What does a crocodile eat: ದೇವರ ಮೊಸಳೆ ಸಸ್ಯಾಹಾರಿ ಎನಿಸಿಕೊಂಡದ್ದು ಹೇಗೆ? ಆಹಾರ ಏನು?
What does a crocodile eat: ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ದೇಗುಲದ ದೇವರ ಮೊಸಳೆ ಬಬಿಯಾ ವೆಜಿಟೇರಿಯನ್ ಕ್ರೊಕೊಡೈಲ್ ಎಂದೆನಿಸಿಕೊಂಡದ್ದು ಹೇಗೆ? ಮೊಸಳೆಗಳ ಆಹಾರ ಕ್ರಮ ಏನು? ಇಲ್ಲಿದೆ ವಿವರ.
ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲದ (Sri Anantha Padmanabha Swamy Temple) ಸರೋವರದಲ್ಲಿದ್ದ ಬಬಿಯಾ (Babiya) ಎಂಬ ದೇವರ ಮೊಸಳೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದೆ.
ಈ ದೇವರ ಮೊಸಳೆಯು ಸರಿ ಸುಮಾರು 8 ದಶಕಗಳಿಂದ ಇದೇ ದೇಗುಲದ ಆವರಣದಲ್ಲಿತ್ತು. ಪ್ರತಿನಿತ್ಯ ಮಧ್ಯಾಹ್ನ ದೇವರ ಪೂಜೆ ಬಳಿಕ, ನೈವೇದ್ಯವನ್ನು ಅನ್ನ ಮತ್ತು ಬೆಲ್ಲವನ್ನು ಈ ಮೊಸಳೆಗೆ ನೀಡುವ ಪರಿಪಾಠ ಚಾಲ್ತಿಯಲ್ಲಿತ್ತು. ದೇವಸ್ಥಾನದ ಅರ್ಚಕರು ಈ ಕೆಲಸ ಮಾಡುತ್ತ ಬಂದಿದ್ದರು.
ಇದನ್ನು ಗಮನಿಸಿದ ಭಕ್ತಾದಿಗಳು ಇದು ಸಸ್ಯಾಹಾರಿ ಮೊಸಳೆ ಅಥವಾ ವೆಜಿಟೇರಿಯನ್ ಕ್ರೊಕೊಡೈಲ್ ಎಂದು ಹೇಳಲಾರಂಭಿಸಿದರು. ಅವರ ಮೇಲ್ನೋಟದ ಅನಿಸಿಕೆ ಇದಕ್ಕೆ ಕಾರಣ. ದೇವರ ನೈವೇದ್ಯ ಸ್ವೀಕರಿಸುವ ಈ ಮೊಸಳೆ ಸಸ್ಯಾಹಾರಿಯೇ ಇರಬೇಕು ಎಂಬ ಭಾವನೆಯೂ ಇದಕ್ಕೆ ಇಂಬು ನೀಡಿತ್ತು. ಇದು ಬಾಯಿ ಮಾತಿನ ಮೂಲಕ ಹರಡಿದ ವಿಚಾರವಾಗಿದ್ದು, ಅಧಿಕೃತವಲ್ಲ ಎನ್ನುತ್ತಿವೆ ದೇವಸ್ಥಾನದ ಮೂಲಗಳು.
ಹರಕೆ ಕೋಳಿ ತಿನ್ನುತ್ತಿದ್ದ ಬಬಿಯಾ
ಅನಂತಪುರ ದೇವಸ್ಥಾನದ ದೇವರ ಮೊಸಳೆ ಬಬಿಯಾಗೆ ಭಕ್ತಾದಿಗಳು ಹರಕೆ ಕೋಳಿಯನ್ನು ಸಲ್ಲಿಸುತ್ತಿದ್ದರು. ಇದು ಬಹುಕಾಲದಿಂದ ನಡೆದುಕೊಂಡು ಬಂದಿದ್ದ ವಾಡಿಕೆಯಾಗಿತ್ತು. ಕಾಲಾನುಕ್ರಮದಲ್ಲಿ ಈ ವಾಡಿಕೆ ಕಡಿಮೆ ಆಗಿತ್ತು.
