R Ashwin: ಅಶ್ವಿನ್ ಏಕೆ ಕ್ಯಾಪ್ಟನ್ ಆಗಬಾರದು; ಅವರು ತಂಡಕ್ಕಾಗಿ ದುಡಿಯಲಿಲ್ಲವೇ; ಕೇರಂ ಸ್ಪಿನ್ನರ್​ಗೆ ಬೆಂಬಲ ಸೂಚಿಸಿದ ಮಾಜಿ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರೀಡೆ  /  R Ashwin: ಅಶ್ವಿನ್ ಏಕೆ ಕ್ಯಾಪ್ಟನ್ ಆಗಬಾರದು; ಅವರು ತಂಡಕ್ಕಾಗಿ ದುಡಿಯಲಿಲ್ಲವೇ; ಕೇರಂ ಸ್ಪಿನ್ನರ್​ಗೆ ಬೆಂಬಲ ಸೂಚಿಸಿದ ಮಾಜಿ ಕ್ರಿಕೆಟಿಗ

R Ashwin: ಅಶ್ವಿನ್ ಏಕೆ ಕ್ಯಾಪ್ಟನ್ ಆಗಬಾರದು; ಅವರು ತಂಡಕ್ಕಾಗಿ ದುಡಿಯಲಿಲ್ಲವೇ; ಕೇರಂ ಸ್ಪಿನ್ನರ್​ಗೆ ಬೆಂಬಲ ಸೂಚಿಸಿದ ಮಾಜಿ ಕ್ರಿಕೆಟಿಗ

R Ashwin: ಭಾರತ ತಂಡದ ನಾಯಕತ್ವದ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ನಾಯಕತ್ವದ ಬದಲಾವಣೆ ಬಗ್ಗೆ ಬಿಸಿಸಿಐ ವಲಯದಲ್ಲೂ ಮಾತುಕತೆ ನಡೆಯುತ್ತಿದೆ. ಇದರ ನಡುವೆ ಭಾರತದ ಮಾಜಿ ಕ್ರಿಕೆಟಿಗ​ ದೇವಾಂಗ್ ಗಾಂಧಿ ಯಾರು ನಾಯಕನಾದರೆ ಸೂಕ್ತ ಎಂಬುದನ್ನು ತಿಳಿಸಿದ್ದಾರೆ.

ರವಿಚಂದ್ರನ್​ ಅಶ್ವಿನ್​ ಮತ್ತು ದೇವಾಂಗ್​ ಗಾಂಧಿ
ರವಿಚಂದ್ರನ್​ ಅಶ್ವಿನ್​ ಮತ್ತು ದೇವಾಂಗ್​ ಗಾಂಧಿ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ 2023 ಫೈನಲ್​ನಲ್ಲಿ ಟೀಮ್​ ಇಂಡಿಯಾ ಸೋಲು ಕಂಡಿದೆ. ಆಸ್ಟ್ರೇಲಿಯಾ ಗೆದ್ದು, ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಹೀನಾಯ ಸೋಲಿನ ಬೆನ್ನಲ್ಲೇ ಭಾರತ ತಂಡದ ನಾಯಕತ್ವದ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ನಾಯಕತ್ವದ ಬದಲಾವಣೆ ಬಗ್ಗೆ ಬಿಸಿಸಿಐ ವಲಯದಲ್ಲೂ ಮಾತುಕತೆ ನಡೆಯುತ್ತಿದೆ. ಇದರ ನಡುವೆ ಭಾರತದ ಮಾಜಿ ಕ್ರಿಕೆಟಿಗ​ ದೇವಾಂಗ್ ಗಾಂಧಿ ಯಾರು ನಾಯಕನಾದರೆ ಸೂಕ್ತ ಎಂಬುದನ್ನು ವಿವರಿಸಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರೋಹಿತ್​ ಶರ್ಮಾ ಅವರನ್ನು ವಿರಾಟ್​ ಕೊಹ್ಲಿ ಬಳಿಕ ಮೂರು ಫಾರ್ಮೆಟ್​ನ ಕ್ಯಾಪ್ಟನ್​ ಆಗಿ ನೇಮಿಸಿದರು. ಆದರೆ ರೋಹಿತ್​ ಸಹ ಐಸಿಸಿ ಟ್ರೋಫಿ ಗೆದ್ದುಕೊಡುವಲ್ಲಿ ಎಡವುತ್ತಿದ್ದಾರೆ. ಕಳೆದ ಟಿ20 ವಿಶ್ವಕಪ್​​ನಲ್ಲಿ ಸೆಮಿಫೈನಲ್​​ನಲ್ಲಿ ಸೋಲು, ಈ ವರ್ಷ ಐಸಿಸಿ ಟೆಸ್ಟ್​ ವಿಶ್ವಕಪ್​ ಫೈನಲ್​​ನಲ್ಲಿ ಸೋಲು ಕಂಡಿತು.

