ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಪುಷ್ಪ 2; ಕಡಿಮೆ ಸಮಯದಲ್ಲಿ 1500 ಕೋಟಿ ಕಲೆಕ್ಷನ್ ಮಾಡಿದ ಅಲ್ಲು ಅರ್ಜುನ್ ಸಿನಿಮಾ
Pushpa 2 Box Office Collection: ಪುಷ್ಪ 2 ಚಿತ್ರ ಎಲ್ಲೆಡೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ 1500 ಕೋಟಿ ರೂ. ಗಡಿಯನ್ನು ತಲುಪಿದ ಅತ್ಯಂತ ವೇಗವಾಗಿ ಭಾರತೀಯ ಚಿತ್ರ ಎಂಬ ಇತಿಹಾಸವನ್ನು ಸೃಷ್ಟಿಸಿದೆ. ಅಲ್ಲು ಅರ್ಜುನ್ ಅವರ ಸಿನಿಮಾ ಕೇವಲ 14 ದಿನಗಳಲ್ಲಿ ಈ ಸಾಧನೆ ಮಾಡಿರುವುದು ಗಮನಾರ್ಹ.
ಪುಷ್ಪ 2 ಬಾಕ್ಸ್ ಆಫೀಸ್ ಕಲೆಕ್ಷನ್: ಡಿಸೆಂಬರ್ 5 ರಂದು ತೆರೆ ಕಂಡ ಪುಷ್ಪ 2 ಸಿನಿಮಾ ಇದುವರೆಗೂ ಯಾವ ಭಾರತೀಯ ಸಿನಿಮಾ ಮಾಡದ ದಾಖಲೆಯನ್ನು ಮಾಡಿದೆ. ಬಿಡುಗಡೆಗೂ ಮುನ್ನ 1000 ಕೋಟಿ ರೂ ಬಿಸ್ನೆಸ್ ಮಾಡಿದ್ದ ಸಿನಿಮಾ ಈಗ ಬಿಡುಗಡೆ ನಂತರ ಮತ್ತೊಂದು ದಾಖಲೆ ಬರೆದಿದೆ. ರಿಲೀಸ್ ನಂತರ ಕಡಿಮೆ ಸಮಯದಲ್ಲಿ 500 ಕೋಟಿ, 1000 ಕೋಟಿ ರೂ ಕ್ಲಬ್ ಸೇರಿದ್ದ ಸಿನಿಮಾ ಈಗ 1500 ಕೋಟಿ ರೂ, ಕಲೆಕ್ಷನ್ ಮಾಡಿ ಬಾಕ್ಸ್‌ಆಫೀಸ್ ದಾಖಲೆಯನ್ನೆ ಉಡಾಯಿಸಿದೆ. ಈ ವಿಚಾರವನ್ನು ಮೈತ್ರಿ ಮೂವಿ ಮೇಕರ್ಸ್ ತನ್ನ ಅಧಿಕೃತ ಎಕ್ಸ್ ಅಕೌಂಟ್ ಮೂಲಕ ಹಂಚಿಕೊಂಡಿದೆ.
ವಿಶ್ವಾದ್ಯಂತ 1508 ಕೋಟಿ ರೂ, ಗ್ರಾಸ್ ಕಲೆಕ್ಷನ್
ಪುಷ್ಪ 2 ಸಿನಿಮಾ ಕೇವಲ 14 ದಿನಗಳಲ್ಲಿ ವಿಶ್ವಾದ್ಯಂತ 1508 ಕೋಟಿ ರೂ, ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಮೈತ್ರಿ ಮೂವಿ ಮೇಕರ್ಸ್, ಎಕ್ಸ್ ಅಕೌಂಟ್‌ನಲ್ಲಿ ಹಂಚಿಕೊಂಡಿದೆ. ಗುರುವಾರ ರಾತ್ರಿ ಈ ಟ್ವೀಟ್ ಹಂಚಿಕೊಳ್ಳಲಾಗಿದೆ. ''ಬಾಕ್ಸ್ ಆಫೀಸ್ ನಲ್ಲಿ ಐತಿಹಾಸಿಕ ದಾಖಲೆ ಮುಂದುವರಿದಿದೆ. ಪುಷ್ಪ 2 ದಿ ರೂಲ್ ಈಗ ರೂ.1500 ಕೋಟಿ ಗಳಿಸಿದ ಅತ್ಯಂತ ವೇಗವಾಗಿ ಭಾರತೀಯ ಸಿನಿಮಾವಾಗಿದೆ. 14 ದಿನಗಳಲ್ಲಿ ರೂ.1508 ಕೋಟಿ ಕಲೆಕ್ಷನ್ ಮಾಡಿದೆ'' ಎಂದು ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಲಾಗಿದೆ. ಈ ವಿಚಾರ ಕೇಳಿ ಅಲ್ಲು ಅರ್ಜುನ್ ಅಭಿಮಾನಿಗಳು ಖುಷಿಯಾಗಿದ್ದಾರೆ.
