ಗುಜರಾತ್ ಟೈಟಾನ್ಸ್ ಹೆಡ್​ಕೋಚ್ ಸ್ಥಾನದಿಂದ ಆಶಿಶ್ ನೆಹ್ರಾ ಔಟ್; ಸಿಕ್ಸರ್​ ಕಿಂಗ್ ಯುವರಾಜ್ ನೇಮಕಕ್ಕೆ ಫ್ರಾಂಚೈಸಿ ಚಿಂತನೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್ ಟೈಟಾನ್ಸ್ ಹೆಡ್​ಕೋಚ್ ಸ್ಥಾನದಿಂದ ಆಶಿಶ್ ನೆಹ್ರಾ ಔಟ್; ಸಿಕ್ಸರ್​ ಕಿಂಗ್ ಯುವರಾಜ್ ನೇಮಕಕ್ಕೆ ಫ್ರಾಂಚೈಸಿ ಚಿಂತನೆ

ಗುಜರಾತ್ ಟೈಟಾನ್ಸ್ ಹೆಡ್​ಕೋಚ್ ಸ್ಥಾನದಿಂದ ಆಶಿಶ್ ನೆಹ್ರಾ ಔಟ್; ಸಿಕ್ಸರ್​ ಕಿಂಗ್ ಯುವರಾಜ್ ನೇಮಕಕ್ಕೆ ಫ್ರಾಂಚೈಸಿ ಚಿಂತನೆ

Ashish Nehra: ಹೆಡ್​ಕೋಚ್​ ಆಶಿಶ್ ನೆಹ್ರಾ ಮತ್ತು ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಅವರು ಐಪಿಎಲ್ 2025ಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ತೊರೆಯುವ ನಿರೀಕ್ಷೆಯಿದೆ.

ಗುಜರಾತ್ ಟೈಟಾನ್ಸ್ ಹೆಡ್​ಕೋಚ್ ಸ್ಥಾನದಿಂದ ಆಶಿಶ್ ನೆಹ್ರಾ ಔಟ್; ಸಿಕ್ಸರ್​ ಕಿಂಗ್ ಯುವರಾಜ್ ನೇಮಕಕ್ಕೆ ಫ್ರಾಂಚೈಸಿ ಚಿಂತನೆ
ಗುಜರಾತ್ ಟೈಟಾನ್ಸ್ ಹೆಡ್​ಕೋಚ್ ಸ್ಥಾನದಿಂದ ಆಶಿಶ್ ನೆಹ್ರಾ ಔಟ್; ಸಿಕ್ಸರ್​ ಕಿಂಗ್ ಯುವರಾಜ್ ನೇಮಕಕ್ಕೆ ಫ್ರಾಂಚೈಸಿ ಚಿಂತನೆ

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಹಲವು ತಿಂಗಳಿದ್ದರೂ ಹಲವು ಫ್ರಾಂಚೈಸಿಗಳ ಕೋಚಿಂಗ್ ಸಿಬ್ಬಂದಿ ವಿಭಾಗದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್, ತಮ್ಮ ಸ್ಥಾನ ತೊರೆದು ಟೀಮ್ ಇಂಡಿಯಾ ಹೆಡ್​ಕೋಚ್​ ಆಗಿ ನೇಮಕಗೊಂಡಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯಕೋಚ್​ ಸ್ಥಾನದಿಂದ ರಿಕಿ ಪಾಂಟಿಂಗ್ ಕೆಳಗಿಳಿದಿದ್ದಾರೆ. ಇದೀಗ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಈ ಸಾಲಿಗೆ ಸೇರಿದೆ.

ಮುಂದಿನ ಆವೃತ್ತಿಗೂ ಮುನ್ನ 2022ರ ಚಾಂಪಿಯನ್​ ಗುಜರಾತ್ ಟೈಟಾನ್ಸ್ ತಂಡದ ಹೆಡ್​ಕೋಚ್ ಆಶಿಶ್ ನೆಹ್ರಾ ಅವರು ಫ್ರಾಂಚೈಸಿ ತೊರೆಯಲಿದ್ದಾರೆ ಎಂದು ನ್ಯೂಸ್ 18 ಕ್ರಿಕೆಟ್ ನೆಕ್ಸ್ಟ್ ವರದಿ ಮಾಡಿದೆ. ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಅವರು ಸಹ ಐಪಿಎಲ್ 2025ಕ್ಕೂ ಮುನ್ನ ಗುಜರಾತ್ ಜೊತೆಗಿನ ಅವಧಿಯನ್ನು ಕೊನೆಗೊಳಿಸುವ ಸಾಧ್ಯತೆ ಇದೆ. 2024ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ​ ಸೇರಿದ ನಂತರ ಅವರ ಸ್ಥಾನ ತುಂಬಿದ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಜಿಟಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ನೆಹ್ರಾ ಮತ್ತು ಸೋಲಂಕಿ ಅವರು 2022ರ ಐಪಿಎಲ್​ನಲ್ಲಿ ಟೈಟಾನ್ಸ್ ಸೇರಿದ್ದರು. ಅವರ ಚೊಚ್ಚಲ ಋತುವಿನಲ್ಲೇ ಫ್ರಾಂಚೈಸಿಯನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅಲ್ಲದೆ, 2023ರ ಟೂರ್ನಿಯಲ್ಲಿ ಗುಜರಾತ್ ತಂಡವನ್ನು ಫೈನಲ್​​ವರೆಗೂ ಕೊಂಡೊಯ್ದಿದ್ದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಸಿಎಸ್​ಕೆ ವಿರುದ್ಧ ಸೋತು ರನ್ನರ್​ಅಪ್ ಆಗಿತ್ತು. 2024ರ ಐಪಿಎಲ್​ಗೂ ಮುನ್ನ ಟ್ರೇಡ್ ಮೂಲಕ ಜಿಟಿ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯನ್ನು ಸೇರಿಕೊಂಡರು.