ನಾಯಕತ್ವ ಹುಡುಕಾಟ

ಫೈನಲ್​​ನಲ್ಲಿ 209 ರನ್‌ಗಳ ಭಾರಿ ಅಂತರದಿಂದ ಸೋತ ಟೀಮ್‌ ಇಂಡಿಯಾ, ಸತತ 2ನೇ ಆವೃತ್ತಿಯಲ್ಲೂ ರನ್ನರ್​​ಅಪ್​ಗೆ ತೃಪ್ತಿಪಟ್ಟುಕೊಂಡಿತು. ಇದರ ಬೆನ್ನಲ್ಲೇ ಮುಂಬರುವ ವೆಸ್ಟ್​ ಇಂಡೀಸ್​ ಸರಣಿ ಬಳಿಕ ತಂಡದಲ್ಲಿ ಮಹತ್ವದ ಬದಲಾವಣೆಗೆ ಬಿಸಿಸಿಐ ನಿರ್ಧರಿಸಿದೆ. ಟೆಸ್ಟ್​ ತಂಡದಿಂದ ರೋಹಿತ್​ ಶರ್ಮಾರನ್ನು ಕೆಳಗಿಳಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಏಕೆಂದರೆ ಮುಂದಿನ ತಿಂಗಳು ವೆಸ್ಟ್​ ಇಂಡೀಸ್​ ಟೆಸ್ಟ್​ ಸರಣಿ ಬಳಿಕ ಡಿಸೆಂಬರ್​​ವರೆಗೂ ಯಾವುದೇ ಟೆಸ್ಟ್​ ಸರಣಿಗಳಿಲ್ಲ.

ಹಾಗಾಗಿ ಅಷ್ಟರೊಳಗೆ ನೂತನ ನಾಯಕನನ್ನು ಹುಡುಕಬಹುದು ಎಂಬುದು ಬಿಸಿಸಿಐ ಪ್ಲಾನ್​ ಆಗಿದೆ. ನೂತನ ಟೆಸ್ಟ್ ನಾಯಕ ಯಾರು? ವಿಷಯದ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ. ರೋಹಿತ್​ಗೆ ಉತ್ತರಾಧಿಕಾರಿಯಾಗಿ ಜಸ್​ಪ್ರಿತ್​ ಬೂಮ್ರಾ ಅಥವಾ ಕೆಎಲ್​ ರಾಹುಲ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ನಡುವೆ ಭಾರತದ ಮಾಜಿ ಕ್ರಿಕೆಟಿಗ ಭಾರತದ ಮಾಜಿ ಕ್ರಿಕೆಟಿಗ ಮತ್ತು ಸ್ಪಿನ್ನರ್ ದೇವಾಂಗ್ ಗಾಂಧಿ, ಟೆಸ್ಟ್​ ನಾಯಕತ್ವಕ್ಕೆ ಅಶ್ವಿನ್ ಸೂಕ್ತ ಎಂಬುದನ್ನು ಸೂಚಿಸಿದ್ದಾರೆ.