ಈ ಹರಕೆ ಕೋಳಿ ಸಲ್ಲಿಕೆಯಾಗುತ್ತಿದ್ದ ದೃಶ್ಯದ ವಿಡಿಯೋ, ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಲಭ್ಯವಿದೆ. ಕಿಶನ್ ಕುಮಾರ್ ಹೆಗಡೆ ಈ ಕುರಿತ ಒಂದು ಪೋಸ್ಟ್ ಅನ್ನು ನಿನ್ನೆಯೇ ಶೇರ್ ಮಾಡಿದ್ದರು.
ಇದೇ ರೀತಿ ಯು.ಉನ್ನಿಕೃಷ್ಣನ್ ಎಂಬುವವರು ಕೂಡ ಹಳೆಯ ಡಾಕ್ಯುಮೆಂಟರಿಯ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ ಮೊಸಳೆ ವೆಜಿಟೇರಿಯನ್ ಆಗಿರುವುದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.
ಮೊಸಳೆ ತಿನ್ನುವುದೇನನ್ನು? ಅದರ ಆಹಾರ ಕ್ರಮ ಏನು? (Eating habit of crocodile)
ಮೊಸಳೆಯ ಪ್ರಮುಖ ಆಹಾರಗಳು ನಾಲ್ಕು ರೀತಿಯವು. ಸ್ವತಂತ್ರ ಮೊಸಳೆಗಳು ಅಂದರೆ ಕಾಡು ಮೊಸಳೆಗಳಾದರೆ ಅವು ಮೀನು, ಪಕ್ಷಿಗಳು ಮತ್ತು ನಿರುಪದ್ರವಿ ಸಸ್ತನಿಗಳು (ಆನೆ ಮರಿ, ನೀರಾನೆ ಮರಿಗಳನ್ನು ತಿನ್ನುತ್ತವೆ. ಆದರೆ ದೊಡ್ಡ ಆನೆ, ನೀರಾನೆಗಳ ತಂಟೆಗೆ ಹೋಗುವುದಿಲ್ಲ) ಮತ್ತು ನೀರಿನಲ್ಲಿ ಲಭ್ಯವಿರುವ ಇತರೆ ಪ್ರಾಣಿಗಳನ್ನು ತಿನ್ನುತ್ತವೆ. ಇದಲ್ಲದೆ, ಮನುಷ್ಯರನ್ನೂ ತಿನ್ನುತ್ತವೆ.
ಇನ್ನು ಪ್ರಾಣಿ ಸಂಗ್ರಹಾಲಯದಲ್ಲಿರುವ ಮೊಸಳೆಗಳಾದರೆ, ಇಲಿಗಳು, ರಾ ಚಿಕನ್, ರಾ ಬೀಫ್, ಮೀನುಗಳನ್ನು ತಿನ್ನಲು ಕೊಡುತ್ತಾರೆ.
ಮೊಸಳೆಗೆ ದಿನಕ್ಕೆ ಎಷ್ಟು ಆಹಾರ ಬೇಕು? (How Much Does a Crocodile Eat?)
ಮೊಸಳೆಯು ದಿನಕ್ಕೆ ಸರಾಸರಿ 2-5 ಪೌಂಡ್ ಮಾಂಸವನ್ನು ತಿನ್ನುತ್ತದೆ, ಅಥವಾ ವಾರಕ್ಕೆ ಅದರ ದೇಹದ ತೂಕದ ಸರಿಸುಮಾರು ಶೇಕಡ 5ರಷ್ಟು ಆಹಾರ ಸೇವಿಸುತ್ತದೆ. ಇದು ಮೊಸಳೆಯ ಒಟ್ಟಾರೆ ಗಾತ್ರ ಮತ್ತು ಅವುಗಳಿಗೆ ಸುಲಭವಾಗಿ ಲಭ್ಯವಿರುವ ಆಹಾರದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಹತ್ತಿರದ ಬೇಟೆಯನ್ನು ಹೊಂದಿರುವ ಮೊಸಳೆಯು ದಿನಕ್ಕೆ 2 ಪೌಂಡ್‌ಗಳಿಗಿಂತ ಹೆಚ್ಚು ಮಾಂಸವನ್ನು ತಿನ್ನಬಹುದು ಎನ್ನುತ್ತಾರೆ ಪರಿಣತರು.