ಪ್ಯಾರಿಸ್​ ಒಲಿಂಪಿಕ್ಸ್ ನೋಡಲು ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್ ರೇಪ್; ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್​ ಒಲಿಂಪಿಕ್ಸ್ ನೋಡಲು ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್ ರೇಪ್; ವಿಡಿಯೋ ವೈರಲ್

ಪ್ಯಾರಿಸ್​ ಒಲಿಂಪಿಕ್ಸ್ ನೋಡಲು ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್ ರೇಪ್; ವಿಡಿಯೋ ವೈರಲ್

Australian Woman Raped: ಪ್ಯಾರಿಸ್‌ನ ಪಿಗಲ್ಲೆ ಜಿಲ್ಲೆಯಲ್ಲಿ 25 ವರ್ಷದ ಆಸ್ಟ್ರೇಲಿಯನ್ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ. 2024ರ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ದಿನಗಳ ಮೊದಲು ಈ ಘಟನೆ ಸಂಭವಿಸಿದೆ.

ಪ್ಯಾರಿಸ್​ ಒಲಿಂಪಿಕ್ಸ್ ನೋಡಲು ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್ ರೇಪ್; ವಿಡಿಯೋ ವೈರಲ್
ಪ್ಯಾರಿಸ್​ ಒಲಿಂಪಿಕ್ಸ್ ನೋಡಲು ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್ ರೇಪ್; ವಿಡಿಯೋ ವೈರಲ್

ಜುಲೈ 26ರಂದು ಅಧಿಕೃತ ಚಾಲನೆ ಸಿಗುವುದಕ್ಕೂ ಮುನ್ನವೇ ಜುಲೈ 24 ರಿಂದಲೇ ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಸ್ಪರ್ಧೆಗಳು ಶುರುವಾಗಿವೆ. ಆದರೆ ಪ್ರತಿಷ್ಠೆಯ ಒಲಿಂಪಿಕ್ಸ್​ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಪ್ಯಾರಿಸ್​ನಲ್ಲಿ ಅವಮಾನಕಾರಿ ಹಾಗೂ ಮುಜುಗರಕ್ಕೆ ಒಳಗಾಗುವ ಘಟನೆಯೊಂದು ಜರುಗಿದ್ದು, ಜಗತ್ತೇ ಬೆಚ್ಚಿ ಬಿದ್ದಿದೆ. ಕ್ರೀಡಾಕೂಟವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಆಸ್ಟ್ರೇಲಿಯಾದ ಮಹಿಳಾ ಅಭಿಮಾನಿಯೊಬ್ಬರ ಮೇಲೆ ಗ್ಯಾಂಗ್​ ರೇಪ್ ನಡೆದಿದೆ.

ಪ್ಯಾರಿಸ್‌ನಲ್ಲಿ ಆಸ್ಟ್ರೇಲಿಯಾದ 25 ವರ್ಷದ ಮಹಿಳೆಯೊಬ್ಬರ ಮೇಲೆ ಐವರು ಕಾಮುಕರ ಗುಂಪೊಂದು ಸಾಮೂಹಿಕ ಅತ್ಯಾಚಾರವೆಸಗಿದೆ ಎಂದು ಆರೋಪಿಸಲಾಗಿದೆ. ಜುಲೈ 19ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಫ್ರಾನ್ಸ್‌ನ ಪ್ಯಾರಿಸಿಯನ್ ಪತ್ರಿಕೆಯ ಪ್ರಕಾರ, ಪ್ಯಾರಿಸ್​ನ ಬೌಲೆವಾರ್ಡ್ ಡಿ ಕ್ಲಿಚಿಯ ಸ್ಥಳೀಯ ರೆಸ್ಟೋರೆಂಟ್​​ನಿಂದ ಹೊರಬಂದ ಮಹಿಳೆಯನ್ನು ಈ ಗ್ಯಾಂಗ್​ ಎಳೆದೊಯ್ದಿದೆ.

