು ಕಂಪನಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಉದ್ಯೋಗ ಕಡಿತಕ್ಕೆ ಕಾರಣಗಳು ಹಲವು ಇರಬಹುದು. ಉದ್ಯೋಗದಲ್ಲಿ ಕಳಪೆ ಪ್ರದರ್ಶನ, ಆರ್ಥಿಕ ಹಿಂಜರಿತ, ಆಫೀಸ್ ರಾಜಕೀಯ, ಸಹೋದ್ಯೋಗಿಗಳ ಕೆಟ್ಟ ವರ್ತನೆ, ಮೂನ್ ಲೈಟಿಂಗ್, ಸೋಷಿಯಲ್ ಮೀಡಿಯಾದಲ್ಲಿ ಕಂಪನಿಯ ಕುರಿತು ಕೆಟ್ಟದಾಗಿ ಬರೆಯುವುದು ಇತ್ಯಾದಿ ಹಲವು ಕಾರಣಗಳಿಂದ ಉದ್ಯೋಗ ಕಳೆದುಕೊಳ್ಳಬಹುದು.
ಆದರೆ, ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮಹಿಳೆಯೊಬ್ಬರ ಉದ್ಯೋಗ ಕಡಿತಕ್ಕೆ ಕಾರಣವಾಗಿರುವ ವಿಷಯವು ನೆಟ್ಟಿಗರನ್ನು ದಿಗ್ಬ್ರಮೆಗೊಳಿಸಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಈ ಉದ್ಯೋಗಿಯ ಬಾಸ್ ಈಕೆಗೆ ಸಂಬಂಧಿಯೆಂದು ತಿಳಿದುಬಂದಿತ್ತು. ಇದೇ ಕಾರಣವನ್ನು ಇಟ್ಟುಕೊಂಡು ಕಂಪನಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ವಿಚಿತ್ರವೆಂದರೆ ಆ ಕಂಪನಿಯ ಸಿಇಒ ಈ ಬಾಸ್.
ಈ ವಿಲಕ್ಷಣ, ವಿಚಿತ್ರವಾದರೂ ಸತ್ಯವಾದ ಘಟನೆಯ ಕುರಿತು ಆ ಉದ್ಯೋಗಿಯು Redditನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಉದ್ಯೋಗಿಯ ಬಾಸ್ ಈಕೆಯ ಸಂಬಂಧಿ ಎಂದು ತಿಳಿದುಬಂದ ಬಳಿಕ ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಸಂಬಂಧಿಯೆಂಬ ವಿಷಯ ತಿಳಿದುಬಂದದ್ದೇ ಇತ್ತೀಚೆಗೆ. ಈ ಡಿಎನ್‌ಎ ಪರೀಕ್ಷೆಯನ್ನು ಕಂಪನಿ ನಡೆಸಿದೆ ಎನ್ನಲಾಗಿದೆ. ಉದ್ಯೋಗದಲ್ಲಿರುವ ಎಲ್ಲರ ಡಿಎನ್‌ಎ ಟೆಸ್ಟ್ ಮಾಡಲಾಗಿತ್ತೇ ಎಂಬ ವಿವರ ಲಭ್ಯವಿಲ್ಲ.
"ನನಗೆ ರಹಸ್ಯ ಮಗುವೊಂದಿದೆ ಎಂದು ನನ್ನ ತಂದೆಗೆ ತಿಳಿದಿರದೆ ಇರಬಹುದು. ನಾವು ನಮ್ಮ ಕುಟುಂಬದಲ್ಲಿ ಎಲ್ಲಾ ಮಕ್ಕಳು ಜತೆಯಾಗಿ ಬೆಳೆದೆವು. ಆದರೆ, ರಹಸ್ಯ ಮಗುವೊಂದರ ವಿಚಾರ ಡಿಎನ್‌ಎ ಟೆಸ್ಟ್‌ನಿಂದ ತಿಳಿದುಬಂದ ಬಳಿಕ ಎಲ್ಲರಿಗೂ ಆಘಾತವಾಗಿದೆ" ಎಂದು ಅವರು ರೆಡ್ಡಿಟ್‌ನಲ್ಲಿ ಬರೆದಿದ್ದಾರೆ.