ಬಿಡುಗಡೆಗೂ ಮುನ್ನ 1000 ಕೋಟಿ ಬಿಸ್ನೆಸ್ ಮಾಡಿದ್ದ ಚಿತ್ರ
ಸಿನಿಮಾ ಮೊದಲ ಮೂರು ದಿನದಲ್ಲಿ 600 ಕೋಟಿ ರೂ, ಐದು ದಿನಗಳಲ್ಲಿ 900 ಕೋಟಿ ಮತ್ತು ಮೊದಲ ವಾರದಲ್ಲಿ 1000 ಕೋಟಿ ರೂ ಗಳಿಸಿದೆ. ಡಿಸೆಂಬರ್ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದಾಗಿನಿಂದ ಪುಷ್ಪ 2 ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಮೊದಲ ವಾರಾಂತ್ಯದ ವೇಳೆಗೆ ಮುಂಗಡ ಬುಕ್ಕಿಂಗ್‌ನಲ್ಲಿ 100 ಕೋಟಿ ರೂ.ಗಳ ಗಡಿ ದಾಟಿದೆ. ಈ ಸಿನಿಮಾ ತೆಲುಗು ಭಾಷೆಗಿಂತ ಹಿಂದಿಯಲ್ಲಿ ಹೆಚ್ಚು ಗಳಿಕೆ ಮಾಡುತ್ತಿದೆ. ಅಲ್ಲಿ ಈಗಾಗಲೇ 600 ಕೋಟಿ ರೂ ಗಿಂತ ಹೆಚ್ಚು ನಿವ್ವಳ ಕಲೆಕ್ಷನ್ ಮಾಡಿದೆ. ಇದರ ಪ್ರಕಾರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಇತಿಹಾಸ ಸೃಷ್ಟಿಸಿದೆ. ಅಷ್ಟೇ ಅಲ್ಲ ಸ್ಟ್ರೀ 2 ದಾಖಲೆಯನ್ನೂ ಮುರಿದಿದೆ. ತೆಲುಗು ವರ್ಷನ್ 300 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿದೆ.
ಸುಕುಮಾರ್ ನಿರ್ದೇಶನದ ಸಿನಿಮಾ
ಪುಷ್ಪ 2 ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಬ್ಯಾನರ್ ಅಡಿ ನವೀನ್ ಯರನೇನಿ, ಯಲಮಂಚಿಲಿ ರವಿ ಕುಮಾರ್ ನಿರ್ಮಿಸಿದ್ದು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. 500 ಕೋಟಿ ರೂ ಖರ್ಚು ಮಾಡಿ ಪುಷ್ಪ 2 ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಅನಸೂಯಾ ಭಾರಧ್ವಜ್, ಜಗಪತಿ ಬಾಬು, ಸುನಿಲ್, ರಾವ್ ರಮೇಶ್ ಹಾಗೂ ಇನ್ನಿತರರು ನಟಿಸಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ಇರಲಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾದಲ್ಲಿ ಕೊನೆಯ ದೃಶ್ಯದಲ್ಲಿ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ. ಇದನ್ನು ನೋಡಿದ ಅಭಿಮಾನಿಗಳು ಬಹುಶ: ಪುಷ್ಪ 3 ಕೂಡಾ ಬರಬಹುದು ಎನ್ನುತ್ತಿದ್ದಾರೆ. ಆದರೆ ಸುಕುಮಾರ್ ಆಗಲೀ, ಅಲ್ಲು ಅರ್ಜುನ್ ಆಗಲೀ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.