ಕಬಾಬ್​ ಅಂಗಡಿಗೆ ಓಡಿ ಬಂದು ರಕ್ಷಣೆ

ಕಾಮುಕರ ಗುಂಪು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ರೇಪ್​ ಮಾಡಿರುವ ಕುರಿತು ಮಹಿಳೆ ಆರೋಪಿಸಿದ್ದಾರೆ. ಗ್ಯಾಂಗ್-ರೇಪ್ ನಡೆದಿರಬಹುದು ಎಂದು ಪ್ಯಾರಿಸ್‌ನ ಅಧಿಕಾರಿಗಳು ದೃಢಪಡಿಸಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ಮಹಿಳೆಯ ಬಟ್ಟೆ ಭಾಗಶಃ ಹರಿದಿತ್ತು. ಹರಿದ ಬಟ್ಟೆಯಲ್ಲೇ ಪಿಗಲ್ಲೆ ಜಿಲ್ಲೆಯ ಕಬಾಬ್ ಅಂಗಡಿಗೆ ಓಡಿ ಬಂದು ಆಶ್ರಯ ಪಡೆದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರೆಸ್ಟೋರೆಂಟ್ ಮಾಲೀಕರು ಆಕೆಯ ಸ್ಥಿತಿಯನ್ನು ನೋಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಿ, ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ.

ಈ ದೃಶ್ಯಗಳು ಕಬಾಬ್ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ನಂತರ ಅಗ್ನಿಶಾಮಕ ದಳದವರು ತುರ್ತು ಸಹಾಯ ನೀಡಿದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. 2024ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಸಿದ್ಧತೆಗಳು ಅಂತಿಮ ಹಂತದಲ್ಲಿರುವ ಪ್ಯಾರಿಸ್‌ಗೆ ಭೇಟಿ ನೀಡಿದ್ದ ಆಸ್ಟ್ರೇಲಿಯಾದ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪದ ಕುರಿತು ಫ್ರೆಂಚ್ ಪ್ರಾಸಿಕ್ಯೂಟರ್​​ಗಳು ತನಿಖೆ ನಡೆಸುತ್ತಿದ್ದಾರೆ ಎಂದು ನ್ಯಾಯಾಂಗ ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾರಿಸ್ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯೊಂದರಲ್ಲಿ 25 ವರ್ಷದ ಆಸ್ಟ್ರೇಲಿಯಾ ಮಹಿಳೆ ತನ್ನ ಮೇಲೆ ಅತ್ಯಾಚಾರ ಎಸೆಗಲಾಗಿದೆ ಎಂದು ಫ್ರೆಂಚ್ ರಾಜಧಾನಿಯಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಕಾಮುಕರ ಹೆಸರು ಬಹಿರಂಗಗೊಂಡಿಲ್ಲ. ಪ್ಯಾರಿಸ್‌ನಲ್ಲಿರುವ ಆಸ್ಟ್ರೇಲಿಯಾದ ರಾಯಭಾರ ಕಚೇರಿಯು ಫ್ರೆಂಚ್ ರಾಜಧಾನಿಯಲ್ಲಿ ಹಲ್ಲೆಗೊಳಗಾದ ನಾಗರಿಕರಿಗೆ ಕಾನ್ಸುಲರ್ ನೆರವು ನೀಡಲು ಪ್ರಯತ್ನಿಸಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಜುಲೈ 26ರಂದು ಉದ್ಘಾಟನಾ ಸಮಾರಂಭ

777 ಕಿಮೀ ಉದ್ದ ಮತ್ತು ಅಡ್ಡಲಾಗಿ 37 ಸೇತುವೆಗಳನ್ನು ಹೊಂದಿರುವ ಫ್ರಾನ್ಸ್​ನ ಮಹಾನದಿ ಸೀನ್ ನದಿ ಮೇಲೆ ಜುಲೈ 26ರ ಶುಕ್ರವಾರ ರಾತ್ರಿ 11.30ಕ್ಕೆ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಕೂಟ 17 ದಿನಗಳ ಕಾಲ ನಡೆಯಲಿದೆ. 1924ರ ನಂತರ ಅಂದರೆ 100 ವರ್ಷಗಳ ನಂತರ ಪ್ಯಾರಿಸ್ ಕೂಟ ಆಯೋಜಿಸುತ್ತಿದೆ. ಒಟ್ಟು ಮೂರನೇ ಬಾರಿಗೆ ಫ್ರಾನ್ಸ್​ ಈ ಕ್ರೀಡಾಜಾತ್ರೆಗೆ ಆತಿಥ್ಯ ವಹಿಸುತ್ತಿದೆ. 32 ಕ್ರೀಡೆಗಳ 329 ವಿಭಾಗಗಳಲ್ಲಿ 206 ದೇಶಗಳ 10,500 ಕ್ರೀಡಾಪಟುಗಳು ಪದಕ ಬೇಟೆಗೆ ಸಿದ್ಧವಾಗಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.