ಟೆಸ್ಟ್ ನಾಯಕತ್ವಕ್ಕೆ ಅಶ್ವಿನ್​ ಸೂಕ್ತ

ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೈಬಿಟ್ಟರೆ ರವಿಚಂದ್ರನ್ ಅಶ್ವಿನ್ ಅವರಿಗೆ ಟೆಸ್ಟ್ ಕ್ಯಾಪ್ಟನ್ಸಿ ನೀಡಬೇಕು ಎಂದು ದೇವಾಂಗ್ ಗಾಂಧಿ ಸಲಹೆ ನೀಡಿದ್ದಾರೆ. ಟೆಸ್ಟ್ ನಾಯಕತ್ವದ ಜವಾಬ್ದಾರಿ ರವಿಚಂದ್ರನ್ ಅಶ್ವಿನ್ ಅವರಿಗೆ ಏಕೆ ನೀಡಬಾರದು. ಅವರು ತಂಡಕ್ಕಾಗಿ ದುಡಿಯಲಿಲ್ಲವೇ? ಅವರು ಫಿಟ್ ಆಗಿದ್ದಾರೆ. ಟೆಸ್ಟ್​​ನಲ್ಲಿ ನಂ.1 ಬೌಲರ್ ಮತ್ತು ನಂ.2 ಆಲ್​ರೌಂಡರ್ ಆಗಿ ಮುಂದುವರಿದಿದ್ದಾರೆ. ವಿದೇಶದಲ್ಲೂ ಅಶ್ವಿನ್ ಉತ್ತಮ ದಾಖಲೆ ಹೊಂದಿದ್ದಾರೆ. ನಾಯಕತ್ವ ಕೌಶಲ್ಯದ ಬಗ್ಗೆ ಅನುಮಾನವೇ ಇಲ್ಲ ಎಂದು ಸೂಚಿಸಿದ್ದಾರೆ.

ರಹಾನೆಗಾದರೂ ನೀಡಿ

ನೀವು ಅಶ್ವಿನ್‌ಗೆ ನಾಯಕತ್ವ ನೀಡಲು ಬಯಸದಿದ್ದರೆ, ಅದನ್ನು ಅಜಿಂಕ್ಯ ರಹಾನೆಗೆ ನೀಡಿ. ಟೀಮ್​​ ಇಂಡಿಯಾದ ಟೆಸ್ಟ್‌ ಉಪನಾಯಕರಾಗಿದ್ದ ರಹಾನೆ ಅವರನ್ನು ಮಧ್ಯದಲ್ಲಿ ಕೈಬಿಡಲಾಯಿತು. ಇಲ್ಲದಿದ್ದರೆ ವಿರಾಟ್ ಕೊಹ್ಲಿ ನಂತರ ಟೆಸ್ಟ್ ನಾಯಕನಾಗಬೇಕಿತ್ತು. ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದರೆ ಅಶ್ವಿನ್ ಅಥವಾ ರಹಾನೆಗೆ ಟೆಸ್ಟ್ ನಾಯಕತ್ವ ನೀಡಬೇಕು. ಆ ನಂತರ ಶುಭಮನ್ ಗಿಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಿ ಭವಿಷ್ಯದ ನಾಯಕನನ್ನಾಗಿ ಮಾಡಬಹುದು. ಅದಕ್ಕೆ ಸಾಕಷ್ಟು ಸಮಯಾವಕಾಶವಿದೆ’ ಎಂದು ದೇವಾಂಗ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಯುವಕರಿಗೆ ಮಣೆ ಹಾಕಿ

ವೆಸ್ಟ್​ ಇಂಡೀಸ್ ಪ್ರವಾಸದ ಟೆಸ್ಟ್ ಸರಣಿಗೆ ಚೇತೇಶ್ವರ್​ ಪೂಜಾರ ಆಯ್ಕೆಯಾಗಿ, ಉತ್ತಮವಾಗಿ ಆಡಿದರೂ ಅವರಿಗೆ ಇನ್ನೊಂದು ವರ್ಷ ಆಡುವ ಅವಕಾಶ ಸಿಗಲಿದೆ. ಆದರೆ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಡಿಸೆಂಬರ್​ವರೆಗೆ ಟೆಸ್ಟ್ ಸರಣಿ ಇರುವುದಿಲ್ಲ. ಹಾಗಾಗಿ ಪೂಜಾರ ಅವರಿಗಿಂತ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಅವರಂತಹ ಯುವ ಆಟಗಾರರಿಗೆ ಅವಕಾಶ ನೀಡುವುದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ನಂತರ ಟೀಮ್​ ಇಂಡಿಯಾದ ಆಲ್​ರೌಂಡರ್ ಹಾಗೂ ನಂ.1 ಟೆಸ್ಟ್ ಬೌಲರ್ ರವಿಚಂದ್ರನ್ ಅಶ್ವಿಶ್​ಗೆ ಆ ಜವಾಬ್ದಾರಿ ಸಿಗಬಹುದು ಎಂಬ ಮಾತು ಕೇಳಿಬಂದಿತ್ತು. ಆದರೆ ಆಯ್ಕೆಗಾರರು ರೋಹಿತ್ ಶರ್ಮಾಗೆ ವೋಟ್​ ಹಾಕಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.