ಆ ರಹಸ್ಯ ಪ್ರೇಮಿಯ ಮಗು ಬೆಳೆದು ಈಗ ಈಕೆಯ ಬಾಸ್ (ಸಿಇಒ) ಆಗಿದ್ದರು. ಆದರೆ, ಇದನ್ನು ಕಂಪನಿ ಕಂಡುಕೊಂಡಿತ್ತು. ಆಕೆಯ ಬಾಸ್ ಟೆಕ್ಸಾನ್ ಮೂಲದವನು. ಮಹಿಳಾ ಉದ್ಯೋಗಿಯ ತಂದೆ ತಾನು ಮದುವೆಯಾಗುವ ಮೊದಲು ಹತ್ತು ವರ್ಷ ಟೆಕ್ಸಾನ್‌ನಲ್ಲಿ ವಾಸಿಸುತ್ತಿದ್ದನು. ಅಲ್ಲಿ ಆತನಿಗೆ ಪ್ರೇಯಸಿಯೊಬ್ಬಳು ಇದ್ದಿರಬಹುದು. ಆ ಸಮಯ, ಈ ಬಾಸ್‌ನ ವಯಸ್ಸು, ಜೀನ್‌ಗಳು ಎಲ್ಲವೂ ಸರಿ ಹೊಂದುತ್ತವೆ. ಆದರೆ, ತನಗೆ ತಿಳಿದಿರದ ರಹಸ್ಯ ಸಂಗತಿಯು ತನ್ನ ಕೆಲಸಕ್ಕೆ ಕುತ್ತಾಗುತ್ತದೆ ಎಂದು ಈ ಮಹಿಳೆ ಭಾವಿಸಿರಲಿಲ್ಲ. ಈ ಬಾಸ್ ಈಕೆಗೆ ಸಹೋದರಿಯೆಂದು ಪರಿಗಣಿಸಿದ ಕಂಪನಿಯು ಈಕೆಯನ್ನು ಕೆಲಸದಿಂದ ತೆಗೆದುಹಾಕಿದೆ.
ಈ ಉದ್ಯೋಗಿ ಬಳಿಕ ಸಿಇಇ ಅವರನ್ನು ಹಲವು ಭೇಟಿ ಮಾಡಿದ್ದರು. ಬಳಿಕ ಇವರನ್ನು ರಿಫ್ರೆಷರ್ ಟ್ರೇನಿಂಗ್‌ಗೆ ಸೇರಲು ತಿಳಿಸಲಾಯಿತು. ಕಂಪನಿಯಲ್ಲಿ ಕೆಲಸ ಮಾಡುವವರು ಎಕ್ಸಿಕ್ಯುಟಿವ್ ಅಥವಾ ಮ್ಯಾನೇಜ್‌ಮೆಂಟ್ ಸಿಬ್ಬಂದಿಯೊಂದಿಗೆ ಸಂಬಂಧ ಹೊಂದಿರುವುದು ಉದ್ಯೋಗದ ಸಂದರ್ಭದಲ್ಲಿ ತಿಳಿದುಬಂದರೆ ಸಿಬ್ಬಂದಿ ವೈಯಕ್ತಿಕ ಅಥವಾ ವೃತ್ತಿಪರ ಸವಲತ್ತುಗಳಿಗೆ ಅರ್ಹರಾಗಿರುವುದಿಲ್ಲ ಎಂಬ ಹೊಸ ಷರತ್ತನ್ನು ಆಗ ಸೇರಿಸಲಾಯಿತು ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಮಹಿಳಾ ಉದ್ಯೋಗಿಯು ಬರೆದುಕೊಂಡಿದ್ದಾರೆ.
ಬೇರೆ ಯಾವುದೇ ವಿಭಾಗಕ್ಕೆ ಈ ರೀತಿಯ ವಿಶೇಷ ಟ್ರೇನಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರಲಿಲ್ಲ. ಹೀಗಾಗಿ, ತನ್ನನ್ನು ಕೆಲಸದಿಂದ ತೆಗೆಯುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈಕೆಯ ಪರವಾಗಿ ಮಾತನಾಡಲು ಆಕೆಯ ಮ್ಯಾನೇಜರ್ ಕೂಡ ಕಂಪೆನಿಯ ವೈಸ್ ಪ್ರೆಸಿಡೆಂಟ್ ಬಳಿ ಬಂದಿದ್ದರು. ಆದರೆ, ಉಪಾಧ್ಯಕ್ಷರು ಆಕೆಯ ಮ್ಯಾನೇಜರನ್ನೂ ಸಸ್ಪೆಂಡ್ ಮಾಡಿದ್ದರು ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಹೀಗೆ, ಉದ್ಯೋಗ ಕಳೆದುಕೊಂಡ ಬಳಿಕ ಕಂಪನಿಯ ಕುರಿತು ಒಂದಿಷ್ಟು ಟೀಕೆಗಳೂ ಬಂದವು. ಇದರಿಂದ ಈಕೆಯನ್ನು ಮತ್ತೆ ಕೆಲಸಕ್ಕೆ ಕಂಪನಿ ಆಹ್ವಾನಿಸಿತ್ತು. ಆದರೆ, ಈ ಆಹ್ವಾನವನ್ನು ನಾನು ತಿರಸ್ಕರಿಸಿದೆ ಎಂದು ಆ ಮಹಿಳಾ ಉದ್ಯೋಗಿ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.