ಆದರೆ, 17ನೇ ಆವೃತ್ತಿಯಲ್ಲಿ ಹಾರ್ದಿಕ್ ಸ್ಥಾನ ತುಂಬಲು ವಿಫಲವಾದ ಗುಜರಾತ್, ಮಿನಿ ಹರಾಜಿನಲ್ಲೂ ಆಟಗಾರರ ಖರೀದಿಯಲ್ಲಿ ಎಡವಿತ್ತು. ಅಲ್ಲದೆ, ಮೊಹಮ್ಮದ್ ಶಮಿ ಅವರು ಗಾಯಗೊಂಡು ಐಪಿಎಲ್ ಮಿಸ್ ಮಾಡಿಕೊಂಡಿದ್ದು ಸಹ ತಂಡದ ಹಿನ್ನಡೆಗೆ ಕಾರಣವಾಗಿತ್ತು. ಹಲವು ಕಾರಣಗಳಿಂದ ಜಿಟಿ ಪ್ಲೇಆಫ್​​ಗೆ ಅರ್ಹತೆ ಪಡೆಯಲಿಲ್ಲ. ನೆಹ್ರಾ ಮತ್ತು ಸೋಲಂಕಿ ಹೊರಬರಲು ನಿರ್ಧರಿಸಿರುವ ಕಾರಣ ಫ್ರಾಂಚೈಸಿಯು ಆರು ಎಸೆತಗಳಿಗೆ 6 ಸಿಕ್ಸರ್​ ಬಾರಿಸಿದ್ದ ಭಾರತದ ಎಡಗೈ ಆಟಗಾರನನ್ನು ಸಂಪರ್ಕಿಸಿದೆ.

ಯುವರಾಜ್ ಸಂಪರ್ಕಿಸಿದ ಜಿಟಿ

ಗುಜರಾತ್ ಟೈಟಾನ್ಸ್ ಯುವರಾಜ್ ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ವರದಿ ಸೂಚಿಸಿದೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಅವರು ಯಾವುದೇ ತಂಡದ ಕೋಚ್​ ಆಗಿಲ್ಲ. ಈ ಹಿಂದೆಯೂ ಎಲ್ಲೂ ಕೋಚ್ ಆಗಿರುವ ಅನುಭವ ಹೊಂದಿಲ್ಲ. ಆದರೆ ಕ್ರಿಕೆಟ್​ನಲ್ಲಿ ಅಪಾರ ಅನುಭವ ಹೊಂದಿರುವ ಕಾರಣ ಯುವಿ ಆಯ್ಕೆಗೆ ಫ್ರಾಂಚೈಸಿ ಒಲವು ತೋರಿದ್ದು, ಈಗಾಗಲೇ ಚರ್ಚೆಗಳನ್ನೂ ನಡೆಸುತ್ತಿದೆ. ಈಗಾಗಲೇ ಅವರನ್ನು ಸಂಪರ್ಕಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಯುವರಾಜ್ ಈ ಹಿಂದೆ ಜಿಟಿ ನಾಯಕ ಶುಭ್ಮನ್ ಗಿಲ್​ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರಿಬ್ಬರು ಮೈದಾನದ ಹೊರಗೆ ಉತ್ತಮ ಸ್ನೇಹಿತರು. ಕಳೆದ 3 ಋತುಗಳಲ್ಲಿ ಟೈಟಾನ್ಸ್ ತಂಡದ ಸಹಾಯಕ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರು ಈಗಾಗಲೇ ಫ್ರಾಂಚೈಸಿಯೊಂದಿಗೆ ಬೇರ್ಪಟ್ಟು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಟೈಟಾನ್ಸ್ ತಂಡದ ಇತರ ಕೋಚಿಂಗ್ ಸಿಬ್ಬಂದಿಗಳಾದ ಆಶಿಶ್ ಕಪೂರ್, ನಯೀಮ್ ಅಮೀನ್, ನರೇಂದರ್ ನೇಗಿ ಮತ್ತು ಮಿಥುನ್ ಮನ್ಹಾಸ್ ಕೂಡ ನೆಹ್ರಾ ಮತ್ತು ಸೋಲಂಕಿ ಬೇರ್ಪಟ್ಟರೆ ಫ್ರಾಂಚೈಸಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸುವ ನಿರೀಕ್ಷೆಯಿದೆ.

Whats_